ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ !

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ .ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಇಂದು  ಬಂಜೆತನದ ಸಮಸ್ಯೆ ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ ನಿವಾರಿಸಿಕೊಳ್ಳಬೇಕು.

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ !

ಪ್ರಸ್ತುತ ವೈಜ್ಞಾನಿಕ ಕಾಲಮಾನದಲ್ಲಿ ಬಂಜೆತನವುಂಟಾಗುವುದಕ್ಕೆ ನಾನಾ ರೀತಿಯ ಕಾರಣಗಳು ಕಂಡುಬರುತ್ತವೆ. ದೈಹಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ರಕ್ತಸಂಬಂಧ ವೈವಾಹಿಕತೆ, ಕಲುಷಿತಗೊಂಡಿರುವ ಪರಿಸರ, ರಾಸಾಯನಿಕ ಬಳಕೆಯಿಂದ ಬೆಳೆಯುವ ಧಾನ್ಯಗಳು ಹಾಗೂ ಆಹಾರ ಪದಾರ್ಥಗಳು, ಮದ್ಯಪಾನ, ಧೂಮಪಾನ ಇತ್ಯಾದಿಗಳಿಂದ ಬಂಜೆತನ ಹೆಚ್ಚಾಗುತ್ತಿವೆಯಲ್ಲದೇ ನಾನಾ ರೀತಿಯ ಕಾಯಿಲೆಗಳು ಉಲ್ಭಣಗೊಳ್ಳುವುದಕ್ಕೆ ಕಾರಣವಾಗಿವೆ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ.

ಇಂದು ವಿಶ್ವದಾದ್ಯಂತ ‘ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಬಂಜೆತನಕ್ಕೆ ದಂಪತಿಗಳಿಬ್ಬರೂ ಕಾರಣರಾಗುತ್ತಾರೆ. ಸ್ತ್ರೀಯೊಬ್ಬಳೇ ಕಾರಣಳಲ್ಲ. ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಆದರೆ ಪುರುಷನೇ ಈ ಸಮಸ್ಯೆಗೆ ಹೆಚ್ಚಿನ ಕಾರಣನಾಗುತ್ತಾನೆ. ದಂಪತಿಗಳಲ್ಲಿ ಬಂಜೆತನಕ್ಕೆ ಪುರುಷನ ಪಾಲು ಶೇ.42ರಷ್ಟಿದ್ದರೆ, ಸ್ತ್ರೀಯರ ಪಾಲು ಶೇ. 38ರಷ್ಟಿರುತ್ತದೆ. ಬಂಜೆತನಕ್ಕೆ ಒಂದೇ ಕಾರಣ ಎಂದು ಹೇಳಲಾಗುವುದಿಲ್ಲ. ಹಲವಾರು ಕಾರಣಗಳು ‘ಬಂಜೆತನ’ವನ್ನು ಹುಟ್ಟುಹಾಕಬಹುದು.

 ಸ್ತ್ರೀಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳು  :

1. ಋತುಚಕ್ರದಲ್ಲಿನ ಏರುಪೇರು: ಋತುಚಕ್ರ ಮಹಿಳೆಯ ಫಲವತ್ತತೆಯ ದ್ಯೋತಕ. ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುತ್ತಿದ್ದರೆ ಆ ಮಹಿಳೆಯಲ್ಲಿ ಅಂಡೋತ್ಪಾದನೆಯೂ ಆಗುತ್ತಿರುವ ಸಾಧ್ಯತೆ ಹೆಚ್ಚು. ಮುಟ್ಟು ಏರುಪೇರಾದರೆ ಅಂಡೋತ್ಪಾದನೆಯೂ ಕುಂಠಿತವಾಗುತ್ತದೆ. ಫಲವತ್ತತೆಯೂ ಕುಗ್ಗುತ್ತದೆ. ಬಂಜೆತನವೂ ಉಂಟಾಗಬಹುದು.

2. ಯೋನಿಯ ತೊಂದರೆ: ಯೋನಿ ಸ್ತ್ರೀಯರ ರತಿನಾಳ. ಶಿಶ್ನದ ಪ್ರವೇಶಕ್ಕಾಗಿಯೇ ಇರುವ (ದಾರಿ) ಅಂಗ. ಇದರೊಂದಿಗೆ ಋತುಸ್ರಾವ, ಶಿಶು ಜನನಕ್ಕೆ ಸಹಾಯವಾಗುವ ಅಂಗ. ಇದು ಕನ್ಯೆಯಲ್ಲಿ ‘ಕನ್ಯಾಪೊರೆ’ಯಿಂದ ಮುಚ್ಚಿರುತ್ತದೆ. ಕೆಲವರಲ್ಲಿ ಹುಟ್ಟಿನಿಂದಲೇ ಯೋನಿಯು ಸರಿಯಾಗಿ ಬೆಳವಣಿಗೆಯಾಗದಿರಬಹುದು. ಬೆಳವಣಿಗೆಯಾಗಿದರೂ ಹಲವಾರು ಸಮಸ್ಯೆಗಳಿಂದ ಕೂಡಿರಬಹುದು. ಯೋನಿಪದರ ಅಥವಾ ಕನ್ಯಾಪೊರೆ ಹರಿಯದಿರಬಹುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಯೋನಿಯುರಿತ, ಯೋನಿನೋವು, ಸೆಡೆತ ಉಂಟಾಗಬಹುದು. ಇದರಿಂದ ಬಂಜೆತನ ಉಂಟಾಗಬಹುದು.

3. ಗರ್ಭಕೋಶದ ತೊಂದರೆ: ಸಾಮಾನ್ಯವಾಗಿ ಗರ್ಭಕೋಶದ ಬೆಳವಣಿಗೆಯಲ್ಲಿನ ದೋಷಗಳು, ಗರ್ಭಗೊರಳಿನ ಉರಿ, ಗರ್ಭಕೋಶದ ಗಡ್ಡೆಗಳು, ಗರ್ಭದೋಳ್ದೊರೆಯ ಬೇನೆ, ನಾರುಗಂಟುಗಳು, ಗರ್ಭಕೋಶದ ಕ್ಯಾನ್ಸರ್ ಈ ಮುಂತಾದ ಕಾಯಿಲೆಗಳಿಂದ ಬಂಜೆತನ ಉಂಟಾಗಬಹುದು.

4. ಅಂಡನಳಿಕೆಗಳ (ಗರ್ಭನಾಳಗಳ) ತೊಂದರೆ: ಅಂಡನಳಿಕೆಗಳ ತೊಂದರೆಯಿಂದ ಗರ್ಭಧಾರಣೆ ಸಾಧ್ಯವಾಗದೆ ಬಂಜೆತನ ಉಂಟಾಗಬಹುದು. ಮುಖ್ಯವಾಗಿ ಜನನಾಂಗದ ಸ್ವಚ್ಛತೆಯಿಲ್ಲದಿರುವುದು, ಜನನಾಂಗದ ಸೋಂಕು ಅವುಗಳಿಂದ ಅಂಡನಳಿಕೆಗಳಿಗೆ ತೊಂದರೆಯುಂಟಾಗುತ್ತದೆ. ಗೊನೋರಿಯಾ, ಕ್ಲಮಿಡಿಯಾ, ಅಪೆಂಡಿಕ್ಸ್, ಕ್ಷಯ ಮುಂತಾದ ಕಾಯಿಲೆಗಳಿಂದ ಗರ್ಭನಾಳವು ಮುಚ್ಚಲ್ಪಟ್ಟಿರುತ್ತದೆ. ಇದಕ್ಕೆ ಮುಚ್ಚಿದ ಗರ್ಭನಾಳ ಎಂದು ಹೆಸರು. ಮತ್ತೆ ಕೆಲವೊಂದು ಸಂದರ್ಭದಲ್ಲಿ ಭ್ರೂಣವು ಗರ್ಭನಾಳದಲ್ಲಿಯೇ ಅಂಟಿಕೊಂಡಿರುತ್ತದೆ. ಇದನ್ನು “ಎಡೆ ತಪ್ಪಿದ ಬಸಿರು” ಎಂದು ಕರೆಯುತ್ತಾರೆ. ಇದರಿಂದ ಬಂಜೆತನ ಉಂಟಾಗುತ್ತದೆ.

5. ಅಂಡಾಶಯದ ಕೊರತೆ: ಅಂಡಾಶಯದಲ್ಲಿಯೇ ಅಂಡಾಣು ಬಿಡುಗಡೆಯಾಗುತ್ತದೆ. ಅಂಡಾಶಯದಲ್ಲಿ ನೀರ್ಗಂಟುಗಳು ಅಥವಾ ಗಡ್ಡೆಗಳಾಗಿದ್ದರೆ ಅಂಡಾಣು ಬಿಡುಗಡೆಯಲ್ಲಿ ತೊಂದರೆಯುಂಟಾಗಿ ಬಂಜೆತನವುಂಟಾಗುತ್ತದೆ.

6. ಹಾರ್ಮೋನ್ : ಹಾರ್ಮೋನ್‍ನಲ್ಲಿ ಏರುಪೇರಾಗುವುದರಿಂದ ಸ್ತ್ರೀಯರಲ್ಲಿ ಋತುಚಕ್ರದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅಂಡಾಣು ಬಿಡುಗಡೆಯಲ್ಲಿಯೂ ಏರು-ಪೇರು ಉಂಟಾಗುತ್ತದೆ. ಆಗ ಗರ್ಭಧಾರಣೆ ಕಷ್ಟವಾಗಿ ಬಂಜೆತನವುಂಟಾಗುತ್ತದೆ.

ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳು :

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ. ಪುರುಷನೂ ಕಾರಣನಾಗುತ್ತಾನೆ. ಈ ಸಮಸ್ಯೆಯಲ್ಲಿ ಪುರುಷನ ಸಮಸ್ಯೆಯ ಪ್ರಮಾಣವೇ ಅಧಿಕವಾಗಿರುತ್ತದೆ. ಇದು ಶೇ. 42 ರಷ್ಟಿರುತ್ತದೆ. ಪುರುಷನಲ್ಲಿ ಕಂಡುಬರುವ ಪ್ರಮುಖ ದೋಷಗಳು ಈ ರೀತಿ ಇವೆ.

1. ವೃಷಣದ ತೊಂದರೆ: ವೀರ್ಯಾಣುಗಳು ಉತ್ಪಾದನೆಯಾಗುವುದೇ ವೃಷಣಗಳಲ್ಲಿ ವೃಷಣದಲ್ಲಿ ಚಿಕ್ಕದಾದ ನೀರಿನಂತಹ ಕೊಳವೆಗಳಾದ ‘ಸೆಮಿನಿಫೇರಸ್’ ನಳಿಕೆಯಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ದೇಹದಲ್ಲಿ ತಾಪಮಾನ ಹೆಚ್ಚಿದಂತೆ ವೀರ್ಯಾಣುಗಳ ಉತ್ಪತ್ತಿಯಲ್ಲಿ ಕೊರತೆಯುಂಟಾಗುತ್ತದೆ.

2. ಸಿರಬಾವು (Varicocele)) : ಗಂಡಸರ ಬಂಜೆತನದ ಕಾರಣಗಳಲ್ಲಿ ಶೇ.40ರಷ್ಟು ಭಾಗ ಈ ಸಾಮಾನ್ಯ ತೊಂದರೆಗೆ ಸಂಬಂಧಿಸಿದುದು. ವೃಷಣಗಳಿಗೆ ರಕ್ತದ ಪರಿಚಲನೆ, ಧಮನಿ ಹಾಗೂ ನರಗಳ ಮೂಲಕ ನಡೆಯುತ್ತದೆ. ಸಿರ ರಕ್ತನಾಳಗಳು ಅತಿ ಕೊಂಕಾಗಿ ಊದಬಹುದು. ಈ ಸಮಸ್ಯೆಯಿಂದ ಬಂಜೆತನ ಉಂಟಾಗುತ್ತದೆ.

3. ಚೋದನಿಕೆಯ (ಹಾರ್ಮೋನ್) ತೊಂದರೆ: ಟೆಸ್ಟೋಸ್ಟಿರೋನ್ ಚೋದನಿಕೆ ಲೈಂಗಿಕಾಸಕ್ತಿ ಮತ್ತು ವೀರ್ಯ ಉತ್ಪಾದನೆಗೆ ಅತಿ ಅವಶ್ಯಕ. ಜೊತೆಗೆ ಪ್ರೊಲ್ಯಾಕ್ಟಿನ್ (Prolactin), ಲ್ಯುಟಿನೈಸಿಂಗ್ (Leutinizing) ಹಾರ್ಮೋನ್ ಮತ್ತು ಥೈರಾಯಿಡ್ ಹಾರ್ಮೋನ್‍ಗಳ ಏರುಪೇರಿನಿಂದ ಬಂಜೆತನಕ್ಕೆ ಕಾರಣವಾಗುತ್ತದೆ.

4. ವೀರ್ಯನಾಳದುರಿಯೂತ ಹಾಗೂ ಮುಚ್ಚುವಿಕೆ: ಗೊನೋರಿಯದಂತಹ ಲೈಂಗಿಕ ಕಾಯಿಲೆಗಳು ವೀರ್ಯನಾಳವನ್ನು ಮುಚ್ಚಿಬಿಡುತ್ತವೆ. ವೀರ್ಯನಾಳಗಳು ಮುಚ್ಚುವುದರಿಂದ ವೀರ್ಯಾಣುಗಳು ಚಲಿಸಲು ತೊಂದರೆಯಾಗಿ ಬಂಜೆತನವುಂಟಾಗುತ್ತದೆ.

5. ಲೈಂಗಿಕ ತೊಂದರೆಗಳು: ಹಲವು ಲೈಂಗಿಕ ತೊಂದರೆಗಳು ಬಂಜೆತನಕ್ಕೆ ಕಾರಣವಾಗಬಲ್ಲವು. ಚೋದನಿಕೆಯ (ಹಾರ್ಮೋನ್) ಏರುಪೇರಿನಿಂದ ಲೈಂಗಿಕಸಕ್ತಿಯಲ್ಲಿಯೂ ಬದಲಾವಣೆ ಉಂಟಾಗಬಹುದು. ಶಿಶ್ನ ನಿಮಿರದಿರುವುದು, ಶೀಘ್ರಸ್ಖಲನ ಇವೆಲ್ಲವೂ ‘ಬಂಜೆತನ’ದ ಸಮಸ್ಯೆಯನ್ನು ಉಂಟುಮಾಡುತ್ತವೆ.

ಸ್ತ್ರೀಪುರುಷರಿಬ್ಬರಲ್ಲಿನ ಬಂಜೆತನಕ್ಕೆ ಕಾರಣಗಳು : 

1. ವಯಸ್ಸಿನ ಅಂತರದಿಂದ: ವಯಸ್ಸಿನ ಅಂತರದಿಂದ ದಂಪತಿಗಳಲ್ಲಿ ಬಂಜೆತನ ಉಂಟಾಗುತ್ತದೆ. ಪತಿಯ ವಯಸ್ಸು ಪತ್ನಿಯ ವಯಸ್ಸಿನ ನಡುವೆ ಅತ್ಯಧಿಕ ಅಂತರವುಂಟಾದರೆ ಬಂಜೆತನವುಂಟಾಗುತ್ತದೆ.

2. ಮಾದಕ ಚಟಗಳು: ಮದ್ಯಪಾನ, ಧೂಮಪಾನ ಮುಂತಾದ ಮಾದಕ ಚಟಗಳಿಗೆ ದಾಸರಾದವರಲ್ಲಿ ಬಂಜೆತನ ಸಮಸ್ಯೆ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತದೆ.

3. ಜೀವನಶೈಲಿಯಿಂದ: ಆಹಾರದ ಪೌಷ್ಠಿಕತೆ, ಮಾನಸಿಕ ಒತ್ತಡಗಳು, ಔಷಧಿಗಳ ಪರಿಣಾಮಗಳೂ ಸಹ ಬಂಜೆತನಕ್ಕೆ ಕಾರಣವಾಗುತ್ತದೆ. ಇನ್ನು ಕೆಲವು ದಂಪತಿಗಳಲ್ಲಿ ಈ ಮೇಲಿನ ಯಾವುದೇ ಕಾರಣಗಳು ಇರದಿದ್ದರೂ ಕೆಲವು ದಂಪತಿಗಳಲ್ಲಿ ಬಂಜೆತನ ಕಂಡುಬರುತ್ತದೆ. ಈ ರೀತಿಯ ಸಮಸ್ಯೆ ಶೇ.10 ರಷ್ಟಿರುತ್ತದೆ.

4. ಕಾರಣ ರಹಿತ ಬಂಜೆತನ : ಶೇ.10ರಷ್ಟು ದಂಪತಿಗಳಲ್ಲಿ ಕಂಡು ಬರುತ್ತದೆ. ಕೆಲವು ಸಂದರ್ಭಗಳಲ್ಲಿ ಯಾವುದೇ ಕಾರಣ ಇಲ್ಲದೆ ಬಂಜೆತನ ಉಂಟಾಗಬಹುದು. ಗಂಡ ಮತ್ತು ಹೆಂಡತಿ ಇಬ್ಬರೂ ಸರಿಯಾಗಿರಬಹುದು. ಎಲ್ಲ ಪರೀಕ್ಷೆಗಳೂ ಸಹಜವಾಗಿರಬಹುದು. ಆದರೂ ಸಹ ಬಂಜೆತನಕ್ಕೆ ತುತ್ತಾಗಿರಬಹುದು.

ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳು ಬಂಜೆತನದ ಸಮಸ್ಯೆಯನ್ನುಂಟುಮಾಡುತ್ತವೆ. ಆದ್ದರಿಂದ ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ ನಿವಾರಿಸಿಕೊಳ್ಳಬೇಕು.

ಡಾ|| ಸಿ. ಶರತ್ ಕುಮಾರ್

ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು

ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ

ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ,

ಮೈಸೂರು-570 001          

ದೂ. 0821-2444441, 4255019

www.mediwave.net

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!