Health Vision

Health Vision

SUBSCRIBE

Magazine

Click Here

ಆರೋಗ್ಯ-ಆಹಾರ-ಆಯಸ್ಸು

ಪ್ರಕೃತಿ ಚಿಕಿತ್ಸೆ

ಮಾನವನು ವಿಕಾಸವಾದಂತೆ ಆತನ ಬುದ್ಧಿಮತ್ತೆಯೂ ಸಹ ಬೆಳವಣಿಗೆ ಹೊಂದಿತು. ಇತಿಹಾಸ, ಸಂಶೋಧನೆಗಳು, ಆವಿಷ್ಕಾರಗಳು ಮಾನವನ ಬುದ್ಧಿ-ತಂತ್ರಗಾರಿಕೆಯೊಂದಿಗೆ ಬೆರೆತು ನಾವು ಅತ್ಯುನ್ನತ ಸ್ಥಾನಕ್ಕೇರಲು ನೆರವಾದವು. ತಪ್ಪು ವಿಚಾರಗಳನ್ನು ಸ್ಪಷ್ಟಪಡಿಸಿ, ಸರಿ ವ್ಯವಸ್ಥೆಗಳನ್ನು ದೃಢಪಡಿಸುವ ಸಾಮಥ್ರ್ಯ ಇದರದ್ದು. ಅತ್ಯಾಧುನಿಕ ವೈದ್ಯಕೀಯ ಪದ್ಧತಿ, ಪ್ರಮಾಣಗಳು ಜೀವನಕ್ಕೆ ಆಧಾರವಾದರೂ ಸಹ ಸಹಾಯಕವಾದಂತಹ ಜೀವನಪದ್ಧತಿ, ವ್ಯವಸ್ಥೆಗಳಿಂದ ಮಾನವನ ಆಯಸ್ಸು ಪೂರ್ಣವಾಗದಿರುವುದು ವಿಷಾದನೀಯ ಸಂಗತಿ.
ನಮ್ಮ ಪೂರ್ವಿಕರು ನೂರು ವರ್ಷ ಸುಖವಾಗಿ, ಆರೋಗ್ಯ ಪೂರ್ಣವಾಗಿ ಜೀವಿಸುತ್ತಿದ್ದರು. ಆದರೆ ನಾವು ಅಲ್ಪಾಯುಷ್ಯದೊಂದಿಗೆ ತೃಪ್ತಿ ಪಡಬೇಕಾದ ಸಂದರ್ಭದೊಂದಿಗೆ ಜೀವಿಸಿದಷ್ಟು ಕಾಲವೂ ಸಹ ಪರಿಪೂರ್ಣ ಆರೋಗ್ಯಯುತವಾಗಿ ಬಾಳುವ ಅವಕಾಶದಿಂದ ದೂರವಾಗಿದ್ದೇವೆ. ಮಧುಮೇಹ, ಬಿ.ಪಿ., ಬೊಜ್ಜು, ಮುಟ್ಟಿನ ಸಮಸ್ಯೆಗಳು, ಲೈಂಗಿಕ ನಿರಾಸಕ್ತಿ, ಅಜೀರ್ಣ, ಅಸ್ತಮಾ, ಅಲರ್ಜಿ, ಕೊಲೆಸ್ಟ್ರಾಲ್,ಗ್ಯಾಸ್ಟ್ರಿಕ್‍ನಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಇವುಗಳು ನೇರವಾಗಿ ನಮ್ಮ ಜೀವನಶೈಲಿ ಹಾಗೂ ಆಹಾರಶೈಲಿ ಸಂಬಂಧಿತ ಖಾಯಿಲೆಗಳಾಗಿವೆ. ಆದ್ದರಿಂದ ನಮ್ಮ ತಪ್ಪು ಆಹಾರಪದ್ಧತಿಯೇ ಸಮಸ್ಯೆಗಳಿಗೆ ಕಾರಣ ಎಂಬುದು ಇಲ್ಲಿ ವೇದ್ಯವಾಗುತ್ತದೆ.
ಮಹಾನ್ ವೈದ್ಯ ವಾಗ್ಭಟರ ಅಷ್ಟಾಂಗ ಹೃದಯದಲ್ಲಿ
“ಅತ್ಯಂಬುಪಾನಾತ್ ವಿಷಮಾಶನಚ್ಚ ದಿವಾ ಚ ಸುಪ್ತೇಃ ನಿಶಿಜಾಗರಾಚ್ಚ|
ಸಂಶೋಧನಾನ್ಮೂತ್ರಪರಿಷಯೋಚ್ಚ ಷಡ್ಭಿಃ ನಿದಾನೈಃ ಪ್ರಭವಂತಿ ರೋಗಾಃ||”
ವಿಷ ಆಹಾರ ಪದಾರ್ಥಗಳನ್ನು ಸೇವಿಸುವುದು, ಅತಿಯಾಗಿ ನೀರು ಕುಡಿಯುವುದು, ಬೆಳಿಗ್ಗೆ ಸಮಯದಲ್ಲಿ ಮಲಗುವುದು, ರಾತ್ರಿ ಎಚ್ಚರವಾಗಿರುವುದು, ಮಲ, ಮೂತ್ರಗಳ ಮೂಲಕ ನಮ್ಮ ದೇಹದಲ್ಲಿನ ಕಲ್ಮಶಗಳು ಹೊರಹೋಗದಿರುವುದೆಂಬ ಆರು ಮೂಲ ಕಾರಣಗಳೇ ರೋಗಗಳು ಬರಲು ಸಂಭವನೀಯತೆಗಳು ಎಂದು ಹೇಳಲಾಗಿದೆ.
ಋಷಿ ಮುನಿಗಳು, ಪೂರ್ವಿಕರು ದೀರ್ಘಾಯಸ್ಸನ್ನು ಪಡೆಯಲು ಪ್ರಮುಖವಾದ ಕಾರಣ ಅವರು ಅನುಸರಿಸುತ್ತಿದ್ದ ಹಿತ-ಮಿತ ಆಹಾರವೇ ಆಗಿತ್ತು. ದಿನಕ್ಕೆ ಕೇವಲ ಒಂದು ಸಾರಿ, ಗರಿಷ್ಠ ಎರಡು ಬಾರಿ ಮಾತ್ರ ಆಹಾರ ಸೇವಿಸುತ್ತಿದ್ದರು, ಅದರಲ್ಲಿಯೂ ಮುಖ್ಯವಾಗಿ ಹಣ್ಣು, ಗಡ್ಡೆ-ಗೆಣಸು, ಹಸಿರು ಸೊಪ್ಪು, ಬೀಜಗಳು(ನಟ್ಸ್) ಅವರ ಆಹಾರವಾಗಿತ್ತು. ಇಂದಿನ ಸಂಶೋಧನೆಗಳೂ ಕೂಡ ಮಿತ ಆಹಾರವೇ ದೀರ್ಘಾಯಸ್ಸಿನ ಗುಟ್ಟು ಎಂಬುದಾಗಿ ಸಾಬೀತು ಪಡಿಸಿದೆ.
ಆದರೆ ಇಂದಿನ ದಿನದಲ್ಲಿ ನಾವು 5-6 ಬಾರಿ ಆಹಾರ ಸೇವಿಸುತ್ತಿದ್ದೇವೆ. ಅದರಲ್ಲಿಯೂ ಸಹ ನಾವು ಸೇವಿಸುವಂತಹ ಜಂಕ್ ಫುಡ್‍ಗಳು, ಕರಿದ ಪದಾರ್ಥಗಳು, ಕಲಬೆರಕೆಯುಕ್ತ ಆಹಾರಗಳು ನಮ್ಮ ತಪ್ಪಾದ ಆಹಾರ ಪದ್ಧತಿಯನ್ನು ಪ್ರಕಟಪಡಿಸುತ್ತದೆ. ಅದರಲ್ಲಿಯೂ ಮಲಬದ್ಧತೆಯು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿದೆ. ನಾವು ಸೇವಿಸಿದಂತಹ ಆಹಾರವು ಸರಿಯಾಗಿ ಜೀರ್ಣವಾಗದೇ, ದೇಹಕ್ಕೆ ಬೇಡವಾದ ವಸ್ತುಗಳು ಯಾವುದೇ ತೊಂದರೆಯಿಲ್ಲದೇ ಹೊರಹೋಗದಿರುವಂತಹ ಪರೀಸ್ಥಿತಿಯೇ ಈ ಮಲಬದ್ಧತೆ. ಆದ್ದರಿಂದ ಹೆಚ್ಚು ನಾರಿನಾಂಶ ಹೊಂದಿರುವ, ಎಲ್ಲ ರೀತಿಯ ಪೋಷಕಾಂಶ ಪೂರಿತ ಪೌಷ್ಠಿಕ ಅಹಾರವನ್ನು ತೆಗೆದುಕೊಳ್ಳಬೇಕು. ಸಮಯೋಚಿತ ಆಹಾರ ಪಾಲನೆ ನಮ್ಮ ದೇಹವನ್ನು ಪೋಷಿಸುತ್ತದೆ. ಬಂದಂತಹ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದು ಅಥವಾ ನಿಯಂತ್ರಿಸುವುದರ ಜೊತೆಗೆ ಮತ್ತೆ ಬಾರದಂತೆ ತಡೆಯುವ ಆಹಾರ ಪಟ್ಟಿಯನ್ನು ತಯಾರಿಸಿಕೊಂಡು ಅದನ್ನು ಪಾಲನೆ ಮಾಡಬೇಕು. ಆಹಾರದ ಮೂಲಕ ಆರೋಗ್ಯ ಪಡೆಯುವ ಸರಳ ವಿಧಾನದೊಂದಿಗೆ, ನಮ್ಮ ಪ್ರಕೃತಿಯಲ್ಲಿ, ನಮ್ಮ ಸುತ್ತ-ಮುತ್ತ ದೊರೆಯುವ ನೈಸರ್ಗಿಕ ಅವಕಾಶಗಳನ್ನು ಬಳಸಿಕೊಂಡು ಸ್ವಸ್ಥ ಆರೋಗ್ಯ ಪಡೆಯುವತ್ತ ಸಾಧನೆ ಮಾಡಬೇಕು. ‘ಆಹಾರ’ದಿಂದ ‘ಆರೋಗ್ಯ’ವ ಪಡೆದು ‘ಆಯಸ್ಸು’ ವೃದ್ಧಿಸಿಕೊಳ್ಳುವ ವ್ಯವಸ್ಥೆ ನಮಗೆ ಆಧಾರವಾಗಲಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Back To Top