Health Vision

Health Vision

SUBSCRIBE

Magazine

Click Here

ಸುಖ ನಿದ್ರೆಯೇ ಆರೋಗ್ಯದ ಟಾನಿಕ್

ಊಟ, ನಿದ್ರೆ, ಕೆಲಸ – ಈ ಮೂರು ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖವಾದವು. ವಿರಾಮ, ವಿಶ್ರಾಂತಿ ಎಲ್ಲರಿಗೂ ಅತ್ಯವಶ್ಯಕವಾದದ್ದೇ. ಪ್ರತಿಯೊಬ್ಬರಿಗೂ ನಿದ್ರೆ ಬೇಕೇಬೇಕು. ನಿದ್ರೆ ಇದ್ದರೆ ಮಾತ್ರ ಮನುಷ್ಯ ತನ್ನ ಜೀವನವನ್ನು ಸುಖವಾಗಿ, ಆರೋಗ್ಯಕರವಾಗಿ, ಆಹ್ಲಾದಕರವಾಗಿರಿಸಿಕೊಳ್ಳಲು ಸಾಧ್ಯ.

ಪ್ರತಿನಿತ್ಯವೂ ಮನುಷ್ಯ ನಿದ್ರೆ ಮಾಡದಿದ್ದರೆ ಕುಶಾಗ್ರತೆ, ಚುರುಕು, ಉತ್ಸಾಹ ಕುಂದುತ್ತದೆ. ನಿದ್ರೆಯಿಂದ ಹೃದಯದ ಕಾರ್ಯವೈಖರಿ, ಹಾರ್ಮೋನ್ ನಿಯಂತ್ರಣ ಸುಧಾರಿಸುತ್ತದೆ. ಜೊತೆಗೆ ಆರೋಗ್ಯವೂ ಕುದುರುತ್ತದೆ.

ನಿದ್ರೆ ಇಲ್ಲದಿದ್ದರೆ ದಿನದ ಕೆಲಸಕಾರ್ಯಗಳನ್ನು ಮನಸ್ಸು ಕೊಟ್ಟು ಮಾಡಲು ಸಾಧ್ಯವಾಗುವುದೇ ಇಲ್ಲ. ಸಾಕಷ್ಟು ನಿದ್ರೆ ಇಲ್ಲದಿದ್ದರೆ ಆಲಸಿಕೆ, ಸೋಮಾರಿತನ ಮೂಡಿ ಮನುಷ್ಯರು ಅನಾರೋಗ್ಯಕ್ಕೆ ತುತ್ತಾಗಿ ಅನೇಕ ತೊಂದರೆಗಳನ್ನು ಅನುಭವಿಸುವುದು ಸ್ವಾಭಾವಿಕ. ಈಗಿನ ಜಗತ್ತು ಸ್ಪರ್ಧಾತ್ಮಕ ಆಗಿರುವುದರಿಂದ ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಿರುವಷ್ಟು ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ.

ಕಾರಣಗಳು ಹಲವು

ಇದಕ್ಕೆ ಕಾರಣಗಳು ಹಲವಾರು. ಪ್ರತಿಯೊಬ್ಬರಿಗೂ ಅವರದೇ ಆದ ಚಿಂತನೆಗಳು, ಆಲೋಚನೆಗಳು ಇರುತ್ತವೆ. ಇದರಿಂದ ಮಾನಸಿಕ ಹಾಗೂ ದೈಹಿಕ ತೊಂದರೆಗೆ ಒಳಗಾಗಿ ನಿದ್ರೆ ಬಾರದಿರುವುದಕ್ಕೆ ಕಾರಣವಾಗುತ್ತದೆ.

ಕೆಲವರಿಗೆ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಚಿಂತೆಯಿಂದ ಮತ್ತು ಇನ್ನೂ ಕೆಲವರಿಗೆ ತಮ್ಮ ಮಕ್ಕಳಿಗೆ ಒಳ್ಳೆಯ ರೀತಿಯ ಶಿಕ್ಷಣ ಕೊಡಿಸಬೇಕೆಂಬ ಚಿಂತೆ. ನಿರುದ್ಯೋಗಿಗಳಿಗೆ ಕೆಲಸದ ಚಿಂತೆ, ಮಕ್ಕಳ ಮದುವೆ ಚಿಂತೆ, ಇದರ ಜೊತೆಗೆ ದೈಹಿಕ ತೊಂದರೆಯೂ ನಿದ್ರೆಯನ್ನು ದೂರವಾಗಿಸುತ್ತದೆ. ಅನೇಕ ರೋಗ-ರುಜಿನಗಳು ಕೂಡ ಕಾರಣವಾಗಬಹುದು. ಜ್ವರ, ಹೃದಯ ತೊಂದರೆ, ಮೆದುಳಿನ ತೊಂದರೆ, ಹೀಗೆ ಹಲವು ವ್ಯಾಧಿಗಳ ಜತೆ ಮಾನಸಿಕ ಚಿಂತೆಯೂ ಮನುಷ್ಯನ ನಿದ್ರಾಹೀನತೆಗೆ ಬಹಳಷ್ಟು ಕಾರಣವಾಗುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ.

ನಿದ್ರೆ ಬಾರದಿರಲು ಮುಖ್ಯವಾಗಿ ಮಲಗುವ ಕೋಣೆಯು ಅತಿ ತಣ್ಣಗೆ ಅಥವಾ ಬಿಸಿಯಾಗಿರಬಹುದು. ಕಾಲುಗಳು ತಣ್ಣಗಾಗುವುದು, ಹೊಟ್ಟೆ ಭಾರವಾಗುವುದು, ಊಟ ಮಾಡದೆ ಇರುವುದು, ಮಲಗುವಾಗ ಟೀ ಅಥವಾ ಕಾಫಿ ತೆಗೆದುಕೊಳ್ಳುವುದು, ಅಲ್ಲದೆ, ಅತಿಯಾದ ರಕ್ತದೊತ್ತಡ, ಶುದ್ಧರಕ್ತನಾಳಗಳು ಗಟ್ಟಿಯಾಗುವುದು ಅಥವಾ ಸೋಂಕು ತಗುಲುವುದು ನಿದ್ರೆ ಬಾರದಿರುವುದಕ್ಕೆ ಕಾರಣಗಳು ಇರಬಹುದು. ನಿದ್ರಾಹೀನತೆಯಿಂದ ಬಳಲುತ್ತಿರುವವರು ನಿದ್ರೆಯ ಸಲುವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಅದರೆ ತಜ್ಞ ವೈದ್ಯರನ್ನು ಸಮಾಲೋಚಿಸದೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದಲೇ ನಿದ್ರೆಗೆ ಮಾತ್ರೆಗಳನ್ನು ರೂಢಿಮಾಡಿಕೊಳ್ಳಬಾರದು.

ತೊಂದರೆಗಳು ಅನೇಕ

ಹಸಿವೆಯಾಗದಿರುವುದು, ತಲೆನೋವು ಕಾಣಿಸಿಕೊಳ್ಳುವಿಕೆ, ವಾಂತಿ ಬರುವುದು, ಅಜೀರ್ಣತೆ, ಅರ್ಧ ತಲೆನೋವು, ನಿಶಕ್ತತೆ, ತಲೆಸುತ್ತು ಬರುವಿಕೆ – ಹೀಗೆ ನಿದ್ರೆ ಬಾರದಿರುವುದರಿಂದ ಅನೇಕ ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ನಿದ್ರಾಹೀನರು ವೈದ್ಯರನ್ನು ಕಾಣುವುದು ಉಚಿತ. ವೈದ್ಯರ ಸಲಹೆ ಮೇರೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರೆ ನಿದ್ರೆಯಿಂದ ನೆಮ್ಮದಿ ಪಡೆಯಬಹುದು.

ಮುಖ್ಯವಾಗಿ ನಿದ್ರೆ ಬಾರದೆ ಇರಲು ಕಾರಣವಾದ ವಸ್ತುಗಳಿಂದ ದೂರವಿರುವುದು ಸೂಕ್ತ. ಅದು ಎಲ್ಲರಿಂದಲೂ ಸಾಧ್ಯವಾಗು ವುದಿಲ್ಲ. ಏಕೆಂದರೆ  ಅವು ನಮ್ಮ ಜೀವನದ ಅಗತ್ಯವಾಗಿರುತ್ತವೆ. ಇದಕ್ಕೆ ಉತ್ತಮ ಪರಿಹಾರ ಎಂದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು.

ಮಧ್ಯಾಹ್ನದ ನಿದ್ರೆ ಬರದಿದ್ದರೆ ಬೇಡ. ಬಲವಂತದ ನಿದ್ದೆಯೂ ಒಳ್ಳೆಯದಲ್ಲ. ತೂಕಡಿಸಿ ಕಣ್ಣು ಮುಚ್ಚುವಂತಾದಾಗ ಮಾತ್ರ ನಿದ್ರೆ ಮಾಡುವುದು ಆರೋಗ್ಯಕರ. ಇದಲ್ಲದೆ ಅತಿ ನಿದ್ರೆಯೂ ಕೂಡ ಸಲ್ಲದು. ಮನಸ್ಸಿಗೆ ಘಾಸಿಗೊಳಿಸುತ್ತದೆ. ಸ್ಥೂಲಕಾಯತ್ವದೊಂದಿಗೆ ಹೃದ್ರೋಗ ಮುಂತಾದ ವ್ಯಾಧಿಗಳಿಗೆ ಕಾರಣವಾಗಿ ಬಿಡುತ್ತದೆ.

ವೃದ್ಧಾಪ್ಯದಲ್ಲಿ ನಿದ್ರೆ ಬಾರದಿರುವ ಸಮಸ್ಯೆ ಬಹುತೇಕರನ್ನು ಕಾಡುವುದು ಸಹಜ. ಈ ಬಗ್ಗೆ ಹೆಚ್ಚಿನ ಆತಂಕಪಡುವ ಅಗ್ಯವಿಲ್ಲ. ಧ್ಯಾನ, ವಾಕಿಂಗ್, ಪುಸ್ತಕ ಓದುವುದು, ಸಂಗೀತ ಕೇಳುವುದು, ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ವೃದ್ಧಾಪ್ಯದ ಉತ್ತಮ ಜೀವನಕ್ಕೆ ಸಹಕಾರಿ. ನಿದ್ರೆ ಬರದಿದ್ದರೆ ಮಲಗುವ ಮುಂಚೆ ಒಂದೇ ಕಡೆ ಕುಳಿತು ಹರಟೆ ಹೊಡೆಯುವುದು ಒಳ್ಳೆಯ ಕ್ರಮವಲ್ಲ. ಹದಿನೈದರಿಂದ ಇಪ್ಪತ್ತು ನಿಮಿಷ ಓಡಾಡಬೇಕು ಅಥವಾ ಒಳ್ಳೆಯ ಪುಸ್ತಕಗಳನ್ನು ಓದುವುದು ಉತ್ತಮ.

Back To Top