ಕೊರೋನಾ – ಚೀನಾ ಜೈವಿಕ ಯುದ್ಧಕ್ಕೆ ಸಜ್ಜಾಗುತ್ತಿತ್ತಾ?

ಚೀನಾ ದೇಶದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಉತ್ಸಾಹ ಉಡುಗಿ ಹೋಗಿತ್ತು. ಒಂದು ಕೋಟಿ ಜನಸಂಖ್ಯೆಯ ಆ ಮಹಾನಗರದಲ್ಲಿ ಮಂಕು ಕವಿದಿತ್ತು. ಇದು ಚೀನಾದ ರಾಜಧಾನಿ ಬೀಜಿಂಗ್ ದಿಂದ ಸುಮಾರು 1100 ಕಿ.ಮೀ.ದೂರದಲ್ಲಿದೆ. ವುಹಾನ್ ಸಿಟಿ ‘ಸೀ ಪುಡ್ ‘ ಗಾಗಿ ಸುಪ್ರಸಿದ್ಧ. ಇದಕ್ಕಾಗಿಯೇ ಪರದೇಶಗಳಿಂದ ವುಹಾನ್ ನಗರಕ್ಕೆ ಹೊಸವರ್ಷ ಸಂಭ್ರಮಾಚರಣೆಗೆ ಬಂದು, ಅಲ್ಲಿಯ ವೈವಿಧ್ಯಮಯವಾದ ‘ ಸೀ ಪುಡ್ ‘ ಸೇವಿಸುವರು. ಆದರೆ, ಈ ವರ್ಷ ಡಿಸೆಂಬರ್ 31,2019 ರಂದು ಚೀನಾ ಸರಕಾರ ಹಠಾತ್ತನೆ ಮಾಂಸದ ಮಾರುಕಟ್ಟೆಯನ್ನು ಬಂದು ಮಾಡಿತ್ತು. ಸಾವಿರಕ್ಕೂ ಹೆಚ್ಚು ಅಂಗಡಿಗಳಿರುವ ಮಾಂಸದ ಮಾರುಕಟ್ಟೆಯ ಮಾಲೀಕರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಪರದೇಶಗಳಿಂದ ಬಂದ ಪ್ರವಾಸಿಗರಿಗೆ ಕಾರಣ ಗೊತ್ತಾಗದೇ ವಿಲಿ ವಿಲಿ ಒದ್ದಾಡಿದರು……..
ಚೀನಾ ಸರಕಾರ ಹೀಗೆ ಮಾಡುವುದಕ್ಕೆ ಬಲವಾದ ಕಾರಣವೂ ಇತ್ತು. ವುಹಾನ್ ಆಸ್ಪತ್ರೆಯಲ್ಲಿ ಉಸಿರಾಟದ ಸೋಂಕಿನಿಂದ ಡಿಸೆಂಬರ್ 12 ರಂದು ಒಳರೋಗಿಯಾಗಿ ವ್ಯಕ್ತಿಯೊಬ್ಬ ದಾಖಲಾಗಿದ್ದ. ಅವನು ಹೊಸ ಮಾದರಿಯ, ಇದುವರೆಗೂ ಪ್ರಪಂಚದಲ್ಲಿ ಎಲ್ಲೂ ಕಂಡು ಬರದ ನ್ಯೂಮೋನಿಯಾದಿಂದ ಬಳಲುತ್ತಿದ್ದ.

ವೈದ್ಯರಿಗೆ ಸವಾಲಾಗಿದ್ದ. ಶಕ್ತಿಶಾಲಿ ಜೀವಿರೋಧಕಗಳನ್ನು ನೀಡಿದಾಗಲೂ, ಅವನಲ್ಲಿ ಚೇತರಿಕೆ ಕಂಡುಬರಲಿಲ್ಲ. ವೈದ್ಯ ಸಮುದಾಯ ಅಲ್ಲಿ ಇಲ್ಲಿ ಚರ್ವಿತ ಚರ್ವಿತ ಚರ್ಚಿಸಿದರು. ಆಕರ ಗ್ರಂಥಗಳ ಪುಟಗಳನ್ನು ತಿರುವಿ ಹಾಕಿದರು. ಪ್ರಯೋಜನವಾಗಲಿಲ್ಲ. ಡಿಸೆಂಬರ್ 31 ಅನ್ನುವಷ್ಟರಲ್ಲಿ 44 ಮಂದಿಗೆ ಮುತ್ತಿಗೆ ಹಾಕಿ ಮೆತ್ತಗೆ ಮಾಡಿತ್ತು. ಅದರಲ್ಲಿ 7 ಜನರು ಪ್ರಾಣಾಪಾಯದ ಸ್ಥಿತಿಯಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದರು. ಆ ವೇಳೆಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದ ಅಲ್ಲಿನ ಸೋಂಕು ರೋಗ ತಜ್ಞರ ತಲೆಯಲ್ಲಿ, ಕಾಯಿಲೆಯ ಮೂಲ ವುಹಾನ್ ನಗರದ ಮಾಂಸದ ಮಾರುಕಟ್ಟೆ ಇರಬಹುದು ಎಂಬ ಸಂಶಯದ ಗುಂಗಿಹುಳ ಗುಯ್ ಗುಡುತ್ತಿತ್ತು. ಆ ಕಾರಣಕ್ಕೆ ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗಿತ್ತು. ಮಾಂಸದ ಮಾರುಕಟ್ಟೆ ಬಂದು ಮಾಡಿತ್ತು……..
ವಿಜ್ಞಾನ ನಾಗಾಲೋಟದಿಂದ ಮುನ್ನಡೆಯುತ್ತದೆ. ನಿಜ. ತಾನೇ ಗೆದ್ದೆ ಎಂದು ಮಾನವ ಬೀಗುವಾಗಲೇ, ನಿಸರ್ಗ ನಿಗೂಢತೆಯಿಂದ, ಹೊಸ ಹೊಸ ರೂಪ ತಳೆದು ದಾಳಿಗಿಳಿಯುವುದನ್ನು ಬಿಟ್ಟಿಲ್ಲ. ವೈರಸ್ ಕಾಯಿಲೆಗಳು ಆಗಾಗ ಕಂಗೆಡಿಸುತ್ತಲೇ ಇವೆ. ಕಳೆದ ಹಲವು ವರ್ಷಗಳಲ್ಲಿ ಸಾರ್ಸ, ಹಕ್ಕಿಜ್ವರ, ಹಂದಿಜ್ವರ, ದೆಂಗ್ಯೂಜ್ವರ, ಚಿಕೂನಗುನ್ಯಾ, ಝಿಕಾ ಝೇಂಕಾರ ಮೊಳಗುತ್ತಲೇ ಇದೆ. ಈ ಕಾಯಿಲೆಗಳು ಜನರ ನೆಮ್ಮದಿಯನ್ನು ಕೆಡಿಸಿವೆ. ವಿಜ್ಞಾನಿಗಳಿಗೆ, ವೈದ್ಯರಿಗೆ ಸವಾಲಾಗಿ ಅನೇಕ ಜೀವಗಳನ್ನು ಹೆಕ್ಕಿರುವುದು ನಿಜ. ಆದರೂ,ಅವುಗಳ ಹುಂಕಾರ ತಗ್ಗಿಲ್ಲವೆಂಬುದು ಸತ್ಯ. ಅವು ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ದೇಶಗಳ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲಾಡಿಸಿವೆ.

ಶ್ವಾಸಕೋಶ ಸೋಂಕಿನ ಮೂಲ:

2002 ರಲ್ಲಿ ಹರಡಿದ್ದ ಸಾರ್ಸ ಕಾಯಿಲೆ ಕೂಡಾ ಚೀನಾ ದೇಶದಿಂದಲೇ ಆರಂಭವಾಗಿತ್ತು. ಆದರೆ, ಆಗ ಅಲ್ಲಿನ ಸರಕಾರ ಆ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಹೀಗಾಗಿ ಆ ಕಾಯಿಲೆ ಪ್ರಪಂಚದಲೆಲ್ಲಾ ಹರಡಿ ಸುಮಾರು 8000 ಕ್ಕೂ ಹೆಚ್ಚು ಜನರಿಗೆ ಮುತ್ತಿಗೆ ಹಾಕಿ, 774 ಜನರ ಪ್ರಾಣ ಪಕ್ಷಿಯನ್ನು ಹೆಕ್ಕಿತ್ತು. ಇಷ್ಟಕ್ಕೂ ಅದರ ದಾಹ ಹಿಂಗಲಿಲ್ಲ. ಚೀನಾ ಸರಕಾರದ ನಿರ್ಲಕ್ಷವನ್ನು ವಿಶ್ವ ಆರೋಗ್ಯ ಸಂಸ್ಥೆ ಕಟುವಾಗಿ ಟೀಕಿಸಿತ್ತು. ಈಗ ಅದೇ ವರ್ಗಕ್ಕೆ ಸೇರಿದ ‘ಕೊರೊನಾ ವೈರಸ್ ‘ ಚೀನಾದಲ್ಲಿ ಆತಂಕ ಮೂಡಿಸಿದೆ.ಈ ಹಿನ್ನೆಲೆಯಲ್ಲಿ ಚೀನಾ ಸರಕಾರ ಈಗ ಸಮರೋಪಾದಿಯಲ್ಲಿ ಸದ್ಯದ ಕಾಯಿಲೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದು ಚೀನಾದಲ್ಲಿ ಮಾತ್ರವಲದೇ ,ಇತರ ರಾಷ್ಟ್ರಗಳಲ್ಲೂ ಭಯ ಮೂಡಿಸಿದೆ. ವುಹಾನ್, ಬೀಜಿಂಗ್, ಗಾಂಗಡಾಂಗ್, ಶಾಂಘಾಯಿ, ಥೈಲ್ಯಾಂಡ್, ಜಪಾನ್, ತೈವಾನ್, ಹಾಂಗ್ ಕಾಂಗ್, ಮಕಾವ್, ಸಿಂಗಪೂರ, ದಕ್ಷಿಣ ಕೋರಿಯಾ, ಯು. ಎಸ್. ದೇಶಗಳಲ್ಲೂ ಸೋಂಕಿತರು ಪತ್ತೆಯಾಗಿದ್ದು ಚಿಂತೆಗೆ ಕಾರಣವಾಗಿದೆ.
ಈ ವೈರಸ್ ಮೂಲ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಇದು ಪ್ರಾಣಿಜನ್ಯ ಎಂದು ವೈದ್ಯರು ಊಹಿಸಿದ್ದಾರೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅದರ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.ಸಾಗರೋತ್ಪನ್ನಗಳ ಮಾರುಕಟ್ಟೆಯೇ ಈ ರೋಗಾಣುಗಳ ಮೂಲ ಎಂದು ವುಹಾನ್ ಅಧಿಕಾರಿಗಳು ಪ್ರಾರಂಭದಲ್ಲಿ ಹೇಳಿದ್ದರು. ಮಾರುಕಟ್ಟೆಯನ್ನು ಬಂದು ಮಾಡಿಸಿದ್ದರೂ ಸಹ. ಆದರೆ, ಈ ಮಾರುಕಟ್ಟೆಗೆ ಭೇಟಿ ನೀಡದಿದ್ದವರೂ ಸೋಂಕಿಗೆ ಒಳಗಾಗುತ್ತಿರುವುದರಿಂದ ಈ ವಾದವನ್ನು ತಳ್ಳಿ ಹಾಕಲಾಗಿದೆ. ವೈರಸ್ ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಪ್ರಸಾರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವೈರಸ್ ಮೂಲ ಯಾವುದು ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪನಿರ್ದೇಶಕ ಲಿ.ಬಿನ್ ಹೇಳಿದ್ದಾರೆ. ಭಯಾನಕ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ- ವುಹಾನ್ ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಪ್ರಯೋಗಾಲಯದಿಂದ ಸೋರಿ ಹೋಗಿರುವ ವೈರಸ್ಸೇ ಚೀನಾದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್ಸಂತೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಬಾವಲಿಯನ್ನು ತಿಂದು, ಯುವತಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವುದು. ಕಾಡುಬೆಕ್ಕುಗಳನ್ನು ಕೊಂದು ತಿನ್ನುವ ಸಂಪ್ರದಾಯ ಚೀನಾದಲ್ಲಿದೆ. ಕಾಡುಬೆಕ್ಕಿನ ಮಾಂಸ ಮಜ್ಜಾಲೆಯ ಮುಖಾಂತರವೇ ಈ ರೋಗಾಣು ಚೀನಿಯರ ದೇಹ ಹೊಕ್ಕಿರಬೇಕು. ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡಿರುವ ಸಾಧ್ಯತೆ ಉಂಟು.

ಅಂತಾರಾಷ್ಟ್ರೀಯ ಆರೋಗ್ಯ ಸಮಸ್ಯೆ?

corona-virusಜಾಗತಿಕ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾದ ಟೆಡ್ರೊಸ್ ಅಧಾನೊಮ್ ಘೆಬ್ರಿಯೊಸಸ್ ಈ ರೋಗ ಕುರಿತು ‘ಫಿಜಿಸಿಯನ್ಸ್ ‘ಗಳಿಗೆ ಹೆಚ್ಚಿನ ಮಾಹಿತಿ ನೀಡಬೇಕಿರುವುದು ಅವಶ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ .ಅವರ ನೇತೃತ್ವದ ಸಮಿತಿಯ ತುರ್ತು ಸಭೆ ಸ್ವಿಝರ್ ಲ್ಯಾಂಡಿನ ಜಿನೇವಾದಲ್ಲಿ ಕರೆದು ದಿನಾಕ 22.1.2020 ರಂದು ಕೂಲಂಕುಷವಾಗಿ ಚರ್ಚಿಸಿದೆ .ತಜ್ಞರ ತಂಡ ಕಲೆಹಾಕಿದ ಮಾಹಿತಿಯನ್ನು ವಿಶ್ಲೇಷಿಸಿದೆ.ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಅಭಿಪ್ರಾಯ ಪಟ್ಟಿದೆ. ಕಳೆದ ದಶಕದಲ್ಲಿ ಸ್ಪೋಟಗೊಂಡ ಸಾಂಕ್ರಾಮಿಕಗಳಲ್ಲಿ ಕೇವಲ ಐದು ಕಾಯಿಲೆಗಳಿಗೆ ಮಾತ್ರ ಅಂತಾರಾಷ್ಟ್ರೀಯ ಆರೋಗ್ಯ ಸಮಸ್ಯೆಯ ಹಣೆಪಟ್ಟಿಯನ್ನು ಜಾಗತಿಕ ಆರೋಗ್ಯ ಸಂಸ್ಥೆ ಕಟ್ಟಿದೆ.
1. ಎಚ್1ಎನ್1 ವೈರಸ್ ಕಾರಣವಾಗಿದ್ದ ಇನ್ಪ್ಲೂಎಂಝಾ (2009 )
2. ಪೋಲಿಯೋ ( 2014 )
3. ಪಶ್ಚಿಮ ಆಫ್ರಿಕಾದ ಎಬೋಲಾ ಸಾಂಕ್ರಾಮಿಕ (2013 – 2016 )
4. ಝೀಕಾ ವೈರಸ್ (2016 )
5. ಡೆಮೊಕ್ರಾಟಿಕ್ ರಿಪಬ್ಲಿಕ್ ಕಾಂಗೊದಲ್ಲಿ ಮುಂದುವರಿದ ಎಬೋಲಾ ಸಾಂಕ್ರಾಮಿಕ (2019 )
ಮೊದಲ ಬಲಿ:

ಚೀನಾದ ಹುಬೈ ಪ್ರಾಂತ್ಯದ, ವುಹಾನ್ ನಗರದಲ್ಲಿ ಡಿಸೆಂಬರ್  2019 ರ ವರೆಗೆ 44 ಜನರಿಗೆ ಮುತ್ತಿಗೆ ಹಾಕಿ ಮೆತ್ತಗೆ ಮಾಡಿದ ಈ ಹೊಸ ನ್ಯೂಮೋನಿಯಾ ಡಿಸೆಂಬರ್ 31 ಕ್ಕೆ ಮೊದಲ ಬಲಿಯನ್ನು ಪಡೆಯಿತು. 61 ವರ್ಷದ ವ್ಯಕ್ತಿಗೆ ಚಿಕಿತ್ಸೆ ಫಲಕಾರಿಕಾರಿಯಾಗಿರಲಿಲ್ಲ.

ವೈರಸ್ ಗಳೆಲ್ಲ ವೈರಿಗಳಲ್ಲ :

ಜಗತ್ತಿನಲ್ಲಿ ಕಾಯಿಲೆ ತರಬಲ್ಲ ನೂರಾರು ಬಗೆಯ ವೈರಸ್ ಗಳಿವೆ. ಇವುಗಳಲ್ಲಿ ಬಹುತೇಕ ವೈರಸ್ ಗಳು ಹೆಚ್ಚು ಅಪಾಯ ಮಾಡುವುದಿಲ್ಲ. ಜತೆಗೆ ಇಂತಹ ವೈರಸ್ ಆಗಾಗ ಬಂದು ಅವುಗಳ ವಿರುದ್ಧ ನಮ್ಮ ಶರೀರ ತಕ್ಕ ಮಟ್ಟಿಗೆ ರಕ್ಷಣೆಯನ್ನು ಪಡೆದುಕೊಂಡಿರುತ್ತದೆ. ಹೀಗಾಗಿ ಇವುಗಳಿಂದ ಪ್ರಾಣಾಪಾಯ ಆಗುವ ಸಂಭವ ಬಹಳ ಕಡಿಮೆ. ಹಾಗೆಂದು ಅವುಗಳನ್ನು ನಿರ್ಲಕ್ಷಿಸುವಂತೆಯೂ ಇಲ್ಲ.
ಮಾರ್ಪಾಡು ಜಗತ್ತಿನಲ್ಲಿ ಸದಾ ಕಾಲ ನಡೆಯುತ್ತಲೇ ಇರುತ್ತದೆ. ಇದು ಜೀವಂತಿಕೆಯ ಲಕ್ಷಣವೂ ಹೌದು. ವೈರಸ್ ಗಳ ಆಂತರ್ಯದಲ್ಲಿ ಜೆನೆಟಿಕ್ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇದರಿಂದ ವೈರಸ್ ಮೇಲ್ಮೈ ಪ್ರೊಟೀನ್ ಗಳು ಬದಲಾಗುತ್ತವೆ. ಈ ಹೊಸ ಮಾದರಿಯ ಪ್ರೊಟೀನ್ ಗಳ ಕಾರಣದಿಂದ ನಮ್ಮ ಶರೀರದ ರಕ್ಷಣೆಯ ವ್ಯವಸ್ಥೆ ಇದನ್ನು ಹೊಸ ವೈರಸ್ ಎಂದೇ ಪರಿಗಣಿಸುತ್ತದೆ. ವೈರಸ್ ಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಆಗಿದ್ದರೆ ನಮ್ಮ ರಕ್ಷಣೆಯ ವ್ಯವಸ್ಥೆಗೆ ಹೆಚ್ಚು ತೊಂದರೆ ಆಗುವುದಿಲ್ಲ. ಈ ಸಣ್ಣ ಬದಲಾವಣೆಗಳನ್ನು ಇದು ಆರಾಮಾಗಿ ನಿಭಾಯಿಸುತ್ತದೆ.

ಆದರೆ, ಕೆಲವೊಮ್ಮೆ ವೈರಸ್ ಗಳ ಜೆನೆಟಿಕ್ ಬದಲಾವಣೆ ಬಹಳ ತೀವ್ರವಾಗಿ ಆಗುತ್ತದೆ. ಆಗ ಅದರ ಮೇಲ್ಮೈನ ಬಹುತೇಕ ಪ್ರೊಟೀನ್ ಗಳು ಬದಲಾಗುತ್ತವೆ. ನಮ್ಮ ರಕ್ಷಣೆಯ ವ್ಯವಸ್ಥೆಯ ಪಾಲಿಗೆ ಇದು ಹೊಚ್ಚ ಹೊಸ ವೈರಸ್. ಇಂಥ ಮಾರ್ಪಾಡು ಹೊಂದಿದ ವೈರಸ್ ಗಳ ವಿರುದ್ಧ ಶರೀರದಲ್ಲಿ ಯಾವುದೇ ಹಳೆಯ ರಕ್ಷಣೆ ಇರುವುದಿಲ್ಲ. ವೃದ್ದಾಪ್ಯದಿಂದಲೋ,ಬೇರೆ ಕಾಯಿಲೆಗಳಿಂದಲೋ, ಕೆಲವು ಔಷಧಿಗಳ ದೀರ್ಘ ಕಾಲಿಕ ಸೇವನೆಯಿಂದಲೋ ಶರೀರದ ರಕ್ಷಣೆಯ ವ್ಯವಸ್ಥೆಯ ಸಾಮರ್ಥ್ಯ ಕುಂದಿದ್ದರೆ, ಅಂತವರಲ್ಲಿ ಈ ಬದಲಾದ ವೈರಸ್ ತೀಕ್ಷ್ಣಕಾಯಿಲೆ ಉಂಟುಮಾಡಿ ಪ್ರಣಾಪಾಯಕ್ಕೆ ಸಂಚಗಾರ ತರಬಹುದು.

ಜೆನೆಟಿಕ್ ಬದಲಾವಣೆ:

ವೈರಸ್ ಗಳಲ್ಲಿ ಜೆನೆಟಿಕ್ ಬದಲಾವಣೆ ಎಷ್ಟೋ ಶತಮಾನಗಳಿಂದಲೇ ಆಗುತ್ತಿದೆ. ಆದರೆ, ಶತಮಾನಗಳ ಹಿಂದೆ ಜಗತ್ತು ಇಷ್ಟೊಂದು ಅಭಿವೃದ್ದಿ ಹೊಂದಿರಲಿಲ್ಲ. ಜನರ ಪ್ರಯಾಣ ವಿರಳವಾಗಿತ್ತು. ಹೆಚ್ಚೆಂದರೆ ದಿನಕ್ಕೆ ಕೆಲವು ಮೈಲಿಗಳಷ್ಟು ಸಂಚಾರ ಮಾತ್ರ ಸಾಧ್ಯವಾಗುತ್ತಿತ್ತು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸುವ ಜನ ತೀರಾ ಕಡಿಮೆ ಇದ್ದರು. ಆದ್ದರಿಂದ, ಯಾವುದೇ ಒಂದು ಪ್ರದೇಶದಲ್ಲಿ ಈ ರೀತಿಯ ವೈರಸ್ ಸೋಂಕು ಉಂಟಾದರೆ, ಅದು ಬಾಧಿಸುತ್ತಿದ್ದ ಜನರ ಸಂಖ್ಯೆ ಮಿತಿಯಲ್ಲಿ ಇರುತ್ತಿತ್ತು. ಜತೆಗೆ ಆಗಿನ ಕಾಲದಲ್ಲಿ ಜನರ ಆಯುಷ್ಯ ಕೂಡ ಕಡಿಮೆ ಇರುತ್ತಿತ್ತು. ಜನರು ಇಂತಹುದೇ ಕಾರಣದಿಂದ ಸಾಯುತ್ತಿದ್ದರು ಎಂದು ಪತ್ತೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಏಕಂದರೆ ರೋಗ ನಿದಾನದಲ್ಲೂ ಈಗಿನಷ್ಟು ಕ್ರಾಂತಿಯಾಗಿರಲಿಲ್ಲ.
ಈಗ ಕಾಲ ಬದಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿ ಆಗಿದೆ. ಇದರಿಂದ ಜಗವೇ ಒಂದು ಪುಟ್ಟ ಹಳ್ಳಿಯಾಗಿದೆ. ಜನರ ಸರಾಸರಿ ವಯಸ್ಸು ವೃದ್ದಿಯಾಗಿದೆ. ಇದಕ್ಕೆ ತಕ್ಕಂತೆ ವೃದ್ದಾಪ್ಯದಲ್ಲಿ ಬಾಧಿಸುವ ಕಾಯಿಲೆಗಳು ಹೆಚ್ಚಾಗಿವೆ. ಬಹುತೇಕರಲ್ಲಿ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಕುಗ್ಗಿದೆ. ರೋಗಗಳ ಹರವು ಹೆಚ್ಚಿದೆ. ರೋಗಾಣುಜೀವಿಗಳಿಗೆ ಅನುಕೂಲವಾಗಿದೆ. ಬದಲಾದ ವೈರಸ್ ಕಾಯಿಲೆ ಹೊತ್ತ ವ್ಯಕ್ತಿ ವಿಮಾನ ಪ್ರಯಾಣ ಮಾಡಿ ಬೇರೆ ತಲುಪಿದರೆ, ಕೂಡಲೇ ಆ ಬದಲಾದ ವೈರಸ್ ಬೇರೆ ದೇಶಗಳ ಪ್ರಜೆಗಳನ್ನೂ ಆಕ್ರಮಣ ಮಾಡಬಹುದು. ಹೀಗಾಗಿ ಕೆಲವೇ ದಿನಗಳಲ್ಲಿ ಯಾವುದೇ ಹೊಸ ಮಾದರಿಯ ಕಾಯಿಲೆ ಜಗತ್ತಿನ ಯಾವುದೇ ಮೂಲೆಗಾದರೂ ವ್ಯಾಪಿಸಬಹುದು. ಇದು ಬಹಳ ಅಪಾಯಕಾರಿ ವಿದ್ಯಮಾನ. ಅದಕ್ಕೇ, ಚೀನಾದ ವುಹಾನ್ ನಗರದಲ್ಲಿ ಕಂಡ ಹೊಸ ವೈರಸ್ ಇಡೀ ಜಗತ್ತಿನ ಗಮನ ಸೆಳೆದಿದೆಯಲ್ಲದೇ, ಜನರನ್ನು ಕಂಗಾಲಾಗಿಸಿದೆ.

ಹೊಸ ವೈರಸ್ ಗೆ ಹೆಸರಿಡಲು …….

ಹೊಸ ಕೂಸು ಮನೆಗೆ ಬಂದಾಗ, ಅದಕ್ಕೆ ಹೆಸರಿಡಲು ಹಲವಾರು ಹೆಸರುಗಳನ್ನು ಹುಡುಕಿ ತಗೆಯುವರು. ಇದಕ್ಕೆ ರೋಗಾಣುಗಳೂ ಹೊರತಾಗಿಲ್ಲ. ಚೀನಾದಲ್ಲಿ ಕಂಡ, ನ್ಯೂಮೋನಿಯಾ ಉಂಟು ಮಾಡುವ ರೋಗಾಣುವಿಗೆ ಹೆಸರಿಡಲು ಎಗ್ಗಿಲ್ಲದ ಪೈಪೋಟಿ. “ಚೀನಾ ವೈರಸ್ “, “ವುಹಾನ್ ವೈರಸ್ ” ಎಂದು ಹೆಸರಿಡಲು ಹಲವರು ಹೆಣಗಿದ್ದಾರೆ .ಇದಕ್ಕೆ ಅಂತ್ಯ ಹಾಡಲು ಸಧ್ಯ “ನೊವೆಲ್ ಕೊರೊನಾ ವೈರಸ್ ” (2019-nCoV )         ಎಂದು ನಾಮಕರಣ ಮಾಡಿದ್ದಾರೆ .” The reason we named it was we didn’t want the press or some other going to name it with a stigmatising name ” ಎಂದು ಡಾ.ಡೆವಿಡ್ ಹೆಮನ್ ಹೇಳಿರುವುದು ಅರ್ಥಪೂರ್ಣ……..
ಇಲ್ಲಿಯವರೆಗೆ ಜಗತ್ತು ಕಂಡ ಮೂರು ಡೆಡ್ಲಿ ವೈರಸ್ ಗಳೆಂದರೆ  ——
1.ಸಾರ್ಸ ( SARS – CoV )
2.ಮಧ್ಯಪೂರ್ವ ಉಸಿರಾಟದ ಲಕ್ಷಣಕೂಟ (Middle East Respiratory Syndrome MERS -CoV )
3.ನೊವೆಲ್ ಕೊರೊನಾ ವೈರಸ್  (2019 – nCoV ) .ಈ ವೈರಸ್ ಸಾರ್ಸ ಕೊರೊನಾ ವೈರಸ್ ಗೆ ಪ್ರತಿಶತ 75 – 80 ರಷ್ಟು ಸಾಮ್ಯತೆ ಹೊಂದಿದೆ .

ಇದೆಂಥ ವೈರಸ್:

ಕೊರೊನಾ ವೈರಸ್ (CoV ) ಸಾಮಾನ್ಯವಾಗಿ ನೆಗಡಿ ಹಾಗೂ ಶ್ವಾಸಕೋಶದ ಸೋಂಕಿಗೆ ಕಾರಣವಾಗಿರುವ ವೈರಸ್. ಆದರೆ, ಈಗ ಚೀನಾದಲ್ಲಿ ಕಾಣಿಸಿಕೊಂಡಿರುವುದು ಹೊಸ ತಳಿಯ ನೊವೆಲ್ ಕೊರೊನಾ ವೈರಸ್. ಇದು ಸಾರ್ಸ ವೈರಸ್ ನ ಸೋದರ ಸಂಬಂಧಿ. ಸೋಂಕಿಗೆ ಒಳಗಾದವರ ಶ್ವಾಸಕೋಶದ ಮೇಲೆ ಈ ವೈರಸ್ ಹೆಚ್ಚಿನ ಒತ್ತಡ ಹೇರುತ್ತದೆ.ಚೀನಾದಲ್ಲಿ ಈ ಹಿಂದೆ ಎಂದೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.ಕೊರೊನಾ ವೈರಸ್ ದೊಡ್ಡ ಕುಟುಂಬವೇ ಆಗಿದ್ದು ಸಾಮಾನ್ಯ ನೆಗಡಿಯಿಂದ ಹಿಡಿದು ತೀವ್ರ ರೋಗಗಳನ್ನು ಉಂಟು ಮಾಡುವ ವಿಶಾಲ ಶಕ್ತಿಯನ್ನು ಹೊಂದಿದೆ.

ಮದ್ಯಪೂರ್ವ ಉಸಿರಾಟದ ಲಕ್ಷಣಕೂಟ (Middle East Respiratory syndrome MERS -CoV ) ಮತ್ತು ಸಾರ್ಸ (SARS – CoV Sever Acute Respiratory Syndrome). ಇದೊಂದು ಹೊಸ ತಳಿಯಾಗಿದ್ದು, ಈ ಮೊದಲು ಮನುಷ್ಯರಲ್ಲಿ ಸೋಂಕು ಉಂಟು ಮಾಡಿದ್ದ ಉದಾಹರಣೆಯಿಲ್ಲ. ಇದು RNA ಯ ಒಂದು ಎಳೆಯನ್ನು ಹೊಂದಿದ ವೈರಸ್ಸಾಗಿದೆ. ಕೊರೊನಾ ಶಬ್ದವು ಇಟಲಿ ಮೂಲದಿಂದ ಬಂದಿದ್ದು, ಇಲೆಕ್ಟ್ರಾನ್ ಮೈಕ್ರೋಸ್ಕೋಪದ ಅಡಿಯಲ್ಲಿ ಕೀರಿಟದಂತೆ ಕಾಣುವುದೆಂಬ ಅರ್ಥವನ್ನು ಇದು ನೀಡುತ್ತದೆ. ವೈರಸ್ ನ ಜಿನೋಮ್ 26 – 32 ಕೆಬಿ ಉದ್ದವಾಗಿರುತ್ತದೆ. ಹೊರಮೈಯಲ್ಲಿ ಪಕಳೆ (ದಳ)ದಂತಹ ಕಡ್ಡಿ (Spikes )ಗಳನ್ನು ಹೊಂದಿರುತ್ತವೆ.ಕೊರೊನಾ ವೈರಸ್ ಸೋಂಕು ಸಾಮಾನ್ಯವಾಗಿ ಪ್ರಾಣಿಗಳಲ್ಲಿ — ದನಕರು, ಕುದುರೆ, ಒಂಟೆ, ಬೆಕ್ಕು, ನಾಯಿ, ನರಿ, ಮೊಲ, ಇಲಿ, ಹೆಗ್ಗಣ, ಪಕ್ಷಿಗಳಲ್ಲಿ, ಬಾವಲಿಗಳಲ್ಲಿ ಕಂಡು ಬರುತ್ತದೆ.

ರೋಗ ಪ್ರಸಾರ:

ಮೂಲಭೂತವಾಗಿ ಇದೊಂದು ಪ್ರಾಣಿಜನ್ಯ ರೋಗ. ವೈರಸ್ ಪ್ರಾಣಿಗಳಲ್ಲಿ ಸಂಖ್ಯಾಭಿವೃದ್ಧಿ ಮಾಡುತ್ತವೆ. ಪ್ರಾಣಿ ಪ್ರಾಣಿಗಳ ನಡುವೆ ಸಾಮಾನ್ಯವಾಗಿ ರೋಗ ಹರಡುವುದು. ಮನುಷ್ಯನ ಹವ್ಯಾಸಕ್ಕೆ ಇತಿಯಿಲ್ಲ. ಮಿತಿಯಿಲ್ಲ. ಕಾಡು ಪ್ರಾಣಿಗಳನ್ನು ಕೊಂದು ಹಸಿ ಬಿಸಿ ಮಾಂಸ ತಿಂದಾಗ, ಮನುಷ್ಯರ ದೇಹವನ್ನು ವೈರಸ್ ಗಳು ಪ್ರವೇಶಿಸುತ್ತವೆ. ಆಕಸ್ಮಿಕ ಅತಿಥಿಯಾದ ಮಾನವರಲ್ಲಿ ವಂಶಾಭಿವೃದ್ದಿ ಮಾಡಿಕೊಂಡು ದಾಳಿಗಿಳಿಯುತ್ತವೆ. “ಕಾಡುಪ್ರಾಣಿ ———ಮನುಷ್ಯ  ———-ಮನುಷ್ಯ ” ರ ಸೋಂಕಿನ ಸರಪಳಿ ಆದಿ ಅಂತ್ಯಗಳಿಲ್ಲದ ವಿಷವೃತ್ತವಾಗಿ ಬೆಳೆಯುವುದು.
ಮನುಷ್ಯ ಸೋಂಕಿತನಾದ ಮೇಲೆ ಅವನು ವೈರಸ್ ಗಳ ಉಗ್ರಾಣವಾಗುತ್ತಾನೆ .ಕೆಮ್ಮಿದಾಗ ,ಸೀನಿದಾಗ ಹೊರಗಿನ ಪರಿಸರಕ್ಕೆ ವೈರಸ್ ಗಳ ಉಡುಗೊರೆಯಾಗುತ್ತದೆ. ಶ್ವಾಸೋಛ್ವಾಸದ ಮೂಲಕ ವ್ಯಕ್ತಿಗಳ ದೇಹ ಸೇರಿ ಸೋಂಕಿನ ಕಾಣಿಕೆ ನೀಡುವುದು. ಗಾಳಿಯ ಮುಖಾಂತರ” ಡ್ರಾಪ್ ಲೆಟ್ ಇನ್ಫೆಕ್ಶನ್ ” ಗೆ ನಾಂದಿ ಹಾಡುವುದು. ರೋಗಿ ಬಳಸಿದ ವಸ್ತ್ರ ಒಡವೆಗಳನ್ನು, ಪಾತ್ರೆ ಪಗಡಿಗಳನ್ನು ಬಳಸುವುದರಿಂದಲೂ ಇದು ಪ್ರಸಾರವಾಗುತ್ತದೆ. ಪ್ರತಿಶತ 70 -80 ರಷ್ಟು ಕೊರೊನಾ ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಅವರು ಆರೋಗ್ಯವಂತರಂತೆ ಅಡ್ಡಾಡಿಕೊಂಡು ಇರುತ್ತಾರೆ. ರೋಗ ಪ್ರಸಾರದಲ್ಲಿ ಸಹಕರಿಸುತ್ತಾರೆ.
ಬೆಚ್ಚಿಬೀಳುವ ಸುದ್ದಿಯೊಂದು ಬಿತ್ತರಗೊಂಡಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದೇಹದ ಎಲ್ಲ ಸ್ರವಿಕೆಗಳ ಮುಖಾಂತರ ಈ ರೋಗ ಹರಡುವುದೆಂದು ಹೇಳಲಾಗುತ್ತಿದೆ. ಹೀಗಾಗಿ ವೈಯಕ್ತಿಕ ಸಂಪರ್ಕ ಅಥವಾ ಸ್ಪರ್ಶಿಸುವುದರಿಂದ ಈ ಕಾಯಿಲೆ ಹರಡುತ್ತದೆ. ಇದು ಜನರಲ್ಲಿ ದುಗುಡ, ದುಮ್ಮಾನ ಹೆಚ್ಚಿಸಿದೆ. ರೋಗ ನಿಯಂತ್ರಣಕ್ಕೂ ಸವಾಲೊಡ್ಡಿದೆ.

ರೋಗದ ಲಕ್ಷಣಗಳು:

coronaಈ ರೋಗದ ಅದಿಶಯನ ಕಾಲ 1 – 5 ದಿನಗಳು. ಕೊರೊನಾ ವೈರಸ್ ಸೋಂಕಿಗೆ ಬಡವ ಬಲ್ಲಿದರೆಂಬ ಭೇದ ಭಾವವಿಲ್ಲ. ಹೆಣ್ಣು ಗಂಡೆಂಬ ತಾರತಮ್ಯವಿಲ್ಲ. ವಯಸ್ಸಿನ ನಿರ್ಭಂದವಿಲ್ಲ. ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ—–
*ನೆಗಡಿಯಂತೆ ಮೂಗು ಸೇರುವುದು
* ತಲೆನೋವು
* ಮೈ ಕೈ ನೋವು
* ಕೆಮ್ಮು
* ಗಂಟಲಿನಲ್ಲಿ ಕೆರೆತ, ಕಿರಿ ಕಿರಿ
* ಜ್ವರ
* ಸಣ್ಣ ಕರುಳಿನ ತೊಂದರೆಗಳು
* ಭೇದಿ
* ಸುಸ್ತು, ಆಲಸ್ಯತನ, ಲವಲವಿಕೆ ಇಲ್ಲದಿರುವುದು
* ಶ್ವಾಸಕೋಶಕ್ಕೆ ಸೋಂಕು ಹಬ್ಬಿದಾಗ ಬ್ರೊಂಕೈಟಿಸ್, ನ್ಯೂಮೋನಿಯಾ ಉಂಟಾಗಿ ಉಸಿರಾಟಕ್ಕೆ ತೊಂದರೆಯಾಗುವುದು.ಉಸಿರಾಟದ ವೇಗ ಕುಗ್ಗುತ್ತದೆ.
* ತೀವ್ರ ರೀತಿಯ ಉಸಿರಾಟದ ಸಿಂಡ್ರೋಮ್.
* ಮೂತ್ರಪಿಂಡದ ಕಾರ್ಯ ವೈಫಲ್ಯ.
* ಸಾವು
ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿದವರಲ್ಲಿ, ಹಸುಗೂಸು ಮತ್ತು ವಯೋವೃದ್ಧರಲ್ಲಿ ಈ ತೊಂದರೆಗಳ ಹಾವಳಿ ಹೆಚ್ಚು.

ರೋಗ ನಿದಾನ:

ಕೊರೊನಾ ವೈರಸ್ ಸೋಂಕನ್ನು ಖಚಿತಪಡಿಸಲು ವೈರಸ್ ಆರ್.ಎನ್.ಎ. ಪತ್ತೆ ಹಚ್ಚುವ ಸಲುವಾಗಿ ” ರಿವರ್ಸ್ ಟ್ರಾನ್ಸಕ್ರಿಪ್ಶನ್ ಪೊಲಿಮರೇಜ ಚೇನ್ ರಿಯಾಕ್ಷನ್ ” (RT-PCR) ಟೆಸ್ಟ್ ಮಾಡಲಾಗುವುದು. ಇದನ್ನು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಒಂದು ವಾರದೊಳಗೆ ಮಾಡುವರು.ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಈ ಅವಧಿಯಲ್ಲಿ ವೈರಸ್ ಗಳ ಸಂಖ್ಯೆ ಗಮನಾರ್ಹವಾಗಿರುತ್ತದೆ (Viremia). ಆಗ ಪರೀಕ್ಷೆ ಮಾಡುವುದರಿಂದ ಸಕಾರಾತ್ಮಕ ಪರಿಣಾಮ ದೊರೆಯುವುದು. ಪರೀಕ್ಷೆ ಸಕಾರಾತ್ಮಕವಾಗಿದ್ದಲ್ಲಿ ಸೋಂಕಿನ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ನಾಲ್ಕು ದಿನಗಳ ನಂತರ ರಕ್ತದಲ್ಲಿ ಪ್ರತಿಕಾಯಗಳು ಗೋಚರಿಸುವವು. ಎಲಿಸಾ ಪದ್ಧತಿಯಲ್ಲಿ ಐ.ಜಿ.ಎಂ. ಪ್ರತಿಕಾಯಗಳನ್ನು ಪತ್ತೆ ಹಚ್ಚುವ ಮೂಲಕ ರೋಗ ನಿದಾನ ಮಾಡಬಹುದು.

ಉಪಚಾರ:
ಈ ರೋಗಕ್ಕೆ ನಿಶ್ಚಿತ ಚಿಕಿತ್ಸೆ ಇಲ್ಲ. ತ್ರಾಸಿಗೆ ತಕ್ಕ ಚಿಕಿತ್ಸೆ ನೀಡುವುದೊಂದೇ ಅಸ್ತ್ರ ವೈದ್ಯರ ಬತ್ತಳಿಕೆಯಲ್ಲಿದೆ. ತೀವ್ರ ತರ ನೋವನ್ನು ನೋವು ನಿವಾರಕಗಳಿಂದ ದೂರ ಮಾಡಬಹುದು.
1. ಜ್ವರ ನಿಯಂತ್ರಣಕ್ಕೆ ಹಣೆಯ ಮೇಲೆ ತಣ್ಣೀರ ಪಟ್ಟಿ ಹಾಕುವುದು. ಜ್ವರ ಶಾಮಕ ಗುಳಿಗೆ ಕೊಡುವುದು.
2. ಸಾಕಷ್ಟು ದ್ರವ ಆಹಾರ ಸೇವಿಸುವುದು ಒಳ್ಳೆಯದು. ಮೇಲಿಂದ ಮೇಲೆ ನೀರನ್ನು ಕುಡಿಯಲು ಪ್ರೋತ್ಸಾಹಿಸುವುದು.
3. ಸಾಕಷ್ಟು ಗಾಳಿ, ಬೆಳಕು ಇರುವ ಕೋಣೆಯಲ್ಲಿ ಮಲಗಿಸಿ ಸುಶ್ರೂಷೆ ಮಾಡಬೇಕು.

4. ಸಾಕಷ್ಟು ವಿಶ್ರಾಂತಿ ತಗೆದುಕೊಳ್ಳಬೇಕು.

5. ಈ ರೋಗ ಪರಿಮಿತ ಕಾಲಾವಧಿಯದಾಗಿದ್ದು, ಅದು ಯಾವುದೋ ದೀರ್ಘಕಾಲದ ತೊಡಕು ತೊಂದರೆಗಳಿಗೆ ಕಾರಣವಾಗದು.

ಪ್ರತಿಬಂಧಕೋಪಾಯಗಳು:
corona-and-hand-wash” ಪ್ರಕ್ಷಾಲನಾತಹಿ ಪಂಕಸ್ಯ ದೂರದ ಸ್ಪರ್ಶನಂ ವರಂ ” ಎಂಬುದು ಕೊರೊನಾ ವೈರಸ್ ಸೋಂಕಿನಲ್ಲಂತೂ ನೂರಕ್ಕೆ ನೂರು ಸತ್ಯ.
* ರೋಗಿಯನ್ನು ಪ್ರತ್ಯೇಕಗೊಳಿಸಿ (Isolation ) ತುರ್ತು ಚಿಕಿತ್ಸೆ ನೀಡುವುದು.
* ಇದಕ್ಕೆ ನಿಶ್ಚಿತ ಚಿಕಿತ್ಸೆ ಇಲ್ಲ. ಲಸಿಕೆಯೂ ಇಲ್ಲ. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
* ಕೈಗಳನ್ನು ಸ್ವಚ್ಚವಾಗಿ ಸಾಬೂನು ಮತ್ತು ಬಿಸಿ ನೀರು ಬಳಸಿ ತೊಳೆದಕೊಳ್ಳುವುದು .
* ಕೈ ಮತ್ತು ಬೆರಳುಗಳನ್ನು ಮೂಗು, ಕಣ್ಣು, ಬಾಯಿಯ ಸಮೀಪ ಒಯ್ಯದೇ ಇರುವುದು.
* ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು .
* ಸೋಂಕಿತರ ಸಂಪರ್ಕದಿಂದ ದೂರ ಇರುವುದು.
* ಸಾಕಷ್ಟು ದ್ರವ ಆಹಾರ ಸೇವಿಸುವುದು. ಹೆಚ್ಚು  ನೀರು ಕುಡಿಯುವುದು.
* ಗಂಟಲು ಕೆರೆತ, ಕಿರಿ ಕಿರಿಗೆ, ಜ್ವರ, ಮೈ ಕೈ ನೋವುಗಳಿಗೆ ….ತೊಂದರೆಗೆ ತಕ್ಕ ಚಿಕಿತ್ಸೆಯನ್ನು ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ತಗೆದುಕೊಳ್ಳುವುದು. ಆದರೆ, ನೆನಪಿಡಿ ಸ್ವಯಂ ಚಿಕಿತ್ಸೆ ಎಂದೂ ಸಲ್ಲದು ಎಂಬುದನ್ನು.
* ಮುಖಕ್ಕೆ ಮೂಗು, ಬಾಯಿಯನ್ನು ಮುಚ್ಚುವಂತೆ ಉತ್ತಮ ಗುಣಮಟ್ಟದ ಮಾಸ್ಕನ್ನು ಆರಿಸಬೇಕು.
* ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ ಮತ್ತು ರೋಗದ ಮಾಹಿತಿ ಕುರಿತು ಆರೋಗ್ಯ ಶಿಕ್ಷಣವನ್ನು ಲಭ್ಯವಿರುವ ಎಲ್ಲ ಸಮೂಹ ಮಾಧ್ಯಮಗಳನ್ನು ಬಳಸಿ ನೀಡುವುದು.

ಶತಮಾನಕ್ಕೊಂದು ಸಾಂಕ್ರಾಮಿಕ:
ಪ್ರತಿ ನೂರು ವರ್ಷಕ್ಕೊಮ್ಮೆ ಒಂದಲ್ಲಾ ಒಂದು ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ಇದು ನಂಬಲು ಅಸಾಧ್ಯವಾದರೂ ಸತ್ಯ. ಯಾಕೆಂದರೆ, ವಿಶ್ವದ ಇತಿಹಾಸವನ್ನು ಒಂದು ಬಾರಿ ಗಮನಿಸಿದರೆ ಈ ಕಟು ಸತ್ಯ ನಮ್ಮ ಕಣ್ಣ ಮುಂದೆ ಕಾಣುತ್ತದೆ. 1720 ರಲ್ಲಿ ಊರಿಗೆ ಊರನ್ನೇ ನಾಶ ಮಾಡಿದ ಪ್ರೇಗ್, 1820 ರಲ್ಲಿ ಮಹಾ ಮರಿಕಾಲರಾ, 1920 ರಲ್ಲಿ ಸ್ಪ್ಯಾನಿಷ್ ಫ್ಲೂ ಹಾಗೂ 2020 ರಲ್ಲಿ ಕೊರೊನಾ ವೈರಸ್ ದಾಳಿ. ಪ್ರತಿ ನೂರು ವರ್ಷಕ್ಕೆ ನಡೆದಿರೋದೆ ಪುರಾವೆ. ಅಲ್ಲದೆ ಮುಂದಿನ ನೂರು ವರ್ಷಗಳ ಬಳಿಕ ಅಂದ್ರೆ 2120 ಕ್ಕೆ ಯಾವ ದೇಶದಲ್ಲಿ ಏನು ನಡೆಯುತ್ತೇ ಅನ್ನೋ ಭಯ ಈಗಾಗಲೇ ಕಾಡಲಾರಂಭಿಸಿದೆ. ಹೀಗೆ ನೂರು ವರ್ಷಕ್ಕೊಮ್ಮೆ ಬ್ಯಾಕ್ಟೀರಿಯಾ, ವೈರಸ್ ದಿಂದ ಸಾವುಗಳು ಸಂಭವಿಸುತ್ತಿದ್ದು, ಅದು ಕಾಕತಾಳೀಯವೋ ಅಥವಾ ನಿಜವಾದ ಎನ್ನುವ ಚರ್ಚೆ ಅಲ್ಲಲ್ಲಿ ಆರಂಭವಾಗಿದೆ

ಚೀನಾ ಜೈವಿಕ  ಯುದ್ಧಕ್ಕೆ ಸಜ್ಜಾಗುತ್ತಿತ್ತಾ?
coronavirusಜೈವಿಕ ಅಸ್ತ್ರವಾಗಿ ಚೀನಾ ಅಭಿವೃದ್ದಿಪಡಿಸಿದ್ಧ ಕೊರೊನಾ ವೈರಸ್ ಅಚಾತುರ್ಯದಿಂದ ಸೋರಿಕೆಯಾಯಿತು ಎಂಬ ವರದಿ ಈಗ ಹರಿದಾಡುತ್ತಿದೆ. ಈ ವಾದವನ್ನು ಮುಂದಿಡುತ್ತಿರುವವರು ಕೆಲವು ಸಮರ್ಥನೆಗಳನ್ನೂ ನೀಡುತ್ತಿದ್ದಾರೆ. ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಸರಕಾರ ಆರಂಭದಿಂದಲೇ ಗುಪ್ತ ಗುಪ್ತವಾಗಿ ವರ್ತಿಸಿತು ಎಂಬುದು ಅದರಲ್ಲಿ ಒಂದು.
ಸೋಂಕು ಮೊದಲಿಗೆ ಪತ್ತೆಯಾದ ವುಹಾನ್ ನಗರದಲ್ಲಿಯೇ ವುಹಾನ್ ವೈರಾಲಾಜಿ ಕೇಂದ್ರ ಇದೆ .ಆ ಕೇಂದ್ರವು ವೈರಸ್ ಮತ್ತು ಸೋಂಕುಗಳ ಬಗ್ಗೆಯೇ ಅಧ್ಯಯನ ನಡೆಸುತ್ತಿದೆ. ಸಾರ್ಸ ವೈರಸ್ ನ್ನು ಇಲ್ಲಿ ಕಾಪಿಡಲಾಗಿದೆ. ಸಾರ್ಸ ವೈರಸ್ ಕೂಡ 2002 ರಲ್ಲಿ ಚೀನಾದಿಂದಲೇ ಇತರೆಡೆಗೆ ಹಬ್ಬಿತ್ತು. ವೈರಾಲಾಜಿ ಕೇಂದ್ರವು ವೈರಸ್ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡರೂ, ಅಲ್ಲಿ ಜೈವಿಕ ಅಸ್ತ್ರಗಳನ್ನು ರೂಪಿಸಲಾಗುತ್ತಿದೆ ಎಂಬುದು ಮತ್ತೊಂದು ಸಮರ್ಥನೆ. ಈ ಬಗ್ಗೆ ಚೀನಾ ಸರಕಾರದಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.
ಆದರೆ, ಹಲವು ಪರಿಣಿತರು ಈ ವಾದವನ್ನು ತಳ್ಳಿ ಹಾಕಿದ್ದಾರೆ. ‘ ವೈರಸ್ ನ ಲಕ್ಷಣಗಳನ್ನು ಗಮನಿಸಿದರೆ ಅದು ಮಾನವ ನಿರ್ಮಿತ ಎಂದು ಅನಿಸುವುದಿಲ್ಲಎಂದು ರಟ್ ಗ್ಲಾಸ್ ವಿಶ್ವವಿದ್ಯಾಲಯದ ರಾಸಾಯನಿಕ ಜೀವಶಾಸ್ತ್ರಜ್ಞ ರಿಚರ್ಡ್ ಎಬ್ರೈಟ ಹೇಳಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿಮಾಡಿದೆ.
ಹಲವು ವರ್ಷಗಳಿಂದ ನಡೆಸಿದ ಜೈವಿಕ ಅಸ್ತ್ರ ಸಂಶೋಧನೆಯು ಫಲಪ್ರದವಲ್ಲ ಎಂದು ಕಂಡ ಕಾರಣ ಹೆಚ್ಚಿನ ದೇಶಗಳು ಈ ಪ್ರಯತ್ನವನ್ನು ಬಹಳ ಹಿಂದೆಯೇ ಕೈಬಿಟ್ಟಿವೆ. ಹಾಗಾಗಿ, ಈಗಿನ ಬಹುಪಾಲು ಸೋಂಕುಗಳು ನೈಸರ್ಗಿಕ ಎಂದು ಜೈವಿಕ ಸುರಕ್ಷಾ ಪರಿಣಿತ ಟಿಮ್ ಟ್ರಿವನ್ ಹೇಳಿದ್ದಾಗಿಯೂ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಇದೆ.
ವುಹಾನ್ ನ್ಯಾಷನಲ್ ಬಯೋಸೇಪ್ಟಿ ಲ್ಯಾಬರೇಟರಿಯಿಂದಲೇ ಕೊರೊನಾ ಸೋರಿಕೆಯಾಗಿರಬಹುದು ಎಂಬ ವರದಿಯು ಬ್ರಿಟನ್ ನ ಪತ್ರಿಕೆ ಡೈಲ್ ಮೇಲ್ ನಲ್ಲಿ ಕಳೆದ ವಾರವೇ ಪ್ರಕಟವಾಗಿತ್ತು. ಬಳಿಕ, ಇಂತಹದೇ ವರದಿ ವಾಷಿಂಗ್ಟನ್ ಟೈಮ್ಸ್ ನಲ್ಲಿಯೂ ಪ್ರಕಟವಾಗಿತ್ತು.

ಭಾರತಕ್ಕೂ ಬಂದ ಭೂತ:
ಕೇರಳದ ವಿದ್ಯಾರ್ಥಿ ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿವ್ಯಾಸಂಗ ಮಾಡುತ್ತಿದ್ದವ ಗಾಬರಿಗೊಂಡು ತಾಯ್ನಾಡಿಗೆ ಮರುಳಿ ಬಂದ. ಆ ವಿದ್ಯಾರ್ಥಿಯನ್ನು ಪರೀಕ್ಷೆ ಮಾಡಿದಾಗ, ಆತನಲ್ಲಿ ಕೊರೊನಾ ವೈರಸ್ ಇರುವುದು ಪತ್ತೆ. ನಮ್ಮಲ್ಲಿ ಈ ರೋಗವಿಲ್ಲ ಎಂದು ಬೀಗುತ್ತಿದ್ದ ನಮಗೆ, ಬೆನ್ನಿಗೆ ಬಲವಾದ ಪೆಟ್ಟು ಬಿದ್ದಂತಾಗಿದೆ ಈ ಕೊರೊನಾ ವೈರಸ್ ಪತ್ತೆಯಿಂದ. ಜಡತ್ವಕ್ಕೆ ಗಟ್ಟಿಯಾಗಿ ಅಂಟಿಕೊಂಡವರು ನಾವು. ಈಗ ಕೊಡವಿ ಏಳದೇ ಗತಿಯಿಲ್ಲ. ಭಾರತದಲ್ಲಿ ಅಪೌಷ್ಟಿಕತೆ ತಾಂಡವಾಡುತ್ತಿದೆ. ರೋಗ ನಿರೋಧಕ ಶಕ್ತಿ ತಗ್ಗಿಸುವ ದೀರ್ಘಕಾಲಿಕ ರೋಗಗಳಿಗೆ ಬರವಿಲ್ಲ.ಅಜ್ಞಾನ, ಅಶಿಕ್ಷತೆ,ಮೂಢನಂಬಿಕೆ, ಕಂದಾಚಾರಗಳು ಕಡಿಮೆಯಿಲ್ಲ. ಇವೆಲ್ಲವುಗಳ ಸದುಪಯೋಗವನ್ನು ಕೊರೊನಾ ವೈರಸ್ ಮಾಡಿಕೊಂಡಲ್ಲಿ ಭಾರತಾಂಬೆಯ ಮಡಿಲು ಬರಿದಾದೀತು! ಎಚ್ಚರಗೊಂಡು ಕೊರೊನಾಕ್ಕೆ ಕಡಿವಾಣ ಹಾಕಲು ಸಿದ್ಧತೆ ಮಾಡಿಕೊಳ್ಳಿ.ಇಲ್ಲದಿದ್ದಲ್ಲಿ ಸುದ್ದಿಯಾಗುವ ಮೊದಲೇ ಜನ ಸತ್ತುಹೋದಾರು!!

ಸಾವಿಗೆ ಕಾರಣವಾಗಬಲ್ಲಷ್ಟು ಅಪಾಯಕಾರಿಯಾದ ಕೊರೊನಾ ವೈರಸ್ ದೂರದ ಚೀನಾದಲ್ಲಷ್ಟೇ ಇದೆ ಎಂದು ಜಗತ್ತಿನ ಜನ ನಿರಾಳರಾಗುವ ಸ್ಥಿತಿ ಈಗ ಉಳಿದಿಲ್ಲ. ಜಗತ್ತಿನ 188 ಕ್ಕೂ ಹೆಚ್ಚು ದೇಶಗಳಿಗೆ ಸೋಂಕು ವ್ಯಪಿಸಿದೆ.  ದೇಶದ ಎಲ್ಲೆಡೆಯೂ ಕಟ್ಟೆಚ್ಚರ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
Mob:9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!