ಮಕರ ಸಂಕ್ರಾಂತಿ – ಮಕರ ಸಂಕ್ರಮಣ : ರೈತರ ಸುಗ್ಗಿಯ ಹಬ್ಬ

ಮಕರ ಸಂಕ್ರಾಂತಿ – ಮಕರ ಸಂಕ್ರಮಣ ವರುಷದ ಮೊದಲನೆಯ ಹಬ್ಬ.ರೈತರ ಸುಗ್ಗಿಯ ಹಬ್ಬ.ಮಕರ ಸಂಕ್ರಮಣ ಹಬ್ಬದ ದಿವಸ, ದೇಹಕ್ಕೆಲ್ಲ ಎಳ್ಳು ಎಣ್ಣೆ ಹಚ್ಚಿಕೊಂಡು ಮುಂಜಾನೆಯ ಎಳೆ ಬಿಸಿಲು ಕಾಯಿಸಿಕೊಂಡು ನದಿಯಲ್ಲಿ ಸ್ನಾನಮಾಡಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು.

makara-sankranti.
ಭಾರತೀಯರು, ನಮ್ಮ ಪೂರ್ವಜರು, ನಮ್ಮ ಸಂಸ್ಕಾರ, ಆಧ್ಯಾತ್ಮಕ ಮತ್ತು ವೈಜ್ಞಾನಿಕ ವಿಚಾರಗಳನ್ನು ಒಟ್ಟುಗೂಡಿಸಿ, ನಮ್ಮ ದಿನನಿತ್ಯದ ಜೀವನದಲ್ಲಿ ಹಬ್ಬಗಳನ್ನು ವಿಶೇಷ ಆಚರಣೆಗಳನ್ನು, ಆಹಾರಗಳನ್ನು ಮನೆಯ ಜನರು, ಊರ ಜನರು, ಗೆಳೆಯರೆಲ್ಲ ಕೂಡಿ ಆಚರಿಸುವ ಒಂದು ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ. ನಮ್ಮ ವೇದಗಳಲ್ಲಿ ಬರುವ ವೈಜ್ಞಾನಿಕ ವಿಚಾರಗಳನ್ನು ಜನ ಸಾಮಾನ್ಯರಿಗೆ ತಿಳಿಯುವಂತೆ, ಕಥೆಗಳ ರೂಪದಲ್ಲಿ ಪುರಾಣಗಳನ್ನು ಬರೆದು, ಜನರು ಈ ಪುರಾಣದಲ್ಲಿರುವಂತೆ ಆಚರಿಸಲು ತಿಳಿಸಿರುವರು.

ಮಕರ ಸಂಕ್ರಾಂತಿ ರೈತರ ಸುಗ್ಗಿಯ ಹಬ್ಬ

ಮಕರ ಸಂಕ್ರಾಂತಿಯು ವರುಷದ ಮೊದಲನೆಯ ಹಬ್ಬ.ಚಳಿಯ ಕಾಲ ಮುಗಿದು ಬೇಸಿಗೆ ಕಾಲ ಬರುವಾಗ ವರುಷದ ಮೊದಲನೆಯ ಹಬ್ಬ. ಪ್ರತಿ ವರುಷ ಜನವರಿ 14ರಂದು ಈ ಹಬ್ಬ ಬರುತ್ತದೆ. (ಕೆಲವೊಮ್ಮೆ ಜನವರಿ 13, ಜನವರಿ 15ರಂದು ಬರಬಹುದು.)ಈ ಮಕರ ಸಂಕ್ರಮಣವು ವರುಷದ ಮೊದಲ ಹಬ್ಬ. ಈ ಹಬ್ಬವನ್ನು ಸುಗ್ಗಿಯ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಫಸಲನ್ನು ಮನೆಗೆ ತರುವ ತಯಾರಿಯಲ್ಲಿರುತ್ತಾರೆ. ಇದನ್ನು  ಮಾಘ ಮೇಳ, ಮಾಘಿ, ಭೋಗಿ, ಪೊಂಗಲ್ ಅಂತಲೂ ಕರೆಯುತ್ತಾರೆ.

ಮಕರ ಸಂಕ್ರಾಂತಿಯ ಪ್ರತಿವರುಷ ಜನವರಿ 14ಕ್ಕೆ ಬರಲು ಮುಖ್ಯ ಕಾರಣ, ಸೂರ್ಯನ ಗತಿಯ ಮೆಲೆ ಈ ಹಬ್ಬದ ದಿನವನ್ನು ಆಚರಿಸುವರು. ಭೂಮಿಯು ತನ್ನ ಸುತ್ತು ತಿರುಗಲು 24 ತಾಸುಗಳನ್ನು (1 ದಿನ) ತೆಗೆದುಕೊಳ್ಳುತ್ತದೆ. ಭೂಮಿಯು ಸೂರ್ಯನ ಸುತ್ತ ತಿರುಗಿ ತನ್ನ ಮೂಲಸ್ಥಾನ ಸೇರಬೇಕೆಂದರೆ 360 ಡಿಗ್ರಿ ಭೂಮಿಯು ತಿರುಗಬೇಕು. ಮತ್ತು ಇದು 365 ದಿವಸಗಳನ್ನು ಅಂದರೆ 1 ವರುಷವನ್ನು ತೆಗೆದುಕೊಳ್ಳುತ್ತದೆ. 360 ಡಿಗ್ರಿಗಳನ್ನು ಸರಿಯಾಗಿ 12 ಭಾಗಗಳನ್ನಾಗಿ ಮಾಡಿದ್ದಾರೆ. ಈ 12 ಭಾಗಗಳನ್ನು 12 ತಿಂಗಳು ಅಥವಾ 12 ರಾಶಿಗಳು ಎನ್ನುತ್ತಾರೆ.

ಪ್ರತಿಯೊಂದು ತಿಂಗಳಲ್ಲಿ ಸೂರ್ಯನ ಸುತ್ತ ಭೂಮಿ ತಿರುಗುವಾಗ ದಿನಗಳು ವಾರಗಳು ಮತ್ತು ತಿಂಗಳುಗಳು ಬದಲಾಗುತ್ತಿರುತ್ತವೆ. ಭೂಮಿಯು ತನ್ನ ಪಥವನ್ನು ಬದಲಾಯಿಸುವಾಗ ಅಂದರೆ ಒಂದು ತಿಂಗಳಿನಿಂದ ಇನ್ನೊಂದು ತಿಂಗಳು ಅಥವಾ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬಂದಾಗ ಆ ಚಲನೆಯನ್ನು ಸಂಕ್ರಮಣ ಎನ್ನುತ್ತೇವೆ. 12 ತಿಂಗಳುಗಳು ಇರುವುದರಿಂದ (12 ರಾಶಿ) ಒಂದು ವರ್ಷಕ್ಕೆ 12 ಸಂಕ್ರಮಣಗಳು ಬರುತ್ತವೆ. ಈ 12 ಸಂಕ್ರಮಣಗಳಲ್ಲಿ ಮಕರ ಸಂಕ್ರಮಣವು ಬಹಳ ಪ್ರಮುಖವಾದದ್ದು. 6 ತಿಂಗಳ ಚಳಿಯು ಮುಗಿಯುತ್ತಾ, 6 ತಿಂಗಳ ಬೇಸಿಗೆ ಕಾಲವನ್ನು ತರುತ್ತಾ ಭೂಮಿಯು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನೆಡೆಗೆ ಪ್ರಯಾಣ ಮಾಡುವುದು. ದಕ್ಷಿಣ ದಿಕ್ಕಿನಿಂದ ಭೂಮಿಯು ಉತ್ತರ ದಿಕ್ಕಿಗೆ ಚಲಿಸುವ ಈ ಪ್ರಯಾಣವನ್ನು ದಕ್ಷಿಣಾಯನದಿಂದ ಉತ್ತರಾಯಣ ಎಂದು ಕರೆಯುತ್ತಾರೆ.

ಪುರಾಣ ಕಥೆಗಳಲ್ಲಿ ಮಕರ ಸಂಕ್ರಮಣ

ಮಕರ ಎಂದರೆ ಮೊಸಳೆ ಬಾಯಲ್ಲಿ ಸಿಕ್ಕು ನರಳುತ್ತಿರುವ ವ್ಯಕ್ತಿ ಎಂದರೆ, ಸಂಸಾರದ ಜಂಜಾಟದಲ್ಲಿ ಸಿಲುಕಿದ ವ್ಯಕ್ತಿ, ಸಂಕ್ರಮಣ ಎಂದರೆ ಈ ಸಂಕೋಲೆಯಿಂದ ಬಿಡಿಸಿಕೊಂಡು ಮುಕ್ತನಾಗುವುದು. ಭಗವಂತನ ಧ್ಯಾನ ಮಾಡುವುದು ತಮ್ಮವರನ್ನು ಮತ್ತು ಎಲ್ಲಾ ಜನರನ್ನು ಪ್ರೀತಿ ಗೌರವದಿಂದ ಕಾಣುವುದು. ಚಂದ್ರನ ಚಲನೆಯಿಂದ ಗುರುತಿಸಿದ ತಿಂಗಳುಗಳನ್ನು ಚಂದ್ರಮಾನ ತಿಂಗಳು ಎನ್ನುತ್ತೇವೆ. ಇವು 12 ಇರುತ್ತವೆ. ಸೂರ್ಯನ ಚಲನೆಯನ್ನು ಆಧರಿಸಿ ಗುರುತಿಸಿದ ತಿಂಗಳುಗಳು, ರಾಶಿಚಕ್ರಗಳಾಗಿ ನಮ್ಮ ದಿನ ನಿತ್ಯದ ಮತ್ತು ಜೀವಮಾನದ ಭವಿಷ್ಯಚಕ್ರಗಳಾಗುತ್ತವೆ. ಇವು ಕೂಡ 12 ಇರುತ್ತವೆ.

1. ಇದು ಉತ್ತರಾಯಣದ ಪರ್ವಕಾಲ, ದೇವತೆಗಳ ಒಂದು ಹಗಲು, ದಕ್ಷಿಣಯಾನ ಇದು ದೇವತೆಗಳ ಒಂದು ರಾತ್ರಿ.

2. ಸೂರ್ಯದೇವನು ತನ್ನ ಮಗನಾದ ಮಕರರಾಶಿಯ ಅಧಿಪತಿಯಾದ ಶನಿದೇವರನ್ನು ಭೇಟಿಯಾಗುವ ಸಮಯ. ಈ ದಿವಸದಲ್ಲಿ ಜನರು ಮರಣ ಹೊಂದಿದರೆ ಅವರಿಗೆ ಈ ಜೀವನಚಕ್ರದಿಂದ ಮುಕ್ತಿ ದೊರೆಯುತ್ತದೆ. ಸದ್ಘತಿ ದೊರೆಯುತ್ತದೆ. ಮಹಾಭಾರತ ಯುದ್ಧದಲ್ಲಿ ಭೀಷ್ಮ ಪಿತಾಮಹ ದೇಹವು ಬಾಣಗಳ ಹೊಡೆತದಿಂದ ಜರ್ಜರಿತವಾಗಿದ್ದರೂ ತನ್ನ ಮರಣವನ್ನು ಮುಂದೂಡಿ, ಉತ್ತರಾಯಣ ಮಕರ ಸಂಕ್ರಾಂತಿ ಬರುವವರೆಗೆ ತನ್ನ ಜೀವವನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಅವರ ತಾಯಿಯ ಇಚ್ಛಾಮರಣ ವರದಿಂದ ಮಕರ ಸಂಕ್ರಮಣದಂದು ತನ್ನ ಜೀವವನ್ನು ತ್ಯಜಿಸುವರು.

makara

3. ಮಹಾರಾಜ ಭಗೀರಥನು ತನ್ನ 60000 ಪೂರ್ವಿಕರ ಶಾಪ ಮುಕ್ತಿಯ ಸಲುವಾಗಿ, ಗಂಗಾದೇವಿಯನ್ನು ಗಂಗಾನದಿಯನ್ನು ಕೈಲಾಸದಲ್ಲಿರುವ ಶಿವನ ಜಡೆಯಿಂದ ಭೂಮಿಗೆ ತಂದು ಕಪಿಲ ಮುನಿಯ ಆಶ್ರಮದಲ್ಲಿರುವ ತನ್ನ ಪೂರ್ವಿಕರಿಗೆ ತರ್ಪಣ ಬಿಟ್ಟಾಗ ಅವರಿಗೆ ಮುಕ್ತಿ ಸಿಗುವುದು ಇದೇ ಮಕರ ಸಂಕ್ರಾಂತಿಯಂದು.

4. ಜಗನ್ಮಾತೆಯು ಸಂಕ್ರಾಂತಿಯ ರೂಪ ಧರಿಸಿ, ಸಂಕ್ರಾಸುರ ಅಸುರರನ್ನು ವಧಿಸಿದ ದಿವಸವು ಮಕರ ಸಂಕ್ರಾಂತಿಯ ದಿವಸ.

5. ವಿಷ್ಣು ಪರಮಾತ್ಮನು ಮಕರ ಸಂಕ್ರಾಂತಿಯ ದಿವಸ ತ್ರಿವೇಣಿ ಸಂಗಮದಲ್ಲಿ ಮತ್ತು ಪವಿತ್ರ ನದಿಗಳಾದ ಗಂಗಾ, ಯಮುನ, ಗೋದಾವರಿ, ಕಾವೇರಿ, ಕೃಷ್ಣ ನದಿಗಳಲ್ಲಿ ದೇವತೆಗಳು ಅಮೃತವನ್ನು ಹಾಕುವರು. ಆದ್ದರಿಂದ ಋಷಿಮುನಿಗಳು, ಸಾಧು ಸಂತರು ಮತ್ತು ಭಕ್ತರೆಲ್ಲರು ಮಕರ ಸಂಕ್ರಮಣದಂದು ನದಿ ಸ್ನಾನ ಮಾಡುವರು. ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳವು ಕೂಡ ಮಕರ ಸಂಕ್ರಾಂತಿಯಂದೇ ಜರುಗುವುದು.

6. ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಮಕರ ಜ್ಯೋತಿಯ ದರ್ಶನ ಮತ್ತು ಪಂಪಾ ನದಿಸ್ನಾನವನ್ನು ಮಕರ ಸಂಕ್ರಾಂತಿಯ ದಿವಸ ಮಾಡುವರು.

ಕರ್ನಾಟಕದಲ್ಲಿ ಮಕರ ಸಂಕ್ರಮಣ

ಕರ್ನಾಟಕದಲ್ಲಿ ರೈತರು ತಮ್ಮ ಹೊಲದಲ್ಲಿ ಬೆಳೆದ ಫಸಲನ್ನು ರಾಶಿಮಾಡಿ, ವಿಲೇವಾರಿ ಮಾಡಿ ಸುಗ್ಗಿಯ ಸಂಭ್ರಮದಲ್ಲಿರುತ್ತಾರೆ. ಮಕರ ಸಂಕ್ರಮಣ ಹಬ್ಬದ ದಿವಸ, ದೇಹಕ್ಕೆಲ್ಲ ಎಳ್ಳು ಎಣ್ಣೆ ಹಚ್ಚಿಕೊಂಡು ಮುಂಜಾನೆಯ ಎಳೆ ಬಿಸಿಲು ಕಾಯಿಸಿಕೊಂಡು ನದಿಯಲ್ಲಿ ಸ್ನಾನಮಾಡಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮದಿಂದ, ತಮ್ಮ ಗೆಳೆಯರನ್ನು ಸಂಬಂಧಿಕರನ್ನು ಮನೆಗೆ ಕರೆದು ತಾಯಿ ಮಾಡಿದ ಹಬ್ಬದ ಅಡುಗೆ ಊಟ ಮಾಡಿ ಸಂಭ್ರಮಿಸುವರು.

ಮನೆಯಲ್ಲಿಯ ಎಲ್ಲಾ ಜನರು ಗುಂಪುಗೂಡಿಕೊಂಡು (ಇಲ್ಲವೆ ಗೆಳೆಯರ ಜೊತೆ) ಊರಿನ ಎಲ್ಲಾ ಪ್ರಮುಖರು, ಸಂಬಂಧಿಕರು ಮತ್ತು ಗೆಳೆಯರಿಗೆ ಎಳ್ಳು, ಬೆಲ್ಲ, ಕೊಬ್ರಿ, ಕಡಲೆ (ಹುರಿ ಕಡಲೆ), ಶೇಂಗಾ ಹಾಕಿದ ಮಿಶ್ರಣವನ್ನು ಕೊಟ್ಟು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಎಳ್ಳು ಬೆಲ್ಲ ಕೊಡುವಾಗ ``ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ’’ ಎಂದು ಹೇಳುತ್ತಾರೆ.

ಹೊಸದಾಗಿ ಮದುವೆಯಾಗಿ ಬಂದಿ ಸುಮಂಗಲೆಯರು 16 ಜನ ಸಂಬಂಧಿಕರಿಗೆ ಎಳ್ಳು ಬೆಲ್ಲ ಬೀರುತ್ತಾರೆ. ಎಳ್ಳು ಬೆಲ್ಲದ ಜೊತೆ ನೆನಪಿನ ಕಾಣಿಕೆಯನ್ನು ಕೂಡ ಕೊಡುತ್ತಾರೆ. ಇದಕ್ಕೆ ಬಾಗಿಣ ಎನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಶಾಲೆಯ ಮಕ್ಕಳು ಮತ್ತು ಗೆಳೆಯರ ಗುಂಪು ಊರ ದೊಡ್ಡವರ ಮನೆಯ ಹತ್ತಿರ ಹೋಗಿ ಸಂಕ್ರಮಣದ ಹಾಡುಗಳನ್ನು ಹಾಡುತ್ತಾರೆ. ಮುಂಜಾನೆ ಮನೆಯ ಜನ (ಗೆಳೆಯರ ಗುಂಪು) ಊರ ಮೈದಾನದಲ್ಲಿ ಗಾಳಿ ಪಠಗಳನ್ನು ಹಾರಿಸುತ್ತಾರೆ. (ಈಗ ಸಂಜೆಯ ಸಮಯದಲ್ಲಿ ಗಾಳಿಪಠಗಳನ್ನು ಹಾರಿಸುತ್ತಾರೆ)

ರೈತರು ತಮ್ಮ ಆಕಳು ಮತ್ತು ಎತ್ತುಗಳನ್ನು ಚೆನ್ನಾಗಿ ಸ್ನಾನ ಮಾಡಿಸಿ, ಒಳ್ಳೆಯ ಅಲಂಕಾರ ಮಾಡಿ ಊರ ತುಂಬೆಲ್ಲ ಮೆರವಣಿಗೆ ಮಾಡುತ್ತಾರೆ. ಕೆಲವೊಂದು ಸ್ಥಳಗಳಲ್ಲಿ ಸಣ್ಣ ಪ್ರಮಾಣದ ಬೆಂಕಿ ಹಚ್ಚಿ ತಮ್ಮ ಜಾನುವಾರುಗಳನ್ನು ಬೆಂಕಿಯ ಬಿಸಿಯಲ್ಲಿ ಓಡಿಸಿಕೊಂಡು ಹೋಗುವರು. ಇದನ್ನು “ಕಿಚ್ಚು ಹಾಯಿಸುವುದು” ಎನ್ನುತ್ತಾರೆ. ತಮಿಳುನಾಡಿನಲ್ಲಿ ಮಕರ ಸಂಕ್ರಮಣವನ್ನು ಪೊಂಗಲ್ ಎಂದು 4 ದಿನ ಆಚರಿಸುವರು. ಕೇರಳದಲ್ಲಿ ಅಯ್ಯಪ್ಪ ಸ್ವಾಮಿಯ ಹಬ್ಬ ಆಚರಿಸುವರು. ಉತ್ತರ ಭಾರತದಲ್ಲಿ ನದಿ ಸ್ನಾನ – ಕುಂಭ ಮೇಳವನ್ನು ಆಚರಿಸುವರು.

ಮಕರ ಸಂಕ್ರಮಣದ ಹಬ್ಬದ ಆಚರಣೆಗಳಿಂದ ಆಗುವ ವೈದ್ಯಕೀಯ ಲಾಭಗಳು

ಮಕರ ಸಂಕ್ರಮಣದ ಆಚರಣೆಗಳು
1. ಎಳ್ಳು ಬೆಲ್ಲ ಬೀರುವುದು.
2. ಎಳ್ಳು ಎಣ್ಣೆ ಹಚ್ಚಿಕೊಂಡು (ನದಿಯಲ್ಲಿ ) ಸ್ನಾನ ಮಾಡುವುದು.
3. ಗಾಳಿ ಪಟ ಹಾರಿಸುವುದು.
4. ಕಿಚ್ಚು ಹಾಯಿಸುವುದು.
5. ಸಂಕ್ರಮಣದ ಹಾಡುಗಳು

ಮಕರ ಸಂಕ್ರಾಂತಿ - ಮಕರ ಸಂಕ್ರಮಣ : ರೈತರ ಸುಗ್ಗಿಯ ಹಬ್ಬ

1. ಎಳ್ಳು  : ಎಳ್ಳು ಎಣ್ಣೆ ಒಳ್ಳೆಯ ಅಡುಗೆ ಮಾಡುವಾಗ ಬಳಸುವ ಎಣ್ಣೆ. ಭಾರತೀಯರು ಎಳ್ಳು ಎಣ್ಣೆಯನ್ನು ದೇಹದ ಎಲ್ಲ ಭಾಗಕ್ಕೆ ಹಚ್ಚಿಕೊಂಡು ಎಳೆ ಬಿಸಿಲಿನಲ್ಲಿ ಕುಳಿತು ಸ್ನಾನ ಮಾಡುವ ಪದ್ಧತಿ. ಚಳಿಕಾಲದಲ್ಲಿ ದೇಹದಲ್ಲಿ ಇರುವ ಬಹಳಷ್ಟು ಎಣ್ಣೆ ಅಂಶವು ಉಪಯೋಗವಾಗಿರುವುದರಿಂದ ಚರ್ಮದ ಮೇಲ್ಪದರದಲ್ಲಿರುವ ಎಣ್ಣೆಯು ಮತ್ತು ನೀರಿನಾಂಶವು ಕಡಿಮೆಯಾಗಿ ಚರ್ಮ ಒಣಗಿರುತ್ತದೆ. ಚರ್ಮ ಹೆಚ್ಚು ಒಣಗಿದರೆ ಚರ್ಮಕ್ಕೆ ತುರಿಕೆಯ ಅನುಭವವಾಗುತ್ತದೆ. ತುರಿಕೆಯಿಂದ ಉಗುರಿನ ಗಾಯಗಳಾಗಬಹುದು. ಚಳಿಗಾಳಿ ಹೆಚ್ಚಾಗಿದ್ದರೆ, ಚರ್ಮವು ಒಣಗಿ ಚರ್ಮದ ಕೋಶಗಳು ಹೆಚ್ಚು ಸುಕ್ಕು ಆಗಿ ಅವುಗಳ ನಡುವೆ ಇರುವ ಜೋಡಣೆಯಲ್ಲಿ ಬಿರುಕು ಬಿಟ್ಟು, ಈ ಬಿರುಕುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ .

ಚಳಿಗಾಲದಲ್ಲಿ ದೇಹದಲ್ಲಿ ಇದ್ದ ಎಣ್ಣೆಯು ಕಡಿಮೆಯಾಗುವುದರಿಂದ ಎಳ್ಳು ತಿನ್ನುವಾಗ ಎಳ್ಳಿನಲ್ಲಿರುವ ಎಣ್ಣೆಯು ದೇಹಕ್ಕೆ ಬೇಕಾದ ಎಣ್ಣೆಯನ್ನು ಒದಗಿಸುತ್ತದೆ. ಚರ್ಮದ ಮೇಲೆ ಎಳ್ಳು ಎಣ್ಣೆ ಹಚ್ಚುವುದರಿಂದ ಒಣ ಚರ್ಮವು ಮೃದುವಾಗಿ ತುರಿಕೆ ಕಡಿಮೆಯಾಗಿ ನೋಡಲು ಅಂದವಾಗಿ ಕಾಣುತ್ತದೆ. ಎಳ್ಳು ಎಣ್ಣೆಯಲ್ಲಿಯ ಲಿನೊಲಿಯಿಕ್ ಆಸಿಡ್, ಒಲಿಕ್ ಆಸಿಡ್, ಪಾಮೆಟಿಕ್ ಆಸಿಡ್ ಮತ್ತು ಸ್ಟಿಯರಿಕ್ ಆಸಿಡ್ ದೇಹದ ಅಂಗಗಳಿಗೆ ಬೇಕೇ ಬೇಕು. ರಕ್ತನಾಳಗಳಲ್ಲಿಯ ಪೆಡಸುತನ ಕಡಿಮೆಯಾಗಿ ರಕ್ತ ಸಂಚಾರವು ಚೆನ್ನಾಗಿ ಆಗುವುದಕ್ಕೆ ಇದು ಸಹಕಾರಿ. ಎಳ್ಳು ತಿನ್ನುವುದರಿಂದ ದೇಹದಲ್ಲಿ ಹೊಸ ಶಕ್ತಿಯು ಉತ್ಪನ್ನವಾಗಿ ಮನಸ್ಸು ಉಲ್ಲಾಸದಾಯಕವಾಗುವುದು. ಎಳ್ಳು ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಕೆ ಕೂಡ ಇರುತ್ತದೆ.

2. ಕಡಲೆ ಬೀಜ (ಸೇಂಗ) ಕೊಬ್ರಿಯಲ್ಲಿಯು ಕೂಡ ಬಹಳಷ್ಟು ಎಣ್ಣೆ ಅಂಶ ಇರುವುದರಿಂದ ನಾವು ಹಬ್ಬ ನಿಮಿತ್ತ ಎಳ್ಳು ಬೆಲ್ಲ ಮಿಶ್ರಣವನ್ನು ತಿನ್ನುವಾಗ ಮತ್ತು ನಮ್ಮ ಗೆಳೆಯರಿಗೆ ತಿನ್ನಿಸುವ ಮೂಲಕ ನಮ್ಮ ದೇಹಕ್ಕೆ ಮತ್ತು ಚರ್ಮಕ್ಕೆ ಸಾಕಷ್ಟು ಎಣ್ಣೆ ಸಿಗುತ್ತದೆ.

3. ಬೆಲ್ಲ : ಬೆಲ್ಲದಲ್ಲಿ ಸುಕ್ರೋಸ್ ಇರುವುದರಿಂದ ಬೆಲ್ಲ ತಿಂದ ಕೂಡಲೇ ದೇಹದಲ್ಲಿ ಶಕ್ತಿ ಉತ್ಪನ್ನವಾಗಿ ಆಯಾಸ ಕಡಿಮೆಯಾಗುತ್ತದೆ ಮತ್ತು ಹೊಸ ಹುರುಪು ಬರುತ್ತದೆ.

4. ಗಾಳಿ ಪಟ ಹಾರಿಸುವುದು : ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿ ಮುಂಜಾನೆ ಮನೆಯ ಎಲ್ಲ ಸದಸ್ಯರು ಮೈದಾನಕ್ಕೆ ಹೋಗಿ ಗಾಳಿ ಪಟ ಹಾರಿಸುವುದರಿಂದ ಮುಂಜಾನೆಯ ಮೃದುವಾದ ಅತಿನೇರಳೆ ಕಿರಣಗಳು ಚರ್ಮದ ಮೇಲೆ ಬೀಳುವುದರಿಂದ ಚರ್ಮದ ಮೇಲಿನ ರೋಗಾಣುಗಳು ನಾಶವಾಗುತ್ತವೆ ಮತ್ತು ದೇಹವು ವಿಟಮಿನ್ ಡಿ ಉತ್ಪನ್ನ ಮಾಡುವುದರಿಂದ ದೇಹದಲ್ಲಿಯ ಎಲ್ಲ ಎಲುಬುಗಳುಲ್ಲಿ ಗಟ್ಟಿತನ ಬರುವುದು. ದೇಹದ ಆರೋಗ್ಯವು ಸುಧಾರಿಸುವುದು.

5. ಸಂಕ್ರಮಣದ ಹಾಡುಗಳು : ಶಾಲಾ ಗುರುಗಳ ಜೊತೆ ಮಕ್ಕಳು ಊರ ಪ್ರಮುಖರ ಮನೆಯಲ್ಲಿ ಸಾಮೂಹಿಕವಾಗಿ ಹಾಡುಗಳನ್ನು ಹಾಡುವುದರಿಂದ ಅವರ ಧ್ವನಿಯು ಉತ್ತಮವಾಗುತ್ತದೆ ಮತ್ತು ಅವರಿಗೆ ಧೈರ್ಯವು ಬರುತ್ತದೆ.

6. ಜಾನುವಾರುಗಳಿಗೆ ಸ್ನಾನ ಮಾಡಿಸಿ ಸಿಂಗಾರ ಮಾಡಿ ಬೆಂಕಿಯ ಜಳದಲ್ಲಿ ಓಡಿಸಿಕೊಂಡು ಹೋಗುವುದರಿಮದ ಜಾನುವಾರುಗಳು ಮುಂದಿನ ಸುಗ್ಗಿಗೆ ಹೊಲಗಳಲ್ಲಿ ಕೆಲಸ ಮಾಡಲು ತಯಾರು ಆಗುತ್ತವೆ.

ನಮ್ರ ಮಾತು : ಒಬ್ಬ ವೈದ್ಯನಾಗಿ ನಮ್ಮ ಹಬ್ಬಗಳ ನಿಮಿತ್ತ ಆಚರಿಸುವ ಪದ್ಧತಿಗಳನ್ನು ನೋಡಿ ವಿಶ್ಲೇಷಿಸಿ ಅವುಗಳಲ್ಲಿ ಅಡಗಿರುವ ವೈಜ್ಞಾನಿಕ ಸತ್ಯವನ್ನು ತಿಳಿದ ಮೇಲೆ ನಮ್ಮ ಪೂರ್ವಿಕರು ನಮ್ಮ ಋಷಿಮುನಿಗಳು ನಮಗಿಂತಲೂ ಹೆಚ್ಚು ಬುದ್ಧಿವಂತರು ಎಂದು ಅವರ ಬಗ್ಗೆ ಪ್ರೀತಿ ಮತ್ತು ಗೌರವ ಹೆಚ್ಚು ಆಗುತ್ತದೆ.

Dr.K-Hanumathiya
ಡಾ. ಕೆ. ಹನುಮಂತಯ್ಯ, ಬೆಂಗಳೂರು
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!