Health Vision

Health Vision

SUBSCRIBE

Magazine

Click Here

ತೊನ್ನು ರೋಗ ನಿವಾರಣೆ ಹೇಗೆ ?

ಜೂನ್ 25- ವಿಶ್ವ ತೊನ್ನು ನಿವಾರಣೆ ದಿನ

ತೊನ್ನು ರೋಗವನ್ನು ಗುಣಪಡಿಸಲು ಇಲ್ಲಿದೆ ಆಯುರ್ವೇದ ಚಿಕಿತ್ಸೆ

ಚರ್ಮ ಅಥವಾ ಕೂದಲಿನ ಯಾವುದೇ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಶದ ಕೊರತೆಯಿಂದಾಗಿ ಬಿಳಿಯಾಗಿರುವ ಇಲ್ಲವೇ ಬಿಳಿ ಕಲೆಗಳಾಗಿರುವ ಸ್ಥಿತಿಯೇ ತೊನ್ನು. ವಿಟಿಲ್‍ಗೋ ಅಥವಾ ತೊನ್ನು ಪ್ರಾಚೀನ ಕಾಲದಲ್ಲೇ ಕಂಡುಬಂದಿದೆ. ಬಹು ಪುರಾತನ ನಾಗರಿಕತೆ ಮತ್ತು ಧರ್ಮಗಳಲ್ಲೂ ಬಿಳಿ ಮಚ್ಚೆ ಬಗ್ಗೆ ಉಲ್ಲೇಖವಿದೆ. ಕ್ರಿಸ್ತಪೂರ್ವ 1400ರಲ್ಲಿ ಬರೆಯಲಾದ ಅಥರ್ವಣವೇದದಲ್ಲೂ ತೊನ್ನು ರೋಗವನ್ನು ಬಣ್ಣಿಸಲಾಗಿದೆ. ಮೊದಲ ಶತಮಾನದಲ್ಲಿ ರೋಮನ್ ವೈದ್ಯ ಅಲುಸ್ ಕಾರ್ನೆಲಿಯಸ್ ಸೆಲ್‍ಸುಸ್ ತನ್ನ ಪ್ರಾಚೀನ ವೈದ್ಯಕೀಯ ಪಠ್ಯ ಡಿ ಮೆಡಿಸಿನಾದಲ್ಲಿ ಇದಕ್ಕೆ ‘ವಿಟಿಲ್‍ಗೋ’ ಎಂದು ಕರೆದಿದ್ದಾರೆ. ಕ್ರಿಸ್ತಪೂರ್ವ 200ರಲ್ಲಿ ಮನುಸ್ಮøತಿಯಲ್ಲಿ ತೊನ್ನು ರೋಗವನ್ನು ‘ಶ್ವೇತ ಕುಷ್ಠ’ ಎಂದು ಬಣ್ಣಿಸಲಾಗಿದೆ. ಇದನ್ನು ಪೀಬಾಲ್ಡ್ ಸ್ಕಿನ್ ಹಾಗೂ ಅರ್ಜಿತ ಬಿಳಿಚರ್ಮ ಎಂದು ಕರೆಯಲಾಗುತ್ತದೆ.

ಮೆಲನೋಸೈಟೆ

ವಿಟಿಲ್‍ಗೋ-ತೊನ್ನು, ಹಾಲ್ಚರ್ಮ, ‘ಶ್ವೇತ ಕುಷ್ಠ’, ಬಿಳಿಮಚ್ಚೆ ಎಂದು ಕರೆಯಲ್ಪಡುವ ತೊನ್ನಿಗೆ ಮೂಲ ಕಾರಣವೆಂದರೆ ಮೆಲನೊಸೈಟೆ ಎಂಬ ವರ್ಣದ್ರವ್ಯ..ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸುವ ಮೆಲನೊಸೈಟೆ ಕೋಶಗಳ ವರ್ಣದ್ರವ್ಯಗಳಲ್ಲಿ ನಷ್ಟದಿಂದಾಗಿ ಚರ್ಮವು ಬಿಳಿ ಬಣ್ಣಕ್ಕೆ ತಿರುಗುತ್ತದೆ. ತೊನ್ನು ದೋಷದಲ್ಲಿ ಮೆಲನೊಸೈಟ್ ಕೋಶಗಳು ನಾಶವಾಗಿ ಚರ್ಮದ ಮೇಲೆ ಬಿಳಿ ಕಲೆಗಳನ್ನು ಉಳಿಸುತ್ತದೆ. ಈ ಸ್ಥಳದಲ್ಲಿ ಬೆಳೆಯುವ ಕೂದಲು ಕೂಡ ಇದರ ಪರಿಣಾಮಕ್ಕೆ ಒಳಗಾಗಿ ಬಿಳಿ ಬಣ್ಣಕ್ಕೆ ತಿರುಗುತ್ತದೆ. ತೊನ್ನು ಸಮಸ್ಯೆಯಲ್ಲಿ ಚರ್ಮವು ಹಾನಿಗೀಡಾಗುತ್ತದೆ. ತೊನ್ನು ರೋಗದಿಂದ ಬಳಸುತ್ತಿರುವ ಮಂದಿಯು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ.

ಮೆಲನೊಸೈಟೆ ಬಣ್ಣ ನೀಡುವ ಕೋಶವಾಗಿದ್ದು, ಚರ್ಮ, ಕೂದಲುಗಳು, ಶ್ಲೇಷ್ಮ ಪೊರೆ, ಕಣ್ಣುಗಳು, ಕಿವಿಗಳು ಮತ್ತು ಮೆದುಳಿನಲ್ಲಿ ಇರುತ್ತದೆ. ಮೆಲನೊಸೈಟೆಯು ಟೈರೋಸಿನ್ ಎಂಬ ಕೋಶವನ್ನು ಹಿಡಿದು ಮೆಲನಿನ್ ವರ್ಣದ್ರವ್ಯವಾಗಿ ಪರಿವರ್ತಿಸುತ್ತದೆ. ಒಂದು ಮೆಲನೊಸೈಟ್ ಮೆಲನಿನ್‍ನನು 36 ಕೆರಾಟಿನೊಸೈಟ್ ಆಗಿ ವಿತರಿಸುತ್ತದೆ. ಯೂಮೆಲನಿನ್ ಕಡು ಕಂದು ಬಣ್ಣವನ್ನು ಮತ್ತು ಫಿಯೋಮೆಲನಿನ್ ಕೆಂಪು ಮಿಶ್ರಿತ ಕಂದು ಅಥವಾ ಹಳದಿ ಬಣ್ಣವನ್ನು ಹೊಂದಿರುತ್ತದೆ. ಯೂಮೆಲನಿನ್ ಮತ್ತು ಫಿಯೋಮೆಲನಿನ್‍ನ ವಿಭಿನ್ನ ಸಾಂದ್ರತೆಗಳು ಚರ್ಮಕ್ಕೆ ವಿಭಿನ್ನ ಬಣ್ಣವನ್ನು ನೀಡುತ್ತದೆ.
ಮೆಲನೊಸೈಟ್‍ಗಳ ನಷ್ಟವು ಮೆಲನಿನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ, ಇದರಿಂದಾಗಿ ಚರ್ಮದಲ್ಲಿ ಮಾಸಲು ಕಲೆಗಳು ಅಥವಾ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ವಿಟಿಲ್‍ಗೋ ಅಥವಾ ತೊನ್ನು ಎಂದು ಕರೆಯುತ್ತಾರೆ.

ಕಾರಣಗಳು

ತೊನ್ನು ಸಮಸ್ಯೆಗೆ ಅನೇಕ ಕಲ್ಪನೆಗಳ ಕಾರಣಗಳನ್ನು ನೀಡಲಾಗುತ್ತಿದ್ದರೂ, ಅಧ್ಯಯನಗಳು ಬಲವಾಗಿ ಪ್ರತಿಪಾದಿಸಿರುವಂತೆ ಈ ಸ್ಥಿತಿಗೆ ರೋಗ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಬದಲಾವಣೆಗಳೇ ಕಾರಣ. ತೊನ್ನು ಕಲೆಗಳು ಅಭಿವೃದ್ದಿಗೊಳ್ಳುವಲ್ಲಿ ವಂಶವಾಹಿ ಪ್ರಭಾವ ಹಾಗೂ ಪರಿಸರ ಅಂಶಗಳ ಪ್ರಮುಖ ಪಾತ್ರ ವಹಿಸಲಿವೆ. ಕೆಲವೊಮ್ಮೆ ತೊನ್ನು ಸಮಸ್ಯೆಯೊಂದಿಗೆ ಹಾಶಿಮೊಟೋಸ್ ಥೈರಾಯ್ಡಿಟಿಸ್, ಸ್ಕೆಲೆರೋಡೆರ್ಮಾ, ಸಂಧಿವಾತ, ಟೈಪ್ 1 ಡಯಾಬಿಟಿಸ್, ಸೊರಿಯಾಸಿಸ್, ಆಡಿಸನ್ಸ್ ರೋ ಮತ್ತು ಲುಪುಸ್ ಎರಿಥೆಮಟೊಸಸ್‍ನಂದ ಸ್ವಯಂ ಪ್ರತಿರಕ್ಷಣಾ ದೋಷ ಮತ್ತು ಉರಿಯೂತ ರೋಗಗಳೂ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯಿಂದ ಬಳಲುವ ರೋಗಿಗಳು ಖಿನ್ನತೆ ಮತ್ತು ಭಾವನಾತ್ಮಕ ದೋಷಗಳ ದೋಷದಿಂದ ನರಳುತ್ತಾರೆ. ಹಸು, ಎಮ್ಮೆ, ನಾಯಿ, ಬೆಕ್ಕು ಮತ್ತು ಹಂದಿಗಳಂಥ ಪ್ರಾಣಿಗಳಲ್ಲೂ ಬಿಳಿಚರ್ಮ ದೋಷವು ಕಂಡುಬರುತ್ತದೆ.

ಚಿಹ್ನೆ ಮತ್ತು ಲಕ್ಷಣಗಳು

ವಿಟಿಲ್‍ಗೋ ರೋಗದ ಮುಖ್ಯ ಚಿಹ್ನೆ ಮತ್ತು ಲಕ್ಷಣಗಳೆಂದರೆ ಬಣ್ಣವಿಲ್ಲದ ಚರ್ಮದ ಪ್ರದೇಶಗಳಲ್ಲಿ ಮಾಸಲು ಅಥವಾ ಬಿಳಿ ಕಲೆಗಳು ಕಂಡುಬರುತ್ತವೆ. ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಇರುವುದರಿಂದಾಗಿ ಚರ್ಮದ ಸಾಮಾನ್ಯ ಬಣ್ಣಕ್ಕೆ ಕಾರಣವಾಗುತ್ತದೆ. ಮೆಲನಿನ್ ಚರ್ಮಕ್ಕೆ ವರ್ಣವನ್ನು ನೀಡುತ್ತದೆ.
ವಿಟಿಲ್‍ಗೋನನ್ನು ಎರಡು ಉಪ-ವಿಭಾಗಗಳಾಗಿ ವಿಂಗಡಿಸಬಹುದು :ನಾನ್-ಸೆಗ್‍ಮೆಂಟಲ್ ವಿಟಿಲ್‍ಗೋ (ಎನ್‍ಎಸ್‍ವಿ) ಹಾಗೂ ಸೆಗ್‍ಮೆಂಟಲ್ ವಿಟಿಲ್‍ಗೋ (ಎಸ್‍ವಿ).
ನಾನ್-ಸೆಗ್‍ಮೆಂಟಲ್ ವಿಟಿಲ್‍ಗೋದಲ್ಲಿ ಸಾಮಾನ್ಯ ಬಣ್ಣ ಹೋಗಿರುವಿಕೆ ಸ್ಥಳದಲ್ಲಿ ಸಾಮಾನ್ಯವಾಗಿ ಕೆಲವು ಏಕರೂಪತೆ ಕಲೆಗಳು ಕಂಡುಬರುತ್ತವೆ. ಕಾಲಕ್ರಮೇಣ ಹೊಸ ಕಲೆಗಳು ಸಹ ಕಾಣಿಸಿಕೊಳ್ಳುತ್ತದೆ ಹಾಗೂ ದೇಹದ ದೊಡ್ಡ ಭಾಗದ ಮೇಲೆ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಗೋಚರಿಸುತ್ತದೆ. ಸೆಗ್‍ಮೆಂಟಲ್ ವಿಟಿಲ್‍ಗೋದಲ್ಲಿ ಬೆನ್ನುಹುರಿಯಿಂದ ಬೆನ್ನಿನ ಆಳದೊಂದಿಗೆ ಇರುವ ಚರ್ಮದ ಪ್ರದೇಶದ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ತುಂಬಾ ಸ್ಥಿರವಾಗಿರುತ್ತದೆ. ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತದೆ.

ಚಿಕಿತ್ಸೆ

ತೊನ್ನು ಸೋಂಕು ರೋಗವಲ್ಲ. ಕೆಲವರು ನಂಬಿರುವಂತೆ ಇದು ಹಿಂದಿನ ಜನ್ಮದ ಪಾಪದ ಫಲವೂ ಅಲ್ಲ. ತೊನ್ನು ಇರುವ ವ್ಯಕ್ತಿಗಳೊಂದಿಗೆ ಬೆರೆಯುವುದರಿಂದ, ಅವರೊಂದಿಗೆ ಊಟ ಮಾಡುವುದರಿಂದ ರೋಗವು ಹರಡುವುದಿಲ್ಲ.

ತೊನ್ನು ರೋಗದ ಕಲೆಗಳು ಕೆಲವೊಮ್ಮೆ ತಾನಾಗಿಯೇ ಕಡಿಮೆಯಾಗುತ್ತದೆ. ರೋಗಿಗಳು ಕಲೆ ಇರುವ ಕಡೆ ಸ್ವಾಭಾವಿಕ ವರ್ಣವನ್ನು ಪಡೆಯಬಹುದು. ಅನೇಕ ಪ್ರಕರಣಗಳಲ್ಲಿ ಬಿಳಿ ಕಲೆಗಳು ಅನೇಕ ವರ್ಷಗಳ ಕಾಲ ಹಾಗೇ ಉಳಿದಿರುತ್ತವೆ. ಕಲೆಗಳು ದೇಹದ ಎಲ್ಲ ಭಾಗಗಳಿಗೂ ಹಬ್ಬಲು ಕಾರಣವಾಗಬಹುದು. 6 ತಿಂಗಳುಗಳಿಂದ 2-4 ವರ್ಷಗಳ ಕಾಲ ಚಿಕಿತ್ಸೆಯಿಂದ ಸ್ವಾಭಾವಿಕ ಬಣ್ಣವನ್ನು ಮತ್ತೆ ಪಡೆಯಲು ಸಾಧ್ಯವಿದೆ. ಕೆಲವೊಮ್ಮೆ ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದಿಲ್ಲ. ನಿವಾರಣೆ ಚಿಕಿತ್ಸೆಯ ಸಮಯ ಮತ್ತು ಚಿಕಿತ್ಸೆಯ ಸ್ವರೂಪವನ್ನು ತಕ್ಷಣಕ್ಕೆ ತಿಳಿಸುವುದು ಕಷ್ಟವಾಗುತ್ತದೆ.
ವೈದ್ಯಕೀಯ ಚಿಕಿತ್ಸೆ ಪರಿಣಾಮಕಾರಿಯಲ್ಲದ ಪ್ರಕರಣಗಳಲ್ಲಿ ಸೌಂದರ್ಯ ಚಿಕಿತ್ಸೆ, ಕಲೆ ಮರೆಮಾಚುವ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ಪ್ರಯತ್ನಿಸಬಹುದಾಗಿದೆ. ತೊನ್ನು ಸಾಮಾಜಿಕ ಹಿಂಜರಿಕೆ ಮತ್ತು ಖಿನ್ನತೆಗೆ ಕಾರಣವಾದರೂ ರೋಗಿಯನ್ನು ಕೊಲ್ಲುವುದಿಲ್ಲ. ಆದರಿಂದ ರೋಗಿಗೆ ಆಪ್ತ ಸಮಾಲೋಚನೆ ಅಗತ್ಯವಿರುತ್ತದೆ.

 • ವಿಟಿಲಿಗೋ , ಬಿಳಿ ಚರ್ಮ, ಲ್ಯೂಕೊಡೆರ್ಮ ಅಥವಾ ತೊನ್ನು ರೋಗ ಚರ್ಮದ ವರ್ಣಕ್ಕೆ ಸಂಭಂದಿಸಿದ ಸಾಂಕ್ರಾಮಿಕವಲ್ಲದ, ಆಟೊಇಮ್ಯೂನ್ ಹಾಗೂ ಚಿರಕಾಲೀನ ಚರ್ಮರೋಗ.
 • ಚರ್ಮಕ್ಕೆ ಪ್ರಾಕೃತ ವರ್ಣವನ್ನು ನೀಡುವ ಮೆಲೆನೋಸೈಟ್ಸ್ ಕಣಗಳ ಕೊರತೆ ಅಥವ ನಾಶದಿಂದ ರೋಗ ಉತ್ಪತ್ತಿಯಾಗುತ್ತದೆ.
 • ಕೆಲವು ಔಷಧಿಗಳ ಪ್ರತಿಕೂಲ ಪ್ರಯೋಗ, ಕೀಮೋಥೆರಪಿ ಹಾಗೂ ರೇಡಿಯೇಶನ್ ಚಿಕಿತ್ಸೆಯ ಅಡ್ಡಪರಿಣಾಮಗಳಿಂದಲೂ ಬರಬಹುದು
 • ಅನುವಂಶವಾಗಿ ಬರಬಹುದು, ತಂದೆ ತಾಯಿ ಇಬ್ಬರಲ್ಲೂ ಕಂಡು ಬಂದಲ್ಲಿ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.
 • ಚರ್ಮದ ಮೇಲೆ ಬಿಳಿ ಮಚ್ಚೆಗಳು ವಿವಿಧ ಆಕಾರ ಹಾಗೂ ಗಾತ್ರಗಳಲ್ಲಿ ದೇಹದ ಯಾವುದೇ ಭಾಗದಲ್ಲೂ ಉತ್ಪತ್ತಿಯಾಗಬಹುದು ಮತ್ತು ವಯೋಮಾನಕ್ಕೂ ಮುನ್ನ ಕೂದಲು ಬೆಳ್ಳಗಾಗುವುದು ರೋಗದ ಲಕ್ಷಣ.
 • ಆಯುರ್ವೇದ ಪ್ರಕಾರ ದೀರ್ಘಕಾಲ ವಿರುದ್ದ ಗುಣಗುಳ್ಳ ಆಹಾರ ಸೇವನೆ, ಅನುಚಿತ ಆಹಾರ ಕ್ರಮ ಹಾಗೂ ಮಾನಸಿಕ ಒತ್ತಡದಿಂದ ಟಾಕ್ಸಿನ್ಸ್ ಅಥವಾ ವಿಷರೂಪಿ ಅಂಶವಾಗಿ ಸಂಗ್ರಹಗೊಂಡು ದೇಹದ ವ್ಯಾಧಿಕ್ಷಮತೆಯನ್ನು ವ್ಯತ್ಯೆಯಗೊಳಿಸಿ ಮೆಲೆನೋಸೈಟ್ಸ್ ಕಣಗಳ ಉತ್ಪತ್ತಿಯನ್ನು ಕ್ಷೀಣಿಸುತ್ತದೆ.
 • ಚರ್ಮದಲ್ಲಿ ಯಾವುದೇ ಸ್ರಾವ, ತುರಿಕೆ, ಉರಿ, ನೋವು ಹಾಗೂ ಸ್ಪರ್ಶ ಹಾನಿ ಆಗುವುದಿಲ್ಲ
 • ಆಹಾರ ಹಾಗೂ ಆಹಾರ ಸೇವಿಸುವ ಕ್ರಮ ವ್ಯಾಧಿಯನ್ನು ಹೆಚ್ಚಿಸಲು ಹಾಗೂ ನಿಯಂತ್ರಿಸಲು ಪ್ರಮುಖ ಪಾತ್ರ ವಹಿಸುತ್ತದೆ.
 • ಬಿಳಿ ಮಚ್ಚೆಗಳು ಸಣ್ಣದಿದ್ದಾಗ, ಒಂದಕ್ಕೊಂದು ಜೋಡಣೆಯಾಗದಿದ್ದರೆ, ಮಚ್ಚೆಗಳ ಸಂಖ್ಯೆ ಕಡಿಮೆಯಾಗಿದ್ದು, ಉತ್ಪತ್ತಿಯಾಗಿ ಕಡಿಮೆ ಅವಧಿಯಾಗಿದ್ದರೆ ಶೀಘ್ರವಾಗಿ ಗುಣಪಡಿಸಬಹುದು.
 • ದೇಹ ಶುದ್ದಿಗೊಳಿಸುವ ಪಂಚಕರ್ಮ ಚಿಕಿತ್ಸೆ, ಹಿತಕರ ಆಹಾರ ಸೇವನೆ, ವ್ಯಾಧಿನಿರೋದಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳು. ಯೋಗ, ಪ್ರಾಣಾಯಾಮವನ್ನು ನಿರಂತರ ಪಾಲಿಸುವುದು ಅತ್ಯವಶ್ಯ
 • ಮಾಂಸಾಹಾರ, ಮೀನು, ಮೊಟ್ಟೆ, ಬದನೆಕಾಯಿ, ಮೂಲಂಗಿ, ಬೆಂಡೆಕಾಯಿ, ಹುರುಳಿಕಾಳು, ಮೊಸರು, ಹಲಸಿನಹಣ್ಣು, ಮಾವಿನ ಹಣ್ಣು, ಅಣಬೆ, ಉದ್ದು, ಬೆಲ್ಲ, ಕರಿದ ಪದ್ದರ್ಥ, ಸಿಹಿ ಹಾಗೂ ಹುಳಿ ಪದಾರ್ಥ ನಿಶಿದ್ದ
 • ಹೆಸರಕಾಳು, ಸೌತೆಕಾಯಿ, ಬೂದಗುಂಬಳಕಾಯಿ, ಎಳನೀರು, ಮಜ್ಜಿಗೆ, ಪಡುವಲೆಕಾಯಿ, ಸೋರೆಕಾಯಿ, ಗೋರೆಕಾಯಿ, ಹೀರೆಕಾಯಿ, ಒಂದಲಗ, ನೆಲ್ಲಿಕಾಯಿ, ಕಲ್ಲಂಗಡಿ ಉತ್ತಮ ಆಹಾರ.

“ಶ್ರೀಘ್ರವಾಗಿ ಚಿಕಿತ್ಸೆ ಪ್ರಾರಂಭಿಸಿ ತಾಳ್ಮೆಯಿಂದ ಚಿಕಿತ್ಸೆಯನ್ನು ಮುಂದುವರೆಸುವುದು ಬಹಳ ಮುಖ್ಯ”

 

ಡಾ. ಮಹೇಶ್ ಶರ್ಮಾ ಎಂ.
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್‍ ಆಫ್‍ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರುರಸ್ತೆ,
ಬೆಂಗಳೂರು – 560074
Mob: 9964022654

Ph: 08022718025
drsharmamysr@gmail.com

Back To Top