ಮೊಡವೆ ಆಗದಿರಲಿ ನಿಮ್ಮ ಒಡವೆ

ಮೊಡವೆ ಹದಿಹರೆಯದವರ ಒಂದು ದೊಡ್ಡ ಸಮಸ್ಯೆಯೆನಿಸಿದೆ. ಇದು ಹುಡುಗಿಯರನ್ನು ಹೆಚ್ಚು ಕಾಡಿದರೂ, ಹರೆಯದ ಹುಡುಗರನ್ನೂ ಬಿಟ್ಟಿಲ್ಲ. ಎಷ್ಟೊಂದು ಜಾಹೀರಾತುಗಳು, ಮೊಡವೆ ನಿವಾರಕ ಕ್ರೀಮು, ಲೋಷನ್, ಫೇಸ್ ವಾಶ್ಗಳು, ಔಷಧಿಗಳು, ಆಧುನಿಕ ಚಿಕಿತ್ಸೆ, ಲೇಸರ್ ಇತ್ಯಾದಿಗಳಿದ್ದರೂ ಮೊಡವೆ ಇನ್ನೂ ಒಂದು ಸಮಸ್ಯೆಯಾಗಿಯೇ  ಉಳಿದಿದೆ.

ಮೊಡವೆ ಎಂದಕೂಡಲೇ ನೆನಪಿಗೆ ಬರುವುದು ಹದಿಹರೆಯದ ಹುಡುಗಿಯರು ಮತ್ತು ಟಿವಿಯಲ್ಲಿ ಪದೇ ಪದೇ ತೋರಿಸುವ ಖ್ಯಾತ ಹೀರೊ ಹೀರೋಯಿನ್  ಒಳಗೊಂಡ ಮೊಡವೆ ನಿವಾರಕ ಕ್ರೀಮುಗಳ, ಫೇಸ್ ವಾಶುಗಳ  ಜಾಹೀರಾತುಗಳು. ಎಷ್ಟೋ ದಶಕಗಳವರೆಗೆ ಜನರು ಈ ಜಾಹೀರಾತುಗಳನ್ನು ನಂಬಿ ತಾವೂ ಹೀರೋ ಹೀರೋಯಿನ್ನುಗಳ ತರಹ ಮೊಡವೆಯಿಲ್ಲದ ಸುಂದರ  ಮುಖವನ್ನು ಹೊಂದಲು ಹಲವಾರು  ಕ್ರೀಮುಗಳನ್ನು ಎಷ್ಟು ಬಾರಿ ಹಾಕಿ ತಿಕ್ಕಿದರೂ ಪ್ರಯೋಜನ ಇಲ್ಲವೆಂದು ಕೈಚೆಲ್ಲಿದವರುಂಟು.

ಪಿಂಪಲ್, ಆಕ್ನೆ, ವೈಟ್ ಹೆಡ್, ಬ್ಲಾಕ್ ಹೆಡ್ ಇತ್ಯಾದಿ ರೂಪಗಳಲ್ಲಿ ಉಂಟಾಗುವ ಮೊಡವೆ ಮುಖ, ಭುಜ, ಬೆನ್ನು, ಕುತ್ತಿಗೆ, ಎದೆ, ತೋಳ್ಭಾಗ ಇನ್ನಿತರ ದೇಹದ ಭಾಗಗಳಲ್ಲಿ ಕಂಡು ಬರುವ ಚರ್ಮದ ದೀರ್ಘಕಾಲೀನ ಉರಿಯೂತವೆನ್ನಬಹುದು, ಕಾಲ ಕ್ರಮೇಣ ಮೊಡವೆಯಾದ ಜಾಗದಲ್ಲಿ ಕುಳಿಗಳು, ಚರ್ಮದ ಕಲೆಗಳು ಉಂಟಾಗಿ ಆ ಭಾಗ  ಚರ್ಮದ ಅಂದಗೆಡಿಸುತ್ತದೆ (disfigured).

ದೇಹದಲ್ಲಿ ಎಣ್ಣೆ ಸ್ರವಿಸುವ ಗ್ರಂಥಿಗಳು (sebacious glands) ಹೆಚ್ಚಾಗಿರುವ ಜಾಗಗಳಲ್ಲಿ ಮೊಡವೆಗಳು ಜಾಸ್ತಿ ಕಂಡುಬರುತ್ತವೆ. ಅಂತಹ ಜಾಗಗಳೆಂದರೆ ಮುಖ, ಹಣೆ, ಎದೆ, ಬೆನ್ನಿನ ಮೇಲ್ಭಾಗ ಮತ್ತು ಭುಜಗಳು. ನಮ್ಮ ದೇಹದ ಕೂದಲಿನ ಬೇರುಗಳು (hair follicles) ಈ ಎಣ್ಣೆ ಸ್ರವಿಸುವ ಗ್ರಂಥಿಗಳಿಗೆ ಜೋಡಿಸಲ್ಪಟ್ಟಿರುತ್ತವೆ.

ಮೊಡವೆಗಳು ಯಾವ ಪ್ರಾಯದಲ್ಲೂ ಉಂಟಾಗಬಹುದಾದರೂ ಹೆಚ್ಚಾಗಿ  ಉಂಟಾಗುವುದು ಯೌವನಾವಸ್ಥೆಯಲ್ಲಿ ಮತ್ತು ಹರೆಯದ ಪ್ರಾಯದಲ್ಲಿ , ಏಕೆಂದರೆ ಆಗಲೇ ನಮ್ಮ ದೇಹದ ಹಾರ್ಮೋನುಗಳಲ್ಲಿ ಕೆಲವು ಏರುಪೇರುಗಳಾಗುತ್ತವೆ. ಪ್ರಾಯದಲ್ಲಿ ಎಣ್ಣೆ ಸ್ರವಿಸುವ ಸೆಬೆಷಿಯಸ್ ಗ್ರಂಥಿಗಳೂ ಗಣನೀಯವಾಗಿ ಹೆಚ್ಚಾಗುತ್ತವೆ.

ನಮ್ಮ ಮಾನವ ಚರ್ಮದಲ್ಲಿ ಅನೇಕ ಸಣ್ಣ ರಂಧ್ರ (pores) ಗಳಿರುತ್ತವೆ ಅವು  ಚರ್ಮದ ಕೆಳಗಿರುವ ಎಣ್ಣೆ ಸ್ರವಿಸುವ ಗ್ರಂಥಿಗಳಜೊತೆ ಸಂಪರ್ಕದಲ್ಲಿರುತ್ತವೆ. ಫಾಲಿಕಲ್ ಎಂಬ ಕೂದಲ ಬುಡದ ಕಿರುಚೀಲಗಳು, ಗ್ರಂಥಿಗಳು ಮತ್ತು ಚರ್ಮದ ರಂಧ್ರಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ.

ಈ  ಸೆಬೆಷಿಯಸ್   ಗ್ರಂಥಿಗಳು ಸೀಬಮ್ ಎಂಬ ಎಣ್ಣೆಯುಕ್ತ ದ್ರವವನ್ನು ಸ್ರವಿಸುತ್ತವೆ, ಈ ಸೀಬಮ್, ಸತ್ತ ಚರ್ಮದ ಜೀವಕೋಶಗಳನ್ನು ಫಾಲಿಕಲ್ ಮೂಲಕ ಚರ್ಮದ ಮೇಲ್ಭಾಗಕ್ಕೆ ಒಯ್ಯುತ್ತದೆ. ಈ ಫಾಲಿಕಲ್ಗಳು ಮುಚ್ಚಿಹೋದಾಗ, ಸತ್ತ ಜೀವಕೋಶಗಳು ಹೊರಗೆ ಹಾಕಲ್ಪಡದೇ, ಎಣ್ಣೆಯುಕ್ತ ಸೀಬಮ್ ಒಳಗೇ ಶೇಖರಣೆಗೊಳ್ಳುತ್ತವೆ.  ಹೀಗಾದಾಗ ಬ್ಯಾಕ್ಟೀರಿಯಾ ಸೋಂಕು ಉಂಟಾಗಿ ಮೊಡವೆ ಬೆಳೆಯಲು ಆರಂಭವಾಗುತ್ತದೆ.

ಇತ್ತೀಚಿನ ಸರ್ವೇಯೊಂದರ ಪ್ರಕಾರ 11ರಿಂದ  30 ಪ್ರಾಯದವರಲ್ಲಿ ಶೇಕಡಾ 80% ಜನರು ಮೊಡವೆಯ ತೊಂದರೆಯಿಂದ ಬಳಲುತ್ತಾರೆಂದು ತಿಳಿದು ಬಂದಿದೆ.

ಮೊಡವೆಗಳು  ಉಂಟಾಗುವುದರ ಹಿಂದಿನ ಮೂಲ ದೋಷಗಳು ಇಂತಿವೆ

  • ಚರ್ಮದಲ್ಲಿ ಹೆಚ್ಚಿನ ಎಣ್ಣೆಯಂಶವಿರುವುದು
  • ಕೂದಲಿನ ಫಾಲಿಕಲ್ ಗಳ ಮುಚ್ಚುವಿಕೆ
  • ಬ್ಯಾಕ್ಟೀರಿಯಾ ಸೋಂಕು
  • ಆಂಡ್ರೋಜೆನ್ ಹಾರ್ಮೋನುಗಳ ಅತಿಯಾದ ಚಟುವಟಿಕೆ
  • ಮೊಡವೆಯನ್ನುಂಟುಮಾಡುವಪ್ರಚೋದಕಗಳು

ಹಾರ್ಮೋನುಗಳು : ಯೌವನಾವಸ್ಥೆಯಲ್ಲಿ ಆಂಡ್ರೋಜನ್ ಹಾರ್ಮೋನುಗಳುಗಳ ಸ್ರವಿಸುವಿಕೆ ಮತ್ತು ಚಟುವಟಿಕೆ (Activity) ಹೆಚ್ಚಾಗುತ್ತದೆ, ಇದರಿಂದ ಸೆಬಾಸಿಯಸ್ ಗ್ರಂಥಿಗಳು ಪ್ರಚೋದಿಸಲ್ಪಟ್ಟು ಹೆಚ್ಚು ಪ್ರಮಾಣದಲ್ಲಿ ಸೀಬಮ್ ಉತ್ಪತ್ತಿಮಾಡುತ್ತವೆ ಇದರಿಂದ ಮೊಡವೆಗಳು ಹೆಚ್ಚಾಗಿ ಈ ಪ್ರಾಯದಲ್ಲಿ ಬರಲು ಆರಂಭವಾಗುತ್ತವೆ.

ಅಂಡಾಶಯದ ನೀರ್ಗುಳ್ಳೆಗಳು ( ovarian cysts): ಮಹಿಳೆಯರಲ್ಲಿ ಪದೇ ಪದೇ ಉಂಟಾಗುವ ದೊಡ್ಡ ಗಾತ್ರದ ಮೊಡವೆಗಳು ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (pcos) ಎಂಬ ಸಮಸ್ಯೆಯಿಂದ ಉಂಟಾಗುತ್ತವೆ. ಈ ಸಮಸ್ಯೆಯಲ್ಲಿ ಅಂಡಾಶಯದ ಮೇಲ್ಭಾಗದಲ್ಲಿ ನೀರ್ಗುಳ್ಳೆಗಳು ಉಂಟಾಗಿ, ಅವು ಕೆಲವು ವ್ಯತಿರಿಕ್ತ ಹಾರ್ಮೋನುಗಳನ್ನು ಸ್ರವಿಸುವುದರಿಂದ ಮಹಿಳೆಯರ ಸಹಜ ಋತುಚಕ್ರ (Menstrual cycle) ಕ್ರಮತಪ್ಪಿ, ಪ್ರತಿ ತಿಂಗಳೂ ಕ್ರಮವಾಗಿ ಆಗಬೇಕಾದ ಋತುಚಕ್ರ 2-3 ತಿಂಗಳುಗಳಿಗೊಮ್ಮೆ ಆಗುವುದು, ಕೆಲವೊಮ್ಮೆ ಬಹು ದಿನಗಳವರೆಗೆ ಋತು ಸ್ರಾವವಾಗುವುದು ಇತ್ಯಾದಿ ಸಮಸ್ಯೆಗಳಲ್ಲದೆ, ದೇಹದ ತೂಕ ಹೆಚ್ಚಾಗುವಿಕೆ, ಸ್ತ್ರೀಯರಲ್ಲಿ ಹೆಚ್ಚು ಕೂದಲು ಬೆಳೆಯುವುದು (ಹೆಚ್ಚಾಗಿ ಮುಖದಲ್ಲಿ) ಮಕ್ಕಳಾಗದಿರುವುದು    ಮತ್ತು ಇತರ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

ಔಷಧಿಗಳು : ಸ್ಟೀರಾಯ್ಡ್ , ಟೆಸ್ಟೋಸ್ಟೆರೋನ್ ಮತ್ತು ಲಿಥಿಯಂ ಅಂಶವುಳ್ಳ ಔಷಧಿಗಳು ಕೆಲವೊಮ್ಮೆ ಮೊಡವೆಯನ್ನುಂಟು ಮಾಡುತ್ತವೆ .

ಆಹಾರ ಪದಾರ್ಥಗಳು:  ಕೆಲವೊಬ್ಬರಲ್ಲಿ ಹಾಲು, ಕಾರ್ಬೋಹೈಡ್ರೇಟ್ (ಶರ್ಕರಪಿಷ್ಟ) ಮತ್ತು ಹೆಚ್ಚು ಕೊಬ್ಬಿನಂಶವುಳ್ಳ ಬ್ರೆಡ್, ಚಿಪ್ಸ್, ಕರಿದ ಪದಾರ್ಥಗಳು, ಜಂಕ್ ಫುಡ್ ಇತ್ಯಾದಿಗಳು ಮೊಡವೆಗಳನ್ನು ಹೆಚ್ಛಿಸುತ್ತವೆ.

ತಲೆಹೊಟ್ಟು  (Dandruff): ಮೊಡವೆ ಮತ್ತು ತಲೆಹೊಟ್ಟು ಒಂದಕ್ಕೊಂದು ಸಂಬಂಧಿಸಿವೆ, ತಲೆಹೊಟ್ಟು ಸಹ ಮೊಡವೆಗಳಂತೆ ಯೌವ್ವನಾವಸ್ಥೆಯಲ್ಲಿ ಹೆಚ್ಚು ಕಂಡುಬರುವ ಸಮಸ್ಯೆ, ತಲೆಹೊಟ್ಟು ಇದ್ದವರಲ್ಲಿ ಮೊಡವೆಗಳು ಭುಜ, ಎದೆ ಮತ್ತು ಹಣೆಯ ಭಾಗದಲ್ಲಿ ಕಂಡುಬರುತ್ತವೆ.

ಸೌಂದರ್ಯವರ್ಧಕಗಳು (cosmetics): ಇವುಗಳ ಅತಿಯಾದ ಬಳಕೆಯಿಂದ ನಮ್ಮ ಚರ್ಮದ ಸಹಜ ರಚನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ. ಎಣ್ಣೆಯುಕ್ತ ಸೌಂದರ್ಯ ಕ್ರೀಮುಗಳು, ಲೋಷನ್ ಇತರೇ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಯುಂಟಾಗುವ ಸಂಭವವೇ ಜಾಸ್ತಿ.

ಅನುವಂಶಿಕ (Genetics) : ಮೊಡವೆ ಅನುವಂಶಿಕತೆಯಿಂದಲೂ ಬರಬಹುದು, ತಂದೆ ತಾಯಿ ಇಬ್ಬರಲ್ಲೂ ಮೊಡವೆಯ ಸಮಸ್ಯೆ ಇದ್ದಿದ್ದರೆ ಮಕ್ಕಳಲ್ಲಿ ಮೊಡವೆ ಬರುವ ಸಂಭಾವ್ಯತೆ ಜಾಸ್ತಿ.

ಮಾನಸಿಕ ಒತ್ತಡ (stress) : ಇದೊಂದು ಗಂಭೀರವಾದ ಮತ್ತು ಮುಖ್ಯವಾದ ಕಾರಣ. ಆಧುನಿಕ ಜಗತ್ತಿನ ಅನೇಕ ಖಾಯಿಲೆಗಳಿಗೆ ಇದು ಮುಖ್ಯ ಕಾರಣ ಎಂದು ಹೇಳಬಹುದು. ಮಾನಸಿಕ ಒತ್ತಡದಿಂದ ಮೊಡವೆಯ ಸಮಸ್ಯೆ ಉಲ್ಬಣಗೊಳ್ಳುತ್ತದೆ

ಮೊಡವೆ ಸಮಸ್ಯೆಯುಳ್ಳವರು ಅನುಸರಿಸಬೇಕಾದ ಕ್ರಮಗಳು 

1. ಮೊಡವೆಗಳನ್ನು ಉಗುರು ಅಥವಾ ಬೆರಳುಗಳಿಂದ ಹಿಚುಕುವುದಾಗಲೀ ಕಿತ್ತುವುದಾಗಲೀ ಮಾಡಬಾರದು. ಇದರಿಂದ ಸಮಸ್ಯೆ ಉಲ್ಬಣವಾಗುತ್ತದೆ, ಮೊಡವೆಯಲ್ಲಿರುವ ಬ್ಯಾಕ್ಟೀರಿಯಾದ ಸೋಂಕು ಇತರೆ ಭಾಗಗಳಿಗೂ ಹರಡಿ ಹೊಸ ಜಾಗಗಳಲ್ಲಿಮೊಡವೆಗಳು ಹುಟ್ಟಿಕೊಳ್ಳುತ್ತವೆ.

2. ದಿನಕ್ಕೆ 2-3 ಲೀಟರ್ ನೀರು ಸೇವಿಸಬೇಕು,ಇದರಿಂದ ಚರ್ಮ ಒಣಗುವುದಿಲ್ಲ. ಹೆಚ್ಚು ನೀರು ಸೇವಿಸುವುದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ. ಚರ್ಮದ ಪೋಷಣೆಗೆ ಬೇಕಾದ ತೇವ(moisture) ಉಳಿಯುತ್ತದೆ.

3. ಮಲಬದ್ಧತೆ (constipation) ಸಮಸ್ಯೆಯಿಂದ ಬಳಲುವರಲ್ಲಿ ಮೊಡವೆ ಉಂಟಾಗುತ್ತದೆ. ಆದ್ದರಿಂದ ಅಂಥವರು, ಹೆಚ್ಚು ನೀರು, ನಾರಿನಂಶವುಳ್ಳ ತರಕಾರಿ, ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

4. ಮುಖದಲ್ಲಿ ಹೆಚ್ಚು ಎಣ್ಣೆಯಂಶವುಳ್ಳವರು ದಿನಕ್ಕೆ 2-3 ಸಲ ಮುಖವನ್ನು ತೊಳೆಯಬೇಕು. ಕೆಲವೊಬ್ಬರುಪದೇ ಪದೇ ಮುಖವನ್ನು ತಿಕ್ಕಿ ತಿಕ್ಕಿ ತೊಳೆಯುತ್ತಿರುತ್ತಾರೆ ಇದು ಒಳ್ಳೆಯದಲ್ಲ, ಹಾಗೆ ಮಾಡುವುದರಿಂದ ಮುಖದಲ್ಲಿ, ಚರ್ಮದಲ್ಲಿ ಇರಬೇಕಾದ ಸಹಜ ಪ್ರಮಾಣದ ಎಣ್ಣೆಯಂಶ ಹೋಗಿ ಚರ್ಮ ಬಹಳ ಒಣಗಿದಂತೆ ಆಗುತ್ತದೆ. ಇದರಿಂದ ಕಾಲಕ್ರಮೇಣ ಮುಖದ ಅಂದಗೆಡುತ್ತದೆ ಮತ್ತು ಮೊಡವೆಗಳು ಉಲ್ಬಣಗೊಳ್ಳುತ್ತವೆ.

5. ತಲೆಹೊಟ್ಟಿನ ಚಿಕಿತ್ಸೆಮತ್ತು  ನಿಯಂತ್ರಣ ಆತ್ಯಗತ್ಯ.

6. ವರ್ಜಿಸಬೇಕಾದ ಆಹಾರ:  ಕರಿದ ಪದಾರ್ಥಗಳು, ಜಂಕ್ ಫುಡ್, ಅತಿಯಾದ ಸಿಹಿ ಪದಾರ್ಥಗಳು

7. ಸರಿಯಾದ ಜೀವನಕ್ರಮ, ಒತ್ತಡದ ಸಮರ್ಪಕ ನಿಭಾವಣೆ, ತಕ್ಕುದಾದ ಧೈಹಿಕವ್ಯಾಯಾಮ ಇವೆಲ್ಲವನ್ನು ಅನುಸರಿಸಬೇಕು.

ಮೊಡವೆಯ ಸಮಸ್ಯೆಗೆ ಹೋಮಿಯೋಪಥಿ ಪರಿಹಾರ 

ಹೋಮಿಯೋಪಥಿಯಲ್ಲಿ ಮೊಡವೆಯ ಹಿಂದಿರುವ ಕಾರಣಗಳನ್ನು ಪರಿಶೀಲಿಸಿ, ಮೊಡವೆಯ ಸಮಸ್ಯೆಗೀಡಾಗಿರುವ ವ್ಯಕ್ತಿಯ ಇತರೆ ಲಕ್ಷಣಗಳನ್ನು ಆಧರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ, ಇಲ್ಲಿ ತಾತ್ಕಾಲಿಕ ಪರಿಹಾರಕ್ಕಲ್ಲ ಶಾಶ್ವತ ಪರಿಹಾರಕ್ಕೆ ಆಧ್ಯತೆ ನೀಡಲಾಗುವುದು.

ಓದುಗರಿಗೆ ಹೇಳಲು ಇಚ್ಚಿಸುವುದೆಂದರೆ, ಮೊಡವೆ ಬರೀ ಚರ್ಮದ ತೊಂದರೆಯಲ್ಲ, ಅದರ ಹಿಂದಿನ ಕಾರಣಗಳನ್ನು ನಾವು ಮೇಲೆ ವಿವರಿಸಿದ್ದೇವೆ, ಜಾಹೀರಾತಿನಲ್ಲಿ ನಮ್ಮನ್ನು ಮರುಳು ಮಾಡುವ ಮೊಡವೆ ನಿವಾರಕ ಕ್ರೀಮುಗಳಿಂದ ಮೊಡವೆಯ ನಿವಾರಣೆ ಸಾಧ್ಯವಿಲ್ಲ, ಹಾಗೇನಾದರೂ. ಮೊಡವೆಯನ್ನುಂಟುಮಾಡುವ ಕಾರಣಗಳನ್ನು ತಿಳಿದು, ಅದಕ್ಕನುಗುಣವಾಗಿ ಚಿಕಿತ್ಸೆಯನ್ನು ನೀಡುವುದರಿಂದ ಮಾತ್ರ  ಮೊಡವೆಯ ಸಮಸ್ಯೆಗೆ  ಶಾಶ್ವತ ಪರಿಹಾರ ಸಾಧ್ಯ

ಡಾ. ತೇಜಸ್ವಿ ಕೆ.ಪಿ.
ಸುರಭಿ ಹೋಮಿಯೋ ಕ್ಲಿನಿಕ್, ಶಾಪ್ ನಂ.2, #823, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 4ನೇ ಬ್ಲಾಕ್, ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
ಲ್ಯಾಂಡ್‍ಮಾರ್ಕ್ –  ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ
ಮೊ: 9731133819

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!