ಮಾನಸಿಕ ಆರೋಗ್ಯಕ್ಕಾಗಿ ಸದಾ ಒಳ್ಳೆಯದನ್ನೇ ಯೋಚಿಸಿ

ಮಾನಸಿಕ ಆರೋಗ್ಯಕ್ಕಾಗಿ ಸದಾ ಒಳ್ಳೆಯದನ್ನೇ ಯೋಚಿಸಬೇಕುಮಾನಸಿಕ ಆರೋಗ್ಯಕ್ಕಾಗಿ ವ್ಯಕ್ತಿ ಹಾಗೂ ಕುಟುಂಬ ಜೀವನದಲ್ಲಿ ಬರಬಹುದಾದ ಒತ್ತಡ, ಉದ್ವೇಗ, ಆತಂಕ ಇವುಗಳನ್ನು ಎದುರಿಸಲು ಗಟ್ಟಿಯಾಗಬೇಕು. ಜೀವನದ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸಬೇಕು. ಮಾನಸಿಕ ಆರೋಗ್ಯದ ಬಗ್ಗೆ ಶಾಲೆಗಳಲ್ಲಿ ತಿಳುವಳಿಕೆ ಕೊಡಬೇಕೆಂದು ತಜ್ಞರು ಸಲಹೆ ಕೊಟ್ಟಿದ್ದಾರೆ.

ಧಾರವಾಢದಲ್ಲಿ ನಾವಿದ್ದ ಕಾಲದಲ್ಲಿ ಯಾರಾದರೂ ಯಾರನ್ನಾದರೂ ರೇಗಿಸಲು ಬೆಳಗಾಂ ರಸ್ತೆಗೆ ಕಳಿಸುತ್ತೇನೆ ಎನ್ನುತ್ತಿದ್ದರು. ಬೆಂಗಳೂರಿನಲ್ಲಿ ರೂಟ್ ನಂ ನಾಲ್ಕಾ ಅಂತ ರೇಗಿಸುತ್ತಿದ್ದರು. ಕಾರಣ ಈ ಎರಡೂು ಸ್ಥಳಗಳಲ್ಲಿ ಮಾನಸಿಕ ಆಸ್ಫತ್ರೆಗಳಿದ್ದವು. ನಾನು ಚಿಕ್ಕಂದಿನಿಂದ ಧಾರವಾಢದ ಮೆಂಟಲ್ ಆಸ್ಪತ್ರೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್‍ಗಳಿಗೆ  ಅನೇಕ ಬಾರಿ ಭೇಟಿ ಕೊಟ್ಟಾಗ ಅಲ್ಲಿಯ ಮಾನಸಿಕ ತಜ್ಞರು ಹಾಗೂ ಮಾನಸಿಕ ರೋಗಿಗಳನ್ನು ಕಂಡು ಮಾತನಾಡಿಸಿ ಗಮನಿಸಿದ್ದೇನೆ.
ಮನಸ್ಸು ಎನ್ನುವುದು ಎಷ್ಟು ಸೂಕ್ಷ್ಮ ಎಂದರೆ  ಅದರ ಜಾಗೃತ, ಸ್ವಪ್ನ ಹಾಗೂ ಸುಶೂಪ್ತಿ, ಸ್ಥಿತಿಗಳಲ್ಲಿಯ ಆರೋಗ್ಯ ಸದಾ ಚೆನ್ನಾಗಿರಬೇಕು.  ಮನಸ್ಸು ಎಚ್ಟೇ ಗಟ್ಟಿಯಿದ್ದರೂ ಸನ್ನಿವೇಶಗಳಿಂದ ಅದು ದುರ್ಬಲವಾದರೆ ಬಹಳ ಅಪಾಯಕಾರಿ ಅನಾರೋಗ್ಯ ಸ್ಥಿತಿ ಮುಟ್ಟುತ್ತದೆ ಎಂಬುದನ್ನು ಮನಗಂಡಿದ್ದೇನೆ. ಮಾತು, ಭಾವನೆ, ಬುದ್ಧಿಶಕ್ತಿ, ಯೋಚನಾ ಶಕ್ತಿ, ನಗು, ಅಳು, ಎಲ್ಲಾ ಹೊಂದಿರುವ ಮಾನವ, ಎಲ್ಲಾ ಸರಿಯಾಗಿದ್ದರೆ, ಸರಿಯಾಗಿ ಇಟ್ಟುಕೊಂಡರೆ, ಮನಸ್ಸು ನಂದನವನವಾಗುತ್ತದೆ. ಇಲ್ಲದಿದ್ದಲ್ಲಿ, ಮನುಷ್ಯನ ಮನಸ್ಸು ನರಕವಾಗುತ್ತದೆ. ಸದಾ ಸಾತ್ವಿಕ ಆಹಾರ ಸೇವಿಸುತ್ತ, ಸಾತ್ವಿಕ ಜೀವನಶೈಲಿ, ಸಹಕಾರ ನೀಡುವ ಕುಟುಂಬ, ಪರಿಸರ,  ಮಿತ್ರರು ಇದ್ದರೆ, ಜೀವನ ಮಧುರ. ಇವ್ಯಾವುದೂ ಇಲ್ಲದ ಕೆಲವರ ಮನಸ್ಸು, ಹುಟ್ಟಿನ ದೋಷ, ಆಕಸ್ಮಿಕ, ಅಪಘಾತ, ಮಾನಸಿಕ ಆಘಾತ, ಮೋಸ, ಇವುಗಳಿಂದ ಕದಡಲ್ಪಟ್ಟು, ಇವರು ಮಾನಸಿಕ ರೋಗಿಗಳಾಗುತ್ತಾರೆ.
ಅಕ್ಟೋಬರ್ 10ರಂದು, ವಿಶ್ವ ಮಾನಸಿಕ ಅರೋಗ್ಯ ದಿನಾಚರಣೆ:
ಮಾನವ ಹಕ್ಕುಗಳಿಂದ ವಂಚಿತರಾಗಿ, ಇಂದು ಪ್ರಪಂಚದಾದ್ಯಂತ ಸಾವಿರಾರು ಮಾನಸಿಕ ರೋಗಿಗಳು ವಿವಿಧ ಹಂತಗಳಲ್ಲಿದ್ದಾರೆ.  ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅಕ್ಟೋಬರ್ 10ರಂದು, ವಿಶ್ವ ಮಾನಸಿಕ ಅರೋಗ್ಯ ದಿನಾಚರಣೆಯ ಆಚರಣೆ. ಈ ವರ್ಷದ ಧ್ಯೇಯವಾಕ್ಯ,  ಮಾನಸಿಕ ಆರೋಗ್ಯದ ಘನತೆ- ಎಲ್ಲರಿಗೂ ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ. ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯಗಳೆಂದರೆ – ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮಾನಸಿಕ ರೋಗಿಗಳ ಸನ್ನಿವೇಶ, ಸ್ಥಿತಿ, ಉತ್ತಮವಾಗಬೇಕು. ಈ ಸಂದರ್ಭದ ಗುರಿಗಳೆಂದರೆ –ಮಾನಸಿಕ ಯಾತನೆಯಲ್ಲಿರುವವರಿಗೆ ಮನಃಶಾಸ್ತ್ರ ಹಾಗೂ ಮಾನಸಿಕ ಆರೋಗ್ಯದ ಪ್ರಥಮ ಚಿಕಿತ್ಸೆ  ಕೊಡುವ ಬಗ್ಗೆ ತರಬೇತಿ ಕೊಡುವುದು, ಮಾನಸಿಕ ಅನಾರೋಗ್ಯದ ಬಗೆಗಿರುವ ಕಳಂಕ ದೂರಮಾಡಿ, ಘನತೆ ಉತ್ತೇಜಿಸಿ ಗೌರವಿಸುವುದು, ಮಾನಸಿಕ ಆರೋಗ್ಯ ಉತ್ತೇಜಿಸಿ ಜನರನ್ನು ಸಬಲರನ್ನಾಗಿಸುವುದು, ಮಾನಸಿಕ ಹಾಗೂ ಶಾರೀರಿಕ ಆರೋಗ್ಯಗಳಿಗೆ ಸಮಾನ ಮಹತ್ವ ನೀಡಿ ಕಾಳಜಿ ಹಾಗೂ ಚಿಕಿತ್ಸೆಯಲ್ಲಿ ಐಕ್ಯತೆ ತರುವುದು, ಬಿಕ್ಕಟ್ಟಿನಿಂದ ಭೀಕರ ಯಾತನೆ ಅನುಭವಿಸುತ್ತಿರುವವರಿಗೆ ಮೂಲಭೂತ ಬೆಂಬಲ ಕೊಡುವುದು ಹಾಗೂ ಕಳಂಕ, ಪ್ರತ್ಯೇಕತೆ ಹಾಗೂ ತಾರತಮ್ಯ  ದೂರ ಮಾಡುವಲ್ಲಿ ಆತ್ಮ ವಿಶ್ವಾಸ ಬೆಳಸುವುದು.
ಪ್ರಪಂಚದಾದ್ಯಂತ ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟ, ವಿಶ್ವ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ, ಪ್ರಪಂಚದ ಈ ಕ್ಷೇತ್ರದಲ್ಲಿಯ ಎಲ್ಲ ಸಂಘಟನೆಗಳು ಸೇರಿ, ಮಾನಸಿಕ ಆರೋಗ್ಯ ರಕ್ಷಣೆಯತ್ತ, ದಾಪುಗಾಲು ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. 1992ರ ಅಕ್ಟೋಬರ್ 10ರಂದು ಮೊದಲಬಾರಿ ಈ ದಿನದ ಆಚರಣೆ ಆರಂಬವಾಯಿತು. ಈ ದಿನ ವಿಶ್ವ ಮಾನಸಿಕ ಆರೋಗ್ಯ ಶಿಕ್ಷಣ, ಅರಿವು ಹಾಗೂ ಪ್ರಚಾರದ ಉದ್ದೇಶವಿದೆ. ಅಮೇರಿಕಾದಲ್ಲಿ 1990 ರಿಂದ ಮಾನಸಿಕ ಅನಾರೋಗ್ಯ ಅರಿವು ಸಪ್ತಾಹ, ಆಚರಿಸಲಾಗುತ್ತಿದೆ. ಮುಖ್ಯವಾಗಿ ಮಾನಸಿಕ ದುಸ್ಥಿತಿಯ ಒತ್ತಡ, ದ್ವಿಮುಖ ವ್ಯಕ್ತಿತ್ವ, ಸ್ಕಿಜೋಫೆರ್ನಿಯಾ ಇವು ಯುವಜನರಲ್ಲಿ ಹೆಚ್ಚಾಗುತ್ತಿವೆ. ವಿಶ್ವದಲ್ಲಿ ಇಂದು  26 ದಶಲಕ್ಷ ಜನರಿಗೆ ದ್ವಂದ್ವ ವ್ಯಕ್ತಿತ್ವ ದೋಷ ಇದ್ದರೆ,  ಇವರಲ್ಲಿ ಶೇಕಡ 50ರಷ್ಟು ಜನಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲ.ಅಮೇರಿಕಾದಲ್ಲಿ 18 ವರ್ಷಕ್ಕಿಂತ ಹೆಚ್ಚಿನ, ಶೇಕಡಾ 26.2 ಅಂದರೆ, ಪ್ರತಿ ನಾಲ್ವರಲ್ಲಿ ಒಬ್ಬರು ಮಾನಸಿಕ ರೋಗಿಗಳು.
ನಮ್ಮ ದೇಶದಲ್ಲೇ ಇರಲಿ, ಅಮೇರಿಕಾದಂತಹ ಮುಂದುವರೆದ ಶ್ರೀಮಂತ ದೇಶದಲ್ಲೇ ಆಗಲಿ, ಮಾನಸಿಕ ಅನಾರೋಗ್ಯವೆಂದರೆ ಒಂದು ರೀತಿಯ ಅಳುಕು, ಹಿಂಜರಿಕೆ, ವಿಚಿತ್ರ ಸಾಮಾಜಿಕ ದೃಷ್ಟಿಕೋನ ಸಾಮಾನ್ಯವಾಗಿದೆ. ನಮ್ಮ ದೇಶದಲ್ಲಿ ಹಿಂದಿನಿಂದ ಅನಕ್ಷರಸ್ತರು, ಅಜ್ಞಾನ, ಮೂಢನಂಬಿಕೆಗಳಿಂದ, ಮೈ ಮೇಲೆ ದೆವ್ವ ಬರುತ್ತೆ,  ಚೌಡಿ ಕುಣಿಯುತ್ತೆ, ಅಮ್ಮ ಬರ್ತಾಳೆ, ಅಂತಾನೇ ನಂಬ್ತಿದ್ದಾರೆ. ಬಾಣಂತಿ ಸನ್ನಿಯಾಗಿ ಉಂಟಾಗುವ ಉನ್ಮಾದದಿಂದ, ಆಕೆ ಮಾನಸಿಕ ಅಸ್ತವ್ಯಸ್ತ ಸ್ಥಿತಿಯಲ್ಲಿ, ಮೈ ಮೇಲಿನ ಬಟ್ಟೆ ಹರಿದು, ಕಿತ್ತೆಸೆದು, ಕಣ್ಣರಳಿಸಿ ಹುಚ್ಚಿಯಂತೆ ಕೂಗಾಡಿ, ಚೀರಾಡಿ ಕೆಲವರು ನೆಲದ ಮೇಲೆ ಬಿದ್ದು ಹೊರಳಾಡಿದರೆ, ಮತ್ತೆ ಕೆಲವರು ಬಂದವರ ಮೇಲೆ, ಕೈಗೆ ಸಿಕ್ಕಿದ್ದನ್ನು ಎಸೆಯುವ ಸ್ಥಿತಿಯವರೂ ಇದ್ದಾರೆ.ಮಾನಸಿಕ ಆರೋಗ್ಯಕ್ಕಾಗಿ ಸದಾ ಒಳ್ಳೆಯದನ್ನೇ ಯೋಚಿಸಬೇಕು
ನಮ್ಮ ಸಮಾಜದಲ್ಲಿ ಮದುವೆಯಾಗದ, ವಯಸ್ಸು ಮೀರುತ್ತಿದ್ದರೂ ಮದುವೆಯಾಗದ ಹುಡುಗಿಯರು, ಹಣದ ಮೋಸದ ಆಘಾತವಾದ ಗಂಡಸರು, ಗಂಡನಿಂದ ಏನೇನೋ ಅನುಭವಿಸಿ, ಆಘಾತವಾದವರು,  ಶಿಶುಮರಣದ ಆಕ್ರಂದನದಿಂದ ಮನಸ್ಸಿನ ದಾರಿ ತಪ್ಪುವವರು, ಅನೇಕ ಜನ.
ಚಲನಚಿತ್ರ , ಕಾದಂಬರಿಗಳು, ಮಾನಸಿಕ ವಸ್ತು ಹೊಂದಿವೆ:
ಬಹುಹಿಂದೆಯೇ 50ರ ದಶಕದಲ್ಲಿ, ತ್ರಿವೇಣಿ  ಅವರ  ಬಹಳಷ್ಟು ಕಾದಂಬರಿಗಳು, ಮಾನಸಿಕ ವಸ್ತು ಹೊಂದಿವೆ, ಪುಟ್ಟಣ್ಣ ಕಣಗಾಲ್ ಅವರ ಅಮರ ಚಲನಚಿತ್ರವಾದ, ಶರಪಂಜರದಲ್ಲಿ ಕಲ್ಪನಾ ಮಾಡಿದ ಕಾವೇರಿ ಪಾತ್ರ ಇಲ್ಲಿ ಸ್ಮರಿಸಬಹುದು. ಸಾಮಾನ್ಯ ಗೃಹಿಣಿಯಾಗಿದ್ದವಳು, ಮಗು ಹುಟ್ಟಿದಾಗ, ಶಾರೀರಿಕ, ಮಾನಸಿಕ ದುರ್ಬಲತೆಯ ಕಾಲದಲ್ಲಿ, ಇದುವರೆಗೆ ಆಕೆ ಮರೆತಿದ್ದ, ತನ್ನ ಹರೆಯದಲ್ಲಿ ಬಂಧುವಿನಿಂದ ಆಗಿದ್ದ ಬಲಾತ್ಕಾರದ ಸನ್ನಿವೇಶ, – ನಾ ಬಂದೆ ನಾ ನೋಡಿದೆ, ನಾ ಗೆದ್ದೆ ಅನ್ನುವ ಸಾಲುಗಳು ಆಕೆಯನ್ನು ಹುಚ್ಚಿ ಮಾಡುತ್ತವೆ. ಮಾನಸಿಕ ತಜ್ಞರು ಆಕೆಗೆ ಚಿಕಿತ್ಸೆ ನೀಡಿ, ಪೂರ್ಣ ಗುಣಮುಖ ಮಾಡಿದರೂ, ಆಕೆಯ ಗಂಡ ಈಕೆಯನ್ನು ದೂರಮಾಡಿ ಬೇರೊಬ್ಬಳ ಸಹವಾಸ ಮಾಡಿದ್ದು, ಗುಣವಾದ ಮೇಲೂ, ಮಕ್ಕಳು, ಅಡಿಗೆಯವರು, ಕೆಲಸದವರು, ಮಿತ್ರರು, ಗಂಡನ ಕಛೇರಿಯವರು, ಈಕೆಯನ್ನು ಹುಚ್ಚಿ ಎಂದೇ ತಿಳಿದು ಅದೇ ರೀತಿ ನಡೆದುಕೊಂಡು ಛೇಡಿಸಿ, ಕಾಡಿದ್ದರಿಂದ ಕಾವೇರಿ ಮತ್ತೆ ಹುಚ್ಚಿಯಾಗುತ್ತಾಳೆ.
ತ್ರಿವೇಣಿ ಅವರ ಬೆಕ್ಕಿನ ಕಣ್ಣು – ಮಲೆಯಾಳಂನಲ್ಲಿ ಪೂಚಿ ಕಣ್ಣು ಚಿತ್ರವಾಗಿ ಪುಟ್ಟಣ್ಣ ಚಿತ್ರಿಸಿದ್ದಾರೆ. ಇದು ಬಾಲ್ಯದಲ್ಲಿ ಬೆಕ್ಕಿನ ಕಣ್ಣಿನ ಮಲತಾಯಿ ಕಾಟ ಅನುಭವಿಸಿದ್ದ ನಾಯಕಿ, ದೊಡ್ಡವಳಾದಾಗ  ಬೆಕ್ಕನ್ನು ದ್ವೇಷಿಸುವ ಕಥಾಹಂದರ ಹೊಂದಿದೆ. ಮುಚ್ಚಿದ ಬಾಗಿಲು ಅನೇಕ ಮನೋರೋಗಿಗಳ ಅಳಲಿನ ಅನುಭವಗಳನ್ನು ಎಳೆಎಳೆಯಾಗಿ ವಿವರಿಸುತ್ತದೆ. ದೂರದ ಬೆಟ್ಟ, ಬೆಳ್ಳಿಮೋಡ, ಕಾದಂಬರಿಗಳು, ನಿಶ್ಚಯವಾದ ಮದುವೆ ಸಂಬಂಧ, ಮನಸ್ಸಿನ ಆಘಾತದಿಂದ ಮುರಿದು ಬೀಳುವ ಬಗ್ಗೆ, ಬಾನು ಬೆಳಗಿತು, ಗಂಡ ಹೆಂಡತಿ ಸಂಬಂಧದ ಘರ್ಷಣೆ ಬಗ್ಗೆ ವಿವರಿಸುತ್ತವೆ. ಆರ್ಯಾಂಬ ಪಟ್ಟಾಭಿ ಅವರ ಎರಡು ಮುಖ, ದ್ವಿಮುಖ ವ್ಯಕ್ತಿತ್ವದ ರಮಾಳ ಕಥೆ. ಎಂ.ಆರ್.ವಿಠ್ಠಲ್ ಅವರ ನಿರ್ದೇಶನದಲ್ಲಿ ಜಯಂತಿ ಅಭಿನಯಿಸಿದ ಇದೇ ಹೆಸರಿನ ಚಿತ್ರ ಮರೆಯಲಾಗದ್ದು.ಶಿವಮೊಗ್ಗಾದಲ್ಲಿರುವ ವಿಶ್ವವಿಖ್ಯಾತ ಮನೋರೋಗ ತಜ್ಞರಾದ ಡಾ. ಅಶೋಕ ಪೈ, ಡಾ ಕೆ. ಆರ್. ಶ್ರೀಧರ್, ಭದ್ರಾವತಿಯ ಡಾ. ಕೆ. ಆರ್. ರವಿಶಂಕರ್ ಇವರ ಸಹಕಾರದಿಂದ, ಭದ್ರಾವತಿ ಆಕಾಶವಾಣಿಯಲಿದ್ದಾಗ್ಲ ನಾನು ಮನೋನಂದನ ಎಂಬ ಮಾಲಿಕೆಯ 52 ಅಧ್ಯಾಯಗಳ ಪ್ರಸಾರ ಮಾಡಿದ್ದೆ. ಸಾವಿರಾರು ಮಾನಸಿಕ ರೋಗಿಗಳು, ಖಿನ್ನತೆ, ಉದ್ವಿಗ್ನತೆ, ಮಾನಸಿಕ ಒತ್ತಡ, ಸಂದೇಹ, ವಿವಿಧ ಸಮಸ್ಯೆಗಳ ರೋಗಿಗಳ ಸಂದರ್ಶನ, ವೈದ್ಯರ ವಿಶ್ಲೇಷಣೆ ಹಾಗೂ ಪರಿಹಾರ ಪ್ರಸಾರ ಮಾಡಿದ್ದೆ. ಡಾ. ಭಾರ್ಗವಿ ಅವರ ಸಹಕಾರದಿಂದ ದೆವ್ವ ಎಂಬ ರೇಡಿ;ಯೋ ನಾಟಕ ಬರೆದು ನಿರ್ದೇಶಿಸಿದ್ದೆ. ಇದರಲ್ಲಿ ಆಸ್ವತ್ರೆಗೆ ಬರುವ ವಿವಿಧ ಮಹಿಳೆಯರ ಮನೋಸ್ಥಿತಿ ಚಿತ್ರಣವಿತ್ತು.
ಯುವಜನರ ಮಾನಸಿಕ ಆರೋಗ್ಯ ಹಾಗೂ ಸಮಸ್ಯೆಗಳ ನಡವಳಿಕೆ:
2007ರ ನವೆಂಬರ್‍ದಿಂದ 2008ರ ನವೆಂಬರ್‍ವರೆಗೆ, ಅಮೇರಿಕಾದಲ್ಲಿ 10ರಿಂದ 15 ವರ್ಷಗಳ ವಯೋಮಿತಿಯ, 1586 ಜನರ ಅಬ್ಯಾಸ  ಮಾಡಲಾಯಿತು. ಇವರು ಕಳೆದ 6 ತಿಂಗಳಿಂದ ಅಂತರ್ಜಾಲ ನೋಡುತ್ತಿದ್ದವರು. ಇದರ ಅನುಭವ ಹಾಗೂ ಇದಕ್ಕೆ ಇವರು ತೆರೆದುಕೊಂಡ ಬಗ್ಗೆ ಅಭ್ಯಸಿಸಲಾಯಿತು. ಅಂತರ್ಜಾಲದ ಅಪಾರ ಪ್ರಭಾವಕ್ಕೋಳಗಾದ ಪ್ರಪಂಚದ ಯುವಜನರ ಸಮಸ್ಯೆಗಳನ್ನು ವಿಶ್ಲೇಷಿಸಿದಾಗ, ಮಾಧ್ಯಮದ ಸರ್ವೆ, ಮಗು- ಕಾಳಜಿ ವಹಿಸುವವರ ಸಂಬಂಧ, ಸಾಮಾಜಿಕ ಬೆಂಬಲ, ಹೊರಪ್ರಭಾವ ಹಾಗೂ ಕೋಪಕ್ಕೆ ಇವರು ಸ್ವಂದಿಸುವ ರೀತಿ, ಬಳಸುವ ದ್ರವಗಳು, ಶಾಲಾ ಶಿಕ್ಷಣ, ಕಲಿಕೆಯ ವಿಕಲತೆಗಳು ತಡೆಯಿಡಿಯಲ್ಪಟ್ಟು ವ್ಯಕ್ತಿತ್ವದ ನಡೆಗಳು, ಅರಕ್ಷಿತ ಲೈಂಗಿಕ ನಡವಳಿಕೆ ಇವುಗಳ ಬಗ್ಗೆ ವಿವರವಾಗಿ ಅಭ್ಯಾಸ ವಿಶ್ಲೇಷಣೆ ನಡೆದಿವೆ. ಯುವಜನರ ಮಾನಸಿಕ ಆರೋಗ್ಯ ಹಾಗೂ ಸಮಸ್ಯೆಗಳ ನಡವಳಿಕೆಯನ್ನು, ವಯಸ್ಸು, ಜೈವಿಕ ಲೈಂಗಿಕತೆ, ಸದ್ಯದ ಕಾಲದ ಅಲೆ, ಇವುಗಳ ಬಗ್ಗೆ ಅರಿಯುವ ಪ್ರಯತ್ನ ಮೇಲಿಂದ ಮೇಲೆ ನಡೆದಿದೆ.
ಬಾಲ್ಯ ಯೌವ್ವನಗಳಲ್ಲಿ ನೋಡಿದ ಇಣುಕು ಕಾಮ, ಉಂಟಾದ ಬಲಾತ್ಕಾರ, ಅತೃಪ್ತ ಕಾಮ, ವಿವಾಹ ಪೂರ್ವ ಹಾಗೂ ವಿವಾಹದ ನಂತರದ ಬಾಹ್ಯ ಲೈಂಗಿಕ ಸಂಬಂಧಗಳು, ಇಜ್ಜೋಡಾದ ಪತಿ ಪತ್ನಿ ದಾಂಪತ್ಯಸಂಬಂಧ, ಅಸಫಲ ಪ್ರೇಮ, ಅಯಶಸ್ವಿ ಆತ್ಮಹತ್ಯಾ ಪ್ರಯತ್ನ ಲೈಂಗಿಕ ಕಾಹಿಲೆಗಳು,  H.I.V ಸೋಂಕು ಹಾಗೂ ಏಡ್ಸ್, ಈ ಎಲ್ಲ ಆಯಾಮಗಳ ಹಿನ್ನೆಲೆಯಲ್ಲಿ ಮಾನಸಿಕ ಆರೋಗ್ಯ ರಕ್ಷಣೆ ಸದ್ಯ ಅನಿವಾರ್ಯವಾಗಿದೆ. ಮಗುವಿನ ಕಾಳಜಿ ವಹಿಸಿದ ಪಾಲಕರು ಅಥವಾ ಹೊರಗಿನವರು ಮತ್ತು ಮಗುವಿನ ನಡುವಿನ ಭಾವನಾತ್ಮಕ ಸಂಬಂಧ, ಮಾನಸಿಕ ಆರೋಗ್ಯದಲ್ಲಿ ಮಹತ್ವದ ಘಟ್ಟ.ಅಂತರವಿಲ್ಲದೇ ಸಾಲು ಸಾಲು ಮಕ್ಕಳನ್ನು ಹೆತ್ತು, ಶಾರೀರಿಕವಾಗಿ ಮಾನಸಿಕವಾಗಿ, ಬಳಲಿದ ಬಾಣಂತಿ, ಮಕ್ಕಳಾಗದೇ ಬಂಜೆ ಎಂಬ ಕುಟುಂಬದ ಚುಚ್ಚುಮಾತಿಗೆ ತಲೆಕೆಡಿಸಿಕೊಂಡಾಕೆ, ಶಾರೀರಿಕ ದೌರ್ಬಲ್ಯತೆಯಿಂದ ಮೈ ಮೇಲೆ ದೆವ್ವ ಬಂದಂತೆ  ವರ್ತಿಸುವ  ಹೆಣ್ಣಿನ ಜೀವನದ ಘಟನೆಗಳು ಈ ನಾಟಕದಲ್ಲಿ ಇದ್ದವು. ಕುಡಿದು ಸದಾ ಜಗಳಾಡುವ ತಂದೆ ತಾಯಿ, ಹೆಂಡತಿಯನ್ನು ಬಡಿಯುವ ಗಂಡ, ಹೆಂಡತಿಯ ಮೊದಲ ಗಂಡನ ಮಕ್ಕಳನ್ನು ಅಥವಾ ತನ್ನ ಹೆಣ್ಣು ಮಕ್ಕಳನ್ನೇ ಲೈಂಗಿಕವಾಗಿ ಭೋಗಿಸುವ ಮಲತಂದೆ/ಸ್ವಂತ ತಂದೆ, ಪ್ರೇಮದ ಹೆಸರಿನಲ್ಲಿ ಪ್ರಿಯಕರ/ ಪ್ರಿಯತಮೆಯ ಮೋಸ, ಧರ್ಮ, ಜಾತಿ ಕುಟುಂಬದ ಹೆಸರಿನಲ್ಲಿ, ಮಕ್ಕಳ ಮನಸ್ಸು ಅರಿಯದೇ ಶೋಷಿಸಿ ಹಿಂಸಿಸುವ ಪಾಲಕರು, ಕುಟುಂಬ, ಸಮಾಜ ಇವರೆಲ್ಲರ ಮಧ್ಯೆ ನಮ್ಮ ಮಾನಸಿಕ ಸ್ಥಿತಿ ಚೆನ್ನಾಗಿ, ಬಲವಾಗಿ, ಒಳ್ಳೆಯ ಸ್ಥಿತಿಯಲ್ಲಿ ಇರುವಂತೆ ಸಮತೋಲನ ಮಾಡುವ ಜವಾಬ್ದಾರಿ ಅಂತಿಮವಾಗಿ ನಮ್ಮದೇ ಅಲ್ಲವೇ, ಹೀಗಾದಾಗ ಮಾತ್ರ ಮನಸ್ಸು ನಂದನವನ ಆಗುತ್ತದೆ.
ಶಾಲೆಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ  ತಿಳುವಳಿಕೆ :
ಶಾಲೆಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆಯೂ ತಿಳುವಳಿಕೆ ಕೊಡಬೇಕೆಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಮಾನಸಿಕ ಆರೋಗ್ಯ – ಭಾವನಾತ್ಮಕ, ಮನೋವಿಶ್ಲೇಷಣಾತ್ಮಕ ಹಾಗೂ ಸಾಮಾಜಿಕ ಆಯಾಮಗಳನ್ನು ಹೊಂದಿದೆ. ನಾವು ಹೇಗೆ ಯೋಚಿಸಿ, ಭಾವಿಸಿ, ಕ್ರಿಯೆ ಮಾಡುತ್ತೇವೆ ಎನ್ನುವುದರ ಮೇಲೆ ಇದು ಪರಿಣಾಮ ಬೀರುತ್ತದೆ. ನಾವು ನಮ್ಮ ಒತ್ತಡ ಹಾಗೂ  ವಿಚಾರಗಳನ್ನು ಹೇಗೆ ನಿಭಾಯಿಸುತ್ತೇವೆ ಹಾಗೂ ಆಯ್ಕೆಗಳನ್ನು ಮಾಡುತ್ತೇವೆ ಎಂಬುದನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ. ಜೀವನದ ಪ್ರತಿ ಹೆಜ್ಜೆಯಲ್ಲಿ – ಬಾಲ್ಯದಿಂದ ಯೌವ್ವನ ಕಾಲದಲ್ಲಿ ಹಾಗೂ ವಯಸ್ಕರಾದಾಗ, ಮಾನಸಿಕ ಆರೋಗ್ಯ ಬಹಳ ಮುಖ್ಯ. ನಿಮ್ಮ ಜೀವನದಲ್ಲಿ ಒಂದು ವೇಳೆ ನೀವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿ, ಅದರ ಪ್ರಭಾವ ನಿಮ್ಮ ಯೋಚನೆ, ಚಿತ್ತ, ನಡವಳಿಕೆಗಳ ಮೇಳಾಗುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣೀಭೂತವಾಗಿ, ಇದನ್ನು ಹೆಚ್ಚಿಸುವ ಅನೇಕ ಕಾರಣಗಳಿರಬಹುದು. ಉದಾ:- ಜೈವಿಕ ಕಾರಣಗಳಾದ ವಂಶವಾಹಿ  ಅಥವಾ ಮೆದುಳಿನ ರಾಸಾಯನಿಕ ಕ್ರಿಯೆಯಾದ ಆಘಾತ ಹಾಗೂ ದುರ್ಬಳಕೆ ಜೀವನದ ಅನುಭವಗಳು, ಕುಟುಂಬದಲ್ಲಿಯ ಮಾನಸಿಕ ಆರೋಗ್ಯ ಸಮಸ್ಯೆಗಳ ಇತಿಹಾಸ.
ಮಾನಸಿಕ ಆರೋಗ್ಯ ಸಮಸ್ಯೆಯ ಚಿಹ್ನೆ:ಮಾನಸಿಕ ಆರೋಗ್ಯಕ್ಕಾಗಿ ಸದಾ ಒಳ್ಳೆಯದನ್ನೇ ಯೋಚಿಸಬೇಕು
ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಕಾಲಕ್ಕೆ ಮಾನಸಿಕ ತಜ್ಞರಿಂದ ತಪಾಸಣೆ, ಸಲಹೆ, ಹಾಗೂ ಚಿಕಿತ್ಸೆ ಸಿಕ್ಕರೆ ಇವರೂ ಸುಧಾರಿಸಬಹುದು. ನೀವು ಅಥವಾ ನಿಮಗೆ ಪರಿಚಿತರಾಗಿರುವ ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಈ ಮುಂದೆ ಹೇಳುವ ಒಂದು ಅಥವಾ ಹೆಚ್ಚು ಭಾವನೆಗಳು ಹಾಗೂ ನಡವಳಿಕೆಗಳಿದ್ದರೆ ಅದು ಸಮಸ್ಯೆಯ ಚಿಹ್ನೆ  ಆಗಿರಬಹುದು.
1. ಅತಿ ಹೆಚ್ಚು ತಿನ್ನುವುದು,
2. ಅತಿ ಹೆಚ್ಚು ನಿದ್ರಿಸುವುದು,
3. ಜನರಿಂದ ಹಾಗೂ ಸಾಮಾನ್ಯ ಚಟುವಟಿಕೆಗಳಿಂದ  ದೂರ ಉಳಿಯುವುದು,
4. ಕಡಿಮೆ ಶಕ್ತಿ ಅಥವಾ ಶಕ್ತಿಯೇ ಇಲ್ಲದಿರುವುದು,
5. ಏನೂ ಪರಿವೆ ಇಲ್ಲದೇ, ಸ್ವರ್ಶ ಜ್ಞಾನವಿಲ್ಲದೇ, ನಿಶ್ಚೇಷ್ಟಿತ ಆಗುವುದು,
6. ವಿವರಿಸಲಾಗದ ನೋವುಗಳನ್ನು ಹೊಂದಿರುವುದು,
7. ಅಸಹಾಯಕ ಅಥವಾ ಅಸಹನೀಯ ಭಾವನೆ ಹೊಂದಿರುವುದು,
8. ಸಾಮಾನ್ಯಕ್ಕಿಂತ ಹೆಚ್ಚು ಧೂಮ್ರಪಾನ, ಕುಡಿತ, ಅಥವಾ ಔಷಧಗಳ ಸೇವನೆ ಮಾಡುತ್ತಿರುವುದು,
9. ಹಿಂದೆಂದೂ ಇರದ ಗೊಂದಲ, ಮರೆವು, ಅಂಚಿನಲ್ಲಿರುವುದು,
10. ಕೋಪ, ಚಿಂತೆ, ಹೆದರಿಕೆ    ಅಸಮಾಧಾನ ಹೊಂದಿರುವುದು,
11. ಕುಟುಂಬದ  ಸದಸ್ಯರೊಂದಿಗೆ ಹಾಗೂ ಮಿತ್ರರೊಂದಿಗೆ  ಚೀರುತ್ತಾ ಹಾರಿದಂತೆ ಜಗಳಾಡುವುದು,
12. ಸಂಬಂಧಗಳಲ್ಲಿ ಸಮಸ್ಯೆ ತರುವ ಹೊಯ್ದಾಟದ ಚಿತ್ತ,
13. ತಲೆಯಿಂದ ಹೊರಹಾಕಲಾಗದ ಹೊರಬರಲಾಗದ ವಿಚಾರಗಳು, ಹಾಗೂ ನೆನಪುಗಳನ್ನು ಹೊಂದಿರುವುದು,
14. ನಿಜವಲ್ಲದ ಧ್ವನಿಗಳನ್ನು ಕೇಳುವುದು, ನಂಬುವುದು,
15. ತನಗೆ ತಾನೇ ದೇಹಕ್ಕೆ ಜೀವಕ್ಕೆ ಹಾನಿ ಮಾಡಿಕೊಳ್ಳುವುದು ಹಾಗೂ ಇತರರಿಗೆ ಹಾನಿ ಮಾಡುವುದು,
16. ಮಗುವಿನ ಕಾಳಜಿ ಮಾಡದೇ ಅವರನ್ನು ಶಾಲೆಗೆ ಕಳಿಸುವ ಕೆಲಸದ ಬಗ್ಗೆ ಕಾಳಜಿ ವಹಿಸದಿರುವುದು.
ಜೀವನದ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸಬೇಕು:
ಇತ್ಯಾತ್ಮಕ ಮಾನಸಿಕ ಆರೋಗ್ಯಕ್ಕಾಗಿ ವ್ಯಕ್ತಿ ಹಾಗೂ ಕುಟುಂಬ ಜೀವನದಲ್ಲಿ ಬರಬಹುದಾದ ಒತ್ತಡ, ಉದ್ವೇಗ, ಆತಂಕ ಇವುಗಳನ್ನು ಎದುರಿಸಲು ಗಟ್ಟಿಯಾಗಬೇಕು. ಜೀವನದ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸಬೇಕು. ಹಣ ಇಲ್ಲದಿದ್ದಾಗ ಅದರ ಚಿಂತೆ, ಅದು ಇದ್ದಾಗ ಅದನ್ನು ಹೆಚ್ಚು ಮಾಡುವುದು ಹೇಗೆ, ಖರ್ಚು ಮಾಡುವುದು ಹೇಗೆ, ಸರಕಾರದ ಕರ ತಪ್ಪಿಸುವುದು ಹೇಗೆ ಹೀಗೆಯೇ ಮನ ಚಿಂತಿಸುತ್ತದೆ. ಆದರೆ ಒಂದು ವಿಷಯ  ನನ್ನ ಅನುಭವದಲ್ಲಿ ಹೇಳುತ್ತೇನೆ. ಮಾನಸಿಕ ಆನಂದ ಎನ್ನುವುದು ಹಣದಲ್ಲಿ, ಆಸ್ತಿಯಲ್ಲಿ, ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಇಲ್ಲ. ಜೀವನಕ್ಕೆ ಹಣ ಬೇಕು. ವಸ್ತುಗಳು ಬೇಕು ಆದರೆ  ಹಣ ಸಂಪಾದಿಸುವುದು ಹಾಗೂ  ಬೆಳೆಸುವುದು, ವಸ್ತುಗಳ ಸಂಗ್ರಹವೇ ಜೀವನವಲ್ಲ. ಆನಂದ ಎನ್ನುವುದು ಮನಸ್ಸು ತಾನಾಗಿ ಅನುಭವಿಸುವ ಸ್ಥಿತಿ.
ಇದ್ದುದರಲ್ಲೇ ತೃಪ್ತಿ ಇದ್ದರೆ ಗಂಜಿ ಊಟದಲ್ಲೂ ಕೂಡಿ ಉಂಡಾಗ ಆನಂದ. ಅತೃಪ್ರಿ ಇದ್ದರೆ ಮನಸ್ಸಿಗೆ ಆನಂದ, ಶಾಂತಿ ಎಲ್ಲಿಂದ ಬರಬೇಕು? ಅದಕ್ಕೆ ಪ್ರತಿನಿತ್ಯ ನಿಮಗೆ ಖುಷಿ ಕೊಡುವ ಹೆಚ್ಚು ಖರ್ಚಿಲ್ಲದ ಕೆಲವು ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಆಗಾಗ ಶುದ್ಧ ಮನರಂಜನೆ ಪಡೆಯಲು, ಬಾಯಿ ತುಂಬಾ ನಗಿ. ನಾಟಕ, ಸಿನಿಮಾ ನೋಡಿ. ಆಪ್ತರೊಂದಿಗೆ ಹರಟೆ ಹೊಡೆಯಿರಿ. ಬೆಳಗ್ಗೆ, ಸಂಜೆ ನಡಿಗೆ ಮಾಡಿ. ಮನೆಯ ಮುಂದೆ ಅಥವಾ ಹಿಂದೆ ಇಲ್ಲವೇ ಕುಂಡಗಳಲ್ಲಿ ಹೂವು, ತರಕಾರಿ ಬೆಳೆಯಿರಿ. ಸದಾ ಚಟುವಟಿಕೆಗಳಿಂದ ಇರಿ. ಸುಮ್ಮನೆ ಕುಳಿತ ಸೋಮಾರಿ ಮನಸ್ಸು ದೆವ್ವದ ಕಾರ್ಖಾನೆಯಾಗುತ್ತದೆ. ಈ ಎಲ್ಲ ವಿಚಾರಗಳನ್ನು 1973ರಿಂದ ಇದುವರೆಗೆ ಪತ್ರಿಕಾ ಹಾಗೂ ನಿಯತಕಾಲಿಕೆಗಳ ಲೇಖನ ಬರೆಯುತ್ತ, 36 ವರ್ಷ ಆಕಾಶವಾಣಿಯ ಸೇವೆಯಲ್ಲಿ ಮಾಲಿಕೆಯ ಕಾರ್ಯಕ್ರಮಗಳು ಹಾಗೂ ರಂಗಪ್ರದರ್ಶನಗಳನ್ನು ಮಾಡುತ್ತ ಪ್ರತಿಪಾದಿಸುತ್ತಿರುವ ತೃಪ್ತಿ ನನಗಿದೆ.
ಎನ್.ವ್ಹಿ ರಮೇಶ್, ಮೈಸೂರು
ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!