Vydyaloka

ಹೃದಯ, ಕಿಡ್ನಿ, ಯಕೃತ್ತು ದಾನ ಮಾಡಿ ಮೂವರ ಜೀವ ಉಳಿಸಿದ 25 ವರ್ಷದ ಯುವಕ

ಬೆಂಗಳೂರು: ಕೃಷಿ ಹಿನ್ನೆಲೆಯ ಕುಟುಂಬದ 25 ವರ್ಷ ವಯಸ್ಸಿನ ಯುವಕ ತನ್ನ ಹೃದಯ, ಮೂತ್ರಪಿಂಡ, ಯಕೃತ್ತು ಅನ್ನು ಕ್ರಮವಾಗಿ 18 ವರ್ಷದ ಯುವಕ, 52 ವರ್ಷದ ಮಹಿಳೆ, 55 ವರ್ಷದ ಪುರುಷನಿಗೆ ದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ. ಮೂರು ಜನ ರೋಗಿಗಳಿಗೆ ಹೊಸೂರು ರಸ್ತೆಯ ನಾರಾಯಣ ಹೆಲ್ತ್ ಸಿಟಿಯಲ್ಲಿ ಅಂಗಾಂಗ ಕಸಿ ಮಾಡಲಾಗಿದ್ದು, ಹೊಸ ಬದುಕು ನೀಡಲಾಯಿತು.

ಮಾಲೂರು ಮೂಲದ 25 ವರ್ಷ ವಯಸ್ಸಿನ ಯುವಕ ಆಗಸ್ಟ್ ತಿಂಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ತಲೆಗೆ ತೀವ್ರವಾಗಿ ಪೆಟ್ಟಾಗಿ, ನೋವಿನಿಂದ ಬಳಲುತ್ತಿದ್ದರು. ಅವರು ಜೀವಂತ ಶವವಾಗಿದ್ದಾರೆ (ಬ್ರೈನ್ ಡೆಡ್) ಎಂದು ಘೋಷಿಸಲಾಗಿದ್ದು, ಇವರ ಅಂಗಾಂಗಗಳ ದಾನಕ್ಕಾಗಿ ಅವರ ಪೋಷಕರಿಂದ ನಿಯಮಾನುಸಾರ ಅನುಮತಿ ಪಡೆದು ಈ ಮೂವರಿಗೆ ಕಸಿ ಮಾಡಲಾಯಿತು.

ದಾನಿಯ ಹೃದಯವನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಸಮಸ್ಯೆಗಾಗಿ ದಾಖಲಾಗಿದ್ದ ಹುಬ್ಬಳ್ಳಿಯ 18 ವರ್ಷದ ಪಿಯು ವಿದ್ಯಾರ್ಥಿಗೆ ಕಸಿ ಚಿಕಿತ್ಸೆ ಮಾಡಲಾಯಿತು. ಪರಿಣತರಿಂದÀ ಪರಿಶೀಲನೆ ಬಳಿಕ ರೋಗಿಯು ಹೃದಯ ವೈಫಲ್ಯದಿಂದ ಬಳಲುತ್ತಿದ್ದು, ಹೃದಯ ಕಸಿ ಚಿಕಿತ್ಸೆಗೆ ಒಳಗಾಗಬೇಕು ಎಂದು ಸಲಹೆ ನೀಡಲಾಗಿತ್ತು. ರೋಗಿಯು ಕಳೆದ ಐದು ತಿಂಗಳ ಹಿಂದೆ ಜೀವಸಾರ್ಥಕತೆಯಲ್ಲಿ ಅಂಗಾಂಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಇನ್ನೊಬ್ಬರು ರೋಗಿ 52 ವರ್ಷ ವಯಸ್ಸಿನ ಮಹಿಳೆಯು ಹೊಸಕೋಟೆ ಮೂಲದವರಾಗಿದ್ದು, 2014ರಿಂದಲೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಇದಕ್ಕಾಗಿ ಇವರು ಡಯಾಲಿಸಿಸ್‍ಗೆ ಒಳಗಾಗುತ್ತಿದ್ದರು. ಅಂಗಾಂಗ ಕಸಿ ಚಿಕಿತ್ಸೆಗೆ ಇವರಿಗೆ ಶಿಫಾರಸು ಮಾಡಿದ್ದು, ಇದುವರೆಗೂ ಇವರಿಗೆ ಸೂಕ್ತ ದಾನಿ ದೊರೆತಿರಲಿಲ್ಲ.

ಮೂರನೇ ರೋಗಿಯು 55 ವರ್ಷ ವಯಸ್ಸಿನವರಾಗಿದ್ದು, ದೆಹಲಿ ಮೂಲದ ಉದ್ಯಮಿಯಾಗಿದ್ದರು. ಡಿಎಲ್‍ಸಿಡಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಅಧಿಕದೊತ್ತಡ ಸಮಸ್ಯೆಯೂ ಇತ್ತು. ದೆಹಲಿಯ ನಾರಾಯಣ ಹೆಲ್ತ್‍ನಲ್ಲಿ ಕಳೆದ ಏಪ್ರಿಲ್‍ನಿಂದ ಚಿಕಿತ್ಸೆಗೆ ಒಳಗಾಗುತ್ತಿದ್ದು, ವೈದ್ಯರ ಶಿಫಾರಸಿನ ಅನುಸಾರ ಜುಲೈ ತಿಂಗಳಲ್ಲಿ ಜೀವನಸಾರ್ಥಕತೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ದಾನಿಯ ಯÀಕೃತ್ತನ್ನು ಅದೇ ದಿನ ಇವರಿಗೆ ಕಸಿ ಮಾಡಲಾಯಿತು.

Share this: