ಸೋರಿಯಾಸಿಸ್ : ಇದೊಂದು ಚರ್ಮವ್ಯಾಧಿ!

ಸೋರಿಯಾಸಿಸ್ : ಇದೊಂದು ಚರ್ಮವ್ಯಾಧಿ!ಸೋರಿಯಾಸಿಸ್ ಸಾಮಾನ್ಯವಾದ ಚರ್ಮರೋಗ. ಈ  ರೋಗಕ್ಕೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಇದು ದೇಹದೊಳಗಿನ ಯಾವುದೇ ಅಂಗಗಳಿಗೆ ಹಾನಿ ಮಾಡುವುದಿಲ್ಲವಾದ್ದರಿಂದ ಮಾರಣಾಂತಿಕ ಕಾಯಿಲೆಯೇನಲ್ಲ.

ದೇಹದ ಚರ್ಮದ ಬೆಳವಣಿಗೆಗೆ ಕಾರಣವಾದ ವಂಶವಾಹಿನಿಗಳು ತಮ್ಮ ಕೆಲಸ ಮಾಡುವಲ್ಲಿ ವಿಫಲಗೊಂಡು ಅಸಹಜ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಕಾಣಿಸಿಕೊಳ್ಳುವ ರೋಗ `ಸೋರಿಯಾಸಿಸ್’. ಮೈಮೇಲೆ ಚರ್ಮದ ಕೋಶಗಳು ಒಂದೇ ಸಮನೆ ಹೆಚ್ಚಿ, ಪದರು ಪದರಾಗಿ ದಡಿಕೆ ನಿಂತಂತೆ ಕಾಣುವು ದು ಸೋರಿಯಾಸಿಸ್ ಪ್ರಮುಖ ಲಕ್ಷಣ.

ನೂರಕ್ಕೆ ಇಬ್ಬರಲ್ಲಿ ಕಂಡುಬರುವಂತಹ ಸಾಮಾನ್ಯವಾದ ಚರ್ಮರೋಗ. ಆದರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಈ ರೋಗ ತಗುಲಿದವರಿಗೆ ತಲೆ ಮತ್ತು ದೇಹದ ಭಾಗಗಳಲ್ಲಿ ಕೆಂಪು ಕಜ್ಜಿ ಉಂಟಾಗುತ್ತವೆ. ತಲೆಯಲ್ಲಿರುವ ಈ ಕಜ್ಜಿಗಳು ಸಾಮಾನ್ಯವಾಗಿ ಹೆಚ್ಚು ಸಂಖ್ಯೆಯಲ್ಲಿ ದಟ್ಟವಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಮೊಣಕೈ, ಮೊಣಕಾಲು ಹಾಗೂ ಬೆನ್ನುಗಳಲ್ಲಿ ಈ ಕಜ್ಜಿಗಳು ಹೆಚ್ಚು ಹೆಚ್ಚಾಗಿ ಬಂದು, ಬೇಸಿಗೆಯಲ್ಲಿ ತುರಿಕೆ ಇರುತ್ತದೆ.

ಲಕ್ಷಣಗಳೇನು?

ರೋಗಕ್ಕೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ವಂಶವಾಹಿಯಾಗಿ ಇದು ಕೆಲವರಲ್ಲಿ ಕಂಡು ಬರುತ್ತದೆಯಾದರೂ ಅದಕ್ಕೆ ಪರಿಸರದ ವೈಪರೀತ್ಯಗಳು ಕಾರಣವಾಗಿರುತ್ತವೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಸೋರಿಯಾಸಿಸ್ ತಗುಲಿದವರಲ್ಲಿ ಅರ್ಧದಷ್ಟು ಮಂದಿಗೆ ಉಗುರಿನಲ್ಲಿ ಚಿಕ್ಕ ಚಿಕ್ಕ ಕುಳಿಗಳು ಮತ್ತು ಕಂದು ಬಣ್ಣದ ಕಲೆಗಳು ಕಂಡುಬರುತ್ತವೆ. ಹೆಚ್ಚಿನವರಲ್ಲಿ ಗಂಟುಗಳ ನೋವು, ಸುತ್ತ ಗಂಟುಗಳ ಬಾತುವಿಕೆ ಕೂಡ ಕಾಣಿಸಿಕೊಳ್ಳುವುದು. ಆದರೆ ಇದು ದೇಹದೊಳಗಿನ ಯಾವುದೇ ಅಂಗಗಳಿಗೆ ಹಾನಿ ಮಾಡುವುದಿಲ್ಲವಾದ್ದರಿಂದ ಮಾರಣಾಂತಿಕ ಕಾಯಿಲೆಯೇನಲ್ಲ.

ವಯಸ್ಕರಲ್ಲಿ ಹೆಚ್ಚು

ಸಾಮಾನ್ಯವಾಗಿ 20 ವರ್ಷದ ಆಸುಪಾಸಿನವರಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಕೆಲವೊಮ್ಮೆ ಮಕ್ಕಳಲ್ಲಿ, ಪ್ರಾಯಸ್ಥರಲ್ಲಿ ಕಾಣಿಸಿಕೊಳ್ಳುವುದೂ ಇದೆ. ದೈಹಿಕ ಮತ್ತು ಭಾವನ್ಮಾತಕ-ಮಾನಸಿಕ ಒತ್ತಡಗಳು ಇರುವವರಲ್ಲಿ ಸೋರಿಯಾಸಿಸ್ ತೀವ್ರವಾಗಿ ಹೆಚ್ಚುವ ಸಂಭವ ಹೆಚ್ಚು. ಕೆಲವರಲ್ಲಿ ಗಂಟಲಿನ ಸೋಂಕು ಅಥವಾ ಫ್ಲೂ ಬಂದಾಗ ಸೋರಿಯಾಸಿಸ್ ಕಜ್ಜಿಗಳು ಕೆದರಿಕೊಳ್ಳಬಹುದು. ಚಳಿಗಾಲದಲ್ಲಿ ಇದು ಕೆರಳುವುದು ಹೆಚ್ಚು. ಸೂರ್ಯನ ಬಿಸಿಲಿನಲ್ಲಿ ಇದು ಕೆದರುವುದು ಕಡಿಮೆ.

ಬೇಗ ಉಲ್ಬಣ

ಸೋರಿಯಾಸಿಸ್‍ನಲ್ಲಿ ಹೆಚ್ಚಿನ ಬದಲಾವಣೆಗಳು ಮೇಲ್ಪದರದ (ಎಪಿಡರ್ಮಿಸ್‍ನಿಂದ) ಉಂಟಾಗುತ್ತದೆ. ಆಧಾರ ಕೋಶಗಳು ವೃದ್ಧಿಯಾಗಿ ವಿಭಜನೆಗೊಂಡು ಕೋಶಗಳಿಂದ ಚರ್ಮದ ಮೇಲ್ಮೈಕಡೆ ತಳ್ಳುವುದರಿಂದ ಹೀಗಾಗುತ್ತದೆ. ಮೇಲ್ಮೈನಿಂದ ಕೋಶಗಳು ಅಗೋಚರವಾಗಿ ಹೊರಹಾಕಲ್ಪಡುತ್ತದೆ ಸ್ನಾನ ಮಾಡುವಾಗ ಮತ್ತು ತೊಳೆದುಕೊಳ್ಳುವಾಗ ವಿಸರ್ಜಿಸಲ್ಪಡುತ್ತದೆ. ಆಧಾರದ ಪದರದ ಕೋಶಗಳು ಮೇಲ್ಮೈಗೆ ಬರಲು ನಾಲ್ಕು ವಾರಗಳ ಕಾಲ ತೆಗೆದುಕೊಳ್ಳುತ್ತದೆ.

ಈ ಕಾಯಿಲೆ ಇರುವವರಲ್ಲಿ ಈ ಕ್ರಿಯೆ 4ರಿಂದ 5 ದಿನಗಳಿಗೊಮ್ಮೆ ಘಟಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಸಾಮಾನ್ಯ ಸ್ಥಿತಿಯಲ್ಲಿ ಆಧಾರ ಕೋಶಗಳು 100 ಗಂಟೆಗಳಲ್ಲಿ ಎರಡಾಗಿ ವಿಭಜಿಸುತ್ತದೆ. ಆದರೆ ಸೋರಿಯಾಸಿಸ್ ಇರುವವರಲ್ಲಿ ಕೋಶವು 36 ಗಂಟೆಗಳಲ್ಲಿಯೇ ಎರಡಾಗಿ ವಿಭಜಿಸುತ್ತದೆ. ಸಾಧಾರಣ ಚರ್ಮದಲ್ಲಿ ವಿಭಜಿಸುವ ಕೋಶಗಳು ಒಂದು ಪದರವಿರುತ್ತದೆ. ಆದರೆ ಸೋರಿಯಾಸಿಸ್ ಇರುವ ಚರ್ಮದಲ್ಲಿ ವಿಭಜಿಸುವ ಕೋಶಗಳು ಎರಡು ಅಥವಾ ಮೂರು ಪದರಗಳಿರುತ್ತವೆ.

ಹಸಿ ಹಸಿಯಾಗಿ….

ಸಾಧಾರಣ ಚರ್ಮದಲ್ಲಿ ಶೇ. 60ರಷ್ಟು ಕೋಶಗಳು ವಿಭಜಿಸುವ ಸ್ಥಿತಿಯಲ್ಲಿರುತ್ತವೆ. ಆದರೆ ಸೋರಿಯಾಟೆಕ್ ಎಂಬ ಚರ್ಮದ ಭಾಗದಲ್ಲಿ ಇದು 100ರಷ್ಟು. ಇದರ ಪರಿಣಾಮವಾಗಿ, ಚರ್ಮ ಕೋಶಗಳ ಉತ್ಪಾದನೆ ಅಧಿಕವಾಗಿ, ಆಂತರಿಕವಾಗಿ ಶೇಖರಣೆಯಾಗಿ, ಪೊರೆಯಾಗಿ ಉದುರುತ್ತದೆ. ಇದರೊಂದಿಗೆ ಚರ್ಮದಲ್ಲಿರುವ ರಕ್ತನಾಳಗಳೂ ಉಬ್ಬಿ, ತೆಳುವಾದ ಗೋಡೆ ಹೊಂದಿರುತ್ತವೆ. ಈ ಕಾರಣದಿಂದಲೇ ಸೋರಿಯಾಸಿಸ್ ಪ್ಯಾಚ್‍ಗಳು ಗುಲಾಬಿ ಬಣ್ಣಕ್ಕೆ ತಿರುಗಿರುತ್ತವೆ. ಚರ್ಮದ ಪದರಗಳಲ್ಲಿ ಉಂಟಾಗಿರುವ ಬದಲಾವಣೆಗಳಿಂದ ರಕ್ತನಾಳಗಳ ಮೇಲಿರುವ ಎಪಿಡರ್ಮಿಸ್ ಬಹಳ ತೆಳುವಾಗಿ, ಕೆರೆದಾಗ ಪದರವು ಬಹಳ ಸುಲಭವಾಗಿ ಉದುರುವುದರಿಂದ ಒಂದು ಹಸಿ ಪ್ರದೇಶ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಈ ಚರ್ಮರೋಗ ಬಾಧಿತರು ನಿರ್ಲಕ್ಷ್ಯ ಮಾಡದೆ ಸೂಕ್ತ ಸಮಯದಲ್ಲೇ ವೈದ್ಯರನ್ನು ಕಾಣುವುದು ಒಳ್ಳೆಯದು.

Also Read: ಸೋರಿಯಾಸಿಸ್- ನೀವು ಏನನ್ನು ತಿಳಿದಿರಬೇಕು?

ಡಾ. ಭಾನುಪ್ರಕಾಶ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್: 080 – 49069000 Extn:1147/1366    www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!