‘ಸೈಲೆಂಟ್ ಕಿಲ್ಲರ್’ ಎಂದೇ ಕರೆಯಲ್ಪಡುವ ಸಕ್ಕರೆ ಕಾಯಿಲೆ ಆಥವಾ ಮಧುಮೇಹ ಅಥವಾ ಡಯಾಬಿಟಿಸ್ ರೋಗ ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ಇದರಿಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ. ಭಾರತದಲ್ಲಿ ಟೈಪ್-2 ಡಯಾಬಿಟಿಸ್ ತೀವ್ರವಾಗಿದ್ದು, ಇದರಿಂದ ಹೃದ್ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಟೈಪ್-2 ಡಯಾಬಿಟಿಸ್ನಲ್ಲಿ ದೇಹದ ಬೆಳವಣಿಗೆಗಾಗಿ ಬಳಕೆಯಾಗುವ ಗ್ಲುಕೋಸ್ ಅಥವಾ ಸಕ್ಕರೆ, ರಕ್ತದಲ್ಲಿ ಸಂಗ್ರಹಗೊಳ್ಳುತ್ತದೆ. ಬೊಜ್ಜು ದೇಹ ಹಾಗೂ ಬದಲಾದ ಜೀವನಶೈಲಿಯೇ ಈ ರೀತಿಯ ಡಯಾಬಿಟಿಸ್ ಅಂಟಿಕೊಳ್ಳಲು ಕಾರಣವಾಗುತ್ತದೆ.
ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆ ಕಾಯಿಲೆಯ ರೋಗಿಗಳನ್ನು ಹೊಂದಿರುವ ದೇಶ ಭಾರತ. ಈ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಾಗುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ ‘ಮಧುಮೇಹ’ವು ಸಾಂಕ್ರಾಮಿಕ ರೋಗದಂತೆ ವ್ಯಾಪಕವಾಗಿ ಹಬ್ಬುತ್ತಿರುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದೆ.
ಭಾರತೀಯರು ಸೂಕ್ಷ್ಮ ದೇಹದವರು. ಎಷ್ಟು ಸೂಕ್ಷ್ಮ ಎಂದರೆ ಆಹಾರ ಸೇವನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಾದರೂ, ದೇಹದ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಾದರೆ ದೇಹದಲ್ಲಿನ ಚಟುವಟಿಕೆಗಳು ಏರುಪೇರಾಗುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೊಬ್ಬು ಅಂಶ ಅಧಿಕವಾಗುತ್ತದೆ. ಇದು ಬೊಜ್ಜು ರೋಗಕ್ಕೆ ಪ್ರಮುಖ ಕಾರಣ. ಒಮ್ಮೆ ದೇಹದ ತೂಕ ಹೆಚ್ಚಿಸಿಕೊಂಡರೆ ಅಥವಾ ಬೊಜ್ಜು ಬೆಳೆಸಿಕೊಂಡರೆ ಅದು ಮಧುಮೇಹ ಅಮರಿಕೊಳ್ಳುವುದಕ್ಕೆ ಪ್ರಮುಖ ಕಾರಣ. ಆದ್ದರಿಂದ ಆಹಾರ ಸೇವನೆಯಲ್ಲಿ ಎಚ್ಚರ ವಹಿಸಬೇಕು.
- ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಸಾಂಕ್ರಾಮಿಕ ರೋಗವಲ್ಲ. ಶೀತ, ನೆಗಡಿ, ಕೆಮ್ಮು, ಜ್ವರ ಹರಡುವಂತೆ ಡಯಾಬಿಟಿಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂಥದ್ದಲ್ಲ. ಈ ಕಾಯಿಲೆಗೆ ನಿರ್ದಿಷ್ಟ ಕಾರಣವೊಂದನ್ನೇ ನೀಡುವಂತಿಲ್ಲ. ಆದರೆ ಡಯಾಬಿಟಿಸ್ ಟೈಪ್-2ಗೆ ವಂಶವಾಹಿ ಕಾರಣವಿರಬಹುದು ಎಂದು ನಂಬಲಾಗಿದೆ. ಇನ್ನುಳಿದಂತೆ ಮುಖ್ಯವಾಗಿ ನಮ್ಮ ಇಂದಿನ ಹಾದಿ ತಪ್ಪಿದ ಜೀವನ ಶೈಲಿ ಮತ್ತು ಆಹಾರ ಕ್ರಮಗಳಿಂದಾಗಿ ಡಯಾಬಿಟಿಸ್ ರೋಗ ಬರಲು ಮುಖ್ಯ ಕಾರಣವಾಗಿದೆ.
- ಮಧುಮೇಹ ರೋಗಿಗಳಿಗೆ ನಿರ್ದಿಷ್ಟವಾದ ಯಾವುದೇ ಆಹಾರಗಳಿಲ್ಲ. ಈ ರೋಗವುಳ್ಳವರೂ, ಇಲ್ಲದವರೂ ಆರೋಗ್ಯಕ್ಕೆ ಹಿತಕರವಾದ ಉತ್ತಮ, ಮಿತ ಆಹಾರಕ್ರಮವನ್ನು ಅನುಸರಿಸಬೇಕು. ಕಡಿಮೆ ಕೊಬ್ಬಿನಂಶವುಳ್ಳ ಸಿಹಿ, ಉಪ್ಪು ಮಿತವಾಗಿ ಬಳಸಿ ಸಾಕಷ್ಟು ಧಾನ್ಯಗಳು, ಹಣ್ಣು ಮತ್ತು ಹಸಿ ತರಕಾರಿಗಳಿಂದ ಕೂಡಿದ ಆಹಾರಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸರಿಯಾದ ಕ್ರಮ.
- ಡಯಾಬಿಟಿಸ್ ರೋಗಿಗಳು ಹಣ್ಣ-ಹಂಪಲುಗಳನ್ನು ಸಂಪೂರ್ಣವಾಗಿ ವರ್ಜಿಸಬೇಕಿಲ್ಲ. ಆರೋಗ್ಯಕರವಾ ಆಹಾರಕ್ರಮದಲ್ಲಿ ಒಂದಿಷ್ಟು ಹಣ್ಣು ಹಂಪಲುಗಳೂ ಸೇರಿರುವುದು ತಪ್ಪಲ್ಲ. ಹೆಚ್ಚು ಬೇಡ ಅಷ್ಟೇ.
- ಹೆಚ್ಚು ಸಕ್ಕರೆ, ಸಿಹಿ ತಿಂಡಿಗಳು ತಿನ್ನುವುದೇ ಡಯಾಬಿಟಿಸ್ ರೋಗಕ್ಕೆ ಕಾರಣವಲ್ಲ. ಈ ಗ್ರಹಿಕೆ ಸರಿಯಲ್ಲ. ನಿಮ್ಮ ಜೀವನಶೈಲಿಯೂ, ಜನಿಸುವಾಗಿನ ದೇಹರಚನೆಯಲ್ಲಿನ ಕೆಲ ಅಂಶಗಳು ಡಯಾಬಿಟಿಸ್ ಕಾಯಿಲೆ ಬರುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸ್ಥೂಲ ಶರೀರದವರಿಗೆ ಸಕ್ಕರೆ ಕಾಯಿಲೆಯ ಸಾಧ್ಯತೆ ಹೆಚ್ಚು. ಮಧುಮೇಹಿಗಳು ತಮ್ಮ ಆಹಾರಕ್ರಮ ಸರಿಯಾಗಿಸಿಕೊಂಡು ನಿರ್ದಿಷ್ಟ ವ್ಯಾಯಾಮಗಳಿಂದ ಮೈಭಾರ ಕಡಿಮೆ ಮಾಡಿಕೊಳ್ಳುವುದು ಅಗತ್ಯ.
- ಒಟ್ಟಾರೆ ಆಹಾರದ ಪ್ರಮಾಣದಲ್ಲಿ ನಿಯಂತ್ರಣ ಬೇಕು. ನಿರ್ದಿಷ್ಟ ಪ್ರಮಾಣದ ಆಹಾರವನ್ನೇ ದಿನಕ್ಕೆ ಮೂರು-ನಾಲ್ಕು ಬಾರಿ ಭಾಗಶ:ವಾಗಿ ಸೇವಿಸಿ ಹೆಚ್ಚು ಪಾಲಿಶ್ ಮಾಡದ ಧಾನ್ಯಗಳು, ಆಧಿಕ ಫೈಬರ್ಗಳಿಂದ ಕೂಡಿದ್ದು, ಆರೋಗ್ಯಕ್ಕೆ ಉತ್ತಮ. ಡಯಾಬಿಟಿಸ್ ರೋಗಿಗಳು ಯಾವುದೇ ಹಣ್ಣು-ಹಂಪಲುಗಳನ್ನು ತಿನ್ನಬಾರದೆಂಬ ತಪು ಕಲ್ಪನೆ ಇದೆ. ಕಿತ್ತಳೆ, ಸೇಬು, ಪೇರಳೆಹಣ್ಣು ಮುಂತಾದವುಗಳನ್ನು ಮಿತವಾಗಿ ಸೇವಿಸುವುದು ತಪ್ಪಲ್ಲ. ಹಲಸಿನ ಹಣ್ಣು, ಬಾಳೆಹಣ್ಣು ಮುಂತಾದವುಗಳನ್ನು ತಿನ್ನದಿರುವುದೇ ಒಳಿತು.
- ಡಯಾಬಿಟಿಸ್ ರೋಗಿಗಳಲ್ಲಿ ಶೀತ, ತಲೆನೋವು ಮುಂತಾದ ಚಿಕ್ಕಪುಟ್ಟ ಕಾಯಿಲೆಗಳು ಕಾಣಿಸಿಕೊಳ್ಳುವುದು ಇತರರಿಗಿಂತ ಹೆಚ್ಚು ಎಂಬುದು ಸರಿಯಲ್ಲ. ಇವುಗಳು ಮಧುಮೇಹದ ನಿಯಂತ್ರಣಕ್ಕೆ ಅಡ್ಡಿಯಾಗುತ್ತವೆ ಆದ್ದರಿಂದ ಇವರಲ್ಲಿ ಅಗಾಗ ಇಂತಹ ಕಾಯಿಲೆಗಳು ಬರದಂತೆ ಜಾಗ್ರತೆ ವಹಿಸಬೇಕು.
- ಇನ್ಸುಲಿನ್ ದೇಹದ ತೂಕ ಹೆಚ್ಚಿಸುತ್ತದೆ. ಆದ್ದರಿಂದ ಇನ್ಸುಲಿನ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ದೇಹದಲ್ಲಿನ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸಿ ಮಧುಮೇಹ ರೋಗಿಗಳನ್ನು ರಕ್ಷಿಸುವುದೇ ಈ ಇನ್ಸುಲಿನ್ ಕಾರ್ಯ. ಆದ್ದರಿಂದ ಅಲ್ಪ ಪ್ರಮಾಣದ ಮೈತೂಕ ಹೆಚ್ಚಿಸುವುದೆಂಬ ಕಾರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವಂತಿಲ್ಲ.
- ಇನ್ಸುಲಿನ್ ದೇಹದ ರಕ್ತನಾಳಗಳಲ್ಲಿ ತಡೆಯೊಡ್ಡುವಿಕೆ ಹಾಗೂ ರಕ್ತದೊತ್ತಡ ಹೆಚ್ಚುವಿಕೆಗೆ ಕಾರಣವಾಗುತ್ತದೆ ಎಂಬುದು ತಪ್ಪು ಕಲ್ಪನೆ. ದೇಹದಲ್ಲಿ ಸಕ್ಕರೆ ಅಂಶ ಮಿತಿಮೀರಿದಾಗ ಚಿಕ್ಕಪುಟ್ಟ ರಕ್ತನಾಳಗಳಲ್ಲಿ ತಡೆಯಾಗುತ್ತದೆ. ಇದೇ ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳಲ್ಲಿ ಅತಿರೋಸ್ಸ್ಕೆಲೊರಿಸಿಸ್ ಉಂಟಾಗಲೂ ಇದೇ ರಕ್ತನಾಳಗಳಲ್ಲಿನ ತಡೆಯೇ ಕಾರಣ. ಹೀಗೆ ದೇಹಕ್ಕೆ ಇನ್ಸುಲಿನ್ ಲಿಸಿಕೆ ನೀಡುವ ಮೂಲಕ ಡಯಾಬಿಟಿಸ್ನನ್ನು ನಿಯಂತ್ರಿಸಿದಾಗ ರಕ್ತನಾಳಗಳಲ್ಲಿನ ಸಮಸ್ಯೆ ಕಡಿಮೆಯಾಗಿ ಮುಚ್ಚಿದ ರಕ್ತನಾಳಗೂ ತೆರೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.
- ಇನ್ಸುಲಿನ್ ಚುಚ್ಚಿಸಿಕೊಳ್ಳಲು ಆರಂಭಿಸಿದರೆ ಅದನ್ನು ಪೂರ್ತಿಯಾಗಿ ನಿಲ್ಲಿಸುವಂತಿಲ್ಲ ಎಂಬುದು ಸರಿಯಲ್ಲ. ಕೆಲವರಲ್ಲಿ ಡಯಾಬಿಟಿಸ್ ರೋಗ ಪತ್ತೆಯಾಗುವುದು ವಿಳಂಬವಾದಾಗ ರಕ್ತದಲ್ಲಿನ ಹೆಚ್ಚಿನ ಗ್ಲುಕೋಸ್ ಅಂಶವನ್ನು ಸಾಮಾನ್ಯಕ್ಕೆ ಇಳಿಸಲು ಇನ್ಸುಲಿನ್ ಲಸಿಕೆಯೇ ಬೇಕಾಗಬಹುದು. ಅಂಥವರಲ್ಲೂ ನಿಧಾನವಾಗಿ ಡಯಾಬಿಟಿಸ್ ನಿಯಂತ್ರಣಕ್ಕೆ ಬಂದಾದ ಮೇಲೆ ಲಸಿಕೆ ಬದಲಾಗಿ ಮಾತ್ರೆಗಳನ್ನು ಬಳಸಲೂ ಅಥವಾ ಸರಿಯಾದ ಆಹಾರ ಕ್ರಮ ಮತ್ತು ಜೀವನಶೈಲಿಗಳಿಂದಲೇ ನಿಯಂತ್ರಿಸಿಕೊಳ್ಳಲೂ ಸಾಧ್ಯವಾಗಬಹುದು.
ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, 82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 ಮೊ.: 97422 74849