Health Vision

ಯುಗಾದಿಯ ಬೇವು ಬೆಲ್ಲ ಕೇವಲ ಸಂಪ್ರದಾಯವಲ್ಲ

 • yugadi greetingsಯುಗಾದಿ ಹಬ್ಬವು ಭಾರತದ ಹಲವು ಪ್ರದೇಶಗಳಲ್ಲಿ ಹೊಸವರ್ಷವೆಂದು, ಸಮೃದ್ದಿಯ ಸಂಕೇತವೆಂದು ಆಚರಿಸಲ್ಪಡುವ ಹಬ್ಬವಾಗಿದೆ. ವಸಂತ ಮಾಸದ ಪ್ರಾರಂಭದೊಂದಿಗೆ ಪ್ರಕೃತಿಯಲ್ಲಿ ಹೊಸತನವನ್ನು ಕಾಣುವ ಪರ್ವಕಾಲವಾಗಿದೆ. ಹೊಸಚಿಗುರು, ತಾಜಾ ಗಾಳಿ, ಕೋಗಿಲೆಯ ಇಂಪಾದ ಗಾನ, ಪ್ರಖರ ಸೂರ್ಯಕಿರಣ ಮೇಳೈಸಿ ಹೊಸತನದೊಂದಿಗೆ ಪ್ರಕೃತಿಯು ಕಂಗೊಳಿಸುತ್ತದೆ.
  ಯುಗಾದಿ ಹಬ್ಬವನ್ನು ವಸಂತ ಋತುವಿನ, ಚೈತ್ರ ಮಾಸದ, ಶುಕ್ಲಪಕ್ಷದ ದಿನದಂದು ಆಚರಿಸಲಾಗುವುದು. ಈ ದಿನದಂದು ಬ್ರಹ್ಮದೇವನು ಜಗತ್ತನ್ನು ಸೃಷ್ಠಿಸಿದನೆಂದೂ, ಕಲಿಯುಗದ ಪ್ರಾರಂಭ ಯುಗಾದಿ ಹಬ್ಬದ ದಿನದಂದು ಶುರುವಾಯಿತೆಂದು ನಂಬಲಾಗಿದೆ.
  ಹೊಸ ವರ್ಷದ ಈ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನವಾಗಿ ಆಚರಿಸಲಾಗುವುದು. ಕರ್ನಾಟಕದಲ್ಲಿ ಸಾಮಾನ್ಯವಾಗಿ ಹಬ್ಬದ ದಿನ ಬೆಳಿಗ್ಗೆ ಎದ್ದ ನಂತರ ಮಂಗಳ ದ್ರವ್ಯಗಳ ದರ್ಶನ ಮಾಡಲಾಗುವುದು. ನಂತರ ಅಭ್ಯಂಜನ ಸ್ನಾನದಿ ಕರ್ಮದ ತರುವಾಯ ಪೂಜಾ ಕರ್ಮವನ್ನು ಮುಗಿಸಿ ಬೇವು ಬೆಲ್ಲವನ್ನು ಸೇವಿಸಲಾಗುವುದು. ನಂತರ ವಿಶೇಷ ಭಕ್ಷ್ಯಗಳನ್ನು ಎಲ್ಲರೊಂದಿಗೆ ಸೇವಿಸಿ ಸಂಜೆ ಪಂಚಾಂಗ ಶ್ರವಣ ಮಾಡಲಾಗುವುದು.
  ಮಹಾರಾಷ್ಟ್ರದಲ್ಲಿ ಬೇವಿನ ಕಷಾಯವನ್ನು ಈ ದಿನ ಸೇವಿಸಲಾಗುವುದು. ಆಂಧ್ರಪ್ರದೇಶದಲ್ಲಿ ಬೇವು, ಹುಣಸೆಹಣ್ಣು, ಬೆಲ್ಲ, ಖಾರ, ಉಪ್ಪು, ಮಾವಿನಕಾಯಿಯನ್ನು ಬೆರೆಸಿ ತಯಾರಿಸಿದ ಪದಾರ್ಥವನ್ನು ಯುಗಾದಿಯಂದು ಸೇವಿಸಲಾಗುವುದು.
  ಸಂಪ್ರದಾಯಗಳು ಬೇರೆ ಆದರೂ ಬೇವಿನ ಸೇವನೆಯನ್ನು ಸಾಮಾನ್ಯವಾಗಿ ಕಾಣಬಹುದು. ಸಾಂಕೇತಿಕವಾಗಿ ಬೆಲ್ಲ ಸುಖ ಅಥವಾ ಸಂತೋಷದ ಪ್ರತೀಕವಾದರೆ. ಬೇವು ಜೀವನದ ಹಾದಿಯಲ್ಲಿ ಬರುವ ಹಲವು ತೊಡಕು, ದುಃಖದ ಸಂಕೇತ. ಜೀವನದಲ್ಲಿ ಸುಖ ಹಾಗೂ ದುಃಖ ಎರಡೂ ಅವಿಭಾಜ್ಯ ಅಂಗವಾಗಿದ್ದು, ಎರಡನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದು ಇದರ ತಾತ್ಪರ್ಯ.
  ಆದರೆ ಈ ಆಚರಣೆಯಲ್ಲಿ ಆರೋಗ್ಯದ ಸೂತ್ರವೂ ಸಹ ಬಹಳಷ್ಟು ಅಡಕವಾಗಿದೆ.
  ಯುಗಾದಿ ಹಬ್ಬದ ದಿನದಿಂದ ವಸಂತ ಋತುವಿನ ಪ್ರಾರಂಭವಾಗುತ್ತದೆ. ಸೂರ್ಯನ ಪ್ರಖರತೆ ಈ ಸಮಯದಲ್ಲಿ ಹೆಚ್ಚಾದಂತೆ ವಾತಾವರಣದಲ್ಲಿ ಒಣಹವೆ, ಬಿಸಿಲು, ಉಷ್ಣತೆ ಹೆಚ್ಚಾಗುತ್ತದೆ. ಮತ್ತು ಇದರ ಪ್ರಭಾವದಿಂದ ದೇಹದಲ್ಲಿ ಪಿತ್ತದ ಅಂಶವೂ ಸಹ ಏರಿಕೆಯಾಗುತ್ತದೆ. ಇದರಿಂದ ಹೊಟ್ಟೆಯ ವಿಕಾರಗಳು, ಬಾಯಿಹುಣ್ಣು, ವಾಂತಿ, ಬೇಧಿ, ಹೊಟ್ಟೆ ಉರಿ, ಅತಿಯಾದ ಬೆವರು, ಬಿಸಿಲಿನಿಂದ ಹಲವು ಚರ್ಮ ವ್ಯಾಧಿಗಳಾದ ತುರಿಕೆ, ಕಜ್ಜಿ, ಉಳಕಡ್ಡಿ, ಬೆವರುಸಾಲೆ, ಕಾಣಿಸಿಕೊಳ್ಳುತ್ತದೆ.
 • ನೀರಿನ ಮಾಲಿನ್ಯ ಬೇಸಿಗೆಯಲ್ಲಿ ಸಾಮಾನ್ಯವಾಗಿರುವುದರಿಂದ ಹಲವು ಸಾಂಕ್ರಾಮಿಕ ರೋಗಗಳಾದ ಟೈಫಾಯಿಡ್, ಮಲೇರಿಯ, ಹಲವು ರೀತಿಯ ಜ್ವರಗಳು ಕಾಣಿಸಿಕೊಳ್ಳಬಹುದು.ಅದ್ದರಿಂದ ಮುಂದೆ ಬರಬಹುದಾದ ಇಂತಹ ವ್ಯಾಧಿಗಳನ್ನು ತಡೆಗಟ್ಟಲು, ಅತಿಯಾದ ಪಿತ್ತದ ಅಂಶವನ್ನು ಕಡಿಮೆಗೊಳಿಸಲು, ವ್ಯಾಧಿನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೇವನ್ನು ಸಾಂಪ್ರದಾಯವಾಗಿ ಹಬ್ಬದ ದಿನದಂದು ಸೇವಿಸಲು ತಿಳಿಸಲಾಗಿದೆ.
 • ಬೇವು ಹಲವಾರು ಔಷಧೀಯ ಗುಣಗಳಿಂದ ಕೂಡಿದ್ದು, ವಸಂತ ಋತುವಿನ ಪ್ರಾರಂಭದೊಂದಿಗೆ ಪ್ರಕೃತಿಯಲ್ಲಿ ಹೇರಳವಾಗಿ ಬೆಳೆದು, ಸುಲಭವಾಗಿ ಲಭ್ಯವಾಗಿತ್ತದೆ ಮತ್ತು ವಾತಾವರಣವನ್ನು ಶುದ್ದಿಗೊಳಿಸುತ್ತದೆ.
 • ಬೇವು ಕಹಿ ಮತ್ತು ಒಗರು ರಸದಿಂದ ಕೂದಿದ್ದು, ಬೆಲ್ಲದೊಂದಿಗೆ ಸೇವಿಸಿದಾಗ ದೇಹದಲ್ಲಿನ ಪಿತ್ತದ ಅಂಶವನ್ನು ಕಡಿಮೆಗೊಳಿಸಿ, ದೇಹವನ್ನು ತಂಪಾಗಿಸುತ್ತದೆ.
 • ಬೇವಿನ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜಠರದ ಕ್ರಿಮಿ, ಜಂತುಭಾದೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುತ್ತದೆ ಮತ್ತು ಹೊಟ್ಟೆ ಹುಣ್ಣು, ಉಬ್ಬರ, ಮಲಬ‌ದ್ಧತೆ ನಿವಾರಿಸುತ್ತದೆ.
 • ಚರ್ಮರೋಗಗಳಿಗೆ ಬೇವು ರಾಮಬಾಣ, ಬೇವನ್ನು ಸೇವಿಸುವುದರಿಂದ ಚರ್ಮದಲ್ಲಿನ ಉರಿ, ತುರಿಕೆ, ಕಜ್ಜಿ ನಿವಾರಣೆಯಾಗುತ್ತದೆ ಮತ್ತು ರಕ್ತವನ್ನು ಶುದ್ದೀಕರಿಸಿ ಚರ್ಮವನ್ನು ಮೃದುವಾಗಿಸಿ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಆಗುವ ಫಂಗಸ್ ನ ಸೋಂಕನ್ನು ನಿವಾರಿಸುತ್ತದೆ.
 • ಅತಿಯಾದ ವಿಟಮಿನ್ ಇ ಇಂದಾಗಿ ಹಾನಿಗೋಂಡ ಚರ್ಮದ ಕಣಗಳನ್ನು ಪ್ರಾಕೃತಾವಸ್ಥೆಗೆ ತರುತ್ತದೆ. ದೇಹದಲ್ಲಿ ಅನವಶ್ಯಕ ಅಂಶಗಳಿಂದ ಜೀವಕಣಗಳಿಗೆ ಉಂಟಾಗಬಹುದಾದ ಅಹಿತಪ್ರಭಾವವನ್ನು ತಡೆಗಟ್ಟುತ್ತದೆ ಮತ್ತು ದೇಹದಲ್ಲಿನ ವಿಷದಂತಹ ಅಂಶವನ್ನು ಹೊರಹಾಕಿ ವ್ಯಾಧಿನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 • ಅಷ್ಟೇ ಅಲ್ಲದೆ, ಈ ಕಾಲದಲ್ಲಿನ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಮತ್ತು ವಯಸ್ಸಾಗುವುದನ್ನು ಮುಂದೂಡುತ್ತದೆ.
  ಆದ್ದರಿಂದ ಬೇಸಿಗೆಯ ಪ್ರಾರಂಭದೊಂದಿಗೆ ಉಂಟಾಗಬಹುದಾದ ಹಲವಾರು ರೋಗಗಳಿಗೆ ಉತ್ತಮ ಔಷಧಿಯಾಗಿ, ರೋಗಗಳನ್ನು ತಡೆಗಟ್ಟುವ ಸಲುವಾಗಿ ಬಹು ಔಷಧೀಯ ಗುಣಗಳಿಂದ ಕೂಡಿರುವ ಬೇವನ್ನು ಬೆಲ್ಲದೊಂದಿಗೆ ಸೇವಿಸಲು ನಮ್ಮ ಹಿರಿಯರು ಯುಗಾದಿ ಹಬ್ಬದ ದಿನದಂದು ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯವಾಗಿ ರೂಪಿಸಿದ್ದಾರೆ.

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654

Back To Top