ಕೊರೋನಾ ನಿವಾರಣೆ- ಮನುಷ್ಯ ಪ್ರಯತ್ನವೇ? ದೇವರ ನಂಬಿಕೆಯೇ?

ಕೊರೋನಾ ನಿವಾರಣೆ- ಮನುಷ್ಯ ಪ್ರಯತ್ನವೇ? ದೇವರ ನಂಬಿಕೆಯೇ? ಕೊರೋನ ಬಂದಾಗ “ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ, ಯಾವ ಜಾಗೃತೆಯ ಅಗತ್ಯವೂ ಇಲ್ಲ, ಎಲ್ಲದಕ್ಕೂ ದೇವರಿದ್ದಾನೆ” ಎಂದು ಯಾವ ಗುರುಗಳಾದರು ಹೇಳಿದರೆ ಅದು ಮಕ್ಕಳ ಕೈಯಲ್ಲಿ ಚಾಕುವನ್ನು ಕೊಟ್ಟು, ದೇವರಿದ್ದಾನೆ ಎಂದು ಹೇಳಿದ ಹಾಗೆ.

corona-nivarane.jಎಲ್ಲವನ್ನು ದೇವರಿಗೆ ಬಿಟ್ಟ ಮೇಲೆ ನಾವೇಕೆ ಹೆಣಗಾಡಬೇಕು? ದೇವರನ್ನು ನಂಬಿದ ಮೇಲೆ ನಾವೇಕೆ ಪ್ರಯತ್ನಿಸಬೇಕು? ನಾವೇ ಹೆಣಗಾಡಿದರೆ, ದೇವರ ಮೇಲಿನ ನಮ್ಮ ನಂಬಿಕೆಯನ್ನು ಪ್ರಶ್ನಿಸಲ್ಪಡುವುದಿಲ್ಲವೇ? ಇದು ಒಂದು ದ್ವಂದ್ವ. ಒಂದು ರೀತಿಯಲ್ಲಿ ಸಮಾಜದ ಒಳಗೆ ಅಡಗಿದ ಅಂತರಂಗದ ಸಂಘರ್ಷ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಒಂದು ರೀತಿಯ ಧರ್ಮಸಂಕಟ. ಲೋಕದ ಕಾನೂನನ್ನು ಪಾಲಿಸಬೇಕೆಂದು ಹೇಳುವವನು ಮತ್ತೊಬ್ಬನ ದೇವರ ಮೇಲಿನ ನಂಬಿಕೆಯನ್ನು, ಅವನ ಪ್ರಾರ್ಥನೆಯ ಪ್ರಾಮಾಣಿಕತೆಯನ್ನು ಅಲ್ಲಗಳೆದಂತೆ ಆಗುವುದೇ? ಇದನ್ನು ನಿರ್ಣಯಿಸುವುದು ಹೇಗೆ ಎಂಬುದಕ್ಕೆ ನಮ್ಮ ಪರಂಪರೆಯಲ್ಲಿ ದೃಷ್ಟಾಂತವನ್ನು ಹೇಳಲಾಗಿದೆ.

ಒಮ್ಮೆ ಒಂದು ಮದ ಬಂದ ಆನೆ ಬೀದಿಯಲ್ಲಿ ರೋಷಾವೇಷದಿಂದ ಓಡಾಡುತ್ತಿತ್ತು. ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರು ಮದ ಬಂದ ಆನೆ ನಿಯಂತ್ರಣಕ್ಕೆ ಬರಲಿಲ್ಲ. ಆನೆಯ ಮಾವುತನಿಗೂ ನಿಯಂತ್ರಿಸುವುದು ಅಸಾಧ್ಯ ಎಂದು ತಿಳಿದಾಗ ಊರಿನ ರಾಜನಿಗೂ ಗಾಬರಿಯಾಗಿ ಸೈನಿಕರನ್ನೆಲ್ಲಾ ಕರೆಸಿ ಪ್ರಯತ್ನಿಸಿದ. ಆದರೂ ಆನೆ ಜಗ್ಗಲಿಲ್ಲ. ಆಗ ಒಬ್ಬಳು ತಾಯಿ ತನ್ನ ಸಣ್ಣ ಶಿಶುವನ್ನು ತಂದು ಆನೆಯ ಮುಂದೆ ನಿಂತಳು. ಆನೆ ಶಾಂತವಾಯಿತು. ಅಂತರಂಗದ ಶುದ್ಧತೆ, ಮಗುವಿನ ಮುಗ್ಧತೆ ಆನೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಆದರೆ ಮಕ್ಕಳಾಟಿಕೆ ಅಲ್ಲ., ಮಗುವಿನ ಅಂತಾದರೆ ಮಾತ್ರ ಇದು ಸಾಧ್ಯ. ತಾನು ಮಗುವೆಂದು ಹೇಳುವವರಿಂದ ಅಲ್ಲ.

ಮಗುವಿನಂತಹ ಮನಸ್ಸು ಉಳ್ಳವರೆಂದು ತಿಳಿದುಕೊಂಡವರಿಂದಲೂ ಅಲ್ಲ. ಅಂತಹ ಅದ್ಭುತ ಪರಿಣಾಮವನ್ನು ನಿರೀಕ್ಷಿಸುವವರು ವ್ಯಾವಹಾರಿಕ ಸತ್ತೆಯನ್ನು ಮೀರಿದವರು ಆಗಿರಬೇಕು, ಅಂದರೆ ಒಂದು ಅ‌ರ್ಥದಲ್ಲಿ ಮಹಾತ್ಮರು ಆಗಿರಬೇಕು. ಆದಕಾರಣ ಮನುಷ್ಯ ಪ್ರಯತ್ನ ಬೇಡ, ದೈವಾನುಗ್ರಹವನ್ನು ನಂಬಿದ್ದೇವೆ ಎನ್ನುವವರು ತಾವು ಮಹಾತ್ಮರ ಮಟ್ಟಕ್ಕೆ ಏರಿದ್ದೇವೆಯೇ ಎಂದು ಎದೆ ಮುಟ್ಟಿ ನೋಡಿಕೊಳ್ಳಬೇಕು. ಯಾಂತ್ರಿಕವಾದ ಅಂದ ಅನುಕರಣೆಗಳು ಯಾವತ್ತೂ ಪರಿಣಾಮ ನೀಡಲಾರದು.

ಇನ್ನೊಂದು ದೃಷ್ಟಾಂತ ಹೇಳಬೇಕೆಂದರೆ, ಮದ ಬಂದ ಆನೆಯೊಂದು ಮಾರ್ಗದಲ್ಲಿ ತನ್ನ ಕೇಡನ್ನು ಪ್ರದರ್ಶಿಸುತ್ತಾ ಮುಂದುವರಿಯುತ್ತಿತ್ತು. ಆಗ ಗುರುಗಳ ಶಿಷ್ಯನೊಬ್ಬ ಆ ದಾರಿಯಾಗಿ ಬಂದ. ಆನೆಯ ಮಾವುತ ಆ ಶಿಷ್ಯನನ್ನು ದೂರ ಓಡಲು ಸೂಚಿಸಿದ. ಆದರೆ ಶಿಷ್ಯನಿಗೆ ಆ ಸಂದರ್ಭಕ್ಕೆ ಸರಿಯಾಗಿ “ಎಲ್ಲರಲ್ಲೂ ದೇವರಿದ್ದಾನೆ ” ಎಂದು ಗುರುಗಳು ಹೇಳಿದ ಉಪದೇಶ ನೆನಪಾಯಿತು. ಆದಕಾರಣ ಮಾವುತನ ಮಾತಿಗೆ ಕಿವಿಗೊಡದೆ, ಆನೆಯಲ್ಲೂ ದೇವರಿದ್ದಾನೆ ಎಂಬ ನಂಬಿಕೆಯಿಂದ ದೂರ ಸರಿಯದೆ, ಆನೆಗೆ ಎದುರಾಗಿ ನಿಂತುಕೊಂಡ.

ಆನೆ ಆ ಶಿಷ್ಯನನ್ನು ಸೊಂಡಿಲಿನಿಂದ ತಿರುವಿ ಎತ್ತಿ ಬಿಸುಟ ಕಾರಣದಿಂದ ಶಿಷ್ಯನ ಅಂಗಾಂಗಗಳಿಗೆ ಗಾಯವಾಯಿತು. ತೀವ್ರ ವೇದನೆಯಿಂದ ಆ ಶಿಷ್ಯನು ಗುರುಗಳ ಬಳಿ ಬಂದು” ಗುರುಗಳೇ ನಿಮ್ಮ ಉಪದೇಶವನ್ನು ನಂಬಿ, ಅದನ್ನು ಜಾರಿಗೆ ತಂದು ನಾನು ಕೆಟ್ಟೆ” ಎಂದಾಗ ಗುರುಗಳು ಕೇಳಿದರಂತೆ-” ಅಯ್ಯಾ ಶಿಷ್ಯನೇ, ಆನೆಯ ಮೇಲೆ ಇದ್ದ ಮಾವುತನ ಒಳಗಿದ್ದ ದೇವರು ದೂರ ಹೋಗು ಎಂದ ಮಾತನ್ನು ನೀನು ಏಕೆ ಕೇಳಲಿಲ್ಲ?” ಎಂದಾಗ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯಿತು.

ದೇವರ ಮೇಲಿನ ನಂಬಿಕೆ ಪ್ರಮಾದಕ್ಕೆ ಕಾರಣವಾಗಬಾರದು:

nature-and-coronaಅಂದರೆ ಧಾರ್ಮಿಕವಾದ, ತಾತ್ವಿಕವಾದ ಸಂಗತಿಗಳನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರುವಾಗ ಅನುಸರಿಸಬೇಕಾದ ಪ್ರಾಥಮಿಕ ಪಾಠವೇನು ಎಂಬುದನ್ನು ಇದು ಒತ್ತಿಹೇಳುತ್ತದೆ. ಮೊದಲಿಗೆ ನಾನು ಎಲ್ಲಿದ್ದೇನೆ, ನನ್ನ ಇತಿಮಿತಿಯ ಅರಿವು ಇತ್ಯಾದಿಗಳ ಸ್ಪಷ್ಟ ಕಲ್ಪನೆ ಇರುವುದು ಅತ್ಯಗತ್ಯ. ಮಹಾತ್ಮರು ಮಾಡಿದ್ದನ್ನು ನಾವು ಅನುಕರಿಸಿದರೆ ನವಿಲನ್ನು ಕಂಡು ಕೆಂಬೂತ ಕುಣಿದಂತೆ ಆಗುತ್ತದೆ.

ಪ್ರಾರ್ಥನೆ ಮಾಡಿದರೆ ಪರಿಣಾಮ ಆಗುತ್ತದೆ ನಿಜ. ಆದರೆ ಆ ಪ್ರಾರ್ಥನೆ ಹೇಗಿರಬೇಕು? ಅಂತರಂಗ ಎಷ್ಟು ಶುದ್ಧವಾಗಿರಬೇಕು? ಮನಸ್ಸಿನ ಸ್ಥಿತಿಗತಿಗಳು ನಮ್ಮಲ್ಲಿ ಇರುವ ಮೌಲ್ಯಗಳು ಆ ಮಟ್ಟದಲ್ಲಿ ಇವೆಯೇ? ಇವೆಲ್ಲದರ ಸ್ವಪ್ರಜ್ಞೆಯನ್ನು ಇಟ್ಟುಕೊಂಡು ಕೃತಿಗೆ ಇಳಿಯಬೇಕಾಗುತ್ತದೆ. ವಾಹನವನ್ನು ರಸ್ತೆಗೆ ಇಳಿಸುವಾಗ ರಸ್ತೆಯ ನಿಯಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಆಚರಿಸಬೇಕಾಗುತ್ತದೆ. ಜಗತ್ತು ಭಗವಂತನದೇ ಸೃಷ್ಟಿ ಆದುದರಿಂದ, ಜಗತ್ತಿನ ನಿಯಮಗಳಿಗೆ ಭಗವಂತನು ಕೂಡ ಬೆಲೆ ಕೊಡುತ್ತಾನೆ ಎಂಬುದು ಸತ್ಯ.

ದೇವರ ಮೇಲಿನ ನಂಬಿಕೆಯು ನಮ್ಮ ಆಲಸ್ಯ, ಅಸಡ್ಡೆ, ಪ್ರಮಾದಕ್ಕೆ ಕಾರಣವಾಗಬಾರದು ಎಂಬ ಉದ್ದೇಶವನ್ನು ಹೇಳುವಾಗ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಒಂದು ಘಟನೆ ನೆನಪಾಗುತ್ತದೆ. ಪ್ರವಾದಿಗಳು ಹೀಗೆ ಯಾತ್ರೆ ಹೋಗಬೇಕಿದ್ದರೆ ಒಂದು ದೃಶ್ಯ ಎದುರಾಗುತ್ತದೆ. ಒಂಟೆಯ ಮಾಲೀಕನೊಬ್ಬ ಒಂಟೆಯನ್ನು ಕಂಬಕ್ಕೆ ಕಟ್ಟದೆ ಮೇಯಲು ಬಿಟ್ಟು ಆಗಾಗ ಆತಂಕಕ್ಕೆ ಒಳಗಾಗುತ್ತಾ, ಒಂಟೆ ತಪ್ಪಿಸಿಕೊಳ್ಳುತ್ತದೆ ಎಂಬ ಸಂಶಯದಿಂದ ಮತ್ತೆ ಮತ್ತೆ ಒಂಟೆಯನ್ನು ನಿರುಕಿಸುತ್ತಾ ಇರುತ್ತಾನೆ. ಅದೇ ಸಂದರ್ಭ ಆ ದಾರಿಯಾಗಿ ಬಂದ ಪ್ರವಾದಿಗಳು ಈತನ ಆತಂಕವನ್ನು ಗುರುತಿಸಿ ವಿಷಯವೇನೆಂದು ಕೇಳುತ್ತಾರೆ.

ಆಗ ಆತನು ತನ್ನ ಒತ್ತಡವನ್ನು ತಿಳಿಸಿದಾಗ ಪೈಗಂಬರರು-” ಒಂಟೆಯನ್ನು ಏಕೆ ಕಟ್ಟಲಿಲ್ಲ?” ಎಂಬುದಾಗಿ ಕೇಳುತ್ತಾರೆ. ಅದಕ್ಕೆ ಆತನು-” ನಾನು ಎಲ್ಲವನ್ನು ದೇವರಾದ ಅಲ್ಲಾಹುವಿಗೆ ಬಿಟ್ಟಿದ್ದೇನೆ, ಅಲ್ಲಾನನ್ನು ನಂಬಿದ್ದೇನೆ” ಎಂದಾಗ ಪೈಗಂಬರರು ನಕ್ಕು ನುಡಿದರಂತೆ-” ಅಯ್ಯಾ ಪುಣ್ಯಾತ್ಮ, ಮೊದಲು ಒಂಟೆಯನ್ನು ಹಗ್ಗದಿಂದ ಕಂಬಕ್ಕೆ ಕಟ್ಟು, ನಂತರ ಅಲ್ಲಾನನ್ನು ನಂಬು” ಎಂಬುದಾಗಿ ತಿಳಿಸುತ್ತಾರೆ. ಮನುಷ್ಯ ಪ್ರಯತ್ನ ಮಾಡದೆ, ಕರ್ತವ್ಯಲೋಪ ಮಾಡಿ, ಜಗತ್ತಿನ ನಿಯಮಗಳನ್ನು ಮುರಿದು, ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ ಎನ್ನುವುದರ ಹಿಂದಿನ ಮೌಢ್ಯವನ್ನು ಇಲ್ಲಿ ಪೈಗಂಬರರು ಆತನಿಗೆ ಎತ್ತಿ ತೋರಿಸಿದ್ದಾರೆ.

ಕೊರೋನಾ -ನಾವು ಏನು ಮಾಡಬೇಕು?

mufti-ismail-menk
ಮುಫ್ತಿ ಇಸ್ಮಾಯಿಲ್ ಮೆಂಕ್

ಬಂಧುಗಳೇ, ಕೊರೋನಾ ಪೀಡೆ ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು? ಸರಕಾರ, ಆರೋಗ್ಯ ಇಲಾಖೆ, ವೈದ್ಯರುಗಳು ಸೂಚಿಸಿದ ಯಾವ ಯಾವ ನಿಯಮಗಳನ್ನು ಪಾಲಿಸಬೇಕು? ಎಂಬುದರ ಕುರಿತಾಗಿ ನಾವು ಎಷ್ಟು ಕಾಳಜಿ ವಹಿಸಬೇಕು ಎಂಬುದು ಈ ದೃಷ್ಟಾಂತ ಗಳಿಂದ ನಿಮಗೆ ಅರ್ಥವಾಗಿರಬೇಕಲ್ಲ? ಇತ್ತೀಚೆಗೆ ಜಾಲತಾಣದಲ್ಲಿ ನನ್ನ ಸ್ನೇಹಿತರೊಬ್ಬರು ಪೋಸ್ಟ್ ಕಳುಹಿಸಿದ್ದರು. ಅದರಲ್ಲಿ ಮುಫ್ತಿ ಇಸ್ಮಾಯಿಲ್ ಮೆಂಕ್ ಎಂಬ ಇಸ್ಲಾಂ ಗುರುಗಳೊಬ್ಬರು ಬಹಳ ಸ್ಪಷ್ಟವಾದ ಹಾಗೂ ಮಾರ್ಮಿಕವಾದ ಅವರ ಬಾಲ್ಯದ ಒಂದು ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಾರೆ.

ಅವರು ವಾಸಿಸುತ್ತಿದ್ದ ಹಜ್ ಪ್ರದೇಶದಲ್ಲಿ, ಒಂದಷ್ಟು ಮೈಲುದೂರಗಳ ಅಂತರದಲ್ಲಿ ಅನಿಲ ಸೋರಿಕೆ ಉಂಟಾಗಿ ಅದರ ಅಪಾಯವು ಎಲ್ಲಾ ಕಡೆ ವ್ಯಾಪಿಸುವ ಸಂದರ್ಭ. ಅಗ್ನಿಶಾಮಕದಳದವರು ಹಾಗೂ ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಇಲ್ಲಿದ್ದ ಜನರು ಊರನ್ನು ಬಿಡಬೇಕು ಎಂದು ಸೂಚಿಸಿದರು. ಆದರೆ ಒಬ್ಬರು ಇಸ್ಲಾಂ ವಿದ್ವಾಂಸರು-” ಯಾರು ಊರು ಬಿಡುವ ಅಗತ್ಯವಿಲ್ಲ. ನಿಮಗೆ ಅನಿಲ ಸೋರಿಕೆಯಿಂದ ಉಂಟಾಗುವ ಬೆಂಕಿಯ ಅಪಾಯ ಖಂಡಿತ ತಗಲುವುದಿಲ್ಲ. ಏಕೆಂದರೆ ನೀವು ಪ್ರವಾದಿಗಳ ಸಂದೇಶಗಳನ್ನು ಪಠಣ ಮಾಡುತ್ತೀರಿ ಹಾಗೂ ಅಲ್ಲಾಹುವಿಗಾಗಿ ಕೂಗಿ ಪ್ರಾರ್ಥನೆ ಮಾಡುತ್ತಿದ್ದೀರಿ” ಎಂಬ ಸಂದೇಶ ನೀಡಿದರು. ಅವರನ್ನು ನಂಬಿದ ಕೆಲವರು ಅಲ್ಲೇ ಟೆಂಟ್ ಹಾಕಿಕೊಂಡು ಉಳಿದರು.

ಆದರೆ ಒಂದಷ್ಟು ದಿನಗಳ ಬಳಿಕ ಮರಳಿ  ಜಾಗದ ಬಳಿ ಹೋಗಿ ಗಮನಿಸಿದರೆ ಅವರೆಲ್ಲರೂ ಸುಟ್ಟು ಬೂದಿ ಆಗಿದ್ದರು. ಬೆಂಕಿಯ ಅಪಾಯದಿಂದ ತಪ್ಪಿಸಲು ಊರು ಬಿಟ್ಟು ಹೋಗುವುದಕ್ಕೆ ಅಲ್ಲಾ ನಮಗೆ ಕಾಲುಗಳನ್ನು ಕೊಟ್ಟಿದ್ದಾನೆ ಎಂಬ ರೀತಿಯಲ್ಲಿ ಅರ್ಥೈಸಿಕೊಂಡು ಊರು ಬಿಟ್ಟುಹೋಗುತ್ತಿದ್ದರೆ ಅಷ್ಟು ಜನರು ಬದುಕಿ ಉಳಿಯುತ್ತಿದ್ದರು. ಧರ್ಮಗುರುಗಳ ಧರ್ಮಗ್ರಂಥಗಳ ಮೌಲ್ಯಾತ್ಮಕ ಅನುಸಂಧಾನವಿಲ್ಲದೆ, ತಪ್ಪು ಸಂದೇಶದಿಂದ ಬಹಳಷ್ಟು ಜನರ ಮಾರಣಹೋಮವೇ ನಡೆದುಹೋಯಿತು.

ದೇವರಿದ್ದಾನೆ ಎಂದು ಸಣ್ಣ ಮಕ್ಕಳ ಕೈಯಲ್ಲಿ ನಾವು ಚೂರಿಯನ್ನು ಕೊಡುವುದಿಲ್ಲವಲ್ಲ? ನಮ್ಮ ಜಾಗ್ರತೆಯನ್ನು ನಾವು ಮಾಡಿಯೇ ಮಾಡುತ್ತೇವೆ. ಈಗ ಕೊರೋನ ಬಂದಾಗ “ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ, ಯಾವ ಜಾಗೃತೆಯ ಅಗತ್ಯವೂ ಇಲ್ಲ, ಎಲ್ಲದಕ್ಕೂ ದೇವರಿದ್ದಾನೆ” ಎಂದು ಯಾವ ಗುರುಗಳಾದರು ಹೇಳಿದರೆ ಅದು ಮಕ್ಕಳ ಕೈಯಲ್ಲಿ ಚಾಕುವನ್ನು ಕೊಟ್ಟು, ದೇವರಿದ್ದಾನೆ ಎಂದು ಹೇಳಿದ ಹಾಗೆ. ಕೊರೋನಾ ವೈರಸ್ ಎಂದರೆ ಚೂರಿ ಇದ್ದಂತೆ. ದೇವರ ಮೇಲೆ ನಂಬಿಕೆ ಇದ್ದರೂ , ಚೂರಿಯ ಅಪಾಯದಿಂದ ರಕ್ಷಿಸುವ ಮನುಷ್ಯ ಪ್ರಯತ್ನ, ನಮ್ಮ ಬುದ್ಧಿಯನ್ನು ಉಪಯೋಗಿಸಿ ನಾವು ಮಾಡಿಯೇ ಮಾಡಬೇಕು”.

ಇದು ಮುಫ್ತಿ ಇಸ್ಮಾಯಿಲ್ ಮೆಂಕ್ ಅವರು ಇಂಗ್ಲೀಷಿನಲ್ಲಿ ಕೊಟ್ಟ ಪ್ರವಚನದ ಭಾಷಾಂತರ ಅಥವಾ ಭಾವಾನುವಾದ. ವಿವೇಕವನ್ನು ಬಳಸಿ ಧರ್ಮಗ್ರಂಥಗಳನ್ನು ಅರ್ಥಮಾಡಿಕೊಂಡರೆ ಅಂತಹವರು ಈ ರೀತಿ ವಿಚಾರ ಪೂರ್ಣವಾದ ಹಾಗೂ ಸತ್ಯಕ್ಕೆ ಬೆಲೆ ಕೊಡುವ ಪ್ರಾಯೋಗಿಕವಾದ ಮಾತುಗಳನ್ನು ಆಡುತ್ತಾರೆ ಎಂಬುದಕ್ಕೆ ಸಾಕ್ಷಿ. ಮಹಾತ್ಮರ ಮಾತುಗಳನ್ನು, ಧರ್ಮಗ್ರಂಥಗಳನ್ನು ಅರ್ಥಮಾಡಿಕೊಳ್ಳದೆ ಇದ್ದರೆ ಅಪಾರ್ಥ ಉಂಟಾಗುತ್ತದೆ. ಅಪಾರ್ಥ ಮಾಡಿಕೊಳ್ಳುವುದರಿಂದ ಘೋರವಾದ ಅನರ್ಥಕ್ಕೆ ಕಾರಣವಾಗುತ್ತದೆ. ಹಾಗೆಯೇ, ಕ್ರೈಸ್ತರು ಕೂಡ ಸರಕಾರದ ಸೂಚನೆಗಳನ್ನು ಪಾಲಿಸಿ, ವ್ಯಾವಹಾರಿಕ ಧರ್ಮವನ್ನು ಗೌರವಿಸುತ್ತಲೇ ತಮ್ಮ ಧಾರ್ಮಿಕತೆಯನ್ನು ಪಾಲಿಸಿ ಕೊಂಡಿದ್ದಾರೆ.

Devara-Karyarupaಇಸ್ಲಾಂ ಧರ್ಮದ ಅನುಯಾಯಿಗಳಿಗೂ ಕೂಡ ಮಫ್ತಿ ಇಸ್ಮೈಲ್ ಮೆಂಕ್ ಇಂತಹ ವಿದ್ವಾಂಸರು ಸರಿಯಾದ ಮಾರ್ಗದರ್ಶನವನ್ನು ನೀಡಿ, ತಪ್ಪು ಮನೋಧರ್ಮವನ್ನು ತಿದ್ದಿ, ಕೊರೋನ ನಿಯಂತ್ರಣಕ್ಕೆ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಭೇದ ಭಾವ ಬಿಟ್ಟು, “ಸರ್ವಜನ ಹಿತಾಯ ಸರ್ವಜನ ಸುಖಾಯ” ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲಾ ಭಾರತೀಯರು ಕೊರೋನ ತಡೆಯಲು ಒಂದಾಗಿ ಶ್ರಮಿಸೋಣ. ನಾವು ನಿರಾಕಾರ ಸತ್ಯವನ್ನು ತಲುಪುವ ತನಕ ಸಾಕಾರಕ್ಕೆ ಸಂಪೂರ್ಣ ಬೆಲೆಯನ್ನು ಕೊಡಬೇಕಾಗುತ್ತದೆ. ಹಾಗಲ್ಲದೆ ಹೋದಲ್ಲಿ ಜೀವಿಗಳ ಆಕಾರಗಳು ವಿಕಾರಗೊಳ್ಳುತ್ತವೆ. ಈ ಸಂಗತಿಗಳನ್ನು ನಾವು ಪಾಲಿಸಬೇಕು. ಇಲ್ಲವಾದರೆ, ನಿರಾಕಾರವಾದ ಸತ್ಯವನ್ನು ತಿಳಿಯುವುದಕ್ಕೆ ನಾವು ಮನುಷ್ಯರೇ ಇರುವುದಿಲ್ಲ! ಎಲ್ಲರೂ “ನಿರಾಕಾರ”ವಾಗಿ ಬೂದಿ ಆಗುತ್ತೇವೆ ಅಷ್ಟೇ. ನಮ್ಮ ಜೀವದ ಅಸ್ತಿತ್ವವೇ ಇರುವುದಿಲ್ಲ!

Also Read: ಕೊರೋನಾಯಣ : ನನ್ನ ನಿಜವಾದ ಕಥೆಯನ್ನು ಓದಿ

ಡಾ.  ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು, ಪ್ರಸಾದ್  ಆಯುರ್ವೇದ ಹೆಲ್ತ್ ಕೇರ್ ಸೆಂಟರ್ ಪುರುಷರಕಟ್ಟೆ ಪುತ್ತೂರು. ಅಸಿಸ್ಟೆಂಟ್ ಪ್ರೊಫೆಸರ್, ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ. ದ.ಕ.

 ಡಾ.  ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು, ಪ್ರಸಾದ್  ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ. ದ.ಕ.,
ಮೊಬೈಲ್:9740545979

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!