Vydyaloka

ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನ – ಕೊರೋನಾ ಯಕ್ಷ ಜಾಗೃತಿಗೆ ಅಂತಾರಾಷ್ಟ್ರೀಯ ಮನ್ನಣೆ

ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದ ಕೊರೋನಾ ಯಕ್ಷಜಾಗೃತಿ ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ. ಕೊರೋನಾ ಯಕ್ಷ ಜಾಗೃತಿಯ ಈ ಪ್ರಯತ್ನವನ್ನು ವಿಶ್ವ ಆರೋಗ್ಯ ತಜ್ಞರು ಶ್ಲಾಘಿಸಿದ್ದಾರೆ.

ಕಾಸರಗೋಡು: ಕಾಸರಗೋಡಿನ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕೊರೋನಾ ಯಕ್ಷ ಜಾಗೃತಿಯ ಮೂಲಕವೂ ಸಹಾ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅದೀಗ ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ಪ್ರೊಫೆಸರ್ ಡೇಲ್ ಫಿಷರ್ ಸಹಾ ಕೊರೋನಾ ಯಕ್ಷ ಜಾಗೃತಿಯ ಈ ಪ್ರಯತ್ನವನ್ನು ಬಹುವಾಗಿ ಶ್ಲಾಘಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಜಾಗತಿಕ ಸಾಂಕ್ರಾಮಿಕ ರೋಗ ಎಚ್ಚರಿಕೆ ಮತ್ತು ಪ್ರತಿಕ್ರಿಯೆ ಜಾಲ ((Global Outbreak Alert and response network, GOARN) ದ ಅಧ್ಯಕ್ಷರೂ ಆಗಿರುವ ಫ್ರೊಫೆಸರ್ ಫಿಶರ್ ಸಾಂಕ್ರಾಮಿಕ ರೋಗಶಾಸ್ತ್ರದ ಪಟ್ಟಿಯಲ್ಲಿ ಮತ್ತು ಡಾಶ್‍ಬೋರ್ಡ್‍ಗಳಿಂದ ಮಾರ್ಗದರ್ಶಿಸಲ್ಪಟ್ಟ ಸಾಪ್ತಾಹಿಕ ವರದಿಗಳನ್ನು ಒದಗಿಸುತ್ತಾರೆ. ಒಂದು ಗಂಟೆ ಅವಧಿಯ ಈ ಅಧಿವೇಶನವು ಆನ್‍ಲೈನ್ ಮೂಲಕವೇ ವಿಶ್ವದಾದ್ಯಂತ ಬಹಳಷ್ಟು ತಜ್ಞರಿಂದ ವೀಕ್ಷಿಸಲ್ಪಡುತ್ತದೆ.

ಸೆಪ್ಟೆಂಬರ್ 10 ರ ಅಂತಹ ಒಂದು ಪ್ರತಿಷ್ಠಿತ ಅಧಿವೇಶನದಲ್ಲಿ ಪ್ರೊಫೆಸರ್ ಡೇಲ್ ಫಿಷರ್ 4 ನಿಮಿಷಗಳ ವಿಭಾಗವನ್ನು ಈ ಯಕ್ಷ ಜಾಗೃತಿಯ ಕೈಗೊಂಬೆ ಪ್ರದರ್ಶನ ಮೀಸಲಿರಿಸಿ ಜಾಗತಿಕ ಪ್ರೇಕ್ಷಕರಿಗೆ ತೋರಿಸಿದ್ದರು. ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು, ಸಮುದಾಯವನ್ನು ತೊಡಗಿಸಿಕೊಳ್ಳಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದೂ ಅಭಿಪ್ರಾಯಪಟ್ಟರು. ಇಂಗ್ಲೀಷ್, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ತಯಾರಿಸಿದ್ದ ಈ ಯಕ್ಷಗಾನ ಬೊಂಬೆಯಾಟಕ್ಕೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.

ಈ ಯಕ್ಷ ಗೊಂಬೆಯಾಟ ಪ್ರದರ್ಶನದಿಂದ ಸಿರಿಬಾಗಿಲು ಸಾಂಸ್ಕøತಿಕ ಪ್ರತಿಷ್ಠಾನಕ್ಕೆ ಜಾಗತಿಕ ಮಟ್ಟದಲ್ಲಿ ಒಡ್ಡಿಕೊಳ್ಳಲು ಒಂದು ಉತ್ತಮ ಅವಕಾಶ ದೊರಕಿದೆ. ಕೇವಲ ಮನರಂಜನೆ ಮಾತ್ರವಲ್ಲದೆ ಮನೋರಂಜನೆಯ ಜೊತೆಗೆ ಜಾಗೃತಿ ಸಹಾ ಮೂಡಿಸುತ್ತಿರುವುದರಿಂದ ಬಹಳಷ್ಟು ಹೆಚ್ಚಿನ ಜನರನ್ನುತಲುಪಲು ಸಾಧ್ಯವಾಗುತ್ತದೆ.

ಸಮುದಾಯ ಆರೋಗ್ಯ ಪ್ರಚಾರದಲ್ಲಿ ಈ ರೀತಿಯ ಪ್ರಯೋಗಗಳು ಬಹಳ ಪರಿಣಾಮಕಾರಿ ಎನಿಸಿವೆ. ಇಂತಹ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳೂ ಸಹಾ ಗುರುತಿಸಿ ಸರಿಯಾದ ರೀತಿಯಲ್ಲಿ ಜನಜಾಗೃತಿಗೆ ಬಳಸಿಕೊಂಡರೆ ಮಾತ್ರ ಈ ಯಕ್ಷ ಗೊಂಬೆಯಾಟದ ಹಿಂದಿರುವ ಶ್ರೀ ರಾಮಕೃಷ್ಣ ಮಯ್ಯ ಹಾಗೂ ತಂಡದವರ ಶ್ರಮ ಸಾರ್ಥಕವಾಗುತ್ತದೆ.

ಯಕ್ಷಗಾನ ಪ್ರದರ್ಶನ ಮೂಲಕವೂ ಜನಜಾಗೃತಿ

ಕೋವಿಡ್-19 ಪರಿಣಾಮದಿಂದ ಮಾರ್ಚನಿಂದಲೇ ವಹಿವಾಟುಗಳನ್ನು ನಿಲ್ಲಿಸಿದ್ದ ಮನೋರಂಜನಾ ಕ್ಷೇತ್ರಕ್ಕೆ ಬಹಳಷ್ಟು ದೊಡ್ಡ ಪ್ರಮಾಣದಲ್ಲೇ ನಷ್ಟವಾಗಿತ್ತು. ಸಾರ್ವಜನಿಕ ಪ್ರದರ್ಶನಕ್ಕೆ ತಡೆಯಾದ್ದರಿಂದ ಇದರ ಪರಿಣಾಮ ಯಕ್ಷಗಾನವನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಕಲಾವಿದರ ಮೇಲೂ ಆಗಿತ್ತು. ಆದ್ದರಿಂದ ವೃತ್ತಿಪರ ಯಕ್ಷಗಾನ ಕಲಾವಿದರೆಲ್ಲಾ ಸೇರಿ ಮಾಡಿದ ಒಂದು ಪ್ರಯತ್ನವೇ ಯಕ್ಷಗಾನ ಬೊಂಬೆಯಾಟ. ಪರಿಸ್ಥಿತಿ ತಿಳಿಯಾಗುತ್ತಲೇ ಶ್ರೀ ಮಯ್ಯ ಮತ್ತವರ ತಂಡ ಕೊರೋನಾ ಯಕ್ಷಜಾಗೃತಿಯ ಒಂದುಘಂಟೆ ಅವಧಿಯ ಯಕ್ಷಗಾನ ಪ್ರದರ್ಶನವನ್ನೂ ನಡೆಸಿದ್ದರು. ಇದರಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದರೂ ಸಹಾ ಭಾಗವಹಿಸಿದ್ದಾರೆ.

ಯಕ್ಷಗಾನಕ್ಕೆ ಬಹಳಷ್ಟು ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ ಹಾಗೂ ಈ ಯಕ್ಷಗಾನದ ಮೂಲಕ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ಮತ್ತಷ್ಟು ಕಡೆಗಳಲ್ಲಿ ಪ್ರದರ್ಶನ ತೋರಲು ಸಿರಿಬಾಗಿಲು ವೆಂಕಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಸಹಾ ಅಣಿಯಾಗಿದೆ. ಆಸಕ್ತರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸೃತಿಕ ಪ್ರತಿಷ್ಠಾನ ಕಾಸರಗೋಡು ಅರ್ಪಿಸುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಕೊರೋನಾ ಯಕ್ಷ ಜಾಗೃತಿಯ ಕನ್ನಡ ಆವೃತ್ತಿಯ ಬೊಂಬೆಯಾಟವನ್ನು https://www.youtube.com/watch?v=rjnIPDpc8Os ಲಿಂಕ್‍ ಕ್ಲಿಕ್ ಮಾಡುವ ಮೂಲಕ ನೋಡಬಹುದು.

Share this: