ವೈದ್ಯ ದಂಪತಿಯವರ ದಂತ ಸೇವೆಯ ಜುಗಲ್ ಬಂದಿ

“ಇಪ್ಪತ್ತೆರಡರ ಹೊಸ್ತಿಲಿನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ”

ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲಾ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು.ಅದೇ ಬದುಕಾದರೆ…? ಬದುಕು ಬರಡಾಗುತ್ತ, ವ್ಯಾವಹಾರಿಕವಾಗಿ ಕೇವಲ ಲೌಕಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಅದಲ್ಲ… ಅಷ್ಟೇ ಅಲ್ಲ… ಬದುಕಿನ ಮುಖಗಳು. ಅದಕ್ಕೆ ವ್ಯಾಪ್ತಿ, ಆಳ, ಎತ್ತರ ಇದೆ ಎನ್ನುವುದಾದರೆ ಅದನ್ನು ಮಾನವೀಯ ಬದುಕು ಎನ್ನಬಹುದು. ಸಾಕಷ್ಟು ಹಣ, ವೈಭವದ ಜೀವನ ನಡೆಸುವ ಎಲ್ಲಾ ಅವಕಾಶಗಳಿದ್ದರೂ ಕಲಿಕೆಯ ಜೀವನ ಮೌಲ್ಯಗಳನ್ನು ವೃತ್ತಿ ಮತ್ತು ಖಾಸಗೀ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಬದ್ಧತೆಯಿಂದ ದುಡಿಯುವ, ವರ್ತಿಸುವ ಕೆಲವರನ್ನಾದರೂ ಪ್ರತಿ ಊರುಗಳಲ್ಲಿ ಕಾಣಬಹುದು. ಅಂತಹವರ ಸಾಲಿನಲ್ಲಿ ಗುರುತಿಸಬಹುದಾದ ಹೆಸರುಗಳಲ್ಲೊಂದು ಸುರಕ್ಷಾ ದಂತ ಚಿಕಿತ್ಸಾಲಯದ ಡಾ| ಮುರಲೀಮೋಹನ ಚೂಂತಾರು ಮತ್ತು ಡಾ| ರಾಜಶ್ರೀ ಮೋಹನ್ ದಂಪತಿಗಳು.

ಮಂಜೇಶ್ವರದ ಹೊಸಂಗಡಿಯಲ್ಲಿ ಡಾ|ಮುರಲೀಮೋಹನ ಚೂಂತಾರುರವರು ಆರಂಭಿಸಿದ ದಂತ ಚಿಕಿತ್ಸಾಲಯವೇ ‘ಸುರಕ್ಷಾ’. ಅವರಿಗೆ ಹೆಗಲೆಣೆಯಾಗಿ ಹಾಥ್ನೊಂದಿಗೆ ಸಾಥ್ ನೀಡಿದವರು ಪತ್ನಿ ಡಾ| ರಾಜಶ್ರೀ ಮೋಹನ್ರವರು. ಕೇವಲ ಹಣ ಗಳಿಕೆಯ ದೃಷ್ಟಿಕೋನವಿರುತ್ತಿದ್ದರೆ ಊರಿಗೆ, ವೃತ್ತಿಗೆ ಜೊತೆಗೆ ತಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡಲು ಸಾಧ್ಯವಿರುತ್ತಿರಲಿಲ್ಲ. ಸೇವೆಯ ವಿಶಾಲಾರ್ಥದಲ್ಲಿ ಡಾ| ಮುರಲೀ ಮೋಹನರವರು ತನ್ನ ದಂತ ಚಿಕಿತ್ಸಾಲಯಕ್ಕೆ ಸಾಂಸ್ಥಿಕ ರೂಪ ನೀಡಿ ಹೊಸಂಗಡಿಯ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಹೊಸ ಬೆಳಕ ನೀಡಿದವರು. ದಂತಚಿಕಿತ್ಸೆಗೆಂದು ಬರುವ ಜನರಲ್ಲಿ ಸುರಕ್ಷತೆಯ ಭಾವ ಭದ್ರವಾಗಿ ಬೇರೂರುವಂತೆ ಮಾಡಿ ಸುರಕ್ಷಾ ಎಂಬ ಹೆಸರನ್ನು ಅನ್ವರ್ಥವಾಗಿಸಿದ್ದಾರೆ.

21 ವರ್ಷಗಳ ಹಿಂದೆ ಅಂದರೆ 1997 ಜುಲೈ 3 ರಂದು 1 ದಂತಕುರ್ಚಿ ಮತ್ತು ದಂತಕ್ಷಕಿರಣ (x-ray) ವ್ಯವಸ್ಥೆಯೊಂದಿಗೆ ಅಂದು ಸಚಿವರಾಗಿದ್ದ ಶ್ರೀ.ಬಿ.ರಮಾನಾಥರೈಯವರಿಂದ ಉದ್ಘಾಟಿಸಲ್ಪಟ್ಟ ಸುರಕ್ಷಾ ದಂತ ಚಿಕಿತ್ಸಾಲಯವು ಇಂದು ಅತ್ಯಾಧುನಿಕ ವ್ಯವಸ್ಥೆ, ತಂತ್ರಜ್ಞಾನಗಳೊಂದಿಗೆ ಬೆಳೆದ ಪರಿ ಯಾರನ್ನೇ ಆದರೂ ವಿಸ್ಮಿತರನ್ನಾಗಿಸದೆ ಇರದು. ಚಿಕಿತ್ಸೆಯ ಬೇಡಿಕೆಯ ಪೂರೈಕೆಯೊಂದಿಗೆ ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಹಾಯಾಗಿರಬಹುದಿತ್ತು. ಆದರೆ ಡಾ| ಮುರಲೀಮೋಹನರು ಅದಕ್ಕೆ ಅಂಟಿಕೊಳ್ಳುವ ಜಾಯಮಾನದವರಲ್ಲ. ಬಡತನದಲ್ಲಿ ಬೆಳೆದ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಓದಿದ ಹಿನ್ನೆಲೆ ಇವರದು. ಆ ಹಿನ್ನೆಲೆಯಲ್ಲಿ ತಾನೂ ಬೆಳೆಯುವುದರೊಂದಿಗೆ ಸಮಾಜದ ಏಳಿಗೆಯೂ ಮುಖ್ಯವೆಂದು ಪರಿಭಾವಿಸಿಕೊಂಡು ತನ್ನ ಚಿಕಿತ್ಸಾಲಯವನ್ನು ಕಾಲಕಾಲಕ್ಕೆ ಅಭಿವೃದ್ಧಿ ಪಡಿಸಿಕೊಂಡು ವಿಸ್ತತಗೊಳಿಸಿದ್ದಾರೆ.ಇವರ ಚಿಕಿತ್ಸಾಲಯದಲ್ಲಿ ಏನಿದೆ…? ಎಂದು ಪ್ರಶ್ನಿಸಬೇಡಿ. ಬಾಯಿ, ಮುಖ, ದವಡೆ ಮತ್ತು ದಂತಕ್ಕೆ ಸಂಬಂಧಿಸಿದ ಯಾವ ಚಿಕಿತ್ಸೆ ಬೇಕಾಗಿದೆ ಎಂದು ವಿಚಾರಿಸಿ.

ಹಂತ ಹಂತವಾಗಿ ಉನ್ನತಿಗೊಂಡ ಸುರಕ್ಷಾ ಚಿಕಿತ್ಸಾಲಯದಲ್ಲಿ ಇದೀಗ 10 ದಂತ ಚಿಕಿತ್ಸೆಗೊದಗುವ ಕುರ್ಚಿಗಳು, ದಂತ ಕ್ಷಕಿರಣ ಯಂತ್ರ, ದಂತ ಇಂಪ್ಲಾಂಟ್ ವಿಭಾಗದೊಂದಿಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಅತ್ಯಾಧುನಿಕವಾಗಿ ನವೀಕರಣಗೊಂಡು ಜನರ ಸೇವೆಗೆ ಸದಾ ಸನ್ನದ್ಧವಾಗಿದೆ. ಇಂತಹ ನವೀಕೃತ ವಿಭಾಗವು 2007ರಲ್ಲಿ ನವೀಕರಣಗೊಂಡು ಮಗದೊಮ್ಮೆ ಉದ್ಘಾಟನೆಯಾಗಿದ್ದು ಅದನ್ನು ನೆರವೇರಿಸಿದವರೂ ಅಂದು ಸಚಿವರಾಗಿ ಉದ್ಘಾಟಿಸಿದ್ದ ಶ್ರೀ ಬಿ.ರಮಾನಾಥ ರೈರವರು ಎಂಬುದು ಉಲ್ಲೇಖನೀಯ.

ಸೇವೆ, ನಗು ಮತ್ತು ಆರೋಗ್ಯ (SERVICE SMILE, HEALTH) ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಗಡಿನಾಡಿನ ಮತ್ತು ಒಳನಾಡಿನ ಎಲ್ಲರ ದಂತ ಸಂಬಂಧಿ ಸಕಲ ಕಾಯಿಲೆಗಳಿಗೆ ಪರಿಹಾರ ಹುಡುಕುವಲ್ಲಿ ‘ಸುರಕ್ಷಾ’ ದಂತ ಚಿಕಿತ್ಸಾಲಯವು ಮುಂಚೂಣಿಯಲ್ಲಿದೆ. ಮಕ್ಕಳಹಲ್ಲಿನ ತಜ್ಞರು, ಹಲ್ಲಿನ ವಸಡುತಜ್ಞರು, ಬೇರುನಾಳ ತಜ್ಞರು, ವಕ್ರದಂತ ತಜ್ಞರು, ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಾ ತಜ್ಞರು ಹೀಗೆ ದಂತ ಸ್ನಾತಕೋತ್ತರ ವಿಭಾಗದ ಎಲ್ಲ ವೈದ್ಯರುಗಳ ಸೇವೆಯನ್ನು ಮಾನವೀಯ ಕಳಕಳಿಯೊಂದಿಗೆ ಸೇವೆ ನೀಡುವ ದಂತ ವೈದ್ಯ ದಂಪತಿಗಳ ಪ್ರಾಮಾಣಿಕ ಪ್ರಯತ್ನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬಿಡುವಿಲ್ಲದ, ದಣಿವರಿಯದ ದುಡಿಮೆ ಇವರದು. ತನ್ನ ತಾಯಿಯವರ ನೆನಪಿನಲ್ಲಿ ‘ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ’ವನ್ನು ಸ್ಥಾಪಿಸಿಕೊಂಡು ಪ್ರತಿಷ್ಠಾನದ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಚಿತ ದಂತ ಚಿಕಿತ್ಸೆ ಮತ್ತು ರಕ್ತದಾನದ ನೂರಾರು ಶಿಬಿರಗಳನ್ನು ನಡೆಸಿಕೊಟ್ಟ ಸೇವಾ ದಾಖಲೆ ಸುರಕ್ಷಾ ದಂತ ಚಿಕಿತ್ಸಾಲಯದ್ದು.

ದಂತ ವೈದ್ಯಕೀಯ ವೃತ್ತಿಯ ಜೊತೆಗೆ ಸಾವಿರಾರು ವೈದ್ಯಕೀಯ ಜಾಗೃತಿ ಲೇಖನಗಳನ್ನು ಬರೆದು ಜನರಲ್ಲಿ ರೋಗ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದೇ ವೈದ್ಯರ ವೃತ್ತಿ ಧರ್ಮ ಎಂದು ಪ್ರಾಮಾಣಿಕವಾಗಿ ನಂಬಿಕೊಂಡು ಜನರಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಹೊಸದಿಗಂತ, ವಾರ್ತಾಭಾರತಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯವಾಣಿ, ಪ್ರಜಾವಾಣಿ, ಕನ್ನಡಪ್ರಭ, ಜಯಕಿರಣ, ಸುಧಾ, ಕರ್ಮವೀರ, ಮಂಗಳ, ಆರೋಗ್ಯ, ವೈದ್ಯ ಲೋಕ, ಸಂಜೀವಿನಿ ಹೀಗೆ ಹತ್ತು ಹಲವು ದೈಹಿಕ, ಸಾಪ್ತಾಹಿಕ ಮತ್ತು ಮಾಸಿಕ ಪತ್ರಿಕೆಗಳಲ್ಲಿ ವೈದ್ಯಕೀಯ ಜಾಗೃತಿ ಲೇಖನಗಳನ್ನು ತಮ್ಮ ಬಿಡುವಿಲ್ಲದ ದಂತ ವೈದ್ಯಕೀಯ ವೃತ್ತಿಯ ನಡುವೆಯೂ ಬರೆದು ಪ್ರಕಟಿಸಿ ಸಾವಿರಾರು ಅಭಿಮಾನಿ ಬಳಗದವರನ್ನು ಸೃಷ್ಟಿಸಿಕೊಂಡಿರುತ್ತಾರೆ. ಇದರ ಜೊತೆಗೆ ವಿಶ್ವಕನ್ನಡಿಗ ನ್ಯೂಸ್, ಬಂಟ್ವಾಳ ನ್ಯೂಸ್, ಕಡಬ ನ್ಯೂಸ್, ಮಂಜೇಶ್ವರ ನ್ಯೂಸ್, ಡೈಜಿ ವರ್ಡ್ನ್ಯೂಸ್ ಮುಂತಾದ ಇಲೆಕ್ಟ್ರಾನಿಕ್ ಮಾದ್ಯಮಗಳಲ್ಲೂ ಆರೋಗ್ಯ ಜಾಗೃತಿ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಹೀಗೆ ಎಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಜನಸಾಮಾನ್ಯರನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ಸನ್ನು ಪಡೆದಿರುತ್ತಾರೆ.

ಶ್ರೀಯುತರು ಇದುವರೆಗೆ ಆರು ಆರೋಗ್ಯ ಸಂಬಂಧಿ ಪುಸ್ತಕಗಳನ್ನು ಬರೆದು ತಮ್ಮ ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಪ್ರಕಟಿಸಿರುತ್ತಾರೆ. “ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ” ಎಂಬ ದಂತ ರೋಗಗಳಿಗೆ ಸಂಬಂಧಿಸಿದ ಪುಸ್ತಕ ಇವರ ಮೊದಲನೇ ಕೃತಿ ಮತ್ತು “ಕಚಗುಳಿ” ಎಂಬ ದಂತ ಹನಿಗವನ ಇವರ ಎರಡನೇ ಕೃತಿಯಾಗಿರುತ್ತದೆ. ಹಾಗೆಯೇ ರಕ್ತದಾನದ ಬಗ್ಗೆಯೂ “ರಕ್ತದಾನ- ಜೀವದಾನ” ಎಂಬ ಪುಸ್ತಕವನ್ನು ಮುದ್ರಿಸಿ ಈ ವರೆಗೆ ಇಪ್ಪತ್ತು ಸಾವಿರ ಪ್ರತಿಗಳನ್ನು ಉಚಿತವಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹಂಚಿ ರಕ್ತದಾನದ ಬಗ್ಗೆ ಬೃಹತ್ ಜಾಗೃತಿ ಮೂಡುವಂತೆ ಸಮಾಜಮುಖಿ ಸೇವೆಯನ್ನು ಮಾಡಿರುತ್ತಾರೆ. ಇದರ ಇಂಗ್ಲೀಷ್ ಅವತರಣಿಕೆಯೂ ಬಿಡುಗಡೆಯಾಗಿದ್ದು, ಸುಮಾರು ಎರಡು ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಲಾಗಿದೆ. ರಕ್ತದಾನ ಜೀವದಾನ ಕೃತಿಯ ಮಲೆಯಾಳಿ ಅನುವಾದಿತ ಗ್ರಂಥ ಸದ್ಯದಲ್ಲಿ ಬಿಡುಗಡೆಯಾಗಲಿದೆ. ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಎಂಬ ವೈದ್ಯಕೀಯ ಜಾಗೃತಿ ಲೇಖನಗಳ ಪುಸ್ತಕ ಇವರ ನಾಲ್ಕನೇ ಕೃತಿಯಾಗಿದ್ದು, 2016ರಲ್ಲಿ ಬಿಡುಗಡೆಗೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚಿಗೆ “ಚಿತ್ರಾನ್ನ” ಎಂಬ 32 ನೈಜ ದಂತ ಕತೆಗಳ ಸಂಗ್ರಹ ಡಾ|| ಮುರಲೀಮೋಹನ್ ಚೂಂತಾರು ಇವರ ಸಂಪಾದಕತ್ವದಲ್ಲಿ 2016ರಲ್ಲಿ ಬಿಡುಗಡೆಗೊಂಡು ಓದುಗರಿಂದ ಬಹಳ ಪ್ರಶಂಸೆಗೊಳಗಾಗಿದೆ. ಈ ಪುಸ್ತಕದಲ್ಲಿ ಸುಮಾರು 32 ದಂತವೈದ್ಯರು ತಮ್ಮ ನಿಜ ಜೀವನದ ಹಾಸ್ಯಮಯ ಘಟನೆಗಳನ್ನು ಮತ್ತು ವೃತ್ತಿ ಸಂಬಂಧಿ ಅನುಭವಗಳನ್ನು ಹಂಚಿಕೊಂಡಿರುತ್ತಾರೆ. ಈ ಪುಸ್ತಕದ ಎಲ್ಲಾ ಒಂದು ಸಾವಿರ ಪ್ರತಿಗಳು ಮಾರಾಟವಾಗಿದ್ದು, ಎರಡನೇ ಮುದ್ರಣದ ಹಂತದಲ್ಲಿದೆ.

“ಸಂಜೀವಿನಿ” ಭಾಗ ಎರಡು ಡಾ|| ಚೂಂತಾರು ಇವರ 6ನೇ ಕೃತಿಯಾಗಿದ್ದು 2017 ಜುಲೈ 3ರಂದು ಸುರಕ್ಷಾ ದಂತ ಚಿಕಿತ್ಸಾಲಯದ ವಿಂಶತಿ ಸಂಭ್ರಮದೊಂದಿಗೆ ಲೋಕಾರ್ಪಣೆಗೊಂಡಿದೆ. ಇವರ ಏಳನೇ ಕೃತಿ ‘ಸಂಗಾತಿ’ – ಸ್ವಾಸ್ತ್ಯ ಸಂಹಿತೆ ಮುದ್ರಣದ ಹಂತದಲ್ಲಿದ್ದು, ಇನ್ನೊಂದೆರಡು ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಎ.ಬಿ. ಶೆಟ್ಟಿ ದಂತಕಾಲೇಜಿನಲ್ಲಿ 16 ವರ್ಷಗಳ ಕಾಲ ಹಿರಿಯ ಪ್ರಾಧ್ಯಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಘಟನೆಯ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರಿನ ಖ್ಯಾತ ತೇಜಸ್ವಿನಿ ಆಸ್ಪತ್ರೆಯಲ್ಲಿ ಬಾಯಿ ಮುಖ ದವಡೆ ಶಸ್ತಚಿಕಿತ್ಸಕರಾಗಿ ಕಳೆದೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಗ್ರಹರಕ್ಷಕ ದಳದ ಸಮಾಧೇಷ್ಠರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ದಂತ ವೈದ್ಯರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಅನುಭವವೂ ಇವರಿಗಿದೆ. ನಿಟ್ಟೆ ವಿಶ್ವವಿದ್ಯಾಲಯದ ಯೂತ್ ರೆಡ್ಕ್ರಾಸ್ ಅಧಿಕಾರಿಯಾಗಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿಯಾಗಿ ಮೂರು ವರ್ಷಗಳ ಕಾಲ ದುಡಿದಿರುತ್ತಾರೆ. ಹೀಗೆ ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಕಿರುಕಾಣಿಕೆ ನೀಡಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.

ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಸೇವೆಯ ರೂಪದಲ್ಲಿ ವೃತ್ತಿಯ ಪಾವಿತ್ರ್ಯ ಮತ್ತು ಗೌರವವನ್ನು ಎತ್ತರಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ಮೆರುಗು ತಂದುಕೊಂಡ ಡಾ| ಮುರಲೀ ಮೋಹನ ಚೂಂತಾರು ಮತ್ತು ಡಾ| ರಾಜಶ್ರೀ ಮೋಹನ್ ವೈದ್ಯ ದಂಪತಿಯವರ ದಂತ ಸೇವೆಯ ಜುಗಲ್ ಬಂದಿ ಹೀಗೆ ಮುಂದುವರಿದಲ್ಲಿ ಗಡಿನಾಡ ಕನ್ನಡಿಗರ ಶುಕ್ರದಂತ ಇನ್ನಷ್ಟು ಹೊಳೆಯುವುದರಲ್ಲಿ ಸಂಶಯವಿಲ್ಲ. ಡಾ| ರಾಜಶ್ರೀ ಮೋಹನ್ ಕೂಡಾ ಕೌಟುಂಬಿಕ ಜೀವನದ ಜೊತೆಯಲ್ಲಿ ದಂತ ವೈದ್ಯಕೀಯ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಕಳೆದ ಇಪ್ಪತ್ತೊಂದು ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯದ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ವೃತ್ತಿ, ಪ್ರವೃತ್ತಿಯ ಜೊತೆ ಜೊತೆಗೆ ದಂತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿರುವ ಡಾ| ಮುರಲೀಮೋಹನರು ದಂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ದೇಶ-ವಿದೇಶಗಳಲ್ಲಿ ಜರಗಿದ ಹಲವು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿ ದಂತ ವೈದ್ಯಕೀಯ ಲೋಕದ ಸಂಗತಿಗಳಲ್ಲಿ ತನ್ನ ಪ್ರೌಢಿಮೆಯನ್ನೂ ಮೆರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗೆ ಅಧ್ಯಯನ – ಸೇವೆಯೊಂದಿಗೆ ಇವರ ದಂತವೃತ್ತಿಯ ‘ಸೇವೆಯ ಜೊತೆಯಾಟ’ ಸದಾ ಮುಂದುವರಿಯಲಿ ಎಂದು ಆಶಿಸೋಣ.

 

ಸುರಕ್ಷಾ ದಂತಚಿಕಿತ್ಸಾಲಯ, ರಿಫಾ ಸೆಂಟರ್, ಹೊಸಂಗಡಿ, ಮಂಜೇಶ್ವರ- 671 323
www.surakshadental.com
Email : drmuraleemohan@gmail.com   Mob : 9845135787

Email. drrajashreemohan@gmail.com   Mob : 9845548807

ರಾಮಕೃಷ್ಣ ಭಟ್ ಚೊಕ್ಕಾಡಿ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!