ಆಯುರ್ವೇದದ ದೃಷ್ಟಿಯಿಂದ ದೀಪಾವಳಿ ಹಬ್ಬ ಆಚರಣೆ ಹೇಗೆ?

ಆಯುರ್ವೇದದ ದೃಷ್ಟಿಯಿಂದ ದೀಪಾವಳಿ ಹಬ್ಬ ಆಚರಣೆ ಧಾರ್ಮಿಕ, ಸಾಮಾಜಿಕ ಆಚರಣೆಗೂ ಮೀರಿ  ಮಹತ್ವದ್ದಾಗಿದೆ. ದೀಪಾವಳಿಯ ಎಲ್ಲಾ ಆಚರಣೆ, ಸಂಪ್ರದಾಯಗಳು ವಾತ ದೋಷವನ್ನು ಶಮನ ಮಾಡಿ, ದೇಹದಲ್ಲಿನ ವೈಪರೀತ್ಯಗಳನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಅಳವಡಿಸಲಾಗಿದೆ.

ಆಯುರ್ವೇದದ ದೃಷ್ಟಿಯಿಂದ ದೀಪಾವಳಿ ಹಬ್ಬ ಆಚರಣೆ ಹೇಗೆ?

ದೀಪಾವಳಿ ಭಾರತದಲ್ಲಿ ಆಚರಿಸುವ ಬಹಳ ಪ್ರಮುಖ ಹಬ್ಬ. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ಆದ್ದರಿಂದಲೇ ದೀಪಾವಳಿಯನ್ನು ಬೆಳಕಿನ ಹಬ್ಬ ಎನ್ನಲಾಗುವುದು. ಅಲ್ಲದೆ ದೀಪಾವಳಿ ಎಂದರೆ ಆಂತರಿಕ ಬೆಳಕನ್ನು ಅಂದರೆ ಜ್ನಾನದ ಬೆಳಕನ್ನು ಜಾಗೃತಗೊಳಿಸುವುದು.ದೀಪಾವಳಿಯನ್ನು ರಾಮ ರಾವಣನನ್ನು ಸಂಹರಿಸಿ ಅಯೋಧ್ಯೆಯನ್ನು ತಲುಪಿದ ಸಂತಸದ ಆಚರಣೆ ಎಂದು, ಶ್ರೀ ಕೃಷ್ಣನು ನರಕಾಸುರನನ್ನು ವಧಿಸಿದ ಪರ್ವದಿನ ಎನ್ನಲಾಗುವುದು. ಆದುದ್ದರಿಂದ ದುಷ್ಟತನದ ಸಂಹಾರ ಹಾಗೂ ಶಿಷ್ಠತನದ ಆಚರಣೆ ದೀಪಾವಳಿಯ ಸಂಕೇತ.

ಹೆಚ್ಚಿನ ಕಡೆಗಳಲ್ಲಿ ದೀಪಾವಳಿಯ ಪ್ರಯುಕ್ತ ತಮ್ಮ ಮನೆಗಳನ್ನು ಶುಚಿಗೊಳಿಸಿ ದೀಪಗಳಿಂದ ಅಲಂಕರಿಸಿ, ಪ್ರಾರ್ಥನೆ ಸಲ್ಲಿಸಿ, ಸಿಹಿ ತಿನಿಸುಗಳನ್ನು ಮೆಲ್ಲುತ್ತ ಮನೆಮಂದಿಗಳೊಂದಿಗೆ ಸಂತಸದಿಂದ ಆಚರಿಸಲಾಗುತ್ತದೆ.ಆದರೆ ಈ ಆಚರಣೆಗಳು ಕೇವಲ ಇಷ್ಟಕ್ಕೆ ಸೀಮಿತವಲ್ಲ. ಧಾರ್ಮಿಕ, ವೈಚಾರಿಕ, ಸಾಮಾಜಿಕವಾಗಿ ಈ ಆಚಾರಣೆಗಳು ಮಹತ್ವದ್ದಾಗಿದ್ದು, ಇದಕ್ಕೂ ಮೀರಿದ ಆರೋಗ್ಯದ ತತ್ವಗಳನ್ನು ನಮ್ಮ ಆಚರಣೆಗಳಲ್ಲಿ ಬೆಸೆಯಲಾಗಿದೆ. ಕಾಲಕ್ಕೆ ಅನುಗುಣವಾಗಿ, ದೇಹಕ್ಕೆ ಅಗತ್ಯವಿರುವ ಆಹಾರ, ಆಚಾರ ಹಾಗೂ ವಿಹಾರ(ಮಾಡ ಬೇಕಾಗಿರುವ ಕಾರ್ಯಗಳನ್ನು), ಆಯುರ್ವೇದದ ಮೂಲ ಸಿದ್ದಾಂತಗಳನ್ನು ಆಚರಣೆಗಳ ರೂಪದಲ್ಲಿ ಅಳವಡಿಸಲಾಗಿದೆ.

ದೀಪಾವಳಿ ಹಬ್ಬ ಆಚರಣೆ

ನಿರಂತರವಾಗಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಆಚರಣೆಯ ರೂಪದಲ್ಲಿ ಅಗತ್ಯ ಆರೋಗ್ಯದ ಸೂತ್ರಗಳನ್ನು ಅಳವಡಿಸಲಾಗಿದೆ.ಐದು ದಿನಗಳ ಆಚರಣೆಯಾದ ದೀಪಾವಳಿಯು ಅಶ್ವಿನಿ ಮಾಸದ ಕೃಷ್ಣ ಪಕ್ಷದ 13ನೇ ದಿನ ಪ್ರಾರಂಭವಾಗಿ ಕಾರ್ತಿಕ ಮಾಸದ ಶುಕ್ಲಪಕ್ಷದ ಎರಡನೆಯ ದಿನ ಮುಕ್ತಾಯಗೊಳ್ಳುತ್ತದೆ. ಈ ದಿನಗಳಲ್ಲಿ ಅಂದರೆ ಅಶ್ವಿನಿ ಮಾಸದ ಕೊನೆ ಹಾಗೂ ಕಾರ್ತಿಕ ಮಾಸದ ಪ್ರಾರಂಭದ ದಿನಗಳು, ಒಂದು ಮಾಸದಿಂದ ಮತ್ತೊಂದು ಮಾಸ ಪ್ರಾರಂಭವಾಗುವ ಸಂಧಿಕಾಲವಾಗಿದ್ದು, ಹವಾಮಾನದಲ್ಲಿ ಮಹತ್ತರವಾದ ಬದಲಾವಣೆಯಾಗುತ್ತದೆ. ವಾತಾವರಣದಲ್ಲಿ ಶೀತ, ಗಾಳಿ ಹಾಗೂ ವಣ ಹವಾಮಾನ ಪ್ರಾರಂಭವಾಗುತ್ತದೆ. ಆದ್ದರಿಂದ ಈ ಕಾಲದಲ್ಲಿ ಕ್ರಮೇಣ ವಾತವು ಹೆಚ್ಚಾಗುತ್ತದೆ.

ಈ ಬದಲಾದ ಹವಾಗುಣಗಳು ಮಾನವನ ಶರೀರದಲ್ಲೂ, ಮನಸಿನಲ್ಲೂ ಸಮಾನಾಂತರ ಗುಣಗಳನ್ನು ಹೆಚ್ಚಿಸುತ್ತದೆ ಮತ್ತು ಸಮತೋಲಿತ ದೇಹದ ವಾತವನ್ನು ಏರುಪೇರುಗೊಳಿಸುತ್ತದೆ.ಆದ್ದರಿಂದ ದೀಪಾವಳಿಯ ಎಲ್ಲಾ ಆಚರಣೆ, ಸಂಪ್ರದಾಯಗಳು ವಾತ ದೋಷವನ್ನು ಶಮನ ಮಾಡಿ, ದೇಹದಲ್ಲಿನ ವೈಪರೀತ್ಯಗಳನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಅಳವಡಿಸಲಾಗಿದೆ. ಸಾಂಪ್ರದಾಯಿಕವಾಗಿ ದೀಪಾವಳಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಎಣ್ಣೆ ಅಭ್ಯಂಜನ ಮಾಡಿ, ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ತೊಟ್ಟು, ಪೂಜಾ ಪ್ರಾರ್ಥನೆ ಮಾಡಿ, ಸಂಜೆ ಎಳ್ಳಿನ ದೀಪ ಹಚ್ಚಿ, ಮನೆ ಮಂದಿಯೊಂದಿಗೆ ಸಿಹಿ ಊಟವನ್ನು ಮಾಡಿ ಆಚರಿಸಲಾಗುವುದು.

ಬ್ರಹ್ಮ ಮುಹೂರ್ತದಲ್ಲಿ ಏಳುವುದು :

ಆಯುರ್ವೇದವು ಬ್ರಹ್ಮ ಮುಹೂರ್ತದಲ್ಲಿ ಏಳಲು ನಿರ್ದೇಶಿಸುತ್ತದೆ, ಬ್ರಹ್ಮಮುಹೂರ್ತವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದರೂ, ಅಂದಾಜು ಸೂರ್ಯೋದಯಕ್ಕೆ ಮುಂಚಿನ 2 ಮುಹೂರ್ತ ಅಂದರೆ ಸೂರ್ಯೋದಯಕ್ಕೆ ಮುಂಚಿನ 1:30 ಗಂಟೆಯ ಕಾಲವನ್ನು ಬ್ರಹ್ಮಮುಹೂರ್ತ ಎನ್ನಲಾಗುವುದು. ಈ ಕಾಲದಲ್ಲಿ ಸಾತ್ವಿಕ ಶಕ್ತಿಯು ಪ್ರಕೃತಿಯಲ್ಲಿ ಅತ್ಯಧಿಕವಾಗಿರುವುದರಿಂದ ಮೈ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿ ಶಾಂತ ಚಿತ್ತದಲ್ಲಿರಿಸುತ್ತದೆ. ಈ ಕಾಲದಲ್ಲಿ ಮಲ, ಮೂತ್ರವನ್ನು ವಿಸರ್ಜನೆಗೆ ಸಹಕರಿಸುವ ಅಪಾನ ವಾಯುವು ಚುರುಕುಗೊಂಡು, ಪ್ರಾಕೃತವಾಗಿ ದೇಹದಿಂದ ಹೊರಹಾಕುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕ ಸಿದ್ದಿಗೆ ಇದು ಬಹಳ ಪ್ರಶಸ್ತವಾದ ಸಮಯವಾಗಿದೆ.

ಅಭ್ಯಂಜನ :

ಔಷಧೀಯ ಗಿಡಮೂಲಿಕೆ ಹಾಗು ಎಳ್ಳೆಣ್ಣೆಯಿಂದ ಸಂಸ್ಕಾರಿತವಾಗಿರುವ ತೈಲಗಳನ್ನು ಬಿಸಿ ಮಾಡಿ, ನಿಯಮದಂತೆ ದೇಹಕ್ಕೆ ಅಭ್ಯಂಜನ ಮಾಡಲು ತಿಳಿಸಲಾಗಿದೆ. ಎಳ್ಳಿನಲ್ಲಿ ಹೇರಳವಾಗಿ ಸ್ನಿಗ್ದ ಹಾಗೂ ಉಷ್ಣ ಗುಣಗಳಿರುವುದರಿಂದ ಇದರೊಂದಿಗೆ ಸಂಸ್ಕಾರಿತ ಗಿಡಮೂಲಿಕೆಯ ತೈಲವು ವಿಶೇಷ ಆರೋಗ್ಯದ ಲಾಭವನ್ನು ನೀಡುತ್ತದೆ. ವಾತ ದೋಷದ ಶೀತ ಹಾಗೂ ಒರಟುತನ ಕಡಿಮೆಗೊಳಿಸುವುದು, ಮನಸ್ಸಿನಲ್ಲಿ ನ ಒತ್ತಡವನ್ನು ಕಡಿಮೆಗೊಳಿಸಿ, ನರಮಂಡಲವನ್ನು ಶಾಂತಗೊಳಿಸಿ, ನಿದ್ರೆಯನ್ನು ವೃದ್ದಿಸುತ್ತದೆ. ದೇಹಕ್ಕೆ ಪುಷ್ಠಿ ಹಾಗೂ ತ್ವಚೆಗೆ ಕಾಂತಿಯನ್ನು ನೀಡುತ್ತದೆ.

ಬಿಸಿ ನೀರಿನ ಸ್ನಾನ :

ಅಭ್ಯಂಜನದ ನಂತರ ಬಿಸಿ ನೀರಿನ ಸ್ನಾನ ಉತ್ತಮ. ಬಿಸಿ ನೀರಿನ ಸ್ನಾನವು ದೇಹದ ರಕ್ತ ಸಂಚಾರವನ್ನು ವೃದ್ದಿಸಿ, ದೇಹದ ದಣಿವು, ಆಯಾಸ ಕಡಿಮೆಗೊಳಿಸಿ, ಹಸಿವು, ಜೀರ್ಣಶಕ್ತಿಯನ್ನು ವೃದ್ದಿಸುತ್ತದೆ.ಸ್ನಾನಕ್ಕೆ ಔಷಧೀಯ ಚೂರ್ಣಗಳನ್ನು ಸಾಬೂನಿನ ಬದಲಾಗಿ ಬಳಸುವುದರಿಂದ ಚರ್ಮದ ಪ್ರಾಕೃತಿಕ ತೇವಾಂಶವನ್ನು ಕಾಯ್ದಿರಿಸಿ, ಚರ್ಮವನ್ನು ಶುದ್ದಗೊಳಿಸಿ, ಚರ್ಮಕ್ಕೆ ನವ ಚೈತನ್ಯವನ್ನು ನೀಡುತ್ತದೆ.

ವಿಶೇಷ ಆಹಾರಗಳು :

ದೀಪಾವಳಿಯ ವಿಶೇಷ ಸಿಹಿ ತಿನಿಸುಗಳು ಸಹ ಆಯುರ್ವೇದ ತತ್ವಗಳ ಅನುಗುಣವಾಗಿದೆ. ದೀಪಾವಳಿಯಲ್ಲಿ ಸಿಹಿ ಪದಾರ್ಥಗಳು, ಕರಿದ ತಿಂಡಿಗಳನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ತೆಂಗಿನಕಾಯಿ, ಅಕ್ಕಿ, ಬೆಲ್ಲ, ಎಳ್ಳು, ತುಪ್ಪ, ಕಡಲೆ ಹಿಟ್ಟು, ಹಾಲು ಮುಂತಾದ ಪದಾರ್ಥಗಳಿಂದ ತಯಾರಿಸಿದ ಅತಿರಸ(ಕಜ್ಜಾಯ), ಪರಮಾನ್ನ, ಪಾಯಸ, ಹಾಗು ಕರಿದ ಪದಾರ್ಥಗಳು ವಿಶೇಷವಾಗಿ ಸ್ನಿಗ್ದ(ಜಿಡ್ಡು) ಗುಣ ಹೊಂದಿದ್ದು, ದೇಹ ಹಾಗು ವಾತಾವರಣದಲ್ಲಿ ಹೆಚ್ಚಿರುವ ರೂಕ್ಷತೆಯನ್ನು ಕಡಿಮೆಗೊಳಿಸಿ ಅಗತ್ಯ ಸ್ನಿಗ್ದಾಂಶವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಆಯುರ್ವೇದವು ಈ ಕಾಲದಲ್ಲಿ ಸಿಹಿ, ಹುಳಿ, ಉಷ್ಣ(ಬಿಸಿ) ಹಾಗೂ ಸ್ನಿಗ್ದ ಪದಾರ್ಥಗಳನ್ನು ಸೇವಿಸಲು ತಿಳಿಸುತ್ತದೆ.

ದೀಪಾವಳಿ ಲೇಹ್ಯ :

ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ದೀಪಾವಳಿ ಹಬ್ಬದಂದು ಔಷಧೀಯ ಮೂಲಿಕೆಗಳಿಂದ ತಯಾರಿಸಿದ ವಿಶೇಷವಾದ ಲೇಹ್ಯವನ್ನು ಸೇವಿಸುವ ಪದ್ದತಿ ಇದೆ. ಈ ಲೇಹ್ಯವನ್ನು ದೀಪಾವಳಿ ಲೇಹ್ಯವೆಂದು ಹೇಳಲಾಗುವುದು. ಒಣಶುಂಠಿ, ಕಾಳು ಮೆಣಸು, ಜೀರಿಗೆ, ಧನಿಯ, ಹಿಪ್ಪಳಿ, ಬೆಳ್ಳುಳ್ಳಿ, ಜಾಯಿಕಾಯಿ, ತುಪ್ಪದಿಂದ ತಯಾರಿಸಿದ ಲೇಹ್ಯವನ್ನು ಹಬ್ಬದ ದಿನ ಎಣ್ಣೆ ಸ್ನಾನದ ನಂತರ ಸೇವಿಸಲಾಗುವುದು. ಋತಗಳ ಬದಲಾವಣೆಯ ಈ ಕಾಲದಲ್ಲಿ ಶೀತ ಪ್ರಾರಂಭವಾಗುವುದರಿಂದ, ಹಲವು ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗುವುದು ಮತ್ತು ಜೀರ್ಣ ಶಕ್ತಿ ಕಡಿಮೆಯಾಗುವುದು. ಆದ್ದರಿಂದ ಈ ಲೇಹ್ಯದ ಸೇವನೆಯನ್ನು ಸಂಪ್ರದಾಯವಾಗಿ ಸೇವಿಸಲು ತಿಳಿಸಲಾಗಿದೆ. ಈ ಲೇಹ್ಯದ ಸೇವನೆಯಿಂದ ಹಲವು ರೋಗಗಳ ಉತ್ಪತ್ತಿಯನ್ನು ತಡೆಗಟ್ಟಬಹುದು. ವ್ಯಾಧಿನಿರೋಧಕ ಶಕ್ತಿ, ಬಾಯಿ ರುಚಿ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಜೀರ್ಣ, ಉದರ ವಿಕಾರಗಳನ್ನು ನಿವಾರಿಸುತ್ತದೆ. ಅಲ್ಲದೆ ದೀಪಾವಳಿಯ ಹಬ್ಬದಂದು ಅತಿಯಾಗಿ ಸೇವಿಸಿದ ಆಹಾರವನ್ನು ಸುಲಭವಾಗಿ ಜೀರ್ಣಿಸಲು ಸಹಕಾರಿಯಾಗುತ್ತದೆ.

ದೀಪ ಹಚ್ಚುವುದು :

ದೀಪ ಹಚ್ಚುವುದು ದೀಪಾವಳಿ ಹಬದ ವಿಶೇಷ. ಬೆಳಕು ಶುದ್ದತೆ, ಶುಭ, ಜ್ನಾನ ಹಾಗೂ ಶಕ್ತಿಯ ಸಂಕೇತ. ಹಾಗಾಗಿ ಅಂಧಕಾರ ಹಾಗೂ ಅಜ್ನಾನದ ವಿರುದ್ದ ಬೆಳಕು ಎಂಬ ಜ್ನಾನವನ್ನು ಹಚ್ಚುವುದು ಇದರ ಮಹತ್ವ. ಉತ್ತರ ಭಾರತದಲ್ಲಿ ಶ್ರೀರಾಮನು ವಿಜಯಸಾಧಿಸಿ ಅಯೋಧ್ಯಯನ್ನು ಅಮಾವಾಸ್ಯೆಯ ದಿನ ತಲುಪಿದರಿಂದ ದೀಪ ಹಚ್ಚುವುದರ ಮೂಲಕ ಜನರು ಸಂಭ್ರಮದಿಂದ ಆಚರಿಸಿದರು ಎನ್ನಲಾಗುವುದು.ಅಮಾವಾಸ್ಯೆಯ ದಿನ ಬೆಳಕಿಲ್ಲದಿರುವುದರಿಂದ, ಮತ್ತು ವಾತಾವರಣದಲ್ಲಿ ಈ ಕಾಲದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುವುದರಿಂದ, ಚಳಿಗಾಲ ಪ್ರಾರಂಭವಾಗುವುದರಿಂದ ಪ್ರತಿ ಮನೆಯ ಹೊರಗೆ, ಸುತ್ತಲು ದೀಪಗಳನ್ನು ಹಚ್ಚಲಾಗುವುದು. ವಿಶೇಷವಾಗಿ ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಕಲುಶಿತ ವಾತಾವರಣಾವನ್ನು ಶುದ್ದಗೊಳಿಸಿ, ಪರಿಸರವನ್ನು ಬೆಚ್ಚಗಿರಿಸುತ್ತದೆ.

ದೇಹದ ಬಾಹ್ಯಶುದ್ದಿಯನ್ನು ಸ್ನಾನ, ಅಭ್ಯಂಜನದಿಂದ ಮಾಡಿದರೆ, ನಿರಂತರವಾಗಿ ಅನಗತ್ಯ ಟಾಕ್ಸಿನ್ಸ್, ನಕಾರತ್ಮಕ ಭಾವನೆಗಳು ಹಾಗೂ ಮಾನಸಿಕ ಒತ್ತಡದಿಂದ ಕೂಡಿದ ದೇಹ, ಮನಸ್ಸು, ಇಂದ್ರೆಯ ಹಾಗೂ ಭಾವನೆಗಳನ್ನು ಶುದ್ದಿಗೊಳಿಸಲು ಪಂಚಕರ್ಮ ಚಿಕಿತ್ಸೆಯನ್ನು ಈ ಕಾಲದಲ್ಲಿ ಆಯುರ್ವೇದ ತಿಳಿಸುತ್ತದೆ.

Also Read: ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು?

ಓಡುವ ಜೀವನದ ಹಂತದಲ್ಲಿ, ದೇಹ ಇಂದ್ರಿಯಗಳನ್ನು ಶುದ್ದಿಸಿಕೊಳ್ಳುವುದಿಲ್ಲ. ಮನಸ್ಸು ಮಾನಸಿಕ ಒತ್ತಡ, ದುಗುಡ, ನಕಾರಾತ್ಮಕ ಆಲೋಚನೆಗಳಿಂದ ಅತಿಯಾಗಿ ಪ್ರಚೋದಿತವಾಗಿರುತ್ತದೆ. ದೇಹ, ಮನಸ್ಸು ಶುದ್ದವಿಲ್ಲದೆ ಚಿತ್ತ ಅಥವಾ ಆತ್ಮಶುದ್ದಿ ಸಾಧ್ಯವಿಲ್ಲ. ಆರೋಗ್ಯವಂತರಾಗಿರಲು ಆಧ್ಯಾತ್ಮಿಕ ಶಕ್ತಿ ಅವಶ್ಯ. ಆದ್ದರಿಂದ ಹಬ್ಬದ ದಿನದಂದು ಪೂಜೆ, ಮಂತ್ರ, ಜಪ, ಪ್ರವಚನ ಹಾಗು ಆಧ್ಯಾತ್ಮ ಚಿಂತನೆಯಿಂದ ಮಾನಸಿಕ ಶಾಂತಿಯನ್ನು, ಆಧ್ಯಾತ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತ ಪರಿಪೂರ್ಣ ಆರೋಗ್ಯದ ಲಾಭವನ್ನು ಪಡೆಯಬಹುದು.

Dr-Mahesh-Sharma-

ಡಾ. ಮಹೇಶ್ ಶರ್ಮಾ. ಎಂ
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್‍ ಆಫ್‍ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರುರಸ್ತೆ,
ಬೆಂಗಳೂರು – 560074
Mob: 99640 22654 Ph: 08022718025
Email: drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!