Health Vision

Health Vision

SUBSCRIBE

Magazine

Click Here

ದೇವರ ಕಾರ್ಯರೂಪ

ಡಾ. ದೇವದಾಸ ನಾಯಕ್ ಎಂಬುವ ವೈದ್ಯರು ಪುತ್ತೂರಿನ ಶಾಫಿ ಬಿಲ್ಡಿಂಗ್ ಎದುರಿನ ಕಟ್ಟಡದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಅವರು ವೈದ್ಯರು ಎಂಬುದು ಬಹಳಷ್ಟು ಜನರಿಗೆ ಗೊತ್ತು. ಆದರೆ ಅವರು ಧ್ಯಾನದಲ್ಲಿ ಬಹಳಷ್ಟು ದೂರ ಸಾಗಿದ ಸಂತರೆಂಬುದು ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿತ್ತು. ಅವರು ದೇಹತ್ಯಾಗ ಮಾಡಿ ಕೆಲವು ವರ್ಷಗಳೇ ಸಂದು ಹೋಗಿವೆ. ಆದರೆ ಅವರು ಹೇಳಿದ ಅವರ ಧ್ಯಾನದ ಕೆಲವೊಂದು ಅನುಭವದ ನೆನಪುಗಳು ನನ್ನ ಚಿತ್ತಭಿತ್ತಿಯಲ್ಲಿ ಆಗಾಗ ಹಾದುಹೋಗುತ್ತದೆ.
ಒಂದು ಘಟನೆಯನ್ನು ಈಗ ಬರೆಯುತ್ತಿದ್ದೇನೆ. ಅವರು ಧ್ಯಾನದಲ್ಲಿ ತಲ್ಲೀನವಾದ ಅವಸ್ಥೆಯಲ್ಲಿ ಇದ್ದರು. ಆಗ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಅವರಿಗೆ ದರ್ಶನವಿತ್ತು” ನಿನ್ನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ” ಎಂದರು. ಧ್ಯಾನದಲ್ಲಿ ಕಂಡ ದೃಶ್ಯದ ಅವರ್ಣನೀಯ ಹಾಗೂ ಅದ್ಭುತ ದೃಶ್ಯದ ಆನಂದಾನುಭವದಿಂದ ಪುಳಕಿತರಾಗಿದ್ದರು. ಈ ಘಟನೆ ನಡೆದು ಕೆಲವಾರು ದಿನಗಳು ಕಳೆದವು.
ಒಮ್ಮೆ ಅವರಿಗೆ ಬಂಧುಗಳೊಂದಿಗೆ ಬಳ್ಳಾರಿಗೆ ಹೋಗುವ ಸಂದರ್ಭ ಬಂತು. ಹಾಗೆ ಬಳ್ಳಾರಿಗೆ ಹೋಗಿದ್ದಾಗ ಬಂಧುಗಳು, ಆಪ್ತೇಷ್ಟರು ಅವರನ್ನು ತಮ್ಮ ಜೊತೆಗೆ ಮಂತ್ರಾಲಯಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದರು. ಆದರೆ ಡಾ ದೇವದಾಸ್ ನಾಯಕ್ ಅವರು ಅವರ ವಿನಂತಿಯನ್ನು ನಿರಾಕರಿಸಿದರು. ಏಕೆಂದರೆ ದೇವದಾಸ್ ಡಾಕ್ಟರರಿಗೆ -” ರಾಘವೇಂದ್ರ ಸ್ವಾಮಿಗಳೇ ಧ್ಯಾನದಲ್ಲಿ ಕಂಡು ನನ್ನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಆದಕಾರಣ ತಾನು ಈಗ ಹೋಗುವ ಅಗತ್ಯವಿಲ್ಲ” ಎಂದು ಭಾವಿಸಿದ್ದೇ, ಅವರ ಹೋಗದಿರುವ ನಿರ್ಧಾರಕ್ಕೆ ಕಾರಣವಾಗಿತ್ತು.
ಹಾಗೆಯೇ ಪುತ್ತೂರಿಗೆ ಮರಳಿದ್ದರು. ನಂತರದ ಕೆಲವು ದಿನಗಳಲ್ಲಿ ಮಹಾತ್ಮರಾದ ಶ್ರೀ ಆರ್ಬಿನಿತ್ಯಾನಂದಂ ಅವರು ಡಾ ದೇವದಾಸ್ ನಾಯಕರ ಔಷಧ ಅಂಗಡಿಗೆ ಬಂದಿದ್ದರು. ಶ್ರೀ ಆರ್ಬಿ ನಿತ್ಯಾನಂದ ಅವರು ತಮ್ಮ ಎಂದಿನ ದಾಟಿಯಲ್ಲಿ ” ಡಾಕ್ಟರ್ರೇ ಏನು ಮತ್ತೆ ವಿಶೇಷ..” ಎಂದು ನಗುತ್ತಾ ಮಾತನಾಡಿದರು. ಆಗ ದೇವದಾಸ್ ನಾಯಕರು ನಡೆದ ಘಟನೆಯನ್ನು ವಿವರಿಸಿದರು. ಬಳ್ಳಾರಿಗೆ ಹೋಗಿದ್ದಾಗ ತಮ್ಮ ಬಂಧುಗಳು ಮಂತ್ರಾಲಯಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದದ್ದನ್ನು, ತಾವು ನಿರಾಕರಿಸಿದ್ದನ್ನು ಸವಿವರವಾಗಿ ಮಹಾತ್ಮರಿಗೆ ತಿಳಿಸಿದರು. ಆಗ ಮಹಾತ್ಮರು ” ನೀವು ಹೋಗಬೇಕಿತ್ತು ಡಾಕ್ಟರೇ, ಅದು ಹಾಗೆಯೇ ಬರುವ ಕ್ರಮ ಅಲ್ವಾ….” ಎಂದು ಹೇಳಿದರು. ಆಗ ದೇವದಾಸ್ ನಾಯಕರಿಗೆ ತಾವು ಆ ಸಂದರ್ಭವನ್ನು ಕಳಕೊಂಡ ಅರಿವು ಆಯಿತು. ರಾಘವೇಂದ್ರ ಸ್ವಾಮಿಗಳು ಕರೆದುಕೊಂಡು ಹೋಗುತ್ತಾರೆ ಎಂದರೆ, ಅವರು ಸ್ವತಹ ಸಶರೀರಿಯಾಗಿ ಬಂದು ಹೋಗುತ್ತಾರೆ ಎಂದು ತಿಳಿದುಕೊಳ್ಳಬಾರದು, ಸಂದರ್ಭವನ್ನು ಒದಗಿಸಿ ಕೊಡುತ್ತಾರೆ ಎಂಬ ತಾತ್ಪರ್ಯವನ್ನು ಗ್ರಹಿಸಬೇಕು ಎಂದು ಅರ್ಥವಾಯಿತು.
ಈ ಕಾರಣಕ್ಕಾಗಿ ಗಾಂಧೀಜಿಯವರು ಹೇಳಿದ ಒಂದು ಮಾತನ್ನು ನಾನು ಉದ್ಧರಿಸುವಾಗ
ಅವರು ಅದನ್ನು ತುಂಬಾ ಇಷ್ಟಪಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಟೇಬಲ್ ಮೇಲಿನ ಒಂದು ಪುಸ್ತಕದ ಹಾಳೆಯಲ್ಲಿ ನನ್ನ ಕೈಯಿಂದಲೇ ಆ ವಾಕ್ಯವನ್ನು ಬರೆಸಿದರು. ದೇವರು ಘಟನೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದು ಅದರ ತಾತ್ಪರ್ಯ.
“ದೇವರು ಸಶರೀರನಾಗಿ ಪ್ರತ್ಯಕ್ಷನಾಗಬೇಕೆಂದಿಲ್ಲ. ದೇವರು ಕಾರ್ಯರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ”- ಮಹಾತ್ಮ ಗಾಂಧೀಜಿ.
ನಾನು ಸತ್ಸಂಗ ನಡೆಸುವಾಗ ಈ ವಾಕ್ಯವನ್ನು ಉಲ್ಲೇಖಿಸಿದೆ. ಅದನ್ನು ನೆನಪಿಟ್ಟು ನನ್ನಿಂದ ಮತ್ತೆ ಹೇಳಿಸಿದರು. ಹಾಗೂ ” ಕಾರ್ಯರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ” ಎಂಬುದರ ಸ್ಪಷ್ಟ ಚಿತ್ರಣವನ್ನು ಈ ಮೇಲಿನ ಘಟನೆಯ ಮೂಲಕ ಆದ ಅನುಭವದ ತುಣುಕನ್ನು ನನ್ನ ಮುಂದೆ ತೆರೆದಿಟ್ಟರು.
ಇದನ್ನು ಕಟ್ಟುಕಥೆ ಎಂದೋ, ಭ್ರಮೆಯೆಂದೋ
ಭಾವಿಸುವುದಕ್ಕೆ ನೀವು ಸ್ವತಂತ್ರರು!
ಆದರೆ ಧ್ಯಾನಮಾರ್ಗದಲ್ಲಿ ಸಾಗುವವನಿಗೆ
ಇಂತಹ ಅನುಭವಗಳು ತೀರಾ ಸಹಜ ಹಾಗೂ ಅಂತಹ ಅನುಭವಗಳು ಅನಂತ.
ಡಾ. ದೇವದಾಸ್ ನಾಯಕರಲ್ಲಿ ಅಂತಹ ಅನುಭವಗಳ ಭಂಡಾರವೇ ಅಡಗಿತ್ತು.
ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ.-
“ಮಹಾತ್ಮರು ಸಿಕ್ಕಿದ ಮೇಲೆ ಅದು ಕೋಟಿ ಪಾಲು ಆಯಿತು”…..
ಆದರೆ ಆಶ್ಚರ್ಯದ ಸಂಗತಿಯೆಂದರೆ ಅಂತರಂಗದಲ್ಲಿ ಪರಮಾತ್ಮನ ಸತ್ಯವನ್ನು ಕಂಡ ಡಾ. ದೇವದಾಸ್ ನಾಯಕ್ ಅವರು ಜಗತ್ತಿನ ಪಾಲಿಗೆ ಅಜ್ಞಾತವಾಗಿಯೇ ಇದ್ದರು!
“ನೀವು ಕಂಡ ಸತ್ಯವನ್ನು ಹೇಳಿ” ಎಂದು ಕೇಳಿಕೊಂಡು ಯಾವ ದೂರದರ್ಶನ ವಾಹಿನಿಯವರು ಕೂಡ ಅವರ ಸಂದರ್ಶನಕ್ಕೆಂದು ಬರಲಿಲ್ಲ! ಪ್ಯಾನಲ್ ಡಿಸ್ಕಷನ್ ಗೂ ಕರೆಯಲಿಲ್ಲ! ಅದನ್ನು ಅವರು ಅಪೇಕ್ಷಿಸಿರಲೂ ಇಲ್ಲ. ಆದರೆ ಜಗತ್ತಿನ ಜನರ ರುಚಿ ಮತ್ತು ಅಭಿರುಚಿಗೆ ಅದು ಕೈಗನ್ನಡಿ ಅಷ್ಟೇ.
ಅವರು ಈಗಾಗಲೇ ಪ್ರಸಿದ್ಧಿ ಪಡೆದವರಷ್ಟು
ಪ್ರಸಿದ್ಧರಾಗಲಿಲ್ಲ. ಆದರೆ ಅಂತರಂಗದಲ್ಲಿ
ಮಹಾ “ಸಿದ್ಧ”ರಾಗಿದ್ದರು…
ಚಪ್ಪಾಳೆ ಗಿಟ್ಟಿಸಲು ಚಮತ್ಕೃತಿಯ ಭಾಷಣಗಳು ಸಾಕು.!
“ಅಂತಸ್ಸಮುದ್ರ”ದ ಅನುಭವಕ್ಕೆ ಧ್ಯಾನವೇ ಆಗಬೇಕು….

 ಡಾ  ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು, ಪ್ರಸಾದ್  ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಮೊಬೈಲ್:9740545979

Back To Top