ರಾಷ್ಟ್ರೀಯ ದಂತ ವೈದ್ಯರ ದಿನ ಅಂಗವಾಗಿ ಇತ್ತೀಚೆಗೆ ಡಾ|| ಮುರಲೀ ಮೋಹನ್ ಚೂಂತಾರು ಇವರ ಹತ್ತನೇ ಕೃತಿ “ಸುಮುಖ” ದಂತ ಆರೋಗ್ಯ ಮಾಗದರ್ಶಿ ಇದರ ಕೃತಿ ಬಿಡುಗಡೆ ಸಮಾರಂಭ ಜರುಗಿತು. ಭಾರತೀಯ ದಂತ ವೈದ್ಯರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಈ ಸಮಾರಂಭ ನಡೆಯಿತು. ಭಾರತೀಯ ದಂತ ವೈದ್ಯಕೀಯ ಪರಿಷತ್ತು ನವದೆಹಲಿ ಇದರ ಸದಸ್ಯರು ಮತ್ತು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇದರ ಸಿಂಡಿಕೇಟ್ ಸದಸ್ಯರಾದ ಡಾ|| ಶಿವಶರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ||ಚೂಂತಾರು ಇವರ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಡಾ: ಮುರಲೀ ಅವರು ಬಹಳಷ್ಟು ಸಾಮಾಜಿಕ ಕಳಕಳಿಯಿಂದ ವೈದ್ಯಕೀಯ ಕೃತಿಗಳನ್ನು ರಚಿಸಿರುತ್ತಾg. ಅವರೊಬ್ಬರು ಪರಿಪೂರ್ಣ ವೈದ್ಯಕೀಯ ಸಾಹಿತಿ ಎಂದು ಗುರುತಿಸಿಕೊಂಡಿದ್ದು, ಅವರಿಂದ ಇನ್ನಷ್ಟು ಕೃತಿಗಳು ಹೊರ ಹೊಮ್ಮಲಿ ಎಂದು ಡಾ|| ಶಿವಶರಣ್ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ದಂತ ವೈದ್ಯಕೀಯ ಸಂಘದ ಅದ್ಯಕ್ಷರಾದ ಡಾ|| ಜಿತೇಶ್ ವಹಿಸಿದ್ದರು. ಕೃತಿಯ ಲೇಖಕರಾದ ಡಾ|| ಮುರಲೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬ ವೈದ್ಯರಿಗೆ ಸಾಮಾಜಿಕ ಹೊಣೆಗಾರಿಕೆ ಇದ್ದು ಅದನ್ನು ಸರಿಯಾಗಿ ನಿಭಾಯಿಸಿದ್ದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಂತ ವೈದ್ಯರ ಸಂಘದ ಗೌರವ ಕಾರ್ಯದರ್ಶಿ ಡಾ|| ಭರತ್ ಪ್ರಭು, ಖಜಾಂಜಿ ಡಾ|| ಪ್ರಸನ್ನ ರಾವ್ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ನಗರದ ಹಿರಿಯ ದಂತ ವೈದ್ಯರುಗಳಾದ ಡಾ|| ಶ್ರೀಪತಿ ರಾವ್ , ಡಾ|| ಶಾಮ್ ಭಟ್, ಡಾ|| ಗಣೇಶ್ ಶೆಣ್ಯೆ ಪಂಚಮಾಲ್, ಡಾ|| ಕಮಲಕಾಂತ್ ಶೆಣ್ಯೆ, ಡಾ|| ಬಿಜು ಥೋಮಸ್, ಡಾ|| ಶುಭನ್ ಆಳ್ವ, ಡಾ|| ದೀಪಕ್ ಪೈ, ಡಾ|| ಸಂತೋಷ್ ಶೆಣ್ಯೆ, ಡಾ|| ಸಂಜಯ್ ನಾಯಕ್, ಡಾ|| ಕೇಶವ್ ಮುಂತಾದವರು ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆಯ ನಂತರ ದಂತ ವೈದ್ಯರಿಗಾಗಿ ದಂತ ವೈದ್ಯರ ದಿನದ ಅಂಗವಾಗಿ “ಮ್ಯೂಸಿಕಲ್ ನೈಟ್” ಕಾರ್ಯಕ್ರಮ ಜರಗಿತು.