Vydyaloka

ಬಿಡದೆ ಕಾಡುವ `ಸಕ್ಕರೆ ಕಾಯಿಲೆ’ ನಿರಾಶೆ ಬೇಡ

ನವೆಂಬರ್ 14 – ವಿಶ್ವ ಮಧುಮೇಹ ದಿನ

ಸಕ್ಕರೆ ಕಾಯಿಲೆ ಉಪಶಮನಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳಿವೆ. ಆದರೆ ಅವುಗಳಿಂದ ಅನೇಕ ಸಂದರ್ಭಗಳಲ್ಲಿ ಅಡ್ಡಪರಿಣಾಮಗಳಾಗುತ್ತವೆ. ಯಾವುದೇ ಔಷಧಿಯನ್ನು ಆರಂಭಿಸುವ ಮುನ್ನ ಸಾಕಷ್ಟು ಸರಿಯಾದ ವೈದ್ಯರಿಂದ ಸಲಹೆ ಪಡೆದು ಉಪಯೋಗಿಸುವುದು ಸೂಕ್ತ.
ಮಧುಮೇಹ, ಡಯಾಬಿಟಿಸ್ ಎಂದೆಲ್ಲ ಕರೆಯಲ್ಪಡುವ `ಸಕ್ಕರೆ ಕಾಯಿಲೆ’ ಇಂದು ವಿಶ್ವವ್ಯಾಪಿ. ಮುಖ್ಯವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಇದರ ಹಾವಳಿ ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಡಯಾಬಿಟಿಸ್ ಬಳಲುವವರ ಸಂಖ್ಯೆ ಶೇ. 60ರಷ್ಟಿದೆ. ಇತ್ತೀಚೆಗಂತೂ ಡಯಾಬಿಟಿಸ್ ವಯಸ್ಸಿನ ಇತಿಮಿತಿ ಇಲ್ಲದೆ ಎಲ್ಲರಲ್ಲೂ ಕಾಣಿಸಿಕೊಳ್ಳುವಂತಾಗಿದೆ. ವಿಶೇಷವಾಗಿ ಹಿರಿಯರನ್ನು ಹೆಚ್ಚು ಬಾಧೆಪಡಿಸುತ್ತದೆ. ಹಿರಿಯ ನಾಗರೀಕರಲ್ಲಿ ಸುಮಾರು 30ರಷ್ಟು ಮಂದಿ ಸಕ್ಕರೆ ಕಾಯಿಲೆ ಹಾಗೂ ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದು ಆತಂಕಕಾರಿ ಸಂಗತಿ.
ಕಾರಣಗಳೇನು?
ಒತ್ತಡದ ಜೀವನ, ಕಡಿಮೆ ದೈಹಿಕ ಶ್ರಮ, ವ್ಯಾಯಾಮ ಇಲ್ಲದಿರುವುದು, ಆಧುನಿಕ ಜೀವನಶೈಲಿ, ಆಹಾರ ಪದ್ಧತಿ, ಅನುವಂಶಿಯತೆ, ವಯಸ್ಸಾದಂತೆ ಜೀವಕೋಶಗಳು ಸಕ್ಕರೆ ಅಂಶ ತೆಗೆದುಕೊಳ್ಳುವುದರಲ್ಲಿ ನಿಧಾನಗತಿ, ರಕ್ತನಾಳಗಳ ಹಿಗ್ಗುವಿಕೆ, ಮಾಂಸಖಂಡಗಳ ಕರಗುವಿಕೆ, ಶರೀರದ ಕೊಬ್ಬಿನಂಶದಲ್ಲಿ ಹೆಚ್ಚಳ, ಇನ್‍ಸುಲಿನ್ ತಡೆ…ಇವೆಲ್ಲವೂ ಸಕ್ಕರೆ ಕಾಯಿಲೆಗೆ ಕಾರಣಗಳು.
ನಾನಾ ಸಮಸ್ಯೆಗಳು!
ಮಿನಿ ರಕ್ತನಾಳ, ದೊಡ್ಡ ರಕ್ತನಾಳಗಳಲ್ಲಿ ತೊಂದರೆ, ಕೀಟೋನಾಮ್ಲದ ವಿಷಮತೆ (ಕಡು ರಕ್ತ ಸಕ್ಕರೆ ಕಾಯಿಲೆ), ಆಗಿಂದಾಗ್ಗೆ ಕಂಡು ಬರುವ ಇಳಿ ರಕ್ತ ಸಕ್ಕರೆ ಕಾಯಿಲೆ, ಅಂಬಳಿ ಪೆಡಸಣೆ, ರಕ್ತದೊತ್ತಡ ಹೀಗೆ ಹಲವಾರು ದೀರ್ಘಕಾಲದ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಮತ್ತೆ ಹಲವು ಸಮಸ್ಯೆಗಳು ಹಿರಿಯರಲ್ಲಿ ಬಹಳ ಮುಖ್ಯವಾದುದು. ಕಣ್ಜಾಲ ಬೇನೆ, ಮೂತ್ರಪಿಂಡ ಬೇನೆ, ನರಬೇನೆ, ಹೃದಯ ಸಂಬಂಧಿಸಿದ ತೊಂದರೆ, ಲಕ್ವ, ಸುತ್ತಂಚಿನ ರಕ್ತನಾಳ, ನರಗಳ ತೊಂದರೆಗಳು ಎದುರಾಗುತ್ತವೆ.
ಲಕ್ಷಣಗಳು:
ಮಧುಮೇಹವಿರುವ ವ್ಯಕ್ತಿಗಳಿಗೆ ವಿಭಿನ್ನ ರೀತಿಯ ಲಕ್ಷಣಗಳ ಅನುಭವವಾಗುತ್ತದೆ. ಕೆಲವು ಅನುಭವ ಆಗದಿರಲೂಬಹುದು. ಪದೇ ಪದೇ ಮೂತ್ರ ವಿಸರ್ಜನೆ, ಮಸುಕಾದ ದೃಷ್ಟಿ, ಪಾದಗಳ ಜೋಮು ಹಿಡಿಯುವಿಕೆ ಅಥವಾ ಸ್ಪಂದನ, ಗಾಯಕಡಿತಗಳ ನಿಧಾನ ವಾಸಿಯಾಗುವಿಕೆ, ಮೈಭಾರ ಕಡಿಮೆಯಾಗುವಿಕೆ, ತ್ವಚೆಯಲ್ಲಿ ತುರಿಕೆ, ಅತಿ ಆಯಾಸ ಮತ್ತು ನಿಶ್ಶಕ್ತಿಯ ಅನುಭವ, ಅಧಿಕ ಬಾಯಾರಿಕೆ, ಯಾವಾಗಲೂ ಹಸಿವಾಗುತ್ತಿರುವಿಕೆ ಮತ್ತು ತ್ವಚೆಯಲ್ಲಿ ಸೋಂಕುಗಳು ಹೀಗೆ ಹಲವಾರು ಲಕ್ಷಣಗಳನ್ನು ಕಾಣಬಹುದು.
ಬಾಧೆ ನಾನಾತರ
ಸಾಮಾನ್ಯವಾಗಿ ಡಯಾಬಿಟಿಸ್ ಇದ್ದರೆ ಇತರೆ ಕಾಯಿಲೆಗಳು ಬರಲು ಬಹಳ ಸಲೀಸು. ಹಾಗಾಗಿಯೇ ನರಗಳ ದೌರ್ಬಲ್ಯ ಹೆಚ್ಚಾಗುತ್ತ ಹೋಗುತ್ತದೆ. ವಿಶೇಷವಾಗಿ ಜ್ಞಾಪಕ ಶಕ್ತಿ ಕುಂದುವಿಕೆ, ಓದಿದ್ದನ್ನು ಮತ್ತೆ ಹೇಳಲಿಕ್ಕೆ ಸಾಧ್ಯವಾಗದಿರುವುದು, ವಸ್ತುಗಳು, ಔಷಧಿಗಳ ಉಪಯೋಗಿಸುವಿಕೆಯಲ್ಲಿ ಅರಿವಿನ ದೌರ್ಬಲ್ಯ ಹೆಚ್ಚಾಗುತ್ತದೆ. ಶರೀರದ ಕೆಲವೊಂದು ಮಾರ್ಪಾಡಿನಿಂದ ಸಮತೋಲನ ಕಳೆದುಕೊಂಡು ಶರೀರಕ್ಕೆ ಗಾಯಗಳು ಅಥವಾ ಮೂಳೆ ಮುರಿತಗಳು ಉಂಟಾಗಬಹುದು. ಇನ್ನೂ ಅನೇಕ ವೇಳೆಯಲ್ಲಿ ಮಂದ ಕಣ್ಣಿನ ದೃಷ್ಟಿಯಿಂದ, ನರಬೇನೆ ಹಾಗೂ ಮಾಂಸಖಂಡಗಳ ದುರ್ಬಲತೆ ಉಂಟಾಗುತ್ತದೆ.
ಮುಂಜಾಗ್ರತೆ ಏನು?
ಸಕ್ಕರೆ ಕಾಯಿಲೆಯಿಂದ ಬಳಲುವವರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಸೂಕ್ತ. ತಮ್ಮ ದೈನಂದಿನ ಬದುಕಿನಲ್ಲೂ ಕೆಲವೊಂದು ಮಾರ್ಪಾಡುಗಳನ್ನು ಕಂಡುಕೊಳ್ಳುವುದು ಒಳ್ಳೆಯದು. ಮಧುಮೇಹದ ಪಥ್ಯ ಮತ್ತು ವ್ಯಾಯಾಮ, ತ್ವಚೆ ಮತ್ತು ಪಾದಗಳ ಎಚ್ಚರಿಕೆ, ಕಣ್ಣುಗಳ ಜಾಗ್ರತೆ, ಬಾಯಿಯ ಆರೋಗ್ಯ ಮತ್ತು ಅನಾರೋಗ್ಯದ ದಿನಗಳ ನಿರ್ವಹಣೆ ಕೂಡ ಒಳಗೊಂಡಿರುತ್ತದೆ. ಬಾಯಿ ಮುಖಾಂತರ ಸೇವಿಸುವ ಗುಳಿಗೆಗಳಲ್ಲೇ ಹೆಚ್ಚಿನವರು ನಿಯಂತ್ರಣದಲ್ಲಿರುತ್ತಾರೆ. ಆದರೆ ಮಾತ್ರೆಯಲ್ಲಿ ತಡೆ ಸಾಧ್ಯವಿಲ್ಲದಾಗ ಅನಿವಾರ್ಯವಾಗಿ ಇನ್‍ಸುಲಿನ್ ಸೂಜಿಮದ್ದಿಗೆ ಮೊರೆ ಹೋಗಬೇಕಾಗುತ್ತದೆ. ಪ್ರತಿಬಾರಿ ವೈದ್ಯರಲ್ಲಿಗೆ ಹೋದಾಗ ತಮ್ಮ ಔಷಧಿ ಪರಿಣಾಮಗಳು ಅಥವಾ ಯಾವುದೇ ರೀತಿಯ ಸಮಸ್ಯೆಯಿದ್ದರೆ ಹೇಳುವುದು ಅವಶ್ಯ. ಇವುಗಳ ಜೊತೆಗೆ ಸಾಮಾಜಿಕ ಪರಿಸರ, ಮನೆಯ ವಾತಾವರಣ, ನೆರೆಹೊರೆಯವರೊಂದಿಗೆ ಚೆನ್ನಾಗಿರಬೇಕು. ಕುಟುಂಬ ವರ್ಗದವರ ಅಸಹಕಾರ ಅಥವಾ ಅಸಡ್ಡೆ ಇರಬಾರದು.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, 82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this: