ಬೆಂಗಳೂರಿನಲ್ಲಿ ಆರೋಗ್ಯ ನಂದನ ಕಾರ್ಯಕ್ರಮ
`ವೈದ್ಯಲೋಕ’ ಮತ್ತು `ಹೆಲ್ತ್ ವಿಷನ್’ ಆರೋಗ್ಯ ಮಾಸಪತ್ರಿಕೆಯ ಆರೋಗ್ಯ ಜಾಗೃತಿ ಅಭಿಯಾನ `ಆರೋಗ್ಯ ನಂದನ’ದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡರು. ಡಾ|| ಪತ್ತಾರ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹೋಮಿಯೋಪತಿ ತಜ್ಞ ವೈದ್ಯರಾದ ಡಾ|| ಪಿ.ವಿ. ಪತ್ತಾರ್ ಮತ್ತು ಡಾ|| ಪ್ರಮೋದ್ ವಿ. ಪತ್ತಾರ್ ಮಕ್ಕಳ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳಕ್ಕಾಗಿ ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ವಿವರಿಸಿದರು. ಸಮಸ್ಯೆ ಇರುವ ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ಅವರು ಉಚಿತವಾಗಿ ಔಷಧ ವಿತರಿಸಿದರು. ಮನೆಯಲ್ಲಿ ಪಾಲಕರು ಮಕ್ಕಳ ಮುಂದೆ ಹೆಚ್ಚು ಟಿವಿ ವೀಕ್ಷಿಸುವುದನ್ನು ಕಡಿಮೆ ಮಾಡುವುದರ ಜೊತೆಗೆ ಮಕ್ಕಳು ಮೊಬೈಲ್‍ನಲ್ಲಿ ಕಾಲ ಕಳೆಯುವುದನ್ನು ತಡೆಯಬೇಕು. ಹಾಗೆಯೇ ಮನೆಯಲ್ಲಿ ಪೋಷಕಾಂಶವುಳ್ಳ ಉತ್ತಮ ಅಡುಗೆ ಮಾಡಿ ಮಕ್ಕಳಿಗೆ ನೀಡಬೇಕು. ಹೋಟೆಲ್‍ನಲ್ಲಿ ಜಂಕ್‍ಫುಡ್‍ಗಳ ಸೇವನೆ ಕಡಿಮೆ ಮಾಡಬೇಕು ಎಂದು ಧನ್ವಂತರಿ ಆರೋಗ್ಯ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷರೂ ಆಗಿರುವ ತಜ್ಞ ವೈದ್ಯ ಡಾ. ಪಿ.ವಿ. ಪತ್ತಾರ್ ಹೇಳಿದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ, ಪೋಷಕರಿಗೆ `ವೈದ್ಯಲೋಕ’ ಆರೋಗ್ಯ ಪತ್ರಿಕೆಯನ್ನು ಉಚಿತವಾಗಿ ವಿತರಿಸಲಾಯಿತು.