Vydyaloka

ಪಿಒಪಿ ಗಣೇಶ ವಿಗ್ರಹ ತಯಾರಿಸದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ

ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್)ಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡದಂತೆ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿರುತ್ತದೆ. ರಾಜ್ಯದ ಮಾನ್ಯ ಉಚ್ಛ ನ್ಯಾಯಾಲಯವು ಸಹ ಮಂಡಳಿಯ ಅಧಿಸೂಚನೆಯನ್ನು ಕ್ರಮಬದ್ಧಗೊಳಿಸಿರುತ್ತದೆ.
2016-17, 2017-18ರ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೆರವಿನಿಂದ ಸಾರ್ವಜನಿಕರಿಗೆ, ಪಿಓಪಿ ವಿಗ್ರಹ ತಯಾರಕರಿಗೆ, ವಿತರಕರಿಗೆ ಹಾಗೂ ಸಂಬಂಧಿಸಿದವರಿಗೆ ಸಾಕಷ್ಟು ಮುಂಚಿತವಾಗಿ ಜಾಗೃತಿ ಮೂಡಿಸಿದ್ದು, 2017-18ರ ಸಾಲಿನಲ್ಲಿ ಪಿ.ಒ.ಪಿ. ಗಣೇಶ ವಿಗ್ರಹಗಳ ಬಗ್ಗೆ ನಿರೀಕ್ಷೆಗೂ ಮೀರಿ ಇಳಿಕೆಯಾಗಿ ಧನಾತ್ಮಕ ಫಲಿತಾಂಶ ಕಂಡುಬಂದಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಈ ಪ್ರಯತ್ನದ ಫಲಿತಾಂಶವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಶ್ಲಾಘಿಸಿತ್ತು.
ಇತ್ತೀಚೆಗೆ ರಾಜ್ಯದ ಕೆಲವೆಡೆ ಪಿ.ಒ.ಪಿ. ಗಣೇಶ ತಯಾರಿಕೆಯಲ್ಲಿ ಹಲವಾರು ಜನ ತೊಡಗಿಕೊಂಡಿರುವುದರ ಕುರಿತಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರುಗಳು ಬರುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಮಂಡಳಿಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್‍ರವರು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳಿಸಿದ್ದು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪಿಒಪಿ ಗಣೇಶ ತಯಾರಿಕೆ ಕಂಡುಬಂದಲ್ಲಿ ಕ್ರಮ ಕೈಗೊಂಡು ಪಿಒಪಿ ಗಣೇಶ ತಯಾರಿಕೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸುವ ನಿಟ್ಟಿನಲ್ಲಿ ಸಹಕರಿಸಲು ಕೋರಿದ್ದಾರೆ.

Share this: