ಕಾಂಗರೂ ಮದರ್ ಕೇರ್ – ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ

ಕಾಂಗರೂ ಮದರ್ ಕೇರ್ವಿಶಿಷ್ಟ ರೀತಿಯ ಚಿಕಿತ್ಸಾ ವಿಧಾನವಾಗಿದ್ದು, ಸಮಯಕ್ಕಿಂತ ಮೊದಲೇ ಜನಿಸಿದ ಶಿಶುಗಳ ಮತ್ತು ಕಡಿಮೆ ತೂಕದ ಶಿಶುಗಳ ಆರೈಕೆಗೆ ಬಳಸುತ್ತಾರೆ.ಶಿಶುಗಳಿಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಿಂದ ಉಷ್ಣತೆ ವರ್ಗಾವಣೆಯಾಗಿ ಹಿತವಾದ ಭಾವನೆ, ಭದ್ರತೆಯ ಭಾವನೆ ಬರುತ್ತದೆ.

kangaroo-mother-care ಕಾಂಗರೂ ಮದರ್ ಕೇರ್ - ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆಕಾಂಗರೂ ಮದರ್ ಕೇರ್ – ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಇದೊಂದು ವಿಶಿಷ್ಟ ರೀತಿಯ ಚಿಕಿತ್ಸಾ ವಿಧಾನವಾಗಿದ್ದು, ಸಮಯಕ್ಕಿಂತ ಮೊದಲೇ ಜನಿಸಿದ ಶಿಶುಗಳ ಮತ್ತು ಕಡಿಮೆ ತೂಕದ ಶಿಶುಗಳ ಆರೈಕೆಗೆ ಬಳಸುತ್ತಾರೆ. ಸಾಮಾನ್ಯವಾಗಿ ಇಂತಹ ಶಿಶುಗಳನ್ನು ಇಂಕುಬೇಟರ್ ಎಂಬ ಯಂತ್ರದೊಳಗಿರಿಸಿ ತಾಯಿಯ ಗರ್ಭದೊಳಗಿನ ಉಷ್ಣತೆ ಮತ್ತು ವಾತಾವರಣವನ್ನು ಮರುಕಲ್ಪಿಸಿ ಮಗುವನ್ನು ಬೆಳೆಯುವಂತೆ ಪ್ರಚೋದಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ‘ಕಾಂಗರೂ ಮದರ್ ಕೇರ್’ ಎಂಬ ಚಿಕಿತ್ಸಾ ಪದ್ಧತಿಯನ್ನು ರೂಪಿಸಲಾಗಿದೆ.

ಇಂತಹಾ ಚಿಕಿತ್ಸಾ ವಿಧಾನದಲ್ಲಿ ಶಿಶುವನ್ನು ತಾಯಿಯ ಎದೆಗೆ ಅಪ್ಪಿಕೊಳ್ಳುವಂತೆ ಬಟ್ಟೆಯಿಂದ ಸುತ್ತಲಾಗುತ್ತದೆ. ಶಿಶು ಮತ್ತು ತಾಯಿಯ ಚರ್ಮದ ಸ್ಪರ್ಶವಾದಾಗ ತಾಯಿಯ ದೇಹದ ಉಷ್ಣತೆಯಿಂದ ಮಗುವಿಗೆ ಬೆಚ್ಚನೆಯ ಅನುಭವ ಉಂಟಾಗಿ ಶಿಶು ಬೆಳೆಯುವಂತೆ ಪ್ರಚೋದನೆ ಉಂಟಾಗುತ್ತದೆ. ಸಾಮಾನ್ಯವಾಗಿ 36 ವಾರಕ್ಕಿಂತ ಮೊದಲೇ ಜನಿಸಿದ 5 ಶೇಕಡಾ ಶಿಶುಗಳಿಗೆ ಶಿಶು ತೀವ್ರ ನಿಗಾ ಘಟಕದಲ್ಲಿ ಇರಿಸುವ ಅವಶ್ಯಕತೆ ಇರುತ್ತದೆ. ಅಂತಹಾ ಶಿಶುಗಳಲ್ಲಿ 30 ಶೇಕಡಾ ಶಿಶುಗಳು ಉಸಿರಾಟದ ತೊಂದರೆಗೆ ಒಳಗಾಗುತ್ತದೆ.

ಶಿಶುವಿನ ಮೆದುಳು ಮತ್ತು ಶ್ವಾಸಕೋಶ ಪರಿಪೂರ್ಣವಾಗಿ ಬೆಳೆಯಲು ಸುಮಾರು 37 ರಿಂದ 38 ವಾರಗಳು ತೆಗೆಯುತ್ತದೆ. 39 ವಾರಗಳಿಗಿಂತ ಮೊದಲೇ ಜನಿಸಿದ ಶಿಶುಗಳು ಹಲವಾರು ವೈದ್ಯಕೀಯ ತೊಂದರೆಗಳಿಗೆ ಒಳಪಡುತ್ತದೆ. ಹೆಚ್ಚಾಗಿ ಉಸಿರಾಟದ ತೊಂದರೆ ಇರುವುದರಿಂದ ಸಾಮಾನ್ಯವಾಗಿ ಇಂತಹ ಶಿಶುಗಳನ್ನು ಶಿಶು ತೀವ್ರ ನಿಗಾ ಘಟಕದಲ್ಲಿ ಇರಿಸಿ ಮಗುವಿಗೆ ಏನೂ ಸಮಸ್ಯೆ ಉಂಟಾಗದಂತೆ ನಿಗಾ ಇರಿಸಲಾಗುತ್ತದೆ. ಹೆಚ್ಚಾಗಿ 37 ವಾರಗಳ ಗರ್ಭಾವಸ್ಥೆಯನ್ನು ಪೂರ್ಣವಾದ ಅವಧಿ ಎನ್ನಲಾಗುತ್ತದೆ. ಆದರೆ ಕೊನೆಯ 2 ವಾರದಲ್ಲಿ ವಿಶೇಷ ಬೆಳವಣಿಗೆ ಹೊಂದುವುದರಿಂದ 39 ವಾರಗಳ ಬೆಳವಣಿಗೆಯನ್ನು ಪರಿಪೂರ್ಣ ಎನ್ನಲಾಗುತ್ತದೆ.

ಕಾಂಗರೂ ಮದರ್ ಕೇರ್ – ಇದರ ಲಾಭಗಳು ಏನು?

1. ಮಗುವಿನ ಉಸಿರಾಟವನ್ನು ನಿಯಂತ್ರಿಸುತ್ತದೆ ಮತ್ತು ಕ್ರಮಬದ್ಧವಾಗಿಸುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

2. ಮಗುವಿನ ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಶಿಶುವಿನ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.

3. ಮಗುವಿನ ನಿದ್ದೆಯ ಸಮಯವನ್ನು ಹೆಚ್ಚಿಸುತ್ತದೆ. ಸುಖ ನಿದ್ರೆ ಬರುವಂತೆ ಮಾಡುತ್ತದೆ.

4. ಶಿಶು ಬಹಳ ವೇಗವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ.

5. ಶಿಶುಗಳು ಅಳುವುದನ್ನು ಕಡಿಮೆ ಮಾಡುತ್ತದೆ.

6. ತಾಯಿಯ ಎದೆಹಾಲನ್ನು ಹೆಚ್ಚಿಸುತ್ತದೆ. ಹೆರಿಗೆಯ ನಂತರ ತಾಯಿಯಂದಿರ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.

7. ಶಿಶುಗಳ ಆಮ್ಲಜನಕಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ಶಿಶುವಿನ ಪ್ರಮುಖ ಅಂಗಗಳ ಬೆಳವಣಿಗೆ ಬೇಗನೆ ಆಗುತ್ತದೆ ಮತ್ತು ಮಗು ಬೆಳೆಯುತ್ತದೆ.

8. ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ ಮತ್ತು ಆಸ್ಪತ್ರೆಯಲ್ಲಿ ನಿಲ್ಲಬೇಕಾದ ಅವಧಿಯನ್ನು ಕಡಿಮೆ ಮಾಡುತ್ತದೆ.

ಹೇಗೆ ಈ ಕಾಂಗರೂ ಕೇರ್ ಕಾರ್ಯ ನಿರ್ವಹಿಸುತ್ತದೆ?

ಕಾಂಗರೂ ಮದರ್ ಕೇರ್ - ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆತಾಯಿ ಅಥವಾ ತಂದೆಯ ಬರಿದಾದ ಎದೆಗೆ ಶಿಶುವನ್ನು ಅವಚಿಕೊಂಡಾಗ ಶಿಶುಗಳಿಗೆ ತಂದೆ ಅಥವಾ ತಾಯಿಯ ಬೆಚ್ಚನೆಯ ಅಪ್ಪುಗೆಯಿಂದ ಉಷ್ಣತೆ ವರ್ಗಾವಣೆಯಾಗಿ ಹಿತವಾದ ಭಾವನೆ, ಭದ್ರತೆಯ ಭಾವನೆ ಬರುತ್ತದೆ. ಸಾಮಾನ್ಯವಾಗಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಒಂದು ಘಂಟೆಗಳ ಕಾಲ ಈ ಕಾಂಗರೂ ಕೇರ್ ಚಿಕಿತ್ಸೆ ನೀಡಲಾಗುತ್ತದೆ. ಜಾಸ್ತಿ ಹೊತ್ತು ಈ ಚಿಕಿತ್ಸೆ ನೀಡಿದಷ್ಟು ಉತ್ತಮ. ದಿನದ 2 ಘಂಟೆ ಬಹಳ ಒಳ್ಳೆಯದು. ಶಿಶುಗಳು ಈ ಚಿಕಿತ್ಸೆಗೆ ತಕರಾರು ಮಾಡುವುದಿಲ್ಲ. 2 ಘಂಟೆಗಳ ಕಾಲ ನೀಡುವುದು ಪ್ರಯೋಜನಕಾರಿ.

ಮೊದಲು ಅವಧಿ ಮುಗಿಯದೆ ಹುಟ್ಟಿದ ಮಕ್ಕಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವಧಿ ಪೂರ್ಣ ಶಿಶುಗಳಿಗೂ ವಿಸ್ತರಿಸಲಾಯಿತು. ಇದರಿಂದ ಪಡೆದುಕೊಂಡ ಲಾಭಗಳ ಕಾರಣದಿಂದ ಇದೊಂದು ಚಿಕಿತ್ಸಾ ವಿಧಾನವಾಗಿ 2010 ರಿಂದ ಎಲ್ಲೆಡೆ ಅವಧಿ ಪೂರ್ಣವಾಗಿ ಜನಿಸಿದ ಶಿಶುಗಳಿಗೆ ನೀಡಲು ಆರಂಭಿಸಲಾಯಿತು. ಶಿಶು ತೀವ್ರ ನಿಗಾ ಘಟಕದಲ್ಲಿನ ಎಲ್ಲಾ ಅವಧಿಪೂರ್ಣ ಜನಿಸಿದ ಶಿಶುಗಳಿಗೆ ದಿನದಲ್ಲಿ 1 ರಿಂದ 2 ಘಂಟೆಗಳ ಕಾಲ ಈ ಚಿಕಿತ್ಸೆ ನೀಡಲು ಆರಂಭಿಸಲಾಯಿತು.

ಸಾಮಾನ್ಯವಾಗಿ ಶಿಶುಗಳ ತಂದೆ ಮತ್ತು ತಾಯಿಯ ಎದೆಬಡಿತದ ಶಬ್ಧಕ್ಕೆ ಸುಮ್ಮನಾಗುತ್ತದೆ ಮತ್ತು ಶಾಂತವಾಗುತ್ತದೆ. ಶಿಶುಗಳು ಪದೇ ಪದೇ ಅಳುತ್ತಾ ಕಿರಿಕಿರಿ ಮಾಡುವಾಗ ಬೆಚ್ಚನೆಯ ಬ್ಲಾಂಕೆಟ್ ಸುತ್ತಿ ಮಗುವನ್ನು ತಾಯಿ ಅಥವಾ ತಂದೆ ಅವುಚಿ ಹಿಡಿದಾಗ 90 ಶೇಕಡಾ ಮಕ್ಕಳು ಸುಮ್ಮನಾಗುತ್ತದೆ. ಇದೇ ಸಿದ್ಧಾಂತವನ್ನು ಬಳಸಿ ಈ ಕಾಂಗರೂ ಕೇರ್ ಪದ್ಧತಿಯನ್ನು ಬಳಸಿ ಯಶಸ್ವಿಯನ್ನು ಪಡೆಯಲಾಗಿದೆ ಎಂದರೂ ತಪ್ಪಾಗಲಾರದು. ಕಾಂಗರೂ ಎಂಬ ಪ್ರಾಣಿ ತನ್ನ ಶಿಶುಗಳನ್ನು ತನ್ನ ರಕ್ಷಣಾತ್ಮಕ ಮತ್ತು ಪೋಷಕಾಂಶಯುಕ್ತ ಚೀಲಗಳಲ್ಲಿ ರಕ್ಷಿಸುತ್ತದೆ. ಈ ಕಾರಣದಿಂದಲೇ ‘ಕಾಂಗರೂ ಮದರ್ ಕೇರ್’ ಎಂಬ ಹೆಸರು ಬಂದಿದೆ. 1970ರಲ್ಲಿ ಈ ಚಿಕಿತ್ಸಾ ವಿಧಾನವನ್ನು ಆರಂಭಿಸಲಾಯಿತು. 1970ರಲ್ಲಿ ಸಾಕಷ್ಟು ಸೌಕರ್ಯದ ಕೊರತೆ, ಹೆಚ್ಚಿನ ಸೋಂಕು ಮತ್ತು ಹೆಚ್ಚಾದ ಶಿಶು ಮರಣದ ಕಾರಣದಿಂದ ಈ ಚಿಕಿತ್ಸೆಯನ್ನು ಆರಂಭಿಸಲಾಯಿತು.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!