ಲೈಂಗಿಕತೆಯ ಮೇಲೆ ಮಧುಮೇಹದಿಂದಾಗುವ ದುಷ್ಪರಿಣಾಮಗಳು

ಲೈಂಗಿಕತೆಯ ಮೇಲೆ ಮಧುಮೇಹದಿಂದಾಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ. ಮಧುಮೇಹದ ಹತೋಟಿ ಸಮರ್ಪಕವಾಗಿಲ್ಲದಿದ್ದಲ್ಲಿ ಹಾಗೂ ಕಾಯಿಲೆ ದೀರ್ಘಾವಧಿಯಿದ್ದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗಬಹುದು. ಸಾಮಾನ್ಯವಾಗಿ ಮಧುಮೇಹದಿಂದ ಪುರುಷ ಹಾಗೂ ಸ್ತ್ರೀಯರ ಲೈಂಗಿಕತೆಯ ಮೇಲೆ ಉಂಟಾಗುವ ಪರಿಣಾಮಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ.

ಲೈಂಗಿಕತೆಯ ಮೇಲೆ ಮಧುಮೇಹದಿಂದಾಗುವ ದುಷ್ಪರಿಣಾಮಗಳು
ಮಧುಮೇಹವು ಒಂದು ಜೀವಕ ಕ್ರಿಯೆಯ (ಮೆಟಬಾಲಿಕ್) ವ್ಯತ್ಯಾಸದಿಂದಾಗುವ ಕಾಯಿಲೆ. ನಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಇಲ್ಲದಿದ್ದಾಗ, ಶರ್ಕರಪಿಷ್ಟ ಪದಾರ್ಥಗಳು ಜೀವಕೋಶದೊಳಗೆ ಸಮರ್ಪಕವಾಗಿ ಹೋಗುವುದಿಲ್ಲ. ಗ್ಲುಕೋಸ್ ಜೈವಿಕ ಕ್ರಿಯೆಗಳಿಗಾಗಿ ಉಪಯೋಗವಾಗುವುದಿಲ್ಲ ಹಾಗೂ ಸಂಗ್ರಹವು ಆಗುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಗ್ಲುಕೋಸ್ನ ಪ್ರಮಾಣ ಅತಿಯಾಗುತ್ತದೆ ಮತ್ತು ದೇಹಕ್ಕೆ ಅಗತ್ಯವಾದ ಚೈತನ್ಯ ಸಿಗುವುದಿಲ್ಲ. ಇನ್ಸುಲಿನ್ ಎಂಬ ಹಾರ್ಮೋನಿನ ಅಭಾವ ಅಥವಾ ಅಶಕ್ತತೆಯಿಂದ ಮಾನವ ದೇಹಕ್ಕೆ ಕೆಲವು ಆಹಾರ ಪದಾರ್ಥಗಳನ್ನು ಸೂಕ್ತವಾಗಿ ರಕ್ತಗತ ಮಾಡಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿಯನ್ನೇ ಮಧುಮೂತ್ರ ಎನ್ನುವುದು.

ಇನ್ಸುಲಿನ್ ಜಠರದ ಹಿಂದೆ ಇರುವ ಮೆದೋಜೀರಕಾಂಗದಲ್ಲಿ ತಯಾರಾಗುತ್ತದೆ. ಸೇವಿಸುವ ಆಹಾರಕ್ಕನುಗುಣವಾಗಿ, ಮೆದೋಜೀರಕಾಂಗ ಇನ್ಸುಲಿನ್ನನ್ನು ಸ್ರವಿಸುತ್ತದೆ. ಹೆಚ್ಚು ಆಹಾರ ಸೇವಿಸಿದಷ್ಟೂ ಹೆಚ್ಚು ಇನ್ಸುಲಿನ್ ತಯಾರಾಗುತ್ತದೆ. ಇನ್ಸುಲಿನ್ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ. ಜೀವಕೋಶಗಳೊಳಗೆ ಗ್ಲುಕೋಸ್ ಪ್ರವೇಶಿಸಲು ಇನ್ಸುಲಿನ್ ಸಹಾಯ ಮಾಡುತ್ತದೆ. ಮಾಂಸಖಂಡಗಳು ಹಾಗೂ ಯಕೃತ್ತಿನಲ್ಲಿ (ಲಿವರ್) ಗ್ಲುಕೋಸ್ ಸಂಗ್ರಹವಾಗಲೂ ಸಹ ಇನ್ಸುಲಿನ್ ಸಹಕರಿಸುತ್ತದೆ. ಈ ಸಂಗ್ರಹ, ಗ್ಲುಕೋಸ್ ಗ್ಲೈಕೋಜೆನ್ ಎಂಬ ರೂಪದಲ್ಲಿರುತ್ತದೆ. ಮತ್ತು ಅಗತ್ಯವಾದಾಗಲೆಲ್ಲ ಅದು ಗ್ಲುಕೋಸ್ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ.

ಹೀಗೆ ಇನ್ಸುಲಿನ್ ರಕ್ತದಲ್ಲಿರುವ ಗ್ಲುಕೋಸ್ನ ಪ್ರಮಾಣವನ್ನು ನಿಯಂತ್ರಿಸಿ, ರಕ್ತದಲ್ಲಿ ಗ್ಲುಕೋಸ್ನ ಮಟ್ಟ ಅತಿಯಾಗಿ ಏರದಂತೆ ಮಾಡುತ್ತದೆ. ಶರ್ಕರ ಪಿಷ್ಠಗಳು ಪಚನವಾದ ನಂತರ ಗ್ಲುಕೋಸ್ ಎಂಬ ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತವೆ. ಊಟದ ನಂತರ ಗ್ಲುಕೋಸ್ ರಕ್ತಗತವಾಗುತ್ತದೆ. ತತ್ಕಾಲದಲ್ಲೇ ದೇಹದ ಅಂಗಾಂಗಗಳ ಜೀವಕೋಶಗಳನ್ನೆಲ್ಲ ಗ್ಲುಕೋಸ್ ಪ್ರವೇಶಿಸುತ್ತದೆ. ದೇಹದ ಚಟುವಟಿಕೆಗಳಿಗೆ ಬೇಕಾದ ಚೈತನ್ಯವನ್ನು ಗ್ಲುಕೋಸ್ ಒದಗಿಸುತ್ತದೆ.

ಮಧುಮೇಹದ ಪ್ರಧಾನ ಚಿಹ್ನೆಗಳು:

1. ಅತಿಮೂತ್ರ ಮತ್ತು ಬಾಯಾರಿಕೆ
2. ಅತಿಯಾದ ಹಸಿವು
3. ಸುಸ್ತು, ಆಯಾಸ
4. ಅತಿಮೂತ್ರ ವಿಸರ್ಜನೆ

ಮಧುಮೇಹಕ್ಕೆ ಎಡೆಗೊಡುವ ಅಂಶಗಳು:

diabetes-dina

ಕೆಲವು ಅಂಶಗಳು ಮಧುಮೇಹ ಉಂಟಾಗುವ ಸಂಭವನೀಯತೆಯನ್ನು ಹೆಚ್ಚು ಮಾಡಬಲ್ಲವು. ಇವನ್ನು ಎಡೆಗೊಡುವ ಅಂಶಗಳು ಎನ್ನಬಹುದು. ಯಾವುದೇ ವ್ಯಕ್ತಿಯಲ್ಲಿ ಈ ಅಂಶಗಳು ಕಂಡುಬಂದಲ್ಲಿ ಆ ವ್ಯಕ್ತಿ ಮಧುಮೇಹದ ರೋಗಿಯಾಗುವ ಸಾಧ್ಯತೆ ಹೆಚ್ಚು. ಆದರೆ ಆ ಅಂಶಗಳೇ ಮಧುಮೂತ್ರದ ಕಾರಣಗಳಲ್ಲ.

1. ಕುಟುಂಬ ಹಿನ್ನೆಲೆ: ಈ ಅಂಶಗಳಲ್ಲಿ ಅತಿ ಮುಖ್ಯವಾದದ್ದು ವಂಶದ ಇತರರಲ್ಲಿ ಮಧುಮೂತ್ರದ ಇರುವಿಕೆ. ಈ ಅನುವಂಶಿಕತೆಯ ಪ್ರಭಾವ, ವಯಸ್ಕ ಹಾಗೂ ಇನ್ಸುಲಿನ್ ಅವಲಂಬಿಸದ (ನಾನ್ ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್) ರೋಗಿಗಳಲ್ಲಿ ಹೆಚ್ಚು ಕಂಡುಬರುತ್ತದೆ. ನಿಕಟ ಸಂಬಂಧಿಗಳಲ್ಲಿ (ಚಿಕ್ಕಪ್ಪ, ಚಿಕ್ಕಮ್ಮ ಇವರನ್ನೂ ಸೇರಿದಂತೆ) ಮಧುಮೂತ್ರ ಇದ್ದಲ್ಲಿ ಈ ಕಾಯಿಲೆ ಬರುವ ಸಂಭವ ಹೆಚ್ಚು. ವಂಶದಲ್ಲಿ ಎಷ್ಟು ಮಂದಿಗೆ ಕಾಯಿಲೆಯಿದೆ ಹಾಗೂ ತಾಯಿ-ತಂದೆಯರಲ್ಲಿ ಎರಡೂ ಕಡೆ ಕಾಯಿಲೆ ಇದೆಯೇ ಎಂಬುದು ಮುಖ್ಯ ನಿರ್ಧಾರಿತ ಅಂಶ. ಅನುವಂಶೀಯ ಪ್ರಭಾವವಿದ್ದರೂ ಕೆಲವರಿಗೆ ಮಧುಮೂತ್ರ ಬಾರದೇ ಹೋಗುವ ಸಂಭವವೂ ಇದೆ.

2. ದೇಹ ತೂಕ: ಅತಿಯಾದ ದೇಹತೂಕವು ಮಧುಮೂತ್ರ ಉಂಟಾಗುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಾಲ್ವರಲ್ಲಿ ಕನಿಷ್ಠ ಮೂರು ಮಂದಿ ಅತಿಯಾದ (ಅಗತ್ಯಕ್ಕಿಂತ ಸುಮಾರು 10 ರಿಂದ 20 ಕಿ.ಗ್ರಾಂ. ಹೆಚ್ಚು) ದೇಹದ ತೂಕದೊಡನೆ ಇರುತ್ತಾರೆ. ಇವರಲ್ಲಿ ಕಾಯಿಲೆಯ ಪತ್ತೆ ಹಲವು ವರ್ಷಗಳ ನಂತರ ಆಗಬಹುದು. ಬೊಜ್ಜು ಇರುವವರಲ್ಲಿ ಇನ್ಸುಲಿನ್ ಅಗತ್ಯವೂ ಹೆಚ್ಚು. ಈ ವ್ಯಕ್ತಿಗಳಲ್ಲಿ ಮೇದಸ್ಸಿನ ಮಧುಮೇಹ ಮತ್ತು ಅದಕ್ಕೆ ಎಡೆಗೊಡುವ ಅಂಶಗಳು. ಜೀವಕೋಶಗಳೂ ಹೆಚ್ಚು ಗಾತ್ರ ಹೊಂದಿರುತ್ತವೆ. ಈ ತೆರನಾದ ದೊಡ್ಡ ಗಾತ್ರದ ಜೀವಕೋಶಗಳು ಇನ್ಸುಲಿನ್ಗೆ ಸೂಕ್ತ ಪ್ರತಿಕ್ರಿಯೆ ಬೊಜ್ಜು ದೇಹದವರಲ್ಲಿ ತೋರುವುದಿಲ್ಲ ಎಂದು ತಿಳಿಯಲಾಗಿದೆ.

3. ವಯಸ್ಸು: ಮಧುಮೂತ್ರ ಎಲ್ಲ ವಯಸ್ಸುಗಳಲ್ಲೂ ಕಂಡುಬಂದರೂ, ಅದರ ಸಂಭವನೀಯತೆ ವಯಸ್ಸಾದಂತೆ ಹೆಚ್ಚುತ್ತದೆ. ಇನ್ಸುಲಿನ್ ಅವಲಂಬಿಸದ ರೋಗಿಗಳು ಸಾಧಾರಣವಾಗಿ ನಲವತ್ತು ವರ್ಷ ಮೀರಿರುತ್ತಾರೆ.

4. ಲಿಂಗ: ಪ್ರೌಢ ವಯಸ್ಸು ತಲುಪುವವರೆಗೆ, ಸ್ತ್ರೀ ಪುರುಷರಲ್ಲಿ ಮಧುಮೇಹದ ಸಂಭವ ಸಮಾನವಾಗಿರುತ್ತದೆ. ಸುಮಾರು ಮೂವತ್ತು ವರ್ಷ ವಯಸ್ಸಿನ ವೇಳೆಗೆ ಸ್ತ್ರೀಯರಲ್ಲಿ ಕಾಯಿಲೆಯ ಸಾಧ್ಯತೆ ಹೆಚ್ಚು; 45 ರಿಂದ 65 ವರ್ಷದ ಸ್ತ್ರೀಯರಲ್ಲಿ ಮಧುಮೇಹ ಗಂಡಸರಿಗಿಂತ ಎರಡು ಪಟ್ಟು ಹೆಚ್ಚು ಕಂಡುಬರುತ್ತದೆ. ಕೆಲವು ಮಹಿಳೆಯರಲ್ಲಿ ಗರ್ಭಿಣಿಯರಾದಾಗ ಮುಧುಮೂತ್ರ ಮೊದಲ ಬಾರಿಗೆ ಕಾಣಿಸಿಕೊಂಡು ಮುಂದಿನ ವರ್ಷಗಳಲ್ಲಿ ಎರಡನೇ ಬಗೆ (ಇನ್ಸುಲಿನ್ ಅವಲಂಬಿತವಲ್ಲದ) ಕಾಯಿಲೆಯಾಗಿ ಮುಂದುವರಿಯಬಹುದು.

5. ಜನಾಂಗ: ಮಧುಮೇಹಕ್ಕೆಡೆಗೊಡುವ ಅಂಶಗಳಲ್ಲಿ ಜನಾಂಗದ ಪ್ರಭಾವವೂ ಇರಬಹುದು. ಕೆಲವು ಜನಾಂಗದ ವ್ಯಕ್ತಿಗಳಲ್ಲಿ ಇತರರಿಗಿಂತ ಬಹು ಹೆಚ್ಚು ಕಾಯಿಲೆ ಕಂಡುಬರುತ್ತದೆ. ಪೌರ್ವಾತ್ಯ ಜನಾಂಗಗಳಲ್ಲಿ ಪಾಶ್ಚಾತ್ಯರಿಗಿಂತ ಕಡಿಮೆ ಪ್ರಮಾಣದಲ್ಲಿ ಕಾಯಿಲೆ ಕಂಡುಬರುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಆದರೆ ಅನುವಂಶಿಕತೆ ಹಾಗೂ ವಿವಿಧ ಜನಾಂಗಗಳ ಪ್ರಭಾವಗಳನ್ನು ವಿಂಗಡಿಸಿ ಅಧ್ಯಯನ ಮಾಡುವುದು ಬಹಳ ಕಷ್ಟ.

6. ಜಡ ಸ್ವಭಾವ: ದೈಹಿಕ ಶ್ರಮ, ಚಟುವಟಿಕಗಳಿಲ್ಲದೆ ವಿಶ್ರಾಂತ ಜೀವನ ಶೈಲಿಯ ಜನರಲ್ಲಿ ಮಧುಮೂತ್ರದ ಸಂಭವ ಹೆಚ್ಚು. ದೈಹಿಕ ಚಟುವಟಿಕೆಯು ಶರೀರದಲ್ಲಿನ ಇನ್ಸುಲಿನ್ನ ಕಾರ್ಯಗಳನ್ನು ಚುರುಕುಗೊಳಿಸುತ್ತದೆ.

7. ಒತ್ತಡಗಳು: ಜೀವನದ ಮಾನಸಿಕ ಹಾಗೂ ಇತರ ಒತ್ತಡಗಳಿಗೂ ಮಧುಮೇಹದ ವೃದ್ಧಿಗೂ ಸಂಬಂಧವಿದೆ ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಉದಾಹರಣೆಗೆ ನಿಕಟ ಸಂಬಂಧಿಯ ಮರಣ, ಕೆಲಸ ಕಳೆದುಕೊಳ್ಳುವುದು, ದೈಹಿಕ ಕಾಯಿಲೆ- ಇವೆಲ್ಲವೂ ಮುಧುಮೂತ್ರ ಮೊದಲ ಬಾರಿಗೆ ಉಂಟಾಗುವಂತೆ ಮಾಡಬಲ್ಲವು. ಮುಧುಮೂತ್ರ ಶಮನಗೊಳ್ಳದಿರಬಹುದು ಅಥವಾ ಕೆಲವು ವರ್ಷಗಳು ಉತ್ತಮ ಆರೋಗ್ಯ ಸ್ಥಿತಿಯಿದ್ದು, ಮತ್ತೆ ಮಧ್ಯ ವಯಸ್ಸಿನಲ್ಲೋ ಒತ್ತಡದ ಪರಿಸ್ಥಿತಿಯ ಕಾಲದಲ್ಲೋ ಕಾಯಿಲೆ ಮರುಕಳಿಸಬಹುದು.

ಮಧುಮೇಹ ವಿಧಗಳು:

1.ಇನ್ಸುಲಿನ್ ಅವಲಂಬಿತ ಮಧುಮೇಹ: ಇಂದು ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಕಿರಿಯ ವಯಸ್ಕರಲ್ಲಿ ಕಂಡುಬರುತ್ತದೆ. ಕಾಯಿಲೆ ಇದ್ದಕ್ಕಿದ್ದಂತೆ ಆರಂಭವಾಗುತ್ತದೆ. ದೇಹದಲ್ಲಿ ಜೀವಕೋಶಗಳು ನಾಶವಾಗಿ ಇನ್ಸುಲಿನ್ನ ತೀವ್ರ ಕೊರತೆ ಉಂಟಾಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ವಿಪರೀತ ಬಾಯಾರಿಕೆ, ಹೆಚ್ಚು ಹಸಿವಿದ್ದರೂ ದೇಹ ಕೃಶವಾಗುವುದು . ಇವು ಮುಖ್ಯ ಲಕ್ಷಣಗಳು.
2. ಇನ್ಸುಲಿನ್ ಅವಲಂಬಿತವಲ್ಲದ ಮಧುಮೇಹ: ಇದು ಸುಮಾರು 35 ವರ್ಷದ ನಂತರದ ವಯಸ್ಸಿನ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಈ ಬಗೆಯ ಮಧುಮೇಹದಲ್ಲಿ ಇನ್ಸುಲಿನ್ ಅಭಾವ ಇರುವುದಿಲ್ಲ. ಆದರೆ ದೇಹದ ಜೀವಕೋಶಗಳು ಇನ್ಸುಲಿನ್ ಅನ್ನು ಸಮರ್ಪಕವಾಗಿ ಉಪಯೋಗಿಸುವುದಿಲ್ಲ. ಇದರ ಲಕ್ಷಣಗಳೇನೆಂದರೆ, ಪಥ್ಯವನ್ನು ಆಚರಿಸಿದರೂ ದೇಹದ ತೂಕ ಕಡಿಮೆ ಆಗದಿರುವುದು, ಹೃದಯದ ರಕ್ತನಾಳಗಳ ಕಾಯಿಲೆಯಿಂದ ಎದೆನೋವು, ಹೃದಯಾಘಾತ ಅಥವಾ ಏರಿದ ರಕ್ತದೊತ್ತಡ ಅಥವಾ ಪದೇ ಪದೇ ಗರ್ಭಪಾತವಾಗುವುದು ಕಂಡುಬರುತ್ತದೆ.

3. ಗರ್ಭಾವಸ್ಥೆಯಲ್ಲಿರುವಾಗ ಬರುವ ಮಧುಮೇಹ: ಕೆಲವು ಮಹಿಳೆಯರು ಗರ್ಭ ಧರಿಸುವಾಗ ಅವರಲ್ಲಿ ಮಧುಮೇಹ ರೋಗ ಕಂಡುಬರುತ್ತದೆ. ಹೆರಿಗೆ ಆದ ನಂತರ ಇದು ವಾಸಿಯಾಗುತ್ತದೆ.

ಮಧುಮೇಹದಿಂದಾಗುವ ದುಷ್ಪರಿಣಾಮಗಳು:

ಮಧುಮೂತ್ರದಿಂದ ಎರಡು ರೀತಿಯ ದುಷ್ಪರಿಣಾಮಗಳನ್ನು ಕಾಣಬಹುದು.
1. ತಕ್ಷಣ ಆಗುವ ಪರಿಣಾಮಗಳು: ಪ್ರಜ್ಞಾಶೂನ್ಯತೆ, ಪದೇ ಪದೇ ಸೋಂಕುಗಳಾಗುವುದು, ವಾಕರಿಕೆ, ವಾಂತಿ, ಹೊಟ್ಟೆನೋವು.
2. ದೀರ್ಘಕಾಲದಲ್ಲಾಗುವ ಪರಿಣಾಮಗಳು: ಹೃದಯಾಘಾತ, ಪಾಶ್ರ್ವವಾಯು, ಅಂಗಕ್ಷಯ, ಕಾಲುಗಳ ರಕ್ತನಾಳ ಕಾಯಿಲೆ, ಕಣ್ಣು ಹಾಗೂ ಮೂತ್ರಪಿಂಡಗಳ ತೊಂದರೆ, ಸ್ಪರ್ಶಹೀನತೆ ಹಾಗೂ ನಿಶ್ಯಕ್ತಿ ಕಾಣಿಸಿಕೊಳ್ಳುವುದು ಹಾಗೂ ರಕ್ತಪರಿಚಲನೆಯಲ್ಲಿ ದೋಷ ಉಂಟಾಗುತ್ತದೆ.

ತಪಾಸಣಾ ಪರೀಕ್ಷೆಗಳು:

1. ರಕ್ತಪರೀಕ್ಷೆ
2. ಮೂತ್ರ ಪರೀಕ್ಷೆ

ಮಧುಮೇಹದಿಂದ ಲೈಂಗಿಕ ಕ್ರಿಯೆಯಲ್ಲಾಗುವ ವ್ಯತ್ಯಾಸಗಳು:

sexual-problem

ಮಧುಮೇಹವು ಲೈಂಗಿಕತೆಯ ಮೇಲೆ ಮೂಡಿಸುವ ಪರಿಣಾಮ ಅಷ್ಟಿಷ್ಟಲ್ಲ. ಮಧುಮೇಹದ ಹತೋಟಿ ಸಮರ್ಪಕವಾಗಿಲ್ಲದಿದ್ದಲ್ಲಿ ಹಾಗೂ ಕಾಯಿಲೆ ದೀರ್ಘಾವಧಿಯಿದ್ದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗಬಹುದು ಹಾಗೂ ಕಾಯಿಲೆಯಿಂದ ನರಮಂಡಲದ ಮೇಲಾಗುವ ಹಾನಿಯಿಂದಲೂ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹಾಗೂ ಕಾಮೇಚ್ಛೆಗಳು ಕುಂದಬಹುದು. ಮಧುಮೂತ್ರ ಇರುವವರು ಮದುವೆ ಮಾಡಿಕೊಳ್ಳುವುದು ಹಾಗೂ ಮಧುಮೂತ್ರವಿರುವವರನ್ನು ಮದುವೆಯಾಗುವುದು ಇತರ ವಿವಾಹಗಳಂತೆಯೆ ಆದರೂ ವಿವಾಹಕ್ಕೆ ಮುನ್ನ ಭಾವೀ ಸಂಗಾತಿಗಳು ಕಾಯಿಲೆ, ಅದರ ಪರಿಣಾಮಗಳು ಹಾಗೂ ಮಧುಮೇಹ ಇರುವವರಿಗೆ ಅಗತ್ಯವಾದ ವಿಶೇಷ ಆದರ ಹಾಗೂ ನಿರೀಕ್ಷೆ ಮುಂತಾದ ಸಂಗತಿಗಳನ್ನು ಅರ್ಥಮಾಡಿಕೊಳ್ಳಲೇಬೇಕು. ಸಾಮಾನ್ಯವಾಗಿ ಮಧುಮೇಹದಿಂದ ಪುರುಷ ಹಾಗೂ ಸ್ತ್ರೀಯರ ಲೈಂಗಿಕತೆಯ ಮೇಲೆ ಉಂಟಾಗುವ ಪರಿಣಾಮಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ.

1. ಪುರುಷರಲ್ಲಿ: ಮಧುಮೇಹವಿರುವ ಪುರುಷ ರೋಗಿಗಳಲ್ಲಿ ಅವರ ಗರ್ಭದಾನ ಶಕ್ತಿಯಲ್ಲಿ ಕುಂದು ಕಂಡುಬರುವುದಿಲ್ಲ. ಆದರೆ ಮಧುಮೇಹವಿರುವ ಪುರುಷರಲ್ಲಿ ನಲವತ್ತು ವಯಸ್ಸಿನ ನಂತರ ಲೈಂಗಿಕ ಕ್ರಿಯಾ ಶಕ್ತಿ ಕುಗ್ಗುವುದು ಕಂಡುಬಂದಿದೆ. ಆದರೆ ಇತರ ಆರೋಗ್ಯವಂತ ಪುರುಷರಲ್ಲಿ ವೃದ್ಧಾಪ್ಯದವರೆಗೂ ಲೈಂಗಿಕ ಕ್ರಿಯಾಶಕ್ತಿ ಇರುತ್ತದೆ. ಸುಮಾರು ಶೇ.25 ರೋಗಿಗಳು ವಯಸ್ಸಾದಂತೆ ಲೈಂಗಿಕ ಕ್ರಿಯೆಯಲ್ಲಿ ಅಸಮರ್ಥತೆ ಹೊಂದಬಹುದಲ್ಲದೇ, ಹಲವರು ನಪುಂಸಕರಾಗಿರಬಹುದಾದ ಸಾಧ್ಯತೆಯೂ ಇವೆ.

2. ಸ್ತ್ರೀಯರಲ್ಲಿ: ಮಧುಮೇಹದಿಂದ ಸ್ತ್ರೀಯರ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹಾಗೂ ಅಸಮರ್ಥತೆಯಲ್ಲಿ ಯಾವ ಸಮಸ್ಯೆಗಳು ಸಾಧಾರಣವಾಗಿ ಕಂಡುಬರುವುದಿಲ್ಲ. ಕೆಲವರಲ್ಲಿ ಉದ್ರೇಕವಾಗುವಲ್ಲಿ ಸಮಸ್ಯೆಯಾಗಬಹುದು. ಜನನೇಂದ್ರಿಯಗಳಲ್ಲಿ ಬೂಸ್ಟ್ಗಳ ಸೋಂಕಿನಿಂದ ನವೆಯಾಗುವುದು ಸಾಧಾರಣ. ಆದರೆ ರಕ್ತ ಹಾಗೂ ಗ್ಲೂಕೋಸ್ ಪ್ರಮಾಣವನ್ನು ಹತೋಟಿಯಲ್ಲಿಡುವುದರಿಂದ ಹಾಗೂ ವೈಯಕ್ತಿಕ ಆರೋಗ್ಯ ಸೂತ್ರಗಳನ್ನು ಪಾಲಿಸುವುದರಿಂದ ಈ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ರಕ್ತ ಗ್ಲೂಕೋಸ್ ಹತೋಟಿ ಸೂಕ್ತವಾಗಿಲ್ಲದಿದ್ದರೆ ಮುಟ್ಟಿನ ದೋಷಗಳು ಕಂಡುಬರಬಹುದು.

3. ಗರ್ಭಿಣಿಯರಲ್ಲಿ ಮಧುಮೇಹದಿಂದುಂಟಾಗುವ ದುಷ್ಪರಿಣಾಮಗಳು: ಗರ್ಭಿಣಿಯರಲ್ಲಿ ಮಧುಮೇಹದ ಪರಿಣಾಮಗಳು ಅತಿ ಹೆಚ್ಚು. ಅನೇಕರಲ್ಲಿ ಗರ್ಭಪಾತ, ಮೃತ ಶಿಶು ಜನನ, ಹೈಡ್ರಾಮ್ನಿಯಾಸ್ (ಭ್ರೂಣದ ಸುತ್ತ ಇರುವ ದ್ರವ ತೀರಾ ಹೆಚ್ಚಾಗುವುದು).

ಮುಂಜಾಗರೂಕತಾ ಕ್ರಮಗಳು:

ಮಧುಮೇಹ ಇರುವ ಯಾವುದೇ ವ್ಯಕ್ತಿ ಮೊದಲಿಗೆ ತಮ್ಮ ಜೀವನವನ್ನು ವ್ಯವಸ್ಥಿತವಾಗಿಯೂ, ಶಿಸ್ತಿನಿಂದ ನಡೆಸಲು ಪ್ರಯತ್ನಿಸಬೇಕು. ಮುಖ್ಯವಾಗಿ ಕಾಯಿಲೆಯಿಂದ ಎದೆಗುಂದಬಾರದು. ಕಾಯಿಲೆಯನ್ನು ಚೆನ್ನಾಗಿ ಅರಿತಿದ್ದರೆ ಸಮಸ್ಯೆಯನ್ನು ಅರ್ಧ ಜಯಿಸಿದಂತೆಯೇ ಇಂತಹ ರೋಗಿಗಳು ಕಾಯಿಲೆಯನ್ನು ಅಲಕ್ಷ್ಯ ಮಾಡುವವರಿಗಿಂತ ಚೆನ್ನಾಗಿ ಬಾಳುತ್ತಾರೆ.

1. ಮಧುಮೇಹ ರೋಗಿಗಳಿಗೆ ತಿಂಗಳಿಗೊಮ್ಮೆಯಾದರೂ ತಪಾಸಣೆ ಕಡ್ಡಾಯ ಹಾಗೂ ದಿನನಿತ್ಯ ವೈದ್ಯರು ಸೂಚಿಸಿದ ಮಾತ್ರೆ ಔಷಧಿಗಳನ್ನು ಕಟ್ಟುನಿಟ್ಟಾಗಿ ಸೇವಿಸಬೇಕು.

2. ಆಹಾರದಲ್ಲಿ ಕ್ರಮಬದ್ಧತೆ ಅಗತ್ಯ. ಜಿಡ್ಡು, ಸಿಹಿ ಪದಾರ್ಥಗಳು, ಐಸ್ ಕ್ರೀಂ, ಬೇಕರಿ ತಿನಿಸುಗಳಿಂದ ಸಾಧ್ಯವಾದಷ್ಟು ದೂರವಿರಬೇಕು.

3. ಧೂಮಪಾನ, ಮಧುಪಾನಗಳಿಂದ ದೂರವಿರುವುದು ಅವಶ್ಯಕ.

4. ಮಧುಮೇಹ ರೋಗಿಗಳು ದೇಹತೂಕವನ್ನು ಸಮರ್ಪಕಗೊಳಿಸುವುದು ಸೂಕ್ತ. ದೇಹ ತೀರ ಬೊಜ್ಜುತನದಿಂದ ಕೂಡಿರದಂತೆ ಹಾಗೂ ತೀರ ಸಪೂರವಾಗದಂತೆ ದೇಹ ತೂಕವನ್ನು ಕಾಪಾಡಿಕೊಳ್ಳುವುದು ಸೂಕ್ತ.

5. ಮಾನಸಿಕ ಒತ್ತಡಗಳನ್ನು ನಿಭಾಯಿಸುವುದು ಅಗತ್ಯ.

6. ರಕ್ತ ಗ್ಲೂಕೋಸ್ ಪ್ರಮಾಣದ ಪರೀಕ್ಷೆಯ ಅಗತ್ಯ ಹಾಗೂ ಇನ್ಸುಲಿನ್ ಚಿಕಿತ್ಸೆಯ ವ್ಯವಸ್ಥೆ. ಅನಿರೀಕ್ಷಿತ ಸನ್ನಿವೇಶಗಳಲ್ಲಿ ರಕ್ತ ಗ್ಲೂಕೋಸ್ ಮಟ್ಟ ತೀರ ಕಡಿಮೆಯಾಗುವ ಸಂಭವವಿದ್ದು, ಆದ್ದರಿಂದ ತಪಾಸಣೆ ಅಗತ್ಯ.

7. ನಿತ್ಯ ಯೋಗ ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಅಭ್ಯಾಸದಿಂದ ಮಧುಮೇಹ ನಿಯಂತ್ರಣ ಸಾಧ್ಯ.

Dr-C-Sharath-Kumar.

ಡಾ.ಸಿ.ಶರತ್ ಕುಮಾರ್
ಖ್ಯಾತ ಗರ್ಭಧಾರಣಾ ತಜ್ಞವೈದ್ಯರು ಮತ್ತು ನಿರ್ದೇಶಕರು
ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ
ಮೈಸೂರು-570021 ದೂ.0821-2444441, 3265002
ಡಾ. ಶರತ್ ಮೆನ್ಸ್ ಕ್ಲೀನಿಕ್
34/82, 20ನೇ ಮುಖ್ಯರಸ್ತೆ, ಬಸವ ಮಂಟಪ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 7815050100

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!