ಅಡಿಕೆ – ಅಸಾಮಾನ್ಯ ಔಷಧೀಯ ಉಪಯೋಗಗಳು

ಅಡಿಕೆ ಶುಭ ಅಥವಾ ಮಂಗಳ ದ್ರವ್ಯ ಎಂದು ಎಷ್ಟು ವಿಶಿಷ್ಟ ಸ್ಥಾನ ಪಡೆದಿದೆಯೋ, ಅದಕ್ಕೂ ಮೀರಿದ ಶ್ರೇಷ್ಠ ಔಷಧೀಯ ಗುಣಗಳಿಂದ ಕೂಡಿದೆ.ಅಡಿಕೆಯಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ, ಅಡಿಕೆಯ ಕಷಾಯ, ಚೂರ್ಣವನ್ನು ಹಲವು ರೋಗಗಳಲ್ಲಿ ಚಿಕಿತ್ಸೆಯಾಗಿ ನಿರ್ದೇಶಿಸಲಾಗಿದೆ.ಇದರ ನಿತ್ಯ ಉಪಯೋಗದಿಂದಾಗುವ ಆರೋಗ್ಯದ ಲಾಭ ಅಪಾರ.

Arecanut-health-benefits ಅಡಿಕೆ - ಅಸಾಮಾನ್ಯ ಔಷಧೀಯ ಉಪಯೋಗಗಳುಭಾರತದ ಎಲ್ಲಾ ಶುಭ ಸಮಾರಂಭಗಳಲ್ಲಿ, ಆಚರಣೆಗಳಲ್ಲಿ, ಶತಮಾನಗಳಿಂದಲೂ ಅಡಿಕೆಗೆ ಅಗ್ರಸ್ಥಾನ. ರೈತರಿಗೆ ಅದರಲ್ಲೂ ಮಲೆನಾಡು ಹಾಗೂ ಕರಾವಳಿ ಭಾಗದ ಜೀವನವಾಗಿರುವ ಉತ್ತಮ ವಾಣಿಜ್ಯ ಬೆಳೆ ಅಡಿಕೆಯಾಗಿದೆ. ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ಪ್ರತಿನಿತ್ಯ ತಮ್ಮ ಜೀವನದ ಒಂದು ಭಾಗವಾಗಿ ಪರಿಗಣಿಸಿ, ಸಂಪ್ರದಾಯವಾಗಿ, ಆಹಾರವಾಗಿ, ಔಷಧಿಯಾಗಿ ಅಡಿಕೆಯನ್ನು ಸೇವಿಸುತ್ತಾ ಬಂದಿದ್ದಾರೆ. ಅಡಿಕೆ ಶುಭ ಅಥವಾ ಮಂಗಳ ದ್ರವ್ಯ ಎಂದು ಎಷ್ಟು ವಿಶಿಷ್ಟ ಸ್ಥಾನ ಪಡೆದಿದೆಯೋ, ಅದಕ್ಕೂ ಮೀರಿದ ಶ್ರೇಷ್ಠ ಔಷಧೀಯ ಗುಣಗಳಿಂದ ಕೂಡಿದೆ. ಇದರ ನಿತ್ಯ ಉಪಯೋಗದಿಂದಾಗುವ ಆರೋಗ್ಯದ ಲಾಭ ಅಪಾರ. ಅದರಲ್ಲೂ ಸ್ಥಾನಿಕವಾಗಿ, ತತ್ ಕ್ಷಣದ ಲಾಭಕ್ಕೂ ಹೆಚ್ಚಾಗಿ ನಂತರದ ಅಥವ ಚಿರಕಾಲೀನ ಲಾಭಗಳು ಆರೋಗ್ಯದ ದೃಷ್ಠಿಯಿಂದ ಮಹತ್ವದ್ದಾಗಿದೆ.

ಆಯುರ್ವೇದ ಶಾಸ್ತ್ರದಲ್ಲಿ ಅಡಿಕೆಯ ಉಲ್ಲೇಖವಿದ್ದು, ಇದರ ವಿಶಿಷ್ಠ ಗುಣ ಹಾಗೂ ಉಪಯೋಗವನ್ನು ತಿಳಿಸಲಾಗಿದೆ. ಅಡಿಕೆಯಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ, ಅಡಿಕೆಯ ಕಷಾಯ, ಚೂರ್ಣವನ್ನು ಹಲವು ರೋಗಗಳಲ್ಲಿ ಚಿಕಿತ್ಸೆಯಾಗಿ ನಿರ್ದೇಶಿಸಲಾಗಿದೆ.  ವೀಳ್ಯದೆಲೆಯ ಜೊತೆಗೆ ಅಡಿಕೆಯ ಸೇವನೆಯಾದ, ತಾಂಬೂಲವನ್ನು ನಿಗದಿತ ವೇಳೆಯಲ್ಲಿ ಪ್ರತಿದಿನ ಸೇವಿಸಬೇಕೆಂದು ಉಲ್ಲೇಖಿಸಲಾಗಿದೆ, ಮತ್ತು ಇದರ ಸೇವನೆಯ ಕ್ರಮ, ಸೇವನೆಯಿಂದಾಗುವ ಅರೋಗ್ಯದ ಲಾಭವನ್ನು ವಿವರಿಸಿ, ತಾಂಬೂಲ ಸೇವನೆಯನ್ನು ದಿನಚರಿಯ ಒಂದು ಭಾಗ ಎಂದು ಇದರ ಮಹತ್ವವನ್ನು ತಿಳಿಸಲಾಗಿದೆ.

ನಿತ್ಯ ಉಪಯೋಗದಿಂದ ಆರೋಗ್ಯದ ಲಾಭ ಅಪಾರ:

ಆಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ಯಾನಿನ್ ಎಂಬ ಅಂಟಿನಂತಹ ಕೆಂಪು ಬಣ್ಣದ ಸಾರ ಹೇರಳವಾಗಿದೆ. 31.31% ತೇವಾಂತ, 4.9% ಪ್ರೋಟಿನ್ ಹಾಗೂ 11.2% ನಾರಿನಾಂಶವಿದೆ ಮತ್ತು ಅಧಿಕ ಪ್ರಮಾಣದ ಖನಿಜಾಂಶವಿದೆ. ಅದರಲ್ಲೂ ಉತ್ತಮ ಪ್ರಮಾಣದಷ್ಟು ಕ್ಯಾಲ್ಶಿಯಂ, ಜೀವಸತ್ವಗಳಾದ ವಿಟಮಿನ್ ಬಿ6 , ವಿಟಮಿನ್ ಸಿ ಅಡಿಕೆಯಲ್ಲಿದೆ. ಅದ್ದರಿಂದ ಅಡಿಕೆಯ ಸೇವನೆಯಿಂದ ಅಗತ್ಯ ಪೋಷಕಾಂಶಗಳು ಹಾಗೂ ಕ್ಯಾಲ್ಶಿಯಂ , ವಿಟಮಿನ್ ನಂತಹ ಜೀವಸತ್ವಗಳು ದೇಹಕ್ಕೆ ಲಭ್ಯವಾಗುತ್ತದೆ.

1. ಅಡಿಕೆಯು ಒಗರು ಅಥವಾ ಕಷಾಯ ರಸ (ರುಚಿ) ಯಾಗಿದ್ದು, ಕೆಮ್ಮು, ಕಫ, ಜಂತುಬಾದೆ, ಬೊಜ್ಜು, ರಕ್ತಹೀನತೆ, ಬಾಯಿಹುಣ್ಣು, ದಂತರೋಗಗಳು, ಹುಳಿತೇಗು, ಅತಿಮೂತ್ರದಂತಹ ರೋಗಗಳಿಗೆ ಉತ್ತಮ ಔಷಧಿಯಾಗಿದೆ.

2. ಅಡಿಕೆಯ ಸೇವನೆಯಿಂದ ಬಾಯಲ್ಲಿನ ಅತಿಯಾದ ಲಾಲಾಸ್ರಾವ (ಜೊಲ್ಲು) ಕಡಿಮೆಯಾಗುತ್ತದೆ. ಬಾಯಿಯ ದುರ್ವಾಸನೆ, ಬಾಯಿಹುಣ್ಣು ಶಮನಗೊಂಡು, ಬಾಯಿ ಮತ್ತು ಗಂಟಲು ಶುದ್ದವಾಗುತ್ತದೆ.ಆಹಾರ ರುಚಿಸುತ್ತದೆ. ಹಲ್ಲುಗಳಲ್ಲಿನ ಸೋಂಕು, ಹಲ್ಲು ನೋವು ಮತ್ತು ಹಲ್ಲಿನ ಹುಳುಕಿಗೆ ಅಡಿಕೆಯ ಕಷಾಯ ಉತ್ತಮ ಔಷಧಿ. ಹಲ್ಲುಗಳಮೇಲೆ ಆಗುವ ಪದರವನ್ನು ನಿವಾರಿಸಿ, ಹಲ್ಲುಗಳ ಹೊಳಪನ್ನು ವೃದ್ದಿಸುತ್ತದೆ ಮತ್ತು ಒಸಡುಗಳಲ್ಲಾಗುವ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.

3. ಅಡಿಕೆಯನ್ನು ಊಟದ ನಂತರ ಸೇವಿಸುವುದರಿಂದ, ಆಹಾರವನ್ನು ಜೀರ್ಣಗೊಳಿಸಲು ಸಹಕಾರಿಯಾಗುತ್ತದೆ. ಅತಿಯಾದ ಭೋಜನದ ನಂತರ ಆಗುವ ಆಲಸ್ಯ, ಅಜೀರ್ಣ, ಹೊಟ್ಟೆ ಉಬ್ಬರದಂತಹ ಲಕ್ಷಣಗಳನ್ನು ತಡೆಯುತ್ತದೆ. ಪಿತ್ತವನ್ನು ಶಮನ ಮಾಡುವ ಗುಣದಿಂದಾಗಿ ಹೊಟ್ಟೆ ಉರಿ, ಪಿತ್ತವಿಕಾರಗಳಲ್ಲಿ ಅಡಿಕೆಯು ದಿವೌಷಧಿ.

arecanut4. ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ. ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಬಾಯಿಹುಣ್ಣು, ಒಸಡಿನ ರಕ್ತಸ್ರಾವದಲ್ಲಿ ಉಪಯುಕ್ತ.

5. ಹಲವು ಸಂಶೋಧನೆಯ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು, ರಕ್ತವನ್ನು ಶುದ್ದಿಗೊಳಿಸುತ್ತದೆ.ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ, ಇಸುಬು, ಫಂಗಸ್ ನ ಸೋಂಕುಗಳಲ್ಲಿ, ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣ.

6. ಆಡಿಕೆಯ ಚೂರ್ಣವನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ವಾಂತಿ ಮತ್ತು ವಾಂತಿ ಬಂದಂತಾಗುವ ಲಕ್ಷಣ ಕಡಿಮೆಯಾಗುತ್ತದೆ.

7. ಅವಶ್ಯ ಪ್ರಮಾಣದ ಸುಣ್ಣದೊಂದಿಗೆ ಅಡಿಕೆ ಮತ್ತು ವೀಳ್ಯೆದೆಲೆಯನ್ನು ಸೇವಿಸುವುದರಿಂದ ದೇಹಕ್ಕೆ ಕ್ಯಾಲ್ಶಿಯಂ ಅಂಶ ಲಭ್ಯವಾಗುತ್ತದೆ. ಆದ್ದರಿಂದ ಮೂಳೆಸವೆತದಿಂದಾಗುವ ನೋವು ಮತ್ತು ಮೂಳೆ ಸಂಬಂಧಿ ವಿಕಾರವನ್ನು ಕಡಿಮೆಗೊಳಿಸಿ, ಮೂಳೆಯ ಸಾಂದ್ರತೆ ಹೆಚ್ಚಿಸುತ್ತದೆ. ಮೂಳೆ ಹಾಗೂ ಗಂಟುಗಳನ್ನು ಸದೃಢವಾಗಿರಿಸಲು ಅಡಿಕೆಯ ಸೇವನೆ ನೆರವಾಗುತ್ತದೆ.

8. ವೀಳ್ಯದೆಲೆ, ಸುಣ್ಣ, ಅಡಿಕೆ ಹಾಗು ಸುಗಂಧಿ ದ್ರವ್ಯಗಳಾದ ಜಾಕಾಯಿ, ಏಲಕ್ಕಿ, ಪಚ್ಚಕರ್ಪೂರ ಹಾಗೂ ಖದಿರವನ್ನೊಳಗೊಂಡ ತಾಂಬೂಲವನ್ನು ಊಟದ ನಂತರ ದಿನದಲ್ಲಿ ಎರಡು ಬಾರಿ ಸೇವಿಸುವುದರಿಂದ ವಿಶಿಷ್ಠ ಆರೋಗ್ಯದ ಲಾಭ ಲಭಿಸುವುದು ಮತ್ತು ಇದರ ಸೇವನೆ “ಹೃದ್ಯ” ಎಂದು ಆಚಾರ್ಯ ವಾಗ್ಭಟರು ಆಯುರ್ವೇದದಲ್ಲಿ ಉಲ್ಲೇಖಿಸಿದ್ದಾರೆ. ಅಡಿಕೆಯು ರಕ್ತನಾಳಗಳಲ್ಲಿನ ಕೊಬ್ಬಿನಾಂಶವನ್ನು ಕಡಿತಗೊಳಿಸಿ, ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ರಕ್ತ ನಾಳಗಳ ಪರಿಶುದ್ದತೆಯನ್ನು ಕಾಯ್ದಿರಿಸಿ ಹಲವು ಹೃದಯ ಸಂಬಂಧಿ ರೋಗಗಳನ್ನು, ರಕ್ತದೊತ್ತಡ, ಕೊಲೆಸ್ಟ್ರಾಲ್ ಅಂಶದ ಶೇಕರಣೆಯನ್ನು ತಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ನಿತ್ಯ ತಾಂಬೂಲ ಸೇವಿಸುವುದರಿಂದ ದೇಹದ ವರ್ಣ, ಆರೋಗ್ಯ, ಬುದ್ದಿ ಮತ್ತು ಸ್ಮೃತಿ (ನೆನಪಿನ ಶಕ್ತಿ) ಹೆಚ್ಚಿಸುತ್ತದೆ.

9. ಅಧಿಕ ಒಗರು ಹಾಗೂ ನಾರಿನಾಂಶದಿಂದಾಗಿ , ಅಡಿಕೆಯ ಕಷಾಯ ಸೇವಿಸುವುದರಿಂದ ಶೇಖರಿತ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಆದ್ದರಿಂದ ಬೊಜ್ಜು ರೋಗಿಗಳು, ತೂಕ ಇಳಿಸಿಕೊಳ್ಳಲು ಇಚ್ಚಿಸುವವರಿಗೆ ಅಡಿಕೆ ರಾಮಬಾಣ.

10. ಕೆಮ್ಮು ಮತ್ತು ಕಫರೋಗಗಳಲ್ಲಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಕಟ್ಟಿರುವ ಕಫ ಸಡಿಲಗೊಳ್ಳುತ್ತದೆ, ಕೆಮ್ಮು ನಿವಾರಣೆಯಾಗುತ್ತದೆ.

11. ಅಡಿಕೆಯಲ್ಲಿನ ಅರೆಕೋಲಿನ್ ಎಂಬ ಅಂಶವು ಅತಿಯಾದ ರಕ್ತದೊತ್ತಡ ಹಾಗೂ ಗೊರಕೆಯನ್ನು ನಿಯಂತ್ರಿಸುತ್ತದೆ.

ಅತಿಯಾದ ಸೇವನೆಯಿಂದಾಗುವ ಪರಿಣಾಮ

Arecanut ಅಡಿಕೆ - ಅಸಾಮಾನ್ಯ ಔಷಧೀಯ ಉಪಯೋಗಗಳು1. ಅಡಿಕೆಯನ್ನು ಅತಿಯಾಗಿ ಬಳಸುವುದರಿಂದ, ಹೊಸ ಅಡಿಕೆಯನ್ನು ಉಪಯೋಗಿಸುವುದರಿಂದ ಕೆಲವೊಂದು ದುಷ್ಪರಿಣಾಮ ದೇಹದ ಮೇಲಾಗುತ್ತದೆ. ಅತಿಯಾದ ಸೇವನೆಯಿಂದ ಬಾಯಿ ಉರಿ, ಅಲ್ಪಮೂತ್ರ, ತಲೆ ಸುತ್ತು , ವೀರ್ಯಾಣು ನಾಶವಾಗಬಹುದು. ಆದ್ದರಿಂದ ಹೊಸ ಅಡಿಕೆಯ ಸೇವನೆ ಮತ್ತು ಅತಿಯಾದ ಸೇವನೆ ಮಾಡಬಾರದು.

2. ಅಡಿಕೆ ಬೆಳೆದ ಮೂರು ತಿಂಗಳ ನಂತರ ಸೇವಿಸುವುದು ಒಳಿತು. ಇದರಿಂದ ಅಡಿಕೆಯಲ್ಲಿನ ತೀಕ್ಷಣತೆ ಕಡಿಮೆಯಾಗಿ ಸೇವಿಸಲು ಯೋಗ್ಯವಾಗುತ್ತದೆ ಮತ್ತು ಔಷಧೀಯಗುಣದಿಂದ ಸಂಪನ್ನವಾಗಿರುತ್ತದೆ.

3. ಚಿಕ್ಕಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ನೇತ್ರ ರೋಗಿಗಳು ಅಡಿಕೆಯನ್ನು ಸೇವಿಸಬಾರದು. ಇನ್ನು ಹಾಲು, ಕಪಿತ್ತ, ಹಲಸಿನ ಹಣ್ಣು, ಜೇನುತುಪ್ಪ, ಎಳನೀರು ಸೇವಿಸಿದ ಕೂಡಲೆ ಅಡಿಕೆಯನ್ನು ಸೇವಿಸಬಾರದು.

4. ಹಲವು ವಿಶಿಷ್ಠ ಔಷಧೀಯ ಗುಣಗಳ ಆಗವವಾಗಿರುವುದರಿಂದ ನಿಗದಿತ ಪ್ರಮಾಣಾದ ಅಡಿಕೆ ಹಾಗೂ ವೀಳ್ಯದೆಲೆಯ ಸೇವನೆ ಆರೋಗ್ಯಕ್ಕೆ ಹಿತಕರ. ಮತ್ತು ಇದರಿಂದ ಯಾವುದೇ ದೂಷ್ಫರಿಣಾಮವಿಲ್ಲ.

5. ಆದರೆ ಅಡಿಕೆಯೊಂದಿಗೆ ಆರೋಗ್ಯಕ್ಕೆ ಹಾನಿಕರವಾಗಿರುವ ಹೊಗೆಸೊಪ್ಪು , ತಂಬಾಕಿನೊಂದಿಗೆ ನಿರಂತರ ಸೇವಿಸುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗ ಬರಬಹುದು.

ಆದ್ದರಿಂದ ವಯೋಮಿತಿ, ಇತರೆ ರೋಗಗಳನ್ನು, ದೇಹದ ಪ್ರಕೃತಿಯನ್ನು ಪರಿಗಣಿಸಿ ಅಡಿಕೆಯನ್ನು ಸೇವಿಸಿದ್ದಲ್ಲಿ ಆರೋಗ್ಯವನ್ನು ಕಾಯ್ದಿರಿಸಿಕೊಳ್ಳುವುದರೊಂದಿಗೆ ಹಲವು ರೋಗಗಳನ್ನು ತಡೆಯಬಹುದು.

Also watch Video: ಅಡಿಕೆ ಸೇವನೆಯಿಂದ ಸಿಗುವ ಲಾಭಗಳು

ಡಾ. ಮಹೇಶ ಶರ್ಮಾ. ಎಂ ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು. Mob: 9964022654 drsharmamysr@gmail.com

ಡಾ. ಮಹೇಶ ಶರ್ಮಾ. ಎಂ
ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು.
Mob: 9964022654 drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!