ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ.

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ಆರೋಗ್ಯ ಒಂದಿದ್ದರೆ, ಐಶ್ವರ್ಯದಲ್ಲಿ ರಾಜನನ್ನೂ ಮೀರಿಸಬಹುದೆಂಬ ಮಾತಿದೆ. ನಮ್ಮ ಜೀವನದ ತಳಹದಿ ಆರೋಗ್ಯ.

health-is-wealth

ಇಂದು ವಿಶ್ವ ಆರೋಗ್ಯ ದಿನ. ಪ್ರತಿಯೊಬ್ಬರೂ ಆರೋಗ್ಯದ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ. ನಮ್ಮ ನುಡಿಯ ಪ್ರಚಲಿತವಾದ ನಾಣ್ಣುಡಿಯೇ “ಆರೋಗ್ಯವೇ ಭಾಗ್ಯ”. ಮಹಾತ್ಮಾ ಗಾಂಧೀಜಿಯವರು, ನಿಜವಾದ ಭಾಗ್ಯವೆಂದರೆ ಆರೋಗ್ಯವೇ ಹೊರತು ಚಿನ್ನ ಮತ್ತು ಬೆಳ್ಳಿಯ ತುಂಡುಗಳಲ್ಲವೆಂದಿದ್ದಾರೆ.

ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ಆರೋಗ್ಯ ಒಂದಿದ್ದರೆ, ಐಶ್ವರ್ಯದಲ್ಲಿ ರಾಜನನ್ನೂ ಮೀರಿಸಬಹುದೆಂಬ ಮಾತಿದೆ. ನಮ್ಮ ಜೀವನದ ತಳಹದಿ ‘ಆರೋಗ್ಯ’ ‘ಜನರ ಆರೋಗ್ಯವೇ ರಾಷ್ಟ್ರದ ಸಂಪತ್ತು’ ಎಂಬ ಪ್ರಸಿದ್ದ ಲೇಖಕ ಈಮೈಲ್ಸ್‍ನ ಮಾತನ್ನೂ ಸಹ ನೆನಪಿನಲ್ಲಿಡೋಣ.

ಆರೋಗ್ಯದ ಪೂರ್ಣ ಅರ್ಥ:

ರೋಗವಿಲ್ಲದ ಸ್ಥಿತಿಯೇ ಆರೋಗ್ಯ” ಎಂಬ ಶಬ್ದಕೋಶದ ಅರ್ಥವು ಆರೋಗ್ಯದ ಪೂರ್ಣ ಅರ್ಥವನ್ನು ನೀಡುವುದಿಲ್ಲ. ಈ ಹಿಂದೆ, ವಿಶ್ವ ಆರೋಗ್ಯ ಸಂಸ್ಥೆಯು, ಆರೋಗ್ಯವೆಂದರೆ ಕೇವಲ ದೈಹಿಕ/ಮಾನಸಿಕ ದೌರ್ಬಲ್ಯವಿಲ್ಲದೇ ಇರುವುದು ಅಥವಾ ರೋಗರಹಿತ ಸ್ಥಿತಿಯಲ್ಲವೆಂದೂ, ಆರೋಗ್ಯವೆಂಬುದು ಸಂಪೂರ್ಣವಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯೆಂದರ್ಥವೆಂದು ತಿಳಿಸಿದೆ. ಅಂದರೆ, ದೈಹಿಕವಾಗಿ ಶಕ್ತಿಶಾಲಿಯಾಗಿ, ಮಾನಸಿಕವಾಗಿ ಧೃಢವಾಗಿ ಮತ್ತು ಸಾಮಾಜಿಕವಾಗಿ ಉತ್ತಮ ನಡವಳಿಕೆವುಳ್ಳವರೆಂದರ್ಥವಾಗಿತ್ತು. ಆದರೆ, ಈ ವ್ಯಾಖ್ಯಾನ ಸಂಪೂರ್ಣವಾಗಿಲ್ಲವೆಂದು ಭಾವಿಸಿ, ಆಮೇರಿಕದ ಪ್ರಕೃತಿ ಚಿಕಿತ್ಸಕ ಹೆನ್ರಿಲಿಂಡ್ಲರ್ ‘ಆದ್ಯಾತ್ಮಿಕ ಆರೋಗ್ಯದ ಘಟಕವನ್ನು ಸಹ ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದ ಜೊತೆಗೆ ಸೇರಿಸಿ ಆರೋಗ್ಯದ ವ್ಯಾಖ್ಯಾನವನ್ನು ಮಾಡಿರುತ್ತಾರೆ. ನಂತರದ ವರ್ಷಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯೂ ಆಧ್ಯಾತ್ಮಿಕ ಆರೋಗ್ಯವನ್ನೂ ಸಹ ಸಂಪೂರ್ಣ ಆರೋಗ್ಯದ ಒಂದು ಘಟಕವೆಂದು ಗುರುತಿಸಿದೆ.

ಆದರೆ ಹನ್ನೆರಡನೇ ಶತಮಾನದಲ್ಲಿಯೇ ಈ ಸತ್ಯವನ್ನು ನಮ್ಮ ವಚನಗಾರ್ತಿ ಅಕ್ಕಮಹಾದೇವಿಯರು ಕಂಡುಕೊಂಡಿದ್ದು, ಒಬ್ಬ ವ್ಯಕ್ತಿಯ ಪರಿಪೂರ್ಣ ಆರೋಗ್ಯವು ಹೇಗಿರಬೇಕೆಂದು ಈ ಕೆಳಗಿನ ವಚನದ ಮೂಲಕ ಅರ್ಥಪೂರ್ಣವಾಗಿ ವಿವರಿಸಿರುತ್ತಾರೆ :

ನಡೆಶುಚಿ, ನುಡಿಶುಚಿ, ತನುಶುಚಿ
ಮನಶುಚಿ, ಭಾವಶುಚಿ, ಇಂತಿ ಪಂಚತೀರ್ಥವನೊಳಗೊಂಡು
ಮತ್ರ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ
ಎನ್ನನುಳುಹಿಕೊಳ್ಳಾ! ಚೆನ್ನಮಲ್ಲಿಕಾರ್ಜುನ

ವಚನಗಾರ್ತಿ ಅಕ್ಕಮಹಾದೇವಿಯು, ತಮ್ಮ ಈ ವಚನದಲ್ಲಿ ಪಂಚ ಶುಚಿತ್ವದ ಬಗ್ಗೆ ತಿಳಿಸುತ್ತಾ, ಆರೊಗ್ಯದ ಪರಿಪೂರ್ಣ ಅರ್ಥವನ್ನು ನೀಡಿರುತ್ತಾರೆ. ಶುಚಿಯೆಂದರೆ ‘ಸ್ವಚ್ಛ’ ಎಂದರ್ಥ. ನಡೆಶುಚಿ, ನುಡಿಶುಚಿ ಎಂಬ ಶಬ್ದಗಳು ಸಾಮಾಜಿಕ ಆರೋಗ್ಯವನ್ನು ಸೂಚಿಸುವಂತೆ, ತನುಶುಚಿಯೆಂಬ ಶಬ್ದ, ದೈಹಿಕ ಆರೋಗ್ಯವನ್ನೂ, ಮನಶುಚಿ ಎಂಬುದು ಮಾನಸಿಕ ಆರೋಗ್ಯವನ್ನೂ ಮತ್ತು ಭಾವಶುಚಿ ಎಂಬ ಶಬ್ದ ಆಧ್ಯಾತ್ಮಿಕ ಆರೋಗ್ಯವನ್ನು ಸೂಚಿಸುತ್ತದೆ.

ಪರಿಪೂರ್ಣ ಆರೋಗ್ಯ-ರಾಷ್ಟ್ರ ಪ್ರಗತಿ :

ಯಾವುದೇ ರಾಷ್ಟ್ರ ಪ್ರಗತಿ ಹೊಂದಬೇಕಾದರೆ, ಆ ದೇಶದ ಆರ್ಥಿಕ ವ್ಯವಸ್ಥೆ ಜತೆಗೆ ಪ್ರತಿಯೊಬ್ಬ ನಾಗರೀಕನೂ ಮೇಲೆ ತಿಳಿಸಿದಂತೆ ಪರಿಪೂರ್ಣ ಆರೋಗ್ಯವಂತನಾಗಿರಬೇಕು. ಹಾಗಾಗಿ ದೇಶವನ್ನು ಪ್ರಗತಿ ಪಥದಲ್ಲಿ ಸಾಗಿಸಲು, ನಾವು ಪರಿಪೂರ್ಣ ಆರೋಗ್ಯವಂತರಾಗೋಣ. ಆರೋಗ್ಯವಂತ ಸಮಾಜ ಸೃಷ್ಟಿಸೋಣ ಮತ್ತು ದುಡಿಮೆಯ ಶಕ್ತಿ ವೃದ್ದಿಸೋಣ. ಆರೋಗ್ಯವೇ ಭಾಗ್ಯವೆನ್ನುವ ಮಂತ್ರವನ್ನು ಮರೆಯದಿರೋಣ.

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಎಂಬುದು ಸರಳ ಸತ್ಯ. ವಿಶ್ವ ಆರೋಗ್ಯ ಸಂಸ್ಥೆಯು, ಹೆಚ್ಚಿನ ಕಾಯಿಲೆಗಳಿಗೆ, ಜೀವನ ಶೈಲಿ ಸರಿಯಿಲ್ಲದೇ ಇರುವುದೇ ಕಾರಣವೆಂದಿದೆ. ಆರೋಗ್ಯಕರ ಜೀವನ ಶೈಲಿಯಿಂದ, ಜೀವನ ನಡೆಸುವುದು ಯಾರ ಕೈಯ್ಯಲ್ಲಿದೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರಖ್ಯಾತ ಸಂಶೋಧನೆಯು “ನಿಮ್ಮ ಮನೋಭಾವ ಬದಲಾಯಿಸಿ, ಜೀವನ ಬದಲಾಯಿಸಿ” ಎಂದಿದೆ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ.

ಮನಸ್ಸಿನಲ್ಲಿದ್ದ ಕಾಯಿಲೆಗಳು ದೇಹದ ಕಾಯಿಲಿಗಳಿಗೆ ಕಾರಣವಾಗುತ್ತದೆ. ಮನೋದೈಹಿಕ ಕಾಯಿಲೆಗಳಿಗೆ ನಾವೇ ಸೃಷ್ಠಿಕರ್ತರು. ಮನಸ್ಸಿನ ನಿಯಂತ್ರಣ ನಮ್ಮ ಕೈಯ್ಯಲ್ಲೇ ಇದೆ. ತ್ರಿದೋಷಗಳು (ವಾತ, ಪಿತ್ತ ಮತ್ತು ಕಫ) ಮತ್ತು ತ್ರಿಗುಣಗಳು (ಸತ್ವ, ರಜಸ್ಸು ಮತ್ತು ತಮಸ್ಸು) ಸಮ ಸ್ಥಿತಿಯಲ್ಲಿರುವುದೇ ಆರೋಗ್ಯವೆಂದಿದೆ, ರೋಗಾರೋಗ್ಯ ವಿಜ್ಞಾನ. ಆದ್ದರಿಂದ ಆರೋಗ್ಯಕ್ಕೆ ಆಯುರ್ವೇದದಲ್ಲಿ ತಿಳಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪಾಲಿಸಲೇಬೇಕಾದ ಹೊಣೆಗಾರಿಕೆ ನಮ್ಮದು.

ನಿನ್ನ ಆಹಾರವೇ ನಿನ್ನ ಔಷಧ”ವೆಂದು ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಹಿಪೋಕ್ರಟಸ್ ಹೇಳಿದ್ದಾನೆ. ಕೆಲವರು ಔಷಧಿಯನ್ನು ಆಹಾರವಾಗಿ ತೆಗೆದುಕೊಂಡರೆ, ಇನ್ನು ಕೆಲವರು ಆಹಾರವನ್ನೇ ಔಷಧಿಯನ್ನಾಗಿ ತೆಗೆದುಕೊಳ್ಳುತ್ತಾರೆಂಬ ಮಾತಿದೆ. “ಆಹಾರವೇ ಔಷಧ” ಎಂದು ಭಗವದ್ಗೀತೆ ಸಹ ಹೇಳಿದೆ. ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಮಾರಕ. ನಮ್ಮ ಹಿರಿಯರಿಂದ ಕಲಿತ ಆಹಾರ ಪದ್ದತಿಯೇ ಶ್ರೇಷ್ಠ ಮತ್ತು ಸಮತೋಲನದ ಆಹಾರ ಸೇವನೆ ಆರೋಗ್ಯಕ್ಕೆ ಅಗತ್ಯ.

ವೈದ್ಯರಲ್ಲಿ ಮೂರು ಬಗೆ. ಯಾವುವೆಂದರೆ, ದೃಶ್ಯ ವೈದ್ಯ (ವಿವಿಧ ವೈದ್ಯಕೀಯ ಪದ್ದತಿಯನ್ನು ಅಭ್ಯಾಸಿಸಿರುವವರು), ಅದೃಶ್ಯ ವೈದ್ಯ ಮತ್ತು ಪರಮ ವೈದ್ಯ. ದೃಶ್ಯ ವೈದ್ಯ ಆಸ್ಪತ್ರೆಯಲ್ಲಿದ್ದರೆ, ಅದೃಶ್ಯ ವೈದ್ಯ ನಮ್ಮೊಳಗೇ ಇದ್ದಾನೆ ಮತ್ತು ಪರಮ ವೈದ್ಯ ಎಲ್ಲರ ಜೊತೆಯಿದ್ದಾನೆ. ಅನಾರೋಗ್ಯಕ್ಕೆ ವೈದ್ಯರು ಬೇಕು, ಆರೋಗ್ಯಕ್ಕೆ ವೈದ್ಯರು ಬೇಡ ಎಂದಿದ್ದಾರೆ ಅನುಭವಿಗಳು.

ರೋಗವಿಲ್ಲದ ಜೀವನಕ್ಕೆ, ಉತ್ತಮ ದೈಹಿಕ, ಮಾನಸಿಕ,ಆದ್ಯಾತ್ಮಿಕ ಮತ್ತು ಸಾಮಾಜಿಕ ಸ್ಥಿತಿ, ಹಾಗೂ ಕಲ್ಮಷರಹಿತ ವಾತಾವರಣದ ಅಗತ್ಯವಿದೆ. ಮಾನವ ಪ್ರಕೃತಿಯ ಒಂದು ಭಾಗ. ಆದ್ದರಿಂದ ಪ್ರಕೃತಿಯೊಂದಿಗೆ ಉತ್ತಮ ಸಂಬಂಧ ಹೊಂದುವುದೂ ಸಹ ಆರೋಗ್ಯಕರ ಜೀವನಕ್ಕೆ ಅವಶ್ಯಕ. ಪ್ರಕೃತಿ ಹೇಳಿದಂತೆ ಕೇಳಿದರೆ ಆರೋಗ್ಯ ಉಚಿತ. ಪ್ರಕೃತಿ ವಿರುದ್ದವಾಗಿ ನಡೆದರೆ ಅನಾರೋಗ್ಯ ಖಚಿತ. ಶ್ರೇಷ್ಠ ಸತ್ಯಗಳು ಸರಳವಾಗುರುತ್ತವೆಯೆಂಬುದನ್ನು ಮರೆಯುತ್ತಿದ್ದೇವೆ. ಆದ್ದರಿಂದಲೇ ಹೇಳುವುದು ‘ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ’.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!