Vydyaloka

ಹೇನು – ಕೊರೆ : ಸಮಸ್ಯೆ ಮತ್ತು ಪರಿಹಾರ…

     ಅನಾದಿ ಕಾಲದಿಂದಲೂ ಹೇನು ಮಾನವರನ್ನು ಕಾಡುತ್ತಲೇ ಬಂದಿವೆ. ನಮ್ಮ ಪೂರ್ವಜರು, ತಲೆಯಲ್ಲಿ ಹೇನು, ದೇಹದಲ್ಲಿ ಕೊರೆ ಮತ್ತು ಜನನೇಂದ್ರಿಯದ ಸುತ್ತಮುತ್ತ ಹೇನುಗಳ ಕಾಟದಿಂದ ಪರಿತಪಿಸಿದ್ದಾರೆ. ನೇಪಲ್ಸ್‍ನ ಮಹಾರಾಜ ಫೆರ್ಡಿನೆಂಡ್II (1467-1496) ಇವರು ತಲೆಯಲ್ಲಿ ಹೇನು ಮತ್ತು ದೇಹದಲ್ಲಿ ಕೊರೆಗಳಿಂದ ಬಳಲಿದ್ದರು.
ನಮ್ಮ ಭಾರತೀಯ ಶಾಸ್ತ್ರಜ್ಞರಾದ ಸುಶ್ರುತರು ತಮ್ಮ ವೈದ್ಯವಿಜ್ಞಾನವನ್ನು ಕ್ರಿ. ಪೂರ್ವ 600ರಲ್ಲಿ “ಸುಶ್ರುತ ಸಂಹಿತ ಬರೆದರು’’. ಅದೇ ರೀತಿ “ಅಷ್ಟಾಂಗ ಹೃದಯ ನಿಧಾನ ಶಾಸ್ತ್ರ’’ದಲ್ಲಿಯೂ ಕೂಡ ಹೇನುಗಳ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಹೇನುಗಳನ್ನು `ಯುಕ್ತ’ (ಸುಂದರವಾದ ಹೆಂಗಸು) ಮತ್ತು ಹೇನಿನ ಮೊಟ್ಟೆಗಳನ್ನು `ಲಿಕ್ಷ’ (ಸೀರು) ಎಂದು ಕರೆದಿದ್ದಾರೆ.ತಲೆಯಲ್ಲಿ ಮತ್ತು ದೇಹದಲ್ಲಿ ಹೇನುಗಳು ಇದ್ದಾಗ ತಲೆ ಮತ್ತು ದೇಹವನ್ನು ಯಾವಾಗಲೂ ತುರಿಸಿಕೊಳ್ಳುತ್ತೇವೆ, ತುರಿಸಿಕೊಳ್ಳುವುದರಿಂದ ಗಾಯಗಳಾಗುವುದು ಮತ್ತು ಗಾಯಗಳಲ್ಲಿ ಕೀವು ಆಗುವುದು. ಕುತ್ತಿಗೆಯ ಸುತ್ತ ದುಗ್ದರಸ ಗ್ರಂಥಿಗಳು ಆಗುವವು ಎಂದು ಬರೆದಿರುವರು.
ಬಡವರಲ್ಲಿ, ಅಶಿಕ್ಷಿತರಲ್ಲಿ ಮತ್ತು ಗುಂಪುಗಳಲ್ಲಿ ವಾಸಿಸುವ ಜನರಿಗೆ, ಪ್ರತಿನಿತ್ಯ ಸ್ನಾನ ಮಾಡಲು ತೊಂದರೆ ಇರುತ್ತದೆ. ವೈಯುಕ್ತಿಕ ಸ್ವಾಸ್ಥ್ಯ, ಕಡಿಮೆ ಇರುವುದರಿಂದ ಇಂತಹ ಜನರಲ್ಲಿ ಸಾಮಾನ್ಯವಾಗಿ ಹೇನುಗಳು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಹೇನುಗಳ ನಿಯಂತ್ರಣ ಮಾಡಬೇಕೆಂದರೆ ಪ್ರತಿಯೊಬ್ಬರು ಪ್ರತಿದಿವಸ ಸ್ನಾನ ಮಾಡಬೇಕು. ಪ್ರತಿದಿನ ಒಗೆದ, ಶುಭ್ರವಾದ ಒಣ ಬಟ್ಟೆಗಳನ್ನು ಹಾಕಬೇಕು. ತಲೆಯ ಕೂದಲುಗಳಿಗೆ ಎಣ್ಣೆ ಹಚ್ಚಿಕೊಂಡು ಬಾಚಿಕೊಂಡಿರಬೇಕು, ಆಗ ಹೇನುಗಳ ಕಾಟ ಕಡಿಮೆಯಾಗುತ್ತದೆ.
ಹೇನುಗಳು
ಬಿಸಿ ರಕ್ತ ಇರುವ ಎಲ್ಲ ಸಸ್ತನಿಗಳಿಗೆ ಹೇನುಗಳು ಕಾಡುತ್ತವೆ. ಮಂಗಗಳಿಗೆ ಹೇನುಗಳ ಕಾಟ ಬಹಳ. ಆದ್ದರಿಂದ ಮಂಗಗಳು ಗುಂಪಿನಲ್ಲಿ ಇದ್ದಾಗ ತಮ್ಮ ಗುಂಪಿನ ಸದಸ್ಯರ ದೇಹವನ್ನು ಪರೀಕ್ಷಿಸುತ್ತಾ ಹೇನುಗಳನ್ನು ಮತ್ತು ಸೀರುಗಳನ್ನು ಹುಡುಕಿ ತೆಗೆದು ತಮ್ಮ ಸಹಪಾಠಿಗಳ ದೇಹವನ್ನು ಹೇನಿನಿಂದ ಮುಕ್ತ ಮಾಡುತ್ತಲೇ ಇರುತ್ತವೆ. ಹೇನುಗಳು ಮಾನವನ ದೇಹದ ಹೊರ ಪದರಿನ ಮೇಲೆ ವಾಸಿಸುವ ಪರಾವಲಂಬಿ ಕೀಟಗಳು. ಪ್ರತಿದಿವಸ ಮಾನವನ ರಕ್ತವನ್ನು ಹೀರಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಹೇನುಗಳು, ಮಾನವನ ದೇಹದಿಂದ 2 ದಿವಸ ದೂರವಿದ್ದು, ರಕ್ತವನ್ನು ಹೀರದಿದ್ದರೆ ಅವುಗಳು ಸತ್ತು ಹೋಗುತ್ತವೆ.
ಹೇನುಗಳಲ್ಲಿ 3 ವಿಧಗಳು.
1. ತಲೆಯಲ್ಲಿ ವಾಸಿಸುವ ಹೇನುಗಳಿಗೆ “ತಲೆ ಹೇನು” ಎಂದು ಕರೆಯುತ್ತಾರೆ.
2. ದೇಹದ ಮೇಲೆ ಕೇವಲ ರಕ್ತವನ್ನು ಹೀರುವ ಸಲುವಾಗಿ ಬಂದು ರಕ್ತವನ್ನು ಹೀರಿದ ಕೂಡಲ ದೇಹದ ಮೇಲೆ ಇರುವ ಬಟ್ಟೆಗಳ ಮಡಿಕೆಗಳ ನಡುವೆ ಅಡಗಿ ಕುಳಿತುಕೊಳ್ಳುವ ಹೇನುಗಳಿಗೆ “ಕೊರೆ’’ ಎನ್ನುತ್ತೇವೆ.
3. ಜನನೇಂದ್ರಿಯ, ಹುಬ್ಬು, ಕಣ್ಣಿನ ರೆಪ್ಪೆಯ ಕೂದಲುಗಳಲ್ಲಿ ವಾಸಿಸುವ ಹೇನುಗಳಿಗೆ “ಏಡಿ ಹೇನು” ಎನ್ನುತ್ತೇವೆ.
ಹೇನು ಮತ್ತು ಕೂರೆಗಳು ಚಪ್ಪಟೆಯಾಗಿ 2 ರಿಂದ 3 ಮಿಲಿಮೀಟರ್ ಉದ್ದ ಮತ್ತು 1 ಮಿಲಿಮೀಟರ್ ಅಗಲವಿದ್ದು, 3 ಜೋಡಿ ಕಾಲುಗಳು ಮತ್ತು ವಿಶೇಷವಾದ ಅಂಗಗಳಿದ್ದು, ರಕ್ತ ಹೀರಲು ಸಹಕಾರಿಯಾಗಿರುತ್ತವೆ. ಹೇನುಗಳು ರಕ್ತ ಹೀರುವಾಗ ನೋವು ಆಗುವುದಿಲ್ಲ. ರಕ್ತ ಹೀರಿ ಆ ಸ್ಥಳದಿಂದ ದೂರ ಹೋದ ಮೇಲೆ (ಸ್ವಲ್ಪ ಸಮಯದ ನಂತರ) ಆ ಸ್ಥಳದಲ್ಲಿ ನೋವು, ತುರಿಕೆ ಕಾಣಿಸಿಕೊಳ್ಳುತ್ತದೆ.
ಹೇನಿನ ಜೀವನ ಕ್ರಮ:
ಹೇನುಗಳು 1 ನಿಮಿಷಕ್ಕೆ ಸುಮಾರು 20 ಸೆಂಟಿಮೀಟರ್ ದೂರ ಕ್ರಮಿಸುತ್ತವೆ. ಹೇನುಗಳ 3 ಜೊತೆ ಕಾಲುಗಳಲ್ಲಿ ಮೊನಚಾದ ಉಗುರುಗಳಿರುತ್ತವೆ. ಈ ಉಗುರುಗಳ ಸಹಾಯದಿಂದ ಕೂದಲನ್ನು ಬಲವಾಗಿ ಹಿಡಿದುಕೊಂಡು ಕೆಳಗೆ ಬೀಳದಂತೆ ಕೂದಲುಗಳ ಮಧ್ಯೆ ನುಸುಳಿ ಓಡುತ್ತಿರುತ್ತವೆ. ಏಡಿ ಹೇನುಗಳು ಗಿಡ್ಡವಾಗಿದ್ದು, ಕೂದಲಿನ ಬುಡದಲ್ಲಿ ತಮ್ಮ ದೇಹವನ್ನು ಹುದುಗಿಸಿಕೊಂಡಿರುತ್ತವೆ. ಹೆಣ್ಣು ಹೇನು, ಗಂಡು ಹೇನಿಗಿಂತ ತುಸು ದೊಡ್ಡದಿರುತ್ತದೆ. ಗಂಡು ಹೇನು ಹೆಣ್ಣು ಹೇನನ್ನು ಸಂಭೋಗಿಸಿದ ನಂತರ ಸತ್ತು ಹೋಗುತ್ತದೆ.
ಹೆಣ್ಣು ಹೇನು ಸಂಭೋಗದ ನಂತರ ಗರ್ಭವತಿಯಾಗಿ ಒಂದು ವಾರದ ನಂತರ ಪ್ರತಿದಿವಸ 6 ರಿಂದ 8 ತತ್ತಿಗಳನ್ನು ಇಡುತ್ತದೆ. ಈ ತತ್ತಿಗಳಿಗೆ “ಸೀರು’’ (nits) ಎನ್ನುತ್ತಾರೆ. ತತ್ತಿಗಳಲ್ಲಿ ಭ್ರೂಣವು ಒಂದು ವಾರದವರೆಗೆ ಬೆಳೆದು ನಂತರ “ನಿಂಫ್’’ (nymph) ಹೊರಬರುತ್ತದೆ. ಈ ನಿಂಫ್ ಒಂದು ವಾರದಲ್ಲಿ ಬೆಳೆದು ಪ್ರೌಢಾವಸ್ಥೆಗೆ ಬಂದು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾತೊರೆಯುತ್ತದೆ ಮತ್ತು ತನ್ನ ಸಂತತಿಯನ್ನು ಬೆಳೆಸುತ್ತದೆ. ತಲೆಯಲ್ಲಿ ವಾಸಿಸುವ ಹೇನುಗಳನ್ನು “ಕೂಟಿ’’ ಅಂತಲು ದೇಹದಲ್ಲಿ ವಾಸಿಸುವ ಹೇನುಗಳನ್ನು “ಉಂಡಾಡಿಗಳ ಹೇನು”, “ಪೋಲಿ ಹೇನು” ಎಂದು ಕರೆಯುತ್ತಾರೆ.
ಹೇನುಗಳು ಹರಡುವ ಬಗ್ಗೆ:
ಸಣ್ಣ ಮಕ್ಕಳು ಶಾಲೆಯಲ್ಲಿ ಸಹಪಾಠಿಗಳ ಜೊತೆ ಕುಳಿತುಕೊಂಡಾಗ, ಆಟವಾಡುವಾಗ, ತಲೆಪಟ್ಟಿಯನ್ನು ಇನ್ನೊಬ್ಬರ ಉಪಯೋಗಿಸಿದಾಗ ಒಬ್ಬರಿಂದ ಒಬ್ಬರಿಗೆ ಹೇನು ಪ್ರಸಾರವಾಗುತ್ತದೆ. ಅದೇ ರೀತಿ ಒಬ್ಬರ ಬಟ್ಟೆಗಳನ್ನು ಇನ್ನೊಬ್ಬರು ಹಾಕಿಕೊಂಡಾಗ ಒಬ್ಬರು ಉಪಯೋಗಿಸುವ ಹಾಸಿಗೆಯ ಮೇಲೆ ಮಲಗಿಕೊಂಡಾಗ, ಇನ್ನೊಬ್ಬರ ಬಾಚಣಿಕೆಯನ್ನು ಉಪಯೋಗಿಸಿದಾಗ ಹೇನುಗಳು ಪ್ರಸಾರವಾಗುತ್ತವೆ. ಹೇನುಗಳು ಇದ್ದ ಜನರ ಜೊತೆ ರತಿ ಸಂಪರ್ಕ ಮಾಡಿದಾಗಲೂ ಹೇನುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.
ಹೇನುಗಳಿಂದ ಆಗುವ ದುಷ್ಪರಿಣಾಮಗಳು:
ಹೇನುಗಳು ರಕ್ತ ಹೀರಿ ಹೋದ ನಂತರ ಆ ಸ್ಥಳದಲ್ಲಿ ನೋವು ಮತ್ತು ತುರಿಕೆ ಉಂಟಾಗುತ್ತದೆ. ಆ ಸ್ಥಳವನ್ನು ತುರಿಸಿಕೊಂಡಾಗ ಅಲ್ಲಿ ಗಾಯಗಳು ಆಗುತ್ತವೆ. ಗಾಯಗಳಲ್ಲಿ ಕೀವು ಆಗಿ ಜ್ವರ ಬರಬಹುದು ಮತ್ತು ಕುತ್ತಿಗೆಯ ಸುತ್ತ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವವು. ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಹೇನುಗಳಿಂದ “ಟ್ರೆಂಚ್ ಜ್ವರ ಮತ್ತು ಟೈಪಸ್ ರೋಗಗಳು” ಪ್ರಸಾರಗೊಂಡಿದ್ದವು.
ಜನರಿಗೆ ಹೇನುಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು:
ಶಾಲೆಯ ಮಕ್ಕಳಿಗೆ ಹೇನುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಬೇಕು.
ಇನ್ನೊಬ್ಬರ ಬಾಚಣಿಕೆ, ತಲೆಪಟ್ಟಿ, ಟೊಪ್ಪಿ ಮತ್ತು ಕಂಠವಸ್ತ್ರಗಳನ್ನು ಉಪಯೋಗಿಸಬಾರದು ಮತ್ತು ತಮ್ಮ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಬಾರದು ಎಂದು ತಿಳಿಸಿ ಹೇಳಬೇಕು.
ಪ್ರತಿದಿವಸ ಸ್ನಾನ ಮಾಡಬೇಕು. ಶುಭ್ರವಾದ ಒಣಗಿದ ಬಟ್ಟೆಗಳನ್ನು ಧರಿಸಬೇಕು.
ತಲೆಗೆ ಕೊಬ್ರಿಎಣ್ಣೆಯನ್ನು ಹಚ್ಚಬೇಕು. ವಾರಕ್ಕೆ ಒಂದು ಸಲವಾದರೂ ಉಗುರು ಬೆಚ್ಚನೆ ಎಣ್ಣೆಯನ್ನು ಹಚ್ಚಿಕೊಂಡು ತಲೆ ಸ್ನಾನ ಮಾಡಬೇಕು.
ತಮ್ಮ ಬಾಚಣಿಕೆಗಳನ್ನು ಬಿಸಿನೀರಿನಲ್ಲಿ ತೊಳೆದು ಒಣಗಿಸಿ ಶುಭ್ರವಾಗಿ ಇಡಬೆಕು.
ಜನನೇಂದ್ರಿಯ ಮತ್ತು ಕಂಕುಳಗಳಲಿಯ ಕೂದಲುಗಳನ್ನು ನಿಯಮಿತವಾಗಿ ತೆಗೆಯಬೇಕು ಮತ್ತು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಡಾ. ಲಕ್ಷ್ಮಿ ಎಲ್.
ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್,
# 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381 / 1/2/3/4/5.

Share this: