Vydyaloka

ಲಕ್ಷೀಶ ಫೌಂಡೇಷನ್‍ – ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ 

ಲಕ್ಷೀಶ ಫೌಂಡೇಷನ್‍ – ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ ಕಾರ್ಯಾರಂಭ ಮಾಡಿದ ಸಂಸ್ಥೆ. ಕಾಯಿಲೆ ಉಳ್ಳವರನ್ನು ಅಂಗೈ ಮಗುವಂತೆ ಆರೈಕೆ ಮಾಡುತ್ತಿರುವವರಿಗೆ ವೈಜ್ಞಾನಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಬೆಂಬಲ ನೀಡುವುದೇ ಲಕ್ಷ್ಮೀಶ ಫೌಂಡೇಶನ್ ಮೂಲ ಆಶಯವಾಗಿದೆ.

ಬೆಂಗಳೂರು: ಕ್ಯಾನ್ಸರ್  ಆರೈಕೆ ಮಾಡುವವರ ಬೆಂಬಲಕ್ಕೆ ಲಕ್ಷೀಶ ಫೌಂಡೇಷನ್‍ ಸಂಸ್ಥೆ ಕಾರ್ಯಾರಂಭ ಮಾಡಿದೆ. ಕ್ಯಾನ್ಸರ್ ಹಾಗೂ ದೀರ್ಘಕಾಲೀನ ಕಾಯಿಲೆಯಿಂದ ಬಳಲುವವರಲ್ಲಿ ಸಾಂತ್ವನ ಹಾಗೂ ಭಾವನಾತ್ಮಕ ಬೆಂಬಲ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು, ಆರೈಕೆ ಮಾಡುತ್ತಿರುವವರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನೂ ಕಾಪಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ  ಒಂದಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಕ್ಯಾನ್ಸರ್ ತಜ್ಞ ಡಾ.ಕೆ.ಆರ್.ಮಾಧವ ಅವರು ಮಾತನಾಡುತ್ತಾ “ಕ್ಯಾನ್ಸರ್ ರೋಗಿಗಳಿಗೆ ಔಷಧಿ, ಚಿಕಿತ್ಸೆಯ ಒಟ್ಟಿಗೆ ಅವರಿಗೆ ಸಾಂತ್ವನ, ಆಪ್ತಸಲಹೆಯ ಅಗತ್ಯತೆ ಇದೆ. ಕ್ಯಾನ್ಸರ್‍ ಒಬ್ಬರಿಗೆ ಬಂದರೂ ಇಡೀ ಕುಟುಂಬ ಭಾವನಾತ್ಮಕ, ಆರ್ಥಿಕ ಸಂಕಷ್ಟ ಅನುಭವಿಸುವುದನ್ನು ನಿತ್ಯವೂ ನೋಡುತ್ತೇವೆ. ಕ್ಯಾನ್ಸರ್ ಕಾಯಿಲೆ ಉಳ್ಳವರನ್ನು ಆರೈಕೆ ಮಾಡುತ್ತಿರುವವರಿಗೆ ಭಾವನಾತ್ಮಕ ಬೆಂಬಲ ನೀಡುವ ಕೆಲಸ ಎಷ್ಟು ಮಾಡಿದರೂ ಬೇಕು.ಅಂತಹ ಅತ್ಯಂತ ಅಗತ್ಯದ, ಮಹತ್ವದ ಕೆಲಸವನ್ನು ತಮ್ಮದೇ ಅನುಭವ, ಅಂತ:ಕರಣಗಳ ಮೂಲಕ ಮಾಡಲು ಹೊರಟಿರುವ ಲಕ್ಷೀಶ ಫೌಂಡೇಷನ್ ಕೆಲಸ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.

ನಂತರ ಮಾತನಾಡುತ್ತಾ ಲಕ್ಷ್ಮೀಶ ಫೌಂಡೇಶನ್ ಸಂಸ್ಥಾಪಕಿ ಉಷಾ ನಾರಾಯಣ ಅವರು ತಮ್ಮ ಪತಿ ಲಕ್ಷ್ಮೀ ನಾರಾಯಣ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವಾಗ ತೋರಿದ ಮಾನಸಿಕ ಸ್ಥೈರ್ಯ ಹಾಗೂ ಸೇವಾ ಮನೋಭಾವವನ್ನು ಹೊಗಳಿದರು. ಮಹೋನ್ನತ ಆಶಯದೊಂದಿಗೆ ಆರಂಭವಾಗಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ‘ಲಕ್ಷ್ಮೀಶ ಫೌಂಡೇಷನ್’ ವೆಬ್ ಸೈಟ್‍ಕೂಡಾ ಅನಾವರಣಗೊಳಿಸಲಾಯಿತು. ಲಕ್ಷೀಶ ಫೌಂಡೇಷನ್‍ ಸಂಸ್ಥಾಪಕರಾಗಿರುವ ಉಷಾನಾರಾಯಣ ಮಾತನಾಡಿ ಸಂಪೂರ್ಣ ಉಚಿತವಾಗಿ ನಡೆಯುವ ಲಕ್ಷೀಶ ಫೌಂಡೇಷನ್‍ ಜನರಿಂದ, ಜನರಿಗಾಗಿ ಇರುವ ಸಂಸ್ಥೆ ಎನ್ನುವುದನ್ನು ಸ್ಪಷ್ಟಪಡಿಸಿದರು.

ಕಲಾದೇಗುಲ ಶ್ರೀನಿವಾಸ ಅವರ ನಿರೂಪಣೆ ಕಾರ್ಯಕ್ರಮದಲ್ಲಿತ್ತು. ಲಕ್ಷ್ಮೀಶ ಫೌಂಡೇಷನ್ ಕಾರ್ಯದರ್ಶಿ ಮೋಹನ್‍ ಕುಮಾರ್ ಸ್ವಾಗತಿಸಿದರು. ಲಕ್ಷೀಶ ಫೌಂಡೇಷನ್‍ಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡಿ ಸಹಾಯ ಹಸ್ತ ಚಾಚಿದ ಎಸ್. ಮಂಜುನಾಥ್‍ ಅವರನ್ನೂ ಇದೇ ಸಂದರ್ಭದಲ್ಲಿ ವಂದಿಸಿ, ಗೌರವಿಸಲಾಯಿತು. ವಿದುಷಿ ಶ್ರೀಮತಿ ಸಂಧ್ಯಾ ನಾಗರಾಜ್‍ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಲಕ್ಷೀಶ ಫೌಂಡೇಷನ್‍  ವಿವರ:

ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಯಿಂದ ನರಳುವವರನ್ನು ಆರೈಕೆ ಮಾಡುತ್ತಿರುವ ಮನೆಯವರ ಬಗೆಗೆ ನಾವೆಂದೂ ಯೋಚಿಸುವುದೇ ಇಲ್ಲ. ಅನಾರೋಗ್ಯದವರು ಅನುಭವಿಸುವ ನೋವು ಒಂದೆಡೆ ಆದರೆ ಅವರನ್ನು ಆರೈಕೆ ಮಾಡುತ್ತಿರುವವರು ಅನುಭವಿಸುವ ಸಂಕಟ ಸಣ್ಣದಲ್ಲ. ಕಾಯಿಲೆ ಉಳ್ಳವರ ಆರೈಕೆ ಇನ್ನಷ್ಟು ಅರ್ಥಪೂರ್ಣವಾಗಲು, ಗುಣಮಟ್ಟದ ಜೀವನ, ಮನ:ಶಾಂತಿಯ ವಾತಾವರಣ ನಿರ್ಮಿಸುವುದಕ್ಕೆ, ಸಮಾಧಾನದಿಂದ ಇಹಲೋಕ ತ್ಯಜಿಸಲು ನೆರವಾಗುವುದು ಕಾಯಿಲೆ ಉಳ್ಳವರ ಜೊತೆಗಿರುವವರ ಜವಾಬ್ಧಾರಿಯೂ ಹೌದು. ಕಾಯಿಲೆ ಉಳ್ಳವರನ್ನು ಅಂಗೈ ಮಗುವಂತೆ ಆರೈಕೆ ಮಾಡುತ್ತಿರುವವರಿಗೆ ವೈಜ್ಞಾನಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಬೆಂಬಲ ನೀಡುವುದೇ ಲಕ್ಷ್ಮೀಶ ಫೌಂಡೇಶನ್ ಮೂಲ ಆಶಯವಾಗಿದೆ.

ಅರೈಕೆ ಮಾಡುತ್ತಿರುವವರ ಜೊತೆ ನಿರಂತರ ಸಂಪರ್ಕ, ಸಂವಹನ, ಭಾವನಾತ್ಮಕ ಸಹಾಯ, ಆಪ್ತಸಲಹೆ,  ಹೀಗೆ ಹಲವಾರು ವಿಧದಿಂದ ಅವರ ಪಾಲಿಗೆ ಭರವಸೆಯಾಗಿ ನಿಲ್ಲುವುದು ಲಕ್ಷೀಶ ಫೌಂಡೇಶನ್ ಉದ್ದೇಶವಾಗಿದೆ. ಎಲ್ಲ ಸೇವೆಗಳು ಸಂಪೂರ್ಣ ಉಚಿತವಾಗಿದ್ದು ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರ ಮಕ್ಕಳಿಗೆ ನೆರವು ನೀಡುವುದು, ಅಗತ್ಯ ವಸ್ತುಗಳನ್ನು ಅಗತ್ಯವಿರುವವರಿಗೆ ತಲುಪಿಸುವುದು, ಸಾಹಿತ್ಯ, ಸಂಗೀತ, ಜೀವನ ಕಲೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಹೆಚ್ಚಿನ ನೆರವು ಮತ್ತು ಅರಿವನ್ನು ನೀಡುವುದು ಲಕ್ಷ್ಮೀಶ ಪ್ರತಿಷ್ಠಾನದ ಧ್ಯೇಯೋದ್ದೇಶವಾಗಿದೆ.

http://www.lakshmishafoundation.org/
Mob: +91 9448069898, +91 9945700533
Email : contactus@lakshmishafoundation.org

Share this: