ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ- ಸಂತಾನ ಭಾಗ್ಯಕ್ಕೆ ನೂರೆಂಟು ವಿಘ್ನಗಳು

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ. ಸಂತಾನ ಭಾಗ್ಯಕ್ಕೆ ಗಂಡು-ಹೆಣ್ಣು ಇಬ್ಬರೂ ಸಮಾನ ಒತ್ತಡವನ್ನು, ಸಮಾನವಾಗಿ ಪರಿಸ್ಥಿತಿಯನ್ನುತೆಗೆದುಕೊಳ್ಳುವುದು ಮುಖ್ಯ. ಬಂಜೆತನಕ್ಕೆ ಬೇಸತ್ತು ಯಾರೂ ಜೀವಕ್ಕೆ ಅಪಾಯ ತಂದುಕೊಳ್ಳುವ ಅಗತ್ಯವೂ ಇಲ್ಲ. ಸಂತಾನಹೀನತೆಗೆ ನೇರವಾಗಿ ಹೆಣ್ಣಿಗಿಂತ ಗಂಡಸೇ ಹೆಚ್ಚಿನ ಮಟ್ಟದಲ್ಲಿ ಕಾರಣ ಎಂಬುದು ತಿಳಿದು ಬಂದಿದೆ.  ಯಾರಿಗೆ ಸಂತಾನ ಭಾಗ್ಯವಿಲ್ಲವೋ ಅವರಿಗೆ ಮಗುವನ್ನು ನೀಡಲು ಸಹಕರಿಸುವಲ್ಲಿ ಆಧುನೀಕ ವೈದ್ಯಕೀಯ ವಿಜ್ನಾನ ಸಾಕಷ್ಟು ಪ್ರಗತಿ ಕಂಡಿದೆ. 

 

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ- ಸಂತಾನ ಭಾಗ್ಯಕ್ಕೆ ನೂರೆಂಟು ವಿಘ್ನಗಳು

ಹಿಂದೆಲ್ಲಾ ಕುಟುಂಬಗಳು ಬಾಳಿ ಬದುಕುವ ಪರಿಶ್ರಮದ ಹಿಂದೆ ಸಾಕಷ್ಟು ಸಂಪ್ರದಾಯಗಳಿದ್ದವು. ಮಡಿ -ಮೈಲಿಗೆ ಎಂಬ ಕಟ್ಟುನಿಟ್ಟಿನ ರೂಢಿಯಿಂದ ಆರಂಭಗೊಳ್ಳುವ ದಿನ ನಿತ್ಯದ ಕಾರ್ಯಗಳು ದೈವಕ್ಕೆ, ಊಟೋಪಚಾರದಲ್ಲಿ, ಹಾಗೂ ಇನ್ನಿತರ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲೂ ಬೇರೂರಿದ್ದವು. ಮುಖ್ಯವಾಗಿ, ಮಹಿಳೆಯರ ಆರೋಗ್ಯದ ದೃಷ್ಟಿಯಲ್ಲಿ, ನಾನೊಬ್ಬ ವೈದ್ಯನಾಗಿ, ಹಲವಾರು ಮೌಢ್ಯಗಳನ್ನು ಕಳೆದ ಒಂದೂವರೆ ದಶಕದಿಂದ ನೊಡುತ್ತ ಬಂದಿದ್ದೇನೆ. ಕೆಲವೊಂದು ಸಾಮಾಜಿಕ ಹಾಗೂ ಮಾನಸಿಕವಾಗಿ ಬೇರು ಬಿಟ್ಟಿರುವ ನಂಬಿಕೆಗಳನ್ನು, ಅಥವಾ ಮೌಢ್ಯವನ್ನು ಕಿತ್ತೊಗೆಯಲು ವೈದ್ಯಕೀಯ ಅಸ್ತ್ರವನ್ನು ಬಳಸಿದ್ದಿದೆ. ಆದರೆ ಇಂದಿಗೂ ಮುಟ್ಟಾದ ಮಹಿಳೆಯಿಂದ ಮೈಲಿಗೆಯಾಗುವುದು ಎಂಬ ವಿಚಿತ್ರ ನಂಬಿಕೆ ಗ್ರಾಮೀಣ ಜೀವನದಿಂದ ದೂರವಾಗಿಲ್ಲ. ಈ ನಂಬಿಕೆಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದ್ದು ನಗರೀಕರಣ. 

ನಗರದಲ್ಲಿ ಗಂಡನೊಂದಿಗೆ ವಾಸಿಸುವ ಮಹಿಳೆ ಮುಟ್ಟಾದಾಗ ಮಡಿ-ಮೈಲಿಗೆ ಕಲ್ಪನೆಯಿಲ್ಲದೆ ಅಡುಗೆ ಮಾಡಿಕೊಂಡು, ಮನೆ ಒಳ ಹೊರಗೆ ಒಡಾಡಿಕೊಂಡಿರುತ್ತಾಳೆ. ಆದರೆ ಯಾವಾಗ ವರ್ಷಕ್ಕೆರಡು ಸಲ ಹಳ್ಳಿಗೆ ಹೋದಾಗ ಮುಟ್ಟಾದ ಸಂದರ್ಭದಲ್ಲಿ, ಮನೆ ಹೊರಗೆ ಮೂರು ದಿನಗಳನ್ನು ಕಳೆಯುವ ಸನ್ನಿವೇಶ ಮರೆಯಾಗಿಲ್ಲ. ನಗರದ ಮಹಿಳೆಗೆ ದೈರ್ಯ ಹೆಚ್ಚು, ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದಿದ್ದಾಳೆ ಎನ್ನುತ್ತೇವಲ್ಲ, ಆದರೆ ಇದೇ ಮಹಿಳೆ ತನ್ನ ಹಳ್ಳಿಗೆ ಹೋದಾಗ ಯಾಕೆ ಮತ್ತೆ ತನ್ನ ನಂಬಿಕೆಗೆ ಸಿಲುಕಿಕೊಳ್ಳುತ್ತಾಳೆ? ಇದೊಂದು ವಿಸ್ಮಯವೇ. ಆದರೆ ಇಂಥ ಸಣ್ಣ ವಿಷಯದಲ್ಲಿ ಕುಟುಂಬದ ಅತ್ತೆ, ಮಾವ, ಅಥವಾ ಹಿರಿಯರ ಮೌಢ್ಯತೆ ಜಾಸ್ತಿ. ತನ್ನನ್ನು ಹೇಗೆ ಗಂಡನ ಮನೆಯಲ್ಲಿ ನಡೆಸಿಕೊಂಡರು ಎಂಬುದನ್ನೇ ಮುಖ್ಯವೆಂದು ಪರಿಗಣಿಸುವ ಅತ್ತೆ, ತನ್ನ ಸೊಸೆಯನ್ನು ಕೂಡಾ ಹಾಗೇ ನಡೆಸಿಕೊಳ್ಳುತ್ತಾಳೆ. ಇದು ಒಂಥರಾ ರೂಢಿಯಿಂದ ಆದ ಮನಸಿನ ಒತ್ತಡ. ಹೀಗೆ ನಡಯಬೇಕು ಎಂಬ ಹಂಬಲ.

ಇಂಥ ನಂಬಿಕೆ ಎಷ್ಟು ಮೌಢ್ಯವೆನಿಸುತ್ತದೆ ಎಂದರೆ, ಸೊಸೆಗೆ ಮದುವೆಯಾಗಿ ಎರಡು ವರ್ಷಗಳ ಮೇಲೂ ಮಗು ಹುಟ್ಟಿಲ್ಲವೆಂದರೆ, ಸೊಸೆಯಲ್ಲಿ ಎನೋ ಸಮಸ್ಯೆಯಿದೆ ಎನ್ನುವ ಸಂಶಯ. ಬಹುಶ: ಬಂಜೆ ಹೆಂಗಸು ಇರಬಹುದು ಎಂಬ ಕಲ್ಪನೆ ಬೆಳೆದು, ನೇರವಾಗಿ ಸಮಸ್ಯೆಗಳಿಗೆ ಸೊಸೆಯನ್ನೇ ಗುರಿ ಮಾಡಿಬಿಡುವುದು. ಮಗು ಹುಟ್ಟುವುದು ಹೆಣ್ಣಿನಿಂದ, ಹುಟ್ಟದಿದ್ದರೆ ಇದರ ಸಮಸ್ಯೆ ಕೂಡಾ ಹೆಣ್ಣಿನಿಂದಲೇ ಎಂಬ ಮೌಢ್ಯತೆ ಬಹಳ ತಲೆಮಾರುಗಳ ಹಿಂದಿನಿಂದ ಚಾಲ್ತಿಯಲ್ಲಿರುವಂಥದ್ದು. ಇದನ್ನು ಹೆಣ್ಣು ಕೂಡಾ ಒಪ್ಪಿಕೊಂಡೇ ಬಂದಳು. ತನಗೆ ಮಗುವನ್ನು ಹೆರುವ ಶಕ್ತಿ ಇಲ್ಲ ಎಂಬ ಕೊರಗು ‘ಬಂಜೆ’ ಎಂಬ ಪಟ್ಟಕ್ಕೆ ಕಾರಣವಾಗಿ ಬಿಟ್ಟಿತು. ಇದರಿಂದ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ಹಾಗೂ ವಂಶೋದ್ಧಾರಕ್ಕೆ ಗಂಡು ಮಗು ಬೇಕು ಎಂಬ ಕಾರಣಕ್ಕೆ ಗಂಡಸು ಇನ್ನೊಂದು ಮದುವೆ ಮಾಡಿಕೊಳ್ಳುವ ಉದಾಹರಣೆಗಳಿವೆ. ಆದರೆ ಯಾರೊಬ್ಬರೂ, ಸಮಸ್ಯೆ ಗಂಡಿನಲ್ಲೂ ಇರಬಹುದಲ್ಲ ಎಂದು ಯೋಚಿಸುತ್ತಿರಲಿಲ್ಲ. ಮತ್ತೊಂದು ಮದುವೆಯಾಗಿ, ಅವಳಲ್ಲೂ ಸಂತಾನ ಭಾಗ್ಯ ಕಾಣದಿದ್ದಾಗಲೂ ನೇರವಾಗಿ ಹೆಣ್ಣಿನ ಮೇಲೆ ಶೋಷಣೆ. ಹೀಗೆ ಇದು ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದಿತು.

ಬಂಜೆತನ ಅಥವಾ ಸಂತಾನಹೀನತೆ  ಇಂದಿನ ದೊಡ್ಡ ಸಮಸ್ಯೆ.

ಈಗ ಪರಿಸ್ಥಿತಿ ತಿಳಿಯಾಗಿದೆ ಎನ್ನುವಂತೆಯೂ ಇಲ್ಲ. ಇಂದಿನ ಆಧುನಿಕ ಭಾರತದಲ್ಲೂ  ಮಹಿಳೆಯರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನಿಸುತ್ತದೆ. ಬಂಜೆತನ ಇನ್ನೂ ಮಹಿಳೆಯರಿಗೆ ಶಾಪ. ಹೋಗಲಿ, ಬೆಂಗಳೂರಿನಂಥ ಸುಧಾರಿತ, ಔದ್ಯೋಗಿಕರಣಗೊಂಡಂತ ನಗರದಲ್ಲಿ ಸಂತಾನ ಕಾಣದ ಮಹಿಳೆ ಶೋಷಣೆಗೊಳಗಾಗುತ್ತಾಳೆ. ಶಿಕ್ಷಣವಂತರಾದರೂ, ಈ ಜೀವ ವಿಕಾಸ, ಲೈಂಗಿಕತೆ, ಗರ್ಭಾವಸ್ಥೆ, ಗಂಡು-ಹೆಣ್ಣಿನ ಸಂಬಂಧ ಹಾಗೂ ಒಟ್ಟಾರೆ ಆರೋಗ್ಯದ ಬಗ್ಗೆ ಅನೇಕರಲ್ಲಿ ಮೌಢ್ಯ ತುಂಬಿಕೊಂಡಿದೆ. ಸಂತಾನ ಇಲ್ಲದಿದ್ದರೆ ಸಮಸ್ಯೆ ಇಬ್ಬರಲ್ಲೂ ಇರಬಹುದಲ್ಲ, ಅಥವಾ ತನ್ನ ಹೆಂಡತಿಯ ಮೇಲೆ ಆರೋಪಿಸುವಾಗ ತನ್ನಲ್ಲೂ ತೊಡಕು ಇದ್ದರೆ ಎಂದು ಯೋಚಿಸುವ ಗಂಡಸರು ಕಡಿಮೆ. ಇದಕ್ಕೆ ಪರಿಹಾರ ಇಲ್ಲ ಎಂದು ಕೊರಗಿ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಮಹಿಳೆಯರು ಇದ್ದಾರೆ. ಯಾವ ಹೆಣ್ಣಿಗೆ ಸಂತಾನದ ಆಸೆ ಇರುವುದಿಲ್ಲ ಹೇಳಿ?

ಬಂಜೆತನ ಅಥವಾ ಸಂತಾನಹೀನತೆ ಎಂಬುದು ಇಂದಿನ ದೊಡ್ಡ ಸಮಸ್ಯೆ. ಹಾಗಂತ ಇದನ್ನು ಬಗೆಹರಿಸಲಾಗದ ಹೊರೆ ಎಂದೇನೂ ತಿಳಿಯಬೇಕಾಗಿಲ್ಲ. ಬಂಜೆತನಕ್ಕೆ ಬೇಸತ್ತು ಯಾರೂ ಜೀವಕ್ಕೆ ಅಪಾಯ ತಂದುಕೊಳ್ಳುವ ಅಗತ್ಯವೂ ಇಲ್ಲ. ಇವತ್ತು ಸಂತಾನಹೀನತೆ ಕೇವಲ ಒಂದು ತೊಡಕು ಎಂದು ಪರಿಗಣಿಸಲಾಗುತ್ತಿದೆ. ಯಾರಿಗೆ ಸಂತಾನ ಭಾಗ್ಯವಿಲ್ಲವೋ ಅವರಿಗೆ ಮಗುವನ್ನು ನೀಡಲು ಸಹಕರಿಸುವಲ್ಲಿ ಆಧುನೀಕ ವೈದ್ಯಕೀಯ ವಿಜ್ನಾನ ಸಾಕಷ್ಟು ಪ್ರಗತಿ ಕಂಡಿದೆ. ಆದರೆ ಬಂಜೆತನ ಯಾಕಾಗಿ ಬರುತ್ತದೆ? ಯಾರಿಗೆ ಇದು ಕಾಣಿಸಿಕೊಳ್ಳಬಹುದು? ಗಂಡು-ಹೆಣ್ಣು ಇಬ್ಬರೂ ಇದಕ್ಕೆ ಸಹಭಾಗಿಗಳೇ? ವಂಶವಾಹಿನಿಯ ಪರಿಣಾಮವೂ ಇದಕ್ಕೆ ಕಾರಣವಾದೀತೇ? ಇದಕ್ಕೆ ಪರಿಹಾರವೇನು? ಇವುಗಳ ಬಗ್ಗೆ ನಾವು ತಿಳಿಯಬೇಕು.

ಹೆಣ್ಣಿಗಿಂತ ಗಂಡಸೇ ಹೆಚ್ಚಿನ ಮಟ್ಟದಲ್ಲಿ ಕಾರಣ

ಮಗುವನ್ನು ಹೊಂದಬೇಕು ಎಂದು ನಿರ್ಧರಿಸಿದ ಗಂಡು-ಹೆಣ್ಣು ಒಂದು ವರ್ಷದಲ್ಲಿ ಸಂತಾನ ಭಾಗ್ಯ ಕಾಣದಿದ್ದರೆ, ಆಗ ಇದನ್ನು ಸಂತಾನಹೀನತೆ ಎಂದು ಹೇಳಬಹುದು. ಅಂದರೆ, ಗಂಡು-ಹೆಣ್ಣಿನಲ್ಲಿ ಇಬ್ಬರಲ್ಲೂ, ಅಥವಾ ಇಬ್ಬರಲ್ಲಿ ಒಬ್ಬರಿಗೆ ತೊಂದರೆ ಇದೆ ಎಂದರ್ಥ. ಸಂತಾನಹೀನತೆಯ ಹಿನ್ನೆಲೆಯಲ್ಲಿ ಹೆಣ್ಣಿನಲ್ಲಿ ಕಂಡು ಬಂದಷ್ಟು ಸಂಗತಿಗಳು ಗಂಡಿನ ವಿಷಯದಲ್ಲಿ ತಿಳಿದು ಬಂದಿಲ್ಲ. ಇದಕ್ಕೆ ಕಾರಣ ಗಂಡು ಈ ಸಂಗತಿಯಿಂದ ಪಲಾಯನಗೊಳ್ಳುವುದು. ಅಂದರೆ ವೈದ್ಯಕೀಯ ಪರೀಕ್ಷೆಗಳಿಂದ ದೂರವಿರುವುದು. ಆದರೆ ಇತ್ತೀಚಿನ ವೈದ್ಯಕೀಯ ಪರೀಕ್ಷೆಗಳು ಸಾಬೀತು ಪಡಿಸಿರುವ ಸಂಗತಿ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಸಂತಾನಹೀನತೆಗೆ ನೇರವಾಗಿ ಹೆಣ್ಣಿಗಿಂತ ಗಂಡಸೇ ಹೆಚ್ಚಿನ ಮಟ್ಟದಲ್ಲಿ ಕಾರಣ ಎಂಬುದು ತಿಳಿದು ಬಂದಿದೆ. ಇದಕ್ಕೆ ಅನೇಕ ಕಾರಣಗಳಿವೆ:

ಒಂದು- ಗಂಡಿನ ವಿರ್ಯಾಣುಗಳ ಉತ್ಪನ್ನದ ದೋಷಗಳು.

ಎರಡು-ಸಂತಾನೋತ್ಪತ್ತಿಯ ಅಂಗಗಳ ತೊಂದರೆ.

ಮೂರು- ವೀರ್ಯ ಸ್ಖಲಿಸುವ ಹಾಗೂ ಚಿಮ್ಮಿಸುವ ಕ್ರಿಯೆಯಲ್ಲಿಯ ತೊಂದರೆ.

ನಾಲ್ಕು- ವೀರ್ಯ ವಿರೋಧಿ ಸಂಗತಿಗಳ ಪಾತ್ರ ಮುಖ್ಯವಾದವುಗಳು.

ಗಂಡಿನಲ್ಲಿ ಸಂತಾನಹೀನತೆಗೆ ಕಾರಣವಾಗುವ ಅಂಶಗಳಲ್ಲಿ ಉಷ್ಣಾಂಶವೂ ಒಂದು. ದೇಹದಲ್ಲಿ ತಾಪಮಾನ ಹೆಚ್ಚಾದಾಗ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ವೀರ್ಯಾಣುಗಳ ದುರ್ಬಲತೆ ಹಾಗೂ ಮಂದ ಚಲನೆಯೂ ಸಂತಾನಹೀನತೆಗೆ ಕಾರಣವಾದೀತು. ಇದಲ್ಲದೇ, ಗುಹ್ಯರೋಗಗಳಿಂದ ಪುರುಷರಲ್ಲಿ ಸಂತಾನ ಹೀನತೆಗೆ ಕಾರಣಗುವ ಸಂದರ್ಭಗಳಿವೆ. ಅಂದರೆ ಇದರಿಂದಾಗುವ ಸೋಂಕು ವೀರ್ಯ ನಾಳವನ್ನು ಮುಚ್ಚಿ ಬಿಡುವುದು. ಇದೆಲ್ಲಾ ಸಂಗತಿಗಳು ಎಷ್ಟೋ ಕಾಲದಿಂದ ಗುಪ್ತವಾಗೇ ಉಳಿದು ಹೆಣ್ಣು ಮಾತ್ರ ‘ಬಂಜೆ’ ಎನ್ನುವ ಪಟ್ಟ ಹೊತ್ತಿದ್ದು ವಿಪರ್ಯಾಸ.

ನನ್ನ ಅನುಭವದಲ್ಲಿ, ಈಗ ಹತ್ತು ವರ್ಷಗಳ ಹಿಂದೆ ಗಂಡಸು ವೈದ್ಯಕೀಯ ಪರೀಕ್ಷೆಗೆ ಹಿಂಜರಿಯುತ್ತಿದ್ದರು. ಅದೇನೋ ಒಂಥರಾ ಭಯ, ಅಥವಾ ಅಹಂ ಪ್ರಶ್ನೆ ಎಂದರೂ ಸರಿ. ಸಂತಾನಹೀನತೆಯು ಇಬ್ಬರ ಕಾರಣದಿಂದಲೂ ಆಗಬಹುದು ಎಂದು ಸೂಚ್ಯವಾಗಿ ವಿವರಿಸಿ ಹೇಳುತ್ತಿದ್ದ ಕಾಲ ಅದು. ಶಿಕ್ಷಣ ಪ್ರಸಾರ ಹೆಚ್ಚಾದಂತೆ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಬದಲಾಯಿತು ಎಂದರೂ, ಕುಟುಂಬದ ಹಿರಿಯರು ನೇರವಾಗಿ ಹೆಣ್ಣನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂಥ ಪರಿಸ್ಥಿತಿ ಇತ್ತು. ಈಗಲೂ ಇದು ಅನೇಕ ಕುಟುಂಬದಲ್ಲಿ ಇದೆ. ಹೀಗೆ ಸಮಸ್ಯೆ ಎದುರಾದಾಗ ಗಂಡು-ಹೆಣ್ಣು ಇಬ್ಬರೂ ಸಮಾನ ಒತ್ತಡವನ್ನು, ಸಮಾನವಾಗಿ ಪರಿಸ್ಥಿತಿಯನ್ನು ತೆಗೆದುಕೊಳ್ಳುವುದು ಮುಖ್ಯ. ಆಗ ಹೆಣ್ಣಿನ ಪರೀಕ್ಷೆಯ ಜೊತೆಗೆ ಗಂಡಿನ ವೀರ್ಯ ಪರೀಕ್ಷೆ ಮುಖ್ಯ. ಅಂದರೆ ವೀರ್ಯದ ಪ್ರಮಾಣ, ಅವು ಯೋಗ್ಯ ಸ್ಥಿತಿಯಲ್ಲಿದ್ದು, ಸಂತಾನ ಏರ್ಪಡಿಸಲು ಕಾರಣವಾಗಬಲ್ಲವೆ? ಎಂಬುದನ್ನು ತಿಳಿಯಬೇಕು. ಅಂದಾಗ ಮಾತ್ರ ಮುಂದೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು.

ಮಹಿಳೆಯರ  ಆರೋಗ್ಯ ಹದಗೆಡುತ್ತಿದೆ:

ಹೆಣ್ಣಿನ ಕಾರಣದಿಂದಲೂ ಸಂತಾನಹೀನತೆ ಕಾಣಿಸಬಹುದು. ಅದರಲ್ಲಿ ಮುಖ್ಯವಾಗಿ, ಸಂತಾನೋತ್ಪತ್ತಿಯ ಅಂಗರಚನೆಯಲ್ಲಿಯ ದೋಷ. ಮತ್ತೊಂದು, ಹಾರ್ಮೋನುಗಳ ತೊಂದರೆ. ಸಾಮಾನ್ಯವಾಗಿ ಹೆಣ್ಣು, ಮುಟ್ಟಿನ ನಿರ್ಧಿಷ್ಟ ಅವಧಿಯಲ್ಲಿ ಸಂತಾನೋತ್ಪತ್ತಿಗೆ ಸಜ್ಜಾಗುತ್ತಾಳೆ. ತಿಂಗಳಿಗೆ ಒಂದೇ ಒಂದು ಅಂಡಾಣು ನಿರ್ದಿಷ್ಟ ಅವಧಿಗೆ ಬಿಡುಗಡೆಯಾಗುತ್ತದೆ. ಆಗ ವೀರ್ಯಾಣು ಜೊತೆಯಾಗಬೇಕು. ಎಲ್ಲೂ ವ್ಯತ್ಯಯಗೊಳ್ಳದಿದ್ದರೆ ಗರ್ಭಧಾರಣೆ ಸುಲಭವಾಗುತ್ತದೆ. ಆದರೆ ಹೆಣ್ಣಿನ ಗರ್ಭಾಶಯ, ಅದರ ಸುತ್ತಮುತ್ತಲಿನ ಪದರ, ಅಂಡಾಶಯದಲ್ಲಿ ಸ್ವಲ್ಪ ಸಮಸ್ಯೆ ಇದ್ದರೂ ಗರ್ಭ ನಿಲ್ಲುವುದಿಲ್ಲ. ಕೆಲವು ಮಹಿಳೆಯರಲ್ಲಿ ಅಂಡಾಶಯ ನಿಷ್ಕ್ರೀಯವಾಗಿರುತ್ತದೆ. ಆಗ ಚಿಕಿತ್ಸೆ ನೀಡುವುದು ಕಷ್ಟ. ಆದರೆ ಅಂಡಾಣು ಬಿಡುಗಡೆ ಹೊಂದುವ ಕ್ರಿಯೆಯಲ್ಲಿ ದೋಷವಿದ್ದರೆ ಪರಿಹಾರ ಸಾಧ್ಯ. ಇಂಥ ಸಮಸ್ಯೆಗಳಿದ್ದ ಹಲವಾರು ಮಹಿಳೆಯರಿಗೆ ಇಂದು ಸಂತಾನಭಾಗ್ಯ ಸಿಕ್ಕಿದೆ-ಆಧುನಿಕ ವೈದ್ಯಕೀಯ ಚಿಕಿತ್ಸೆಯಿಂದ.

ಇದಲ್ಲದೇ, ಆಧುನೀಕ ಜೀವನ ಪದ್ಧತಿ, ಆಹಾರ ಸೇವನೆಯಲ್ಲಾದ ಬದಲಾವಣೆ, ಒತ್ತಡದಿಂದ ಕೂಡಿದ ಕೆಲಸದಿಂದ ನಗರವಾಸಿ ಮಹಿಳೆಯರ ನಿತ್ಯದ ಆರೋಗ್ಯ ಹದಗೆಡುತ್ತಿದೆ. ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿರುವ ಐಟಿ, ಬಿಟಿ ಮತ್ತು ಕಾಲ್‍ಸೆಂಟರ್ ಉದ್ಯೋಗಗಳು ಮಹಿಳೆಯರನ್ನು ಅನಾರೋಗ್ಯದತ್ತ ತಳ್ಳುತ್ತಿದೆ. ಇಂದು ಮಹಿಳೆಯರೂ ಆರ್ಥಿಕವಾಗಿ ಸ್ವಾವಲಂಬನೆ ಬೆಳೆಸಿಕೊಳ್ಳುತ್ತ ಹೋಗುತ್ತಿದ್ದಾರೆ. ಆದರೆ ಒತ್ತಡದ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿಂದ ಮಹಿಳೆಯರಲ್ಲಿ ನಿಶ್ಯಕ್ತತೆ, ದೇಹದಲ್ಲಿ ಗಡ್ಡೆ ಬೆಳೆಯುವಿಕೆ, ಗರ್ಭಕೋಶ ಕಾಯಿಲೆಗಳು, ಬಂಜೆತನ, ಮೂತ್ರ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ.

ಹಿಂದೆಲ್ಲ ಇಂಥ ಕಾಯಿಲೆಗಳು ಮಹಿಳೆಯರನ್ನು ಕಾಡಿರಲಿಲ್ಲ ಎಂದಲ್ಲ. ಆದರೆ ಐಟಿ, ಬಿಟಿ ಹಾಗೂ ವ್ಯವಹಾರಿಕ ಕೆಲಸಗಳ ದೈನಂದಿನ ಒತ್ತಡದ ಪರಿಣಾಮದಿಂದ ಈ ಸಮಸ್ಯೆಗಳು ಹೆಚ್ಚಾಗಿವೆ. ಶೇ. 25ರಷ್ಟು ಮಹಿಳೆಯರು ಬಂಜೆತನ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಯಾರೇ ಆದರೂ ಕೆಲಸದಲ್ಲಿ ಜಾಸ್ತಿ ಒತ್ತಡ, ದಿನದಲ್ಲಿ ಹದಿನೈದು ಗಂಟೆಗಳಿಗೂ ಹೆಚ್ಚು ಕಾಲ ದುಡಿತವನ್ನು ಎದುರಿಸಿದರೇ ಅಪಾಯ ತಪ್ಪಿದ್ದಲ್ಲ. ಕೇವಲ ದೈಹಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಕೆಟ್ಟ ಪರಿಣಾಮ ಬೀರುತ್ತದೆ. ಆಶ್ಚರ್ಯವೆಂದರೆ, ನಗರ ಜೀವನದಲ್ಲಿ ಉಂಟಾಗುತ್ತಿರುವ ನಂಬಿಕೆಗಳ ಬದಲಾವಣೆ ಕೂಡಾ ಮಹಿಳೆಯರ ಆರೋಗ್ಯಕ್ಕೆ ಧಕ್ಕೆ ತರುತ್ತಿವೆ. ತಡವಾಗಿ ಮದುವೆಯಾಗುವುದು, ಗರ್ಭಧಾರಣೆಯಲ್ಲಿ ವಿಳಂಭ ಮಾಡುವುದು, ಪತಿ-ಪತ್ನಿಯರ ನಡುವೆ ದೀರ್ಘಕಾಲದ ಸಮಾಗಮ ಇಲ್ಲದಿರುವುದು, ಪರಸ್ಪರ ಬೇರೆ ಬೇರೆ ವಾಸ್ತವ್ಯ ಮಾಡುವುದು; ಈ ಎಲ್ಲಾ ಅಂಶಗಳು ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಲು ಕಾರಣವಾಗುತ್ತವೆ.

ಇಂದು ಐಟಿ ಮತ್ತು ಬಿಟಿಯಲ್ಲಿ ದುಡಿಯುವ ನಾಲ್ಕು ಮಹಿಳೆಯರಲ್ಲಿ ಒಬ್ಬರು ಬಂಜೆತನ ಹಾಗೂ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೀವನಶೈಲಿ ಬದಲಾವಣೆ, ಆಹಾರ ವೈಪರೀತ್ಯ ಹಾಗೂ ಒತ್ತಡವೇ ಈ ಎಲ್ಲ ಕಾಯಿಲೆಗಳಿಗೆ ಮುಖ್ಯ ಕಾರಣಗಳು. ಪತಿ-ಪತ್ನಿ ಇಬ್ಬರೂ ಕೆಲಸ ಮಾಡುವುದರಿಂದ, ಬೆಳಿಗ್ಗೆ ಕೆಲಸಕ್ಕೆ ಹೋದ ಗಂಡ ಸಂಜೆ ಮರಳುವುದರೊಳಗೆ ಹೆಂಡತಿ ರಾತ್ರಿ ಪಾಳಿಗೆಂದು ಕಾಲ್ ಸೆಂಟರ್‍ಗೆ ಹೋಗುತ್ತಾಳೆ. ಇದರಿಂದ ಪರಸ್ಪರ ಮಾತನಾಡಲು, ಸುಖ-ದುಖ: ಹಂಚಿಕೊಳ್ಳಲು, ಸುಗಮವಾಗಿ ಲೈಂಗಿಕ ಜೀವನ ನಡೆಸಲು ಕಷ್ಟವಾಗುತ್ತಿದೆ. ಇದಲ್ಲದೇ, ಇಂದು ಕಂಡು ಬರುವ ಸಾಮಾನ್ಯ ಸಂಗತಿ ಕೆಲಸದ ಮೇಲೆ ತಿಂಗಳುಗಟ್ಟೆಲೇ ಟೂರ್ ಹೋಗುವುದು. ಇಬ್ಬರಿಗೂ ಮೊಬೈಲ್ ಒಂದೇ ಸಂಪರ್ಕ ಸೇತುವೆ. ಗಡಿಬಿಡಿಯಲ್ಲಿ ಲೈನ್ ಕಟ್ ಮಾಡಿದರೆ ಹೇಳುವ ಮಾತೂ ಉಳಿದುಬಿಡುತ್ತದೆ. ಇಂಥ ಒಂದು ಪರಿಸ್ಥಿತಿ ಸಾಮಾನ್ಯವೆನಿಸಿದರೂ ಆರೋಗ್ಯದ ದೃಷ್ಟಿಯಿಂದಂತೂ ಕೆಟ್ಟದಾಗಿ ಪರಿಣಮಿಸುತ್ತಿದೆ.

ನಿಸರ್ಗ ಸಹಜವಾಗಿ ಎಲ್ಲವೂ ನಡೆದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮಹಿಳೆಯರು 30ನೇ ವಯಸ್ಸಿನ ನಂತರ ಮದುವೆಯಾಗುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಇದಕ್ಕೆ ನಮ್ಮ ನಂಬಿಕೆಗಳಲ್ಲಾದ ಬದಲಾವಣೆಗಳು ಕಾರಣ. ಆದರೆ ವಯಸ್ಸಾದ ಮೇಲೆ ಮದುವೆಯಾಗುವದರ ಒಂದು ನಷ್ಟವೆಂದರೆ, ಮಕ್ಕಳನ್ನು ಪಡೆಯಲು ಕಷ್ಟವಾಗಬಹುದು. ಸ್ವಂತದ್ದೊಂದು ಮಗು ಬೇಕು ಎಂದು ಪ್ರತಿಯೊಬ್ಬ ಹೆಣ್ಣು ಬಯಸುತ್ತಾಳೆ. ಆದರೆ ಮದುವೆಗೆ ಹಾಗೂ ಮಕ್ಕಳನ್ನು ಪಡೆಯಲು 25 ರಿಂದ 27 ಸೂಕ್ತ ವಯಸ್ಸು. ಒತ್ತಡದಿಂದ ಕೂಡಿದ ಪರಿಸ್ಥಿತಿಯಲ್ಲಂತೂ ವಯಸ್ಸಾದಂತೆ ಬಂಜೆತನ ಕಾಡಬಹುದು. ಅಕಸ್ಮಾತ್ ಮಗು ಪಡೆದ ಮೇಲೆ-ವಯಸ್ಸಾದ ಮಹಿಳೆಗೆ-ನಿಶ್ಯಕ್ತಿ ಶಾಶ್ವತವಾಗಿ ಉಳಿಯಬಹುದು.

ಜೀವನ ನಮ್ಮನ್ನು ಓಡಿಸುತ್ತಿರುತ್ತದೆ. ಆದರೆ ನಾವು ಹೇಗೆ ಓಡುತ್ತೇವೆ ಎನ್ನುವುದು ಮುಖ್ಯ. ಎಲ್ಲೂ ಬೀಳದಂತೆ ಓಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕಷ್ಟಪಡಬೇಕು. ಹಾಗಂತ ಐಟಿ, ಬಿಟಿ ಕೆಲಸ ಬಿಟ್ಟು ಉತ್ತಮ ಜೀವನ ನಡೆಸಲು ಮನೆಯಲ್ಲಿ ಕೂತು ಮಕ್ಕಳನ್ನು ಹೆರುತ್ತ ಇರಬೇಕೇಂದಲ್ಲ. ಕೆಲಸ ಮಾಡುತ್ತಲೇ ಗುಣಾತ್ಮಕವಾಗಿ ಬದುಕುವುದು. ಅಂದರೆ ಸಾಧ್ಯವಾದಷ್ಟು ಕಾಲ ಪತಿ-ಪತ್ನಿಯರು ಜೊತೆಯಿರುವುದು, ಸರಿಯಾದ ವಯಸ್ಸಿಗೆ ಮದುವೆಯಾಗುವುದು, ಮನೆಯ ಆಹಾರವನ್ನೇ ಸೇವಿಸುವುದು, ಒತ್ತಡ ನಿಯಂತ್ರಣ ವಿಧಾನ ಅನುಸರಿಸುವುದು, ಅತಿಯಾದ ಕೆಲಸ ಮಾಡದಿರುವುದು, ತಜ್ನ ವೈದ್ಯರ ಸಂದರ್ಶಿಸುವುದು; ಈ ಮೂಲಕ ಎಲ್ಲಾ ಮಹಿಳೆಯರೂ ಸ್ವಸ್ಥ ಹಾಗೂ ಆರೂಗ್ಯಪೂರ್ಣ ಜೀವನ ನಡೆಸಬಹುದು.

Also Read: ವನಿತೆಯರ ಜೀವನ ಶೈಲಿ : ಒತ್ತಡದ ಜೀವನ – ನಿರಂತರ ಹೋರಾಟ

ರೋಗಗಳನ್ನು  ಯಶಸ್ವಿಯಾಗಿ ನಿವಾರಿಸಬಹುದು:

ಸಹಜವಾಗಿ ಗಂಡು-ಹೆಣ್ಣಿನ ಮಿಲನದಿಂದ ಸಂತಾನ ಭಾಗ್ಯ ಸಿಗದೇ ಇದ್ದಾಗ ತಜ್ನ ವೈದ್ಯರು ಸಹಾಯಕ್ಕೆ ಬರಲೇಬೇಕು. ನುರಿತ ಸ್ತ್ರೀರೋಗ ತಜ್ನರು ತಮ್ಮ ಪ್ರಯೋಗಾಲಯದಲ್ಲಿ ಕೃತಕ ವೀರ್ಯಧಾರಣೆ ಮಾಡುತ್ತಾರೆ. ಇಲ್ಲಿ ಗಂಡಿನ ವೀರ್ಯವನ್ನು ಪಡೆದು, ಸಂಸ್ಕರಿಸಿ ಹೆಣ್ಣಿನ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ಗಂಡಿನ ವೀರ್ಯ ನಿಶ್ಯಕ್ತವಾದ ಸಂದರ್ಭದಲ್ಲಿ ಈ ಪ್ರಯೋಗ ಅನಿವಾರ್ಯ. ಆದರೆ ಹೆಣ್ಣಿನಲ್ಲಿ ಸಮಸ್ಯೆ ಇದ್ದರೆ, ಅಂದರೆ ಗರ್ಭಗೊರಳಿನಲ್ಲಿ ವೀರ್ಯ ವಿರೋಧಿ ಸಂಗತಿಗಳಿದ್ದರೆ, ಗಂಡಿನ ವೀರ್ಯವನ್ನು ನೇರವಾಗಿ ಹೆಣ್ಣಿನ ಗರ್ಭದೊಳಕ್ಕೆ ಸೇರಿಸುವ ಕ್ರಮವಿದೆ. ಇದಲ್ಲದೇ, ಸಂತಾನಹೀನತೆಗೆ ನೇರವಾಗಿ ವೀರ್ಯಧಾರಣೆ ಒಂದೇ ಮಾರ್ಗವಲ್ಲ. ಬದಲಿಗೆ ಗಂಡು-ಹೆಣ್ಣಿನ ಮಿಲನ, ಲೈಂಗಿಕ ಮಾಹಿತಿ, ಇತರೆ ಶಸ್ತ್ರ ಚಿಕಿತ್ಸೆಗಳು ಅಗತ್ಯ.

ಇದಲ್ಲದೇ, ಸ್ತ್ರೀ ಸಂಬಂಧಿ ರೋಗಗಳನ್ನು ಇಂದು ಯಶಸ್ವಿಯಾಗಿ ನಿವಾರಿಸಬಹುದು. ಯಾವುದಕ್ಕೂ ಆತಂಕ ಪಡಬೇಕಾಗಿಲ್ಲ. ಹಿಂದೆ ಒಂದು ಸಮಸ್ಯೆ ಕಾಣಿಸಿಕೊಂಡಿತೆಂದರೆ ಹೊಟ್ಟೆ ಕೊಯ್ಯುತ್ತಿದ್ದರು. ಅದಕ್ಕೆ ಹೊಲಿಗೆ ಹಾಕುತ್ತಿದ್ದರು. ಆಸ್ಪತ್ರೆಯಲ್ಲಿ ಹದಿನೈದು ದಿನ ಇರಬೇಕಾಗುತ್ತಿತ್ತು. ಆದರೂ ಹೊಲಿಗೆ ಹಾಕಿದಲ್ಲಿ ಕೀವು ಕಂಡರೂ ಅಚ್ಚರಿ ಇರಲಿಲ್ಲ. ಕಲೆ ಸದಾ ಕಾಲ ಉಳಿದು ಬಿಡುತ್ತಿತ್ತು. ಆದರೆ ಈಗ ಆ ಸಮಸ್ಯೆಗಳೆಲ್ಲ ಇಲ್ಲ. ಕೀ ಹೋಲ್ ಸರ್ಜರಿ ಅಥವಾ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಎಂಬ ಆಧುನಿಕ ಚಿಕಿತ್ಸಾ ವಿಧಾನ ಬಳಕೆಯಲ್ಲಿದೆ. ದೇಹದಲ್ಲಿಯ ಗಡ್ಡೆ ತೆಗೆಯುವುದು, ಬಂಜೆತನ ನಿವಾರಣೆ, ಗರ್ಭಕೋಶ ಕ್ಯಾನ್ಸರ್ ಗುಣಪಡಿಸುವಿಕೆ, ಮೂತ್ರರೋಗ ನಿವಾರಣೆ ಮುಂತಾದ ಹಲವಾರು ಸಮಸ್ಯೆಗಳನ್ನು ಗುಣಪಡಿಸಲು ಉದರದರ್ಶಕ ಶಸ್ತ್ರ ಚಿಕಿತ್ಸೆ ಸಹಕಾರಿ. ಒಂದೂವರೆ ಗಂಟೆಗಳ ಈ ಚಿಕಿತ್ಸೆಯಲ್ಲಿ ಹೊಟ್ಟೆಯನ್ನು ಸೀಳುವುದಿಲ್ಲ. ಹೊಲಿಗೆ ಹಾಕಿಸಿಕೊಳ್ಳುವ ಗೋಜಿಲ್ಲ. ಕೀವು ಎಂದು ಕಿರಚಿಕೊಳ್ಳುವ ಭಯವಿಲ್ಲ. ಇಲ್ಲಿ ಹೊಟ್ಟೆಯಲ್ಲಿ ಎರಡು ರಂದ್ರಗಳನ್ನು ಮಾಡಿ ಚಿಕಿತ್ಸೆ ಮಾಡಲಾಗುತ್ತದೆ. ಕಂಪ್ಯೂಟರ್‍ನಲ್ಲಿ ಕಾಣುವ ಹೊಟ್ಟೆಯ ಒಳಭಾಗ ವೈದ್ಯರಿಗೆ ನಿರಾತಂಕವಾಗಿ ಚಿಕಿತ್ಸೆ ಮಾಡಲು ಅನುವು ಮಾಡಿಕೊಡುತ್ತದೆ.

ಉದರದರ್ಶಕ ಶಸ್ತ್ರ ಚಿಕಿತ್ಸೆಯಿಂದ ಆಗುವ ಇತರೆ ಲಾಭವೆಂದರೆ, ಚಿಕಿತ್ಸೆ ಮಾಡಿಸಿಕೊಂಡ ಮಾರನೇ ದಿನವೇ ಕೆಲಸಕ್ಕೆ ಹೋಗಬಹುದು. ಚಿಕಿತ್ಸೆ ಮಾಡಿಸಿಕೊಂಡ ನೋವು ಕೂಡಾ ಇರುವುದಿಲ್ಲ. ಈ ಶಸ್ತ್ರ ಚಿಕಿತ್ಸೆ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚು ಉಪಯೋಗಕಾರಿಯಾದರೂ, ಪುರುಷರು ಸಹ ಪಿತ್ತಜನಕ, ಅಪೆಂಡಿಕ್ಸ್ ಮತ್ತು ಹರ್ನೀಯ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಒಟ್ಟಾರೆ ಆಗಿ ನಮ್ಮ ಜನರಿಗೆ ಕಾಯಿಲೆಗಳ ಬಗ್ಗೆ ಅರಿವು ಮೂಡಬೇಕಿದೆ. ಇಂದು ಪತ್ರಿಕೆಗಳು ಈ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ. ಅಲ್ಲದೇ, ಕಾಯಿಲೆಗಳು ಯಾವ ಕಾರಣದಿಂದ ಬರುತ್ತದೆ ಎಂದು ತಿಳಿದರೆ ಅದಕ್ಕೆ ಪರಿಹಾರ ಸಿಕ್ಕಂತೆ. ಹೀಗಾಗಿ ಉತ್ತಮ ಜೀವನಕ್ಕಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ.

Dr._B_Ramesh-Director-Altius_Hospital_Pvt._Ltd.
ಡಾ. ರಮೇಶ್ ಬಿ.
ಆಲ್ಟಿಯಸ್ ಹಾಸ್ಪಿಟಲ್, # 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್
ರಾಜಾಜಿನಗರ ಪ್ರವೇಶ ದ್ವಾರ, ಎಂಇಐ ಪಾಲಿಟೆಕ್ನಿಕ್ ಎದುರು
ಬೆಂಗಳೂರು – 560010 ಫೋನ್ : 080-23151873, ಮೊಬೈಲ್ : 88827 99799
E-mail : info@altiushospital.com
www.altiushospital.com
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!