ಮೆಂತ್ಯ ದೇಹಕ್ಕೆ ಹಿತ ಬಳಕೆಯಲ್ಲೂ ಇರಲಿ ಹಿಡಿತ

 
ಜಿ ಗಣಪತಿ ಭಟ್
ಉದ್ದಿನ ದೋಸೆಗೆ ರುಬ್ಬಲು ಅಕ್ಕಿ ನೆನೆ ಹಾಕುವಾಗ “ನಾಲ್ಕು ಮೆಂತೆ ಕಾಳೂ ಸೇರಿಸು”ಎಂದು ಅಜ್ಜಿಯಂದಿರು ಸಲಹೆ ನೀಡಲು ಮರೆಯುವುದಿಲ್ಲ. ಉದ್ದಿನ ಅಡ್ಡಪರಿಣಾಮವನ್ನು ಕಡಿಮೆ ಮಾಡಲು ಇರುವ ಸುಲಭ ವಿಧಾನವಿದು. ನಮ್ಮ ಅಡಿಗೆ ಪದ್ಧತಿಯಲ್ಲಿ ಇಂತಹ ಹಲವು ಔಷಧೀಯ ಗುಣಗಳಿರುವ ಸಂಬಾರ ಪದಾರ್ಥಗಳನ್ನು ಬಳಸುವುದು ರೂಢಿಯಲ್ಲಿದೆ.
ಮೆಂತ್ಯ ನಮ್ಮ ದೇಹಕ್ಕೆ ತುಂಬಾ ತಂಪು. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸುವುದರಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹಿಗಳಿಗೆ ಆಯುರ್ವೇದ ಪಂಡಿತರು ಮೆಂತ್ಯ ಸೇವಿಸಲು ಸಲಹೆ ನೀಡುತ್ತಾರೆ. ಹಾಗೆಯೇ ರಕ್ತದಲ್ಲಿರುವ ಕೊಲೆಸ್ಟರಾಲ್ ಅಂಶವನ್ನು ನಿಯಂತ್ರಿಸಲು ಮೆಂತ್ಯವನ್ನು ಬಳಸುತ್ತಾರೆ. ಇದು ವೀರ್ಯವರ್ಧಕ, ಬಾಣಂತಿಯರಲ್ಲಿ ಹಾಲು ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಬಾಯಿಹುಣ್ಣಿಗೆ ರಾಮಬಾಣ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸಂಬಾರ ಪದಾರ್ಥವಿದು.
ಹಾಗೇಂತ ಹೇಳಿ ಮೆಂತ್ಯವನ್ನು ಅತಿಯಾಗಿ ಬಳಸುವುದು ಕೂಡಾ ಒಳ್ಳೆಯದಲ್ಲ. ‘ಅತಿಯಾದರೆ ಅಮೃತವೂ ವಿಷ’ ಎನ್ನುವ ಗಾದೆಯ ಮಾತಿದೆ. ಮೆಂತ್ಯದ ವಿಚಾರದಲ್ಲಿ ಮಾತ್ರ ಇದು ಅಕ್ಷರಶಃ ಸತ್ಯ.
ಹೈಪೋಗ್ಲೈಸೀಮಿಯಾ
ರಕ್ತದಲ್ಲಿ ಸಕ್ಕರೆಯ ಅಂಶವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗುವುದಕ್ಕೆ ‘ಹೈಪೋಗ್ಲೈಸೀಮಿಯಾ’ ಎನ್ನುತ್ತಾರೆ. ಇದರಿಂದಾಗಿ ಮಿದುಳಿಗೆ ಸಾಕಷ್ಟು ಪ್ರಮಾಣದಲ್ಲಿ ಗ್ಲೂಕೋಸ್ ಅಂಶವು ಸರಬರಾಜಾಗುವುದಿಲ್ಲ. ಅದರಿಂದಾಗಿ ಮೂರ್ಚೆ ತಪ್ಪಬಹುದು. ಮಿದುಳಿಗೆ ಹಾನಿಯಾಬಹುದು ಮತ್ತು ಅತಿಯಾದರೆ ಸಾವೇ ಸಂಭವಿಸಬಹುದು.
ಸಕ್ಕರೆ ಕಾಯಿಲೆಯಿರುವವರು  ಗುಳಿಗೆ ಅಥವಾ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದರೆ ಮೆಂತ್ಯವನ್ನು ಬಳಸುವಾಗ ಅತಿ ಎಚ್ಚರದಿಂದ ಇರಬೇಕಾಗುತ್ತದೆ. ಮೆಂತ್ಯವನ್ನು ಔಷಧಿಯಾಗಿ ಬಳಸುವುದಕ್ಕೆ ಮುನ್ನ ವೈದ್ಯರ ಅನುಮತಿ ಪಡೆದು ಪ್ರಮಾಣವನ್ನು ನಿಗದಿ ಮಾಡಿಕೊಳ್ಳುವುದು ಒಳ್ಳೆಯದು. ಈ ಸಮಸ್ಯೆಯು ಗರ್ಭಿಣಿಯರಲ್ಲೂ ಕಂಡು ಬರುವುದಿದೆ. ಅಂತಹ ಸಂದರ್ಭದಲ್ಲಿ ಅವರಿಗೆ ಮೆಂತ್ಯೆ ಒಳ್ಳೆಯದೆಂದು ಅತಿಯಾಗಿ ಆಹಾರದಲ್ಲಿ ಸೇರಿಸುವದನ್ನು ನಿಲ್ಲಿಸಬೇಕಾಗುತ್ತದೆ.
ಬೇಧಿ
ಬಾಣಂತಿಯರಲ್ಲಿ ಹಾಲು ಸ್ರವಿಸುವಿಕೆ ಹೆಚ್ಚಿಸಲೆಂದು ಮೆಂತ್ಯವನ್ನು ಬಳಸಲು ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ಮೆಂತ್ಯದ ಸೇವನೆಯಿಂದ ಅವರಿಗೆ ಬೇಧಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅವರು ಹಾಲುಣಿಸಿದಾಗ ಈ ಗುಣವು ಮಗುವಿಗೂ ಬರುತ್ತದೆ. ಎಳೇ ಮಗುವು ನೀರಾಗಿ ಮಲವಿಸರ್ಜನೆ ಮಾಡಿದರೆ ಬೇಗ ಬಳಲುತ್ತದೆ ಮತ್ತು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಹೊಸ ಸಮಸ್ಯೆಗಳು ಹುಟ್ಟುತ್ತವೆ. ಇಂತಹ ಸಂದರ್ಭದಲ್ಲಿ ಬಾಣಂತಿಯ ಆಹಾರದಲ್ಲಿ ಮಾಡಿರುವ ಬದಲಾವಣೆಯನ್ನು ಅವಲೋಕನ ಮಾಡಬೇಕಾಗುತ್ತದೆ.
ಅಲರ್ಜಿ
ಕೆಲವರ ದೇಹ ಪ್ರಕೃತಿಗೆ ಮೆಂತ್ಯ ಗುಣಗಳು ಅಷ್ಟಾಗಿ ಹಿಡಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರಲ್ಲಿ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮೈಯಲ್ಲಿ ತುರಿಕೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇದನ್ನು ಇಂತದ್ದೇ ಕಾರಣದಿಂದ ಬಂತೆಂದು ಕಂಡುಕೊಳ್ಳುವುದು ಕೂಡಾ ಕಷ್ಟಕರ. ಪರಿಣಿತ ವೈದ್ಯರು ಕೂಲಂಕುಷವಾಗಿ ವಿಚಾರಿಸಿ ವಿಶ್ಲೇಷಿಸಿದಾಗ ಮಾತ್ರ ಅಲರ್ಜಿಯ ಮೂಲವನ್ನು ಕಂಡುಹಿಡಿಯಬಹುದು.
ಮೂತ್ರದ ವಾಸನೆ
ಮೆಂತ್ಯವನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳ ಮೂತ್ರವೂ ಬೇರೆಯ ರೀತಿಯ ವಾಸನೆ ಬೀರುತ್ತದೆ. ಬೆವರಿನ ವಾಸನೆಯೂ ಭಿನ್ನವಾಗಿರುತ್ತದೆ. ಕೆಲವರಿಗೆ ಇದು ಸಹ್ಯವಾಗುವುದಿಲ್ಲ. ಹಾಗೇಂತ ಹೇಳಿ ಔಷಧೀಯ ಗುಣದ ಮುಂದೆ ಇದೆಲ್ಲಾ ದೊಡ್ಡದಲ್ಲ ಎನ್ನುಬಹುದು ಮೆಂತ್ಯಪ್ರಿಯರು. ಅದಕ್ಕೊಂದು ‘ಡಿಯೋಡರೆಂಟ್’ ಬಳಸಿದರಾಯಿತಲ್ಲಾ ಅಂದು ಬಿಟ್ಟಾರು!
ಇತರೆ ಔಷಧಿಗಳೊಂದಿಗೆ ಪ್ರತಿಕ್ರಿಯೆ
ಆಲೋಪತಿ ವೈದ್ಯ ಪದ್ಧತಿಯಲ್ಲಿ ಬಳಸುವ ಗುಳಿಗೆಗಳೊಂದಿಗೆ ಮೆಂತ್ಯವು ತುಂಬಾ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡುತ್ತದೆ. ಕೆಲವೊಮ್ಮೆ ಗುಳಿಗೆಯಲ್ಲಿರುವ ಅಂಶಗಳನ್ನು ರಕ್ತಕ್ಕೆ ಸೇರಲು ಬಿಡುವುದಿಲ್ಲ. ಮೆಂತ್ಯದಲ್ಲಿರುವ ನಾರಿನಂಶವು ಅವುಗಳನ್ನು ಹೀರಿಕೊಂಡು ದೇಹದಿಂದ ಹೊರಕ್ಕೆ ಕಳುಹಿಸಿಬಿಡುತ್ತದೆ. ಸಕ್ಕರೆ ಪ್ರಮಾಣ ತಗ್ಗಿಸುವ ಮಾತ್ರೆಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿ ವೈದ್ಯರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತದೆ.
ಹೆರಿಗೆಯಲ್ಲಿ ಹೆಣಗಾಟ
ಮೆಂತ್ಯಕ್ಕೆ ಮೂತ್ರನಾಳವನ್ನು ಹಿಗ್ಗಿಸುವ ಗುಣವಿರುವುದು ಕಂಡುಬಂದಿದೆ. ಇದು ಬಸುರಿ ಹೆಂಗಸರಲ್ಲಿ ಅಕಾಲ ಹೆರಿಗೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ. ಆದ್ದರಿಂದ ಬಸುರಿ ಹೆಂಗಸರಿಗೆ ಮೆಂತ್ಯದ ಬಗ್ಗೆ ಎಚ್ಚರದಿಂದಿರಲು ಹೇಳಬೇಕಾಗುತ್ತದೆ.
ಇವೆಲ್ಲಾ ಮೆಂತ್ಯದ ಉಪಯೋಗದ ಲೆಕ್ಕ ನೋಡಿದರೆ ಗೌಣವೇ. ಬಳಕೆಯಲ್ಲಿ ಸ್ವಲ್ಪ ಎಚ್ಚರ ವಹಿಸಿದರೆ ಎಲ್ಲವನ್ನೂ ಪರಿಹರಿಸಿಕೊಳ್ಳಬಹುದು.
-ಜಿ ಗಣಪತಿ ಭಟ್
30 ಗುಂಡೂರಾವ್ ಬಡಾವಣೆ
ಹಾರೋಹಳ್ಳಿ ಕನಕಪುರ ತಾಲೂಕು
ರಾಮನಗರ ಜಿಲ್ಲೆ-562112
ಫೋ-9972460803
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!