Vydyaloka

ಶ್ರೀಕೃಷ್ಣ ಮಾಯ್ಲೆಂಗಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ

ಬೆಂಗಳೂರು: ಹಿರಿಯ ಪತ್ರಕರ್ತ, ಕನ್ನಡ ಆರೋಗ್ಯ ಮಾಸಪತ್ರಿಕೆ ‘ವೈದ್ಯಲೋಕ’ ಹಾಗೂ ಇಂಗ್ಲೀಷ್ ಆರೋಗ್ಯ ಮಾಸಪತ್ರಿಕೆ ‘ಹೆಲ್ತ್ ವಿಷನ್’ನ ವ್ಯವಸ್ಥಾಪಕ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಅವರಿಗೆ ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.
ಎರಡು ದಶಕಗಳ ಇಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದ ಅನುಭವವಿರುವ ಶ್ರೀಕೃಷ್ಣ ಮಾಯ್ಲೆಂಗಿ ಅವರು ತಮ್ಮ ಪತ್ರಿಕೆಯ ಮೂಲಕ ಆರೋಗ್ಯ ಸಂಬಂಧಿತ ಉಪಯುಕ್ತ ಲೇಖನ ಮತ್ತು ಸುದ್ದಿಗಳನ್ನು ಪ್ರಕಟಿಸುತ್ತಿದ್ದು, ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಆರೋಗ್ಯ ನಂದನ ಎಂಬ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಇದೀಗ ಆರೋಗ್ಯ ಕ್ಷೇತ್ರದ ಬಗ್ಗೆ ಸಮಗ್ರ ಮಾಹಿತಿ ನೀಡುವ www.vydyaloka.in ಮತ್ತು  www.healthvision.in ಎಂಬ ಎರಡು ವೆಬ್‌ಪೋರ್ಟಲ್‌ಗಳನ್ನು ಆರಂಭಿಸಿದ್ದಾರೆ.
ಮೂಲತಃ ಕೇರಳದ ಕಾಸರಗೋಡಿನ ಕಾಟುಕುಕ್ಕೆ ಗ್ರಾಮದವರಾದ ಶ್ರೀಕೃಷ್ಣ ಮಾಯ್ಲೆಂಗಿ ಉದಯ ಟಿವಿಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ರೋಟರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸೇರಿದಂತೆ ೨೦ಕ್ಕೂ ಅಧಿಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.
ಇಂಡಿಯನ್ ವರ್ಚುವಲ್ ಯೂನಿವರ್‌ಸಿಟಿ ಆಫ್ ಪೀಸ್ ಅಂಡ್ ಎಜುಕೇಶನ್‌ವತಿಯಿಂದ ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀಕೃಷ್ಣ ಮಾಯ್ಲೆಂಗಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
Share this: