Health Vision

Health Vision

SUBSCRIBE

Magazine

Click Here

ಮನೋ ಒತ್ತಡವನ್ನು ಹೇಗೆ ನಿಭಾಯಿಸಬಹುದು ?


ಒತ್ತಡ ನಿವಾರಣೆಗೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಆಯುರ್ವೇದದಲ್ಲಿ ಒತ್ತಡ ನಿರ್ವಹಣೆಗಾಗಿ ಶಿರೋಧಾರ ಮತ್ತು ಅಭ್ಯಂಗ ಹಾಗೂ ಒತ್ತಡ ಸಂಬಂಧಿ ರೋಗಗಳಿಗೆ `ಪಂಚಕರ್ಮ’ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ.

ಒತ್ತಡವು ಸಹಜ ಜೀವನದ ಒಂದು ಭಾಗ. ಒತ್ತಡವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಹಾಗೂ ಅದನ್ನು ಮಾಡುವುದು ಸಲಹೆಗೆ ಯೋಗ್ಯವೂ ಅಗಿರುವುದಿಲ್ಲ. ಬದಲಿಗೆ, ನಾವು ಒತ್ತಡವನ್ನು ನಿಭಾಯಿಸುವುದನ್ನು ಕಲಿಯುವುದರಿಂದ, ನವು ನಮ್ಮ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹಾಗೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು.
ಒತ್ತಡಕ್ಕೆ ಯಾರು ಒಳಗಾಗುತ್ತಾರೆ ?
ಒತ್ತಡವು ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರಲ್ಲಿ ಪರಿಣಾಮ ಬೀರುತ್ತದೆ. ವ್ಯಕ್ತಿಗಳಲ್ಲಿ ಒತ್ತಡದ ಮಟ್ಟಗಳನ್ನು ಊಹಿಸಲು ಅನ್ವಯಿಸುವ ಬಾಹ್ಯ ಮಾಪನಗಳಿಲ್ಲ. ಸಾಂಪ್ರದಾಯಿಕ ಒತ್ತಡದಿಂದ ಕೆಲಸದ ಸ್ಥಳದಲ್ಲಿನ ಒತ್ತಡದ ಅನುಭವವನ್ನು ಹೊಂದಲು ಸಾಧ್ಯವಿಲ್ಲ. ಒಂದು ಮಗುವಿನ ಪೋಷಕರಿಗೆ ಹಲವಾರು ಮಕ್ಕಳ ಪೋಷಕರಿಗಿಂತ ಪೋಷಣೆಗೆ ಸಂಬಂಧಪಟ್ಟಂತೆ ವಿಭಿನ್ನವಾದ ಒತ್ತಡ ಇರಬಹುದು. ನಮ್ಮ ಜೀವನದ ಒತ್ತಡದ ಮಟ್ಟವು ನಮ್ಮ ದೈಹಿಕ ಆರೋಗ್ಯ, ನಮ್ಮ ಪರಸ್ಪರ ಸಂಬಂಧಗಳ ಗುಣಮಟ್ಟ, ನಾವು ಕೈಗೊಳ್ಳುವ ಬದ್ದತೆಗಳು ಮತ್ತು ಜವಾಬ್ದಾರಿಗಳ ಸಂಖ್ಯೆ, ಇತರರು ಅವಲಂಬಿಸಿರುವ ಮಟ್ಟ ಮತ್ತು ನಮ್ಮ ನಿರೀಕ್ಷೆಗಳು, ಇತರರಿಂದ ನಮಗೆ ಲಭಿಸುವ ಬೆಂಬಲ ಹಾಗೂ ನಮ್ಮ ಜೀವನದಲ್ಲಿ ಇತ್ತೀಚೆಗೆ ಘಟಿಸಿದ ಬದಲಾವಣೆಗಳ ಸಂಖ್ಯೆ ಅಥವಾ ಆಘಾತಕಾರಿ ಘಟನೆಗಳಂಥ ವ್ಯಕ್ತಿಗತ ಅಂಶಗಳ ಮೇಲೆ ಇದು ಹೆಚ್ಚಾಗಿ ಅವಲಂಬಿಸಿರುತ್ತದೆ.
ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ. ಸಾಕಷ್ಟು ಪ್ರಮಾಣದಲ್ಲಿ ಹರ್ಬಲ್ ಗ್ರೀನ್ ಟೀ ಬಳಕೆಯಿಂದ ಒತ್ತಡವನ್ನು ನಿವಾರಿಸಬಹುದು ಎಂಬುದು ಒತ್ತಡ ಉಪಶಮನ ಕುರಿತ ಅಧ್ಯಯನದಿಂದ ಸಾಬೀತಾಗಿದೆ. ಒತ್ತಡದಾಯಕ ಪರಿಸರದಲ್ಲಿ ಕೆಲಸ ಮಾಡುವವರು ಪ್ರತಿ ದಿನ ಎರಡು-ಮೂರು ಬಾರಿ ಒಂದು ಕಪ್ ಗಿಡಮೂಲಿಕೆಯ ಹಸಿರು ಚಹಾ ಸೇವಿಸಿದರೆ ಒತ್ತಡವು ಗಣನೀಯವಾಗಿ ಕಡಿಮೆಯಾಗುತ್ತದೆ. ಒತ್ತಡವನ್ನು ತಪ್ಪಿಸಲು ಯಾವುದೇ ನಿದ್ರೆ ಮಾತ್ರೆಗಳು ಅಥವಾ ಆಲ್ಕೋಹಾಲ್‍ನನ್ನು ಬಳಸಬಾರದು. ನೀವಾಗಿಯೇ ನಿಮ್ಮ ಒತ್ತಡವನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗದಿದ್ದರೆ, ಪರಿಸ್ಥಿತಿ ಹದಗೆಡುವುದಕ್ಕೂ ಮುನ್ನ ನಿಮ್ಮ ಕುಟುಂಬ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ಒತ್ತಡ ನಿಗ್ರಹ ಸೂತ್ರಗಳು
ಯಾವುದೋ ಕ್ಷುಲ್ಲಕ ಅಥವಾ ಮುಖ್ಯವಲ್ಲದ ವಿಷಯಕ್ಕೆ ಅಸಮಾಧಾನಗೊಳ್ಳುವುದು ಅಥವಾ ಕೋಪಗೊಳ್ಳುವುದು ನಿಮಗೆ ಕಂಡುಬರುವುದನ್ನು ಗಮನಿಸಿ. ಆಗ ತಾಳ್ಮೆಯಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ.

  • ಕೋಪ ಅಥವಾ ಉದ್ವಿಗ್ನಗೊಳ್ಳದಂತೆ ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡಿಕೊಳ್ಳಿ. ಅಗತ್ಯವಿಲ್ಲದೇ ವಿನಾಕಾರಣ ವ್ಯರ್ಥ ಆಲೋಚನೆ ಮತ್ತು ಶಕ್ತಿಯನ್ನು  ನಷ್ಟ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ಪರಿಣಾಮಕಾರಿ ಕೋಪ ನಿಯಂತ್ರಣವು ನಿಜವಾದ ಒತ್ತಡ ನಿವಾರಕ ಎಂಬುದನ್ನು ಮರೆಯದಿರಿ.
  • ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿ. ಮುಂದಿನ ಒತ್ತಡದ ಸನ್ನಿವೇಶಗಳು ಘಟಿಸುವುದಕ್ಕೂ ಮುನ್ನ ಮೂರು ಬಾರಿ ಆಳವಾಗಿ ಉಸಿರಾಡಿ ಉಸಿರನ್ನು ನಿಧಾನವಾಗಿ ಬಿಡಿ. ಕೆಲವು ನಿಮಿಷಗಳಷ್ಟು ಸಮಯವಿದ್ದರೆ, ಧಾನ್ಯ ಅಥವಾ ಮಾರ್ಗದರ್ಶಿ ಸೂತ್ರದಂಥ ವಿಶ್ರಾಂತಿ ಕೌಶಲ್ಯಗಳನ್ನು ಪ್ರಯತ್ನಿಸಿ.
  • ಒತ್ತಡದಿಂದ ನಿಮಗೆ ವಿಪರೀತ ದಣಿವಾದ ಭಾವನೆ ಉಂಟಾದಾಗಲೆಲ್ಲ ಸಾಮಾನ್ಯಕ್ಕಿಂತ ನಿಧಾನವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಮಾನ್ಯವಾಗಿ ಒತ್ತಡಕ್ಕೆ ಒಳಗಾದ ಮಂದಿ ಏರಿದ ದ್ವನಿಯಲ್ಲಿ ವೇಗವಾಗಿ ಮತ್ತು ಒಂದೇ ಉಸಿರಿನಲಲ್ಲಿ ಮಾತನಾಡುತ್ತಾರೆ. ಆದರೆ, ನೀವು ನಿಮ್ಮ ಮಾತನ್ನು ನಿಧಾನಗೊಳಿಸುವುದರಿಂದ ಕಡಿಮೆ ಭಾವೋದ್ವೇಗಕ್ಕೆ ಒಳಗಾದಂತೆ ಹಾಗೂ ಯಾವುದೇ ಸನ್ನಿವೇಶವನ್ನು ಹೆಚ್ಚು ನಿಯಂತ್ರಣದಲ್ಲಿ ಇಟ್ಟುಕೊಂಡಂತೆ ಕಂಡುಬರುತ್ತದೆ.
  • ಪರಿಣಾಮಕಾರಿ ಸಮಯ ನಿರ್ವಹಣೆ ಕಾರ್ಯತಂತ್ರ ರೂಪಿಸಿ. ನೀವು ಮಾಡಬೇಕಾದ ಕೆಲಸಗಳನ್ನು ತಕ್ಷಣ ಮಾಡಿ. ಇಂಥ ಒಂದು ಸಣ್ಣಪುಟ್ಟ ಜವಾಬ್ದಾರಿಯ ಬಗ್ಗೆ ಆಸಕ್ತಿ ವಹಿಸುವುದರಿಂದ ಇದು ಉತ್ಸಾಹದಾಯಕವಾಗಿ ಪರಿಣಮಿಸುತ್ತದೆ ಹಾಗೂ ನಿಮ್ಮ ಧೋರಣೆಯನ್ನು ಸುಧಾರಿಸುತ್ತದೆ.
  • ಪುಟ್ಟ ವಿರಾಮಕ್ಕಾಗಿ ಹೊರಗೆ ಸುತ್ತಾಡಬೇಕೆಂದಿಲ್ಲ. ಪೂರ್ಣ ಪ್ರಮಾಣದ ಸುತ್ತಾಟದಲ್ಲಿ ಕಾಲಹರಣ ಮಾಡಬೇಡಿ. ಬಾಲ್ಕನಿ ಅಥವಾ ಟೆರೆಸ್ ಮೇಲೆ ಕೇವಲ ಐದು ನಿಮಿಷಗಳ ಕಾಲ ನಿಂತರೂ ಅದರಿಂದ ಪುನ:ಶ್ಚೇತನ ಲಭಿಸುತ್ತದೆ.
  • ಸಾಕಷ್ಟು ನೀರು ಕುಡಿಯಿರಿ ಹಾಗೂ ಸಣ್ಣ ಪ್ರಮಾಣದಲ್ಲಿ ಪೌಷ್ಟಿಕ ಉಪಾಹರ ಸೇವಿಸಿ.
  • ದೋಷಪೂರಿತ ದೇಹ ಭಂಗಿಯೂ ಸ್ನಾಯು ಒತ್ತಡ, ನೋವು ಹಾಗೂ ಒತ್ತಡ ಹೆಚ್ಚಳಕ್ಕೆ ಎಡೆ ಮಾಡಿಕೊಡುತ್ತದೆ.
  • ನೀವು ಸ್ನಾನ ಅಥವಾ ಉತ್ತಮ ವ್ಯಾಯಾಮದೊಂದಿಗೆ ಅರ್ಧ ಗಂಟೆ ಕಳೆದ ನಂತರವೂ ನಿಮ್ಮ ಒತ್ತಡ ನಿವಾರಣೆಯಾಗದಿದ್ದಲ್ಲಿ ಎಲ್ಲಾ ಕೆಲಸವನ್ನು ಬದಿಗೊತ್ತಿ, ಕೆಲ ಕಾಲ ಕುಟುಂಬದ ಸದಸ್ಯರೊಂದಿಗೆ ಕಳೆಯಿರಿ ಹಾಗೂ ನಿಮಗೆ ನೀವೇ ವಿರಮಿಸಲು ಅವಕಾಶ ನೀಡಿ.

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com

Back To Top