ಔಷಧಗಳ ಕೊರತೆಯಿಲ್ಲ, ಸಹಜಸ್ಥಿತಿಯತ್ತ ಜನೌಷಧಿ ಸರಬರಾಜು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಸ್ಪಷ್ಟಪಡಿಸಿದ್ದಾರೆ.ಪ್ಯಾರಾಸೆಟಮೊಲ್, ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ ಎಲ್ಲ ಅತ್ಯವಶ್ಯಕ ಔಷಧಗಳು ಮುಂದಿನ ಹಲವು ತಿಂಗಳ ತನಕ ಸಾಕಾಗುವಷ್ಟು ದಾಸ್ತಾನು ಇದೆ, ಆತಂಕಕ್ಕೆ ಆಸ್ಪದವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಜನೌಷಧಿ ಕೇಂದ್ರಗಳ ಔಷಧಿ ಸರಬರಾಜು ವ್ಯವಸ್ಥೆ ಕೂಡಾ ಸಹಜ ಸ್ಥಿತಿಗೆ ಮರಳುತ್ತಿದೆ .ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ಕೊರಿಯರ್ ಸೇವೆಗೆಗಳು ಬಂದಾಗಿದ್ದರಿಂದ ಔಷಧ ಸಾಗಣೆಯಲ್ಲಿ ವ್ಯತ್ಯಾಸವಾಗಿತ್ತು. ವಿಶೇಷವಾಗಿ ಒಳನಾಡಿನಲ್ಲಿರುವ ಜನೌಷಧಿ ಕೇಂದ್ರಗಳಿಗೆ ತೊಂದರೆಯಾಗಿತ್ತು. ಈಗ ಬೇಡಿಕೆಯನ್ನು ಪೂಲಿಂಗ್ ವ್ಯವಸ್ಥೆ ಮೂಲಕ ನಿರ್ವಹಿಸಲಾಗುತ್ತಿದೆ. ಸಮೀಪವಿರುವ ನಾಲ್ಕಾರು ಡೀಲರುಗಳಿಗೆ ಒಟ್ಟಿಗೆ ಒಂದೊಂದೇ ವಾಹನಗಳಲ್ಲಿ ಔಷಧ ಪೂರೈಸಲಾಗುತ್ತಿದೆ. ಚೆನ್ನೈ, ದೆಹಲಿ ಸಮೀಪದ ಗುರುಗ್ರಾಮ ಹಾಗೂ ಗುವಾಹಟಿಗಳಲ್ಲಿರುವ ಗೋದಾಮುಗಳಿಂದ ವಿಶೇಷ ಸರಕು ವಾಹನಗಳಲ್ಲಿ ಸರಬರಾಜು ಚುರುಕುಗೋಳಿಸಲಾಗಿದೆ. ಕೆಲವನ್ನು ನೇರವಾಗಿ ಔಷಧ ಕಾರ್ಖಾನೆಗಳಿಂದಲೇ ಅಗತ್ಯವಿರುವಡೆ ಕಳುಹಿಸಲಾಗುತ್ತಿದೆ. ಸಾಗಣೆ ಹಾಗೂ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಕಚೇರಿಯಲ್ಲಿ ಉನ್ನತಾಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಹಾಗೆಯೇ ಸಹಾಯವಾಣಿಯಂದನ್ನು 011-23389840 ಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಗತ್ಯ ಔಷಧ ಲಭ್ಯತೆ:
ರಸಗೊಬ್ಬರ:
ದೇಶದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಮುಂಗಾರು ಬಿತ್ತನೆಗೆ ಬೇಕಾಗುವಷ್ಟು ರಸಗೊಬ್ಬರವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಹಾಗಾಗಿ ರೈತರು ಆತಂಕಪಡಬೇಕಿಲ್ಲ. ರಸಗೊಬ್ಬರವನ್ನು ಈಗ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಅಕ್ರಮ ದಾಸ್ತಾನು, ಕಾಳಸಂತೆ ಮಾಡುವುದು ಶಿಕ್ಷಾರ್ಹ ಅಪರಾಧ. ದೇಶದಲ್ಲಿ ಸದ್ಯ 61.05 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸಂಗ್ರಹವಿದೆ. ಫೊಸ್ಪೇಟ್ ಮತ್ತು ಫೊಟಾಷ್ ಮತ್ತಿತರ ಮಾದರಿಯ ರಸಗೊಬ್ಬರ 86.24 ಲಕ್ಷ ಟನ್ ದಾಸ್ತಾನಿದೆ. ಇದರ ಹೊರತಾಗಿ 7.47 ಲಕ್ಷ ಟನ್ ರಸಗೊಬ್ಬರ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 5.6 ಲಕ್ಷ ಟನ್ ಸರಕು ಈ ತಿಂಗಳ ಕೊನೆ ಹಾಗೂ ಮೇ ಮೊದಲ ವಾರದಲ್ಲಿ ಭಾರತದ ವಿವಿಧ ಬಂದರುಗಳನ್ನು ತಲುಪಲಿವೆ ಎಂದು ಸಚಿವರು ಹೇಳಿದ್ದಾರೆ.