ಕೆಂಡದ ಉರಿ ಬಂದು ದಂಗಾಗಿ ಹೋಗ್ಯಾರೊ
ಕೆಂಡಮಂಡಲ ಆಗ್ಯಾರೊ/ಹೌಹಾರಿ
ಮುದ್ದ್ಯಾಗಿ ಮಲಗಿ ಬಿಟ್ಟಾರೊ
ಸಂದುಸಂದುಗಳಿಡಿದು ಬಿದ್ದು ಒದ್ದಾಡ್ಯಾರೊ
ಎದ್ದು ಹೋಗದೆ ಮುಂದಕ /ವಾಕರಿಸಿ
ಬಲ್ಲಂಗ ವಾಂತಿ ಮಾಡ್ಯಾರೊ
ಸಂಕಟ ಸುರಿಯಲು ಸುಸ್ತಾಗಿ ಹೋಗ್ಯಾರೊ
ಬಾಯೆಲ್ಲಾ ಬೇವಿನ ಕಾಯಾಗಿ /ಕೈಕಾಲು
ಹಗ್ಗಿಟ್ಟು ಹರಿದು ಹೋಗ್ಯಾವೊ
ಕೆಂಡ ಕಾರುವ ಕಣ್ಣು,ಮೈಯೆಲ್ಲಾ ಹಣ್ಣಣ್ಣು
ವಾತದಿ ಬಾತ ಕೀಲುಗಳು/ಬೆನ್ನೆಲ್ಲಾ
ಬಿರಿಹಾಕಿ ಬಿಗಿದು ಬಿಟ್ಟಾವೊ
ಹಾಡ ಹಗಲಿನಲ್ಲಿ ಹಾರ್ಯಾಡು ಸೊಳ್ಳೆಗಳು
ಕಚ್ಚಲು ಈ ಜಡ್ಡು ಬರುವುದು/ಎನ್ನುವ
ತಿಳುವಳಿಕೆ ವೈದ್ಯರು ನೀಡ್ಯಾರೊ
ತಿಳಿಯ ನೀರಿನಲ್ಲಿ ತಳಿಯ ಬೆಳೆಸುವ ಸೊಳ್ಳೆ
ಸಂಗೀತ ಹಾಡುತ್ತಾ ಬರುವುದು /ಮೆಲ್ಲಗೆ
ಎಲ್ಲರನು ಮಲಗಿಸಿ ಬಿಡುವುದೊ
ಮದ್ದಿಲ್ಲದ ಮಾರಿಗೆ ಸೊಡ್ಡನ್ನು ಹೊಡೆಯಲು
ಪರಿಸರ ಸ್ವಚ್ಛ ಇಡಬೇಕು/ಸೊಳ್ಳೆಗಳು
ಸುತ್ತಿಸುಳಿಯದಂಗ ತಡಿಬೇಕೊ
ನಾಡಿನ ಜನರೆಲ್ಲ ಜಾಗೃತರಾಗಲು
ಚಿಕುನಗುನ್ಯಾ ಚೆಂಡು ಮುರದೈತಿ/ನಾಡಿಂದ
ಹೇಳಹೆಸರಿಲ್ಲದೆ ಓಡೈತೊ