ಡಾ. ಶಾಂತಗಿರಿ ಮಲ್ಲಪ್ಪ – ವೈದ್ಯಕೀಯ ಕ್ಷೇತ್ರದ ಧ್ರುವತಾರೆ

ಡಾ. ಶಾಂತಗಿರಿ ಮಲ್ಲಪ್ಪ ಕರ್ನಾಟಕ ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘ ಸ್ಥಾಪಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕೈ ಬರಹ ಸುಧಾರಣಾ ಕಾರ್ಯಗಾರಗಳನ್ನು ಆಯೋಜಿಸಿ ವೈದ್ಯರಿಗೆ ತರಬೇತಿ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದಾರೆ. ಇವರ ಈ ಶ್ಲಾಘನೀಯ ಕಾರ್ಯಕ್ಕೆ ಹಲವು ಪುರಸ್ಕಾರಗಳು ಒಲಿದು ಬಂದಿವೆ.

ಹಿಂದಿನಿಂದಲೂ ನಾವು ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ನಂಬಿದವರು. ಆದರೆ ವೈದ್ಯರ ಪ್ರಮಾದದಿಂದ ಎಷ್ಟೋ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಹೌದು ವೈದ್ಯರು ಬರೆಯುವ ಬ್ರಹ್ಮಲಿಪಿ ಅಕ್ಷರಗಳು ಸ್ವತಃ ವೈದ್ಯರಿಗೆ ಅರ್ಥವಾಗಲ್ಲ. ಇನ್ನೂ ಔಷಧ ವ್ಯಾಪಾರಿಗಳು ಅದನ್ನು ಅರ್ಥೈಸಿಕೊಂಡು, ಅರ್ಥ ಅನರ್ಥವಾಗಿ ರೋಗಿಗಳಿಗೆ ಬೇರೆ ಔಷಧ ನೀಡಿ ಸಾಕಷ್ಟು ಅವಾಂತರಗಳು ಆಗಿದ್ದನ್ನು ನೋಡಿದ್ದೇವೆ ಕೇಳಿದ್ದೇವೆ. ಈ ಪ್ರಹಸನಗಳಿಗೆ ಪರ್ಯಾಯ ಮಾರ್ಗವೆಂದರೆ ವೈದ್ಯರು ಕಡ್ಡಾಯವಾಗಿ ವೈದ್ಯಕೀಯ ಚೀಟಿಗಳನ್ನು (ಕ್ಯಾಪಿಟಲ್) ದಪ್ಪ ಅಕ್ಷರಗಳಲ್ಲೇ ಬರೆಯಬೇಕು. ಆದರೆ ಶೋಚನೀಯ ಸಂಗತಿ ಎಂದರೆ ಯಾವ ವೈದ್ಯರು ಬರೆಯುತ್ತಿಲ್ಲ. ಅಮೇರಿಕಾದ ಒಂದು ಸರ್ವೇ ಪ್ರಕಾರ ವೈದ್ಯರು ಬರೆದುಕೊಡುವ ಅಸ್ಪಷ್ಟ ಔಷಧ ಚೀಟಿಯಿಂದ ಅಮೇರಿಕಾದಲ್ಲಿ 7000 ಜನ ಸಾವನ್ನಪ್ಪುತ್ತಿದ್ದಾರೆ.

ವೈದ್ಯರ ಅರ್ಥವಾಗದ ಅಕ್ಷರಗಳಿಗೆ ಔಷಧ ವ್ಯಾಪಾರಿಗಳು ಗೊಂದಲದಲ್ಲಿ ನೀಡುವ ತಪ್ಪು ಔಷಧ ರೋಗಿಗಳ ಮೇಲೆ ಬೀರುವ ಅಡ್ಡಪರಿಣಾಮಗಳನ್ನು ತಪ್ಪಿಸಲು ಕರ್ನಾಟಕ ವೈದ್ಯಕೀಯ ಪರಿಷತ್ 2012 ಆಗಸ್ಟ್ 24 ರಂದು ಔಷಧ ಚೀಟಿಗಳನ್ನು ವೈದ್ಯರು ಕಡ್ಡಾಯವಾಗಿ ದಪ್ಪ ಅಕ್ಷರಗಳಲ್ಲಿ ಬರೆಯಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ದುರಂತ ಎಂದರೆ ರಾಜ್ಯದ 1,00,000 ಕ್ಕೂ ಅಧಿಕ ಅಲೋಪಥಿ ಹಾಗೂ 36,000 ಕ್ಕೂ ಅಧಿಕ ಆಯುಷ್ ವೈದ್ಯರಿಗೆ ಈ ನಿಯಮದ ಬಗ್ಗೆ ಮಾಹಿತಿಯೇ ಇರಲಿಲ್ಲ. ಯಾವಾಗ ಡಾ: ಶಾಂತಗಿರಿ ಮಲ್ಲಪ್ಪ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ ಕೂಡಲೇ ಎಚ್ಚೆತ್ತ ಸರ್ಕಾರ ರಾಜ್ಯದಲ್ಲಿರುವ ವೈದ್ಯರ ಕೈ ಬರಹ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ 2013 ಆಗಸ್ಟ್ 7 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸುತ್ತೋಲೆ ಹೊರಡಿಸಿತು.

ಇಂದು ರಾಜ್ಯದಲ್ಲಿ ಸಾವಿರಾರು ವೈದ್ಯರು (ಕ್ಯಾಪಿಟಲ್ ಲೆಟರ್) ದಪ್ಪ ಅಕ್ಷರಗಳಲ್ಲಿ ಔಷಧ ಚೀಟಿ ಬರೆಯುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ: ಶಾಂತಗಿರಿ ಮಲ್ಲಪ್ಪನವರು. ದೇಶದಲ್ಲಿ ನಿತ್ಯ 40 ಲಕ್ಷಕ್ಕೂ ಹೆಚ್ಚು ಅಧಿಕ ವೈದ್ಯಕೀಯ ಚೀಟಿಗಳನ್ನು ಬರೆಯಲಾಗುತ್ತಿದ್ದು, ಈ ನಿಯಮವನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆಗ್ರಹಿಸಿ ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ವೈದ್ಯಕೀಯ ಪರಿಷತ್‍ನ ಗಮನ ಸೆಳೆದಿದ್ದಾರೆ. ಕರ್ನಾಟಕ ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘ ಸ್ಥಾಪಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕೈ ಬರಹ ಸುಧಾರಣಾ ಕಾರ್ಯಗಾರಗಳನ್ನು ಆಯೋಜಿಸಿ ವೈದ್ಯರಿಗೆ ತರಬೇತಿ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದಾರೆ. ಇವರ ಈ ಶ್ಲಾಘನೀಯ ಕಾರ್ಯಕ್ಕೆ ಹಲವು ಪುರಸ್ಕಾರಗಳು ಒಲಿದು ಬಂದಿವೆ.

ಡಾ. ಶಾಂತಗಿರಿ ಮಲ್ಲಪ್ಪ - ವೈದ್ಯಕೀಯ ಕ್ಷೇತ್ರದ ಧ್ರುವತಾರೆ
ಇತ್ತೀಚೆಗೆ ನವದೆಹಲಿಯಲ್ಲಿ “ಡಾ:ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಇದು ಇವರು ಕೈಗೊಂಡ ನಿಸ್ವಾರ್ಥ ಸೇವೆಯ ಒಂದು ಮಜಲು ಮಾತ್ರ. ಇವರ ಇನ್ನೂ ಹಲವು ಸಮಾಜಮುಖಿ ಕಾರ್ಯಗಳ ಪಟ್ಟಿ ದೊಡ್ಡದಿದೆ. ಅನುದಿನವನ್ನು ನವದಿನದಿಂದ ಕಳೆಯುವ ಡಾ: ಶಾಂತಗಿರಿ ಮಲ್ಲಪ್ಪನವರ ಕಾರ್ಯಚಟುವಟಿಕೆಯಿಂದ ರಾಜ್ಯದ ಮೂಲೆ ಮೂಲೆಗೂ ಚಿರಪರಿಚಿತರಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಾಹಿತಿ, ಪತ್ರಕರ್ತ, ಲೇಖಕ, ಉತ್ತಮ ವಾಗ್ಮಿ, ಸಮಾಜ ಸೇವಕ. 1976 ಜುಲೈ 1ರಂದು ಗದಗ ಜಿಲ್ಲೆಯ ಸಹಕಾರಿ ಸಂಘದ ಕಾಶಿಯಾದ ಹುಲಕೋಟಿಯಲ್ಲಿ ಜನಿಸಿದ ಇವರು ಗದಗಿನ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದವರು. ಹುಟ್ಟುರಾದ ಹುಲಕೋಟಿಯ ಕೆ.ಎಚ್.ಪಾಟೀಲ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕೇಂದ್ರದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಇವರ ಅನುಪಮ ಸೇವೆಯ ಜೊತೆಗೆ ಬೆರಳಿಗೆ ಅಂಟಿದ ಬರಹದ ನಂಟು ಇವರನ್ನು ಪತ್ರಿಕೋದ್ಯಮಕ್ಕೆ ಕೈ ಬೀಸಿ ಕರೆಯಿತು. ಹುಬ್ಬಳ್ಳಿಯಿಂದ ಪ್ರಸಾರವಾಗುತ್ತಿದ್ದ ವಿಶಾಲ ಕರ್ನಾಟಕ ದಿನ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ, ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಜಿಲ್ಲಾ ಗ್ರಾಮೀಣ ವರದಿಗಾರರಾಗಿ ಪ್ರವೃತ್ತಿಯಿಂದ ಪತ್ರಕರ್ತರಾದರು.

ಡಾ. ಶಾಂತಗಿರಿ ಮಲ್ಲಪ್ಪ - ವೈದ್ಯಕೀಯ ಕ್ಷೇತ್ರದ ಧ್ರುವತಾರೆ
ಸಿಂಗಾಪೂರದಲ್ಲಿ ಜನವರಿ 23, 2017ರಂದು ಜರುಗಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ‘ಇಂಟರ್‍ನ್ಯಾಷನಲ್ ಗ್ಲೋರಿ ಆಫ್ ಇಂಡಿಯಾ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

2003 ರಿಂದ ಬೆಂಗಳೂರಿನ ಕಡೆ ಮುಖ ಮಾಡಿದ ಇವರು ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸುಮಾರು ಮೂರು ವರ್ಷ ಹಾಗೂ ಕಲ್ಯಾಣ ನಗರದ ಲೋಖಂಡೇಸ್ ಆಸ್ಪತ್ರೆಯಲ್ಲಿ ಐದು ವರ್ಷಗಳ ಕಾಲ ತಜ್ಞ ವೈದ್ಯ ಸಹಾಯಕರಾಗಿ ಪರಿಪೂರ್ಣ ಸೇವೆ ಸಲ್ಲಿಸಿದ ಹಿರಿಮೆ ಅವರದು. ಎರಡು ದಶಕಗಳಿಂದಲೂ ವೈದ್ಯಕೀಯ ಸಲಹೆಗಳು, ಬರಹಗಳು ಮತ್ತು ಔಷಧಿ ಚೀಟಿಗಳನ್ನು ಆಂಗ್ಲ ಭಾಷೆಯ ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಾ, ವಿಶ್ವದಲ್ಲೇ ಕ್ಯಾಪಿಟಲ್ ಅಕ್ಷರಗಳನ್ನು ಬರೆಯುವ ಏಕೈಕ ವೈದ್ಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮಹೋನ್ನತ ದಾಖಲೆಗಾಗಿ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲೂ ತಮ್ಮ ಹೆಸರನ್ನು ದಾಖಲಿಸಬೇಕೆಂಬ ಮಹತ್ತರ ಗುರಿಯನ್ನು ಹೊಂದಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಇವರು ದೊಡ್ಡ ಬಾಣಸವಾಡಿಯಲ್ಲಿ ಶಾಂತಗಿರಿ ಹೆಲ್ತ್ ಕೇರ್ ಸ್ಥಾಪಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಡಾ. ಶಾಂತಗಿರಿ ಮಲ್ಲಪ್ಪ - ವೈದ್ಯಕೀಯ ಕ್ಷೇತ್ರದ ಧ್ರುವತಾರೆ
ಗದಗ ಜಿಲ್ಲೆ ಹುಲಕೋಟಿಯಲ್ಲಿ 15, ಮಾರ್ಚ್ 2017ರಂದು ಕೆ.ಹೆಚ್.ಪಾಟೀಲ ಗ್ರಾಮಹಿತಾಭಿವೃದ್ಧಿ ಸಂಘದ ವತಿಯಿಂದ ಡಾ: ಶಾಂತಗಿರಿ ಮಲ್ಲಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಶಾಂತಗಿರಿ ಮಲ್ಲಪ್ಪ - ವೈದ್ಯಕೀಯ ಕ್ಷೇತ್ರದ ಧ್ರುವತಾರೆ
ಬೆಂಗಳೂರು ಸರ್ವಜ್ಞನಗರದಲ್ಲಿ ಜರುಗಿದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಡಾ: ಶಾಂತಗಿರಿ ಮಲ್ಲಪ್ಪ ರವರನ್ನು ಬೆಂಗಳೂರು ದೂರದರ್ಶನ ಹೆಚ್ಚುವರಿ ಮಹಾನಿರ್ದೇಶಕರಾದ ನಾಡೋಜ ಡಾ: ಮಹೇಶ್ ಜೋಷಿ, ಹೆಚ್.ಎಂ.ಆರ್. ಗ್ರೂಪ್‍ನ ಶ್ರೀ ಹೆಚ್.ಎಂ. ರಮೇಶ್ ಗೌಡ, ಶ್ರೀ ರಾಮಾಂಜನೇಯ, ಎ.ಸಿ.ಪಿ. ರಂಗಪ್ಪ ಮೊದಲಾದವರು ಸನ್ಮಾನಿಸಿ ಗೌರವಿಸಿದರು.

ಇಲ್ಲಿಯವರೆಗೆ ಇನ್ನೂರಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿದ್ದಾರೆ. ದಿನದ 24 ಗಂಟೆಯೂ ಬಡವರ, ಅಂಗವಿಕಲರ ಉಚಿತ ವೈದ್ಯಕೀಯ ಸೇವೆ ನೀಡುತ್ತಾ, ಬೆಂಗಳೂರಿನ ಸರ್ವಜ್ಞನಗರ ಹಾಗೂ ಸುತ್ತಮುತ್ತಲಿನ ಜನತೆಗೆ ಸಂಜೀವಿನಿಯಾಗಿದ್ದಾರೆ. ಡಾ: ಶಾಂತಗಿರಿಯವರ ಮಹೋನ್ನತ ಸೇವೆಗಾಗಿ 23ನೇ ಜನವರಿ 2017 ರಂದು ಸಿಂಗಾಪೂರದಲ್ಲಿ ಇಂಟರ್ ನ್ಯಾಷನಲ್ ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ ಗೌರವ, 20ನೇ ನವೆಂಬರ್ 2016 ರಂದು ನವದೆಹಲಿಯಲ್ಲಿ ಡಾ: ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ‘ಕೆಂಪೇಗೌಡ ಪ್ರಶಸ್ತಿ’ ನೀಡಿ ಸನ್ಮಾನಿಸಿದೆ.

ಇದರ ಜೊತೆಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಗೌರವ ಸಮರ್ಪಿಸಿವೆ ಹಾಗೂ ಹಲವಾರು ಪುರಸ್ಕಾರ, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ತಂತ್ರಜ್ಞಾನದ ಆವಿಷ್ಕಾರದಿಂದ ಕ್ಷೀಣಿಸುತ್ತಿರುವ ಸಂಪ್ರದಾಯಕ ಅಂಚೆಪತ್ರಗಳ ಉಳಿವಿಗಾಗಿ ಪ್ರತಿವರ್ಷ ಜುಲೈ 1 ವೈದ್ಯ ದಿನಾಚರಣೆ ಪ್ರಯುಕ್ತ ಒಂದು ತಿಂಗಳ ಕಾಲ ರೋಗಿಗಳಿಗೆ ಔಷಧಿ ಸಲಹೆಗಳನ್ನು ಅಂಚೆಪತ್ರದಲ್ಲಿ ಬರೆಯುತ್ತಾ ನಶಿಸುತ್ತಿರುವ ಐತಿಹಾಸಿಕ ಹಿನ್ನೆಲೆಯ ಅಂಚೆಪತ್ರಕ್ಕೆ ಮರು ಜೀವ ನೀಡುತ್ತಿದ್ದಾರೆ. ನಿತ್ಯ ಪೂರ್ವ ನಿಯೋಜಿತ ಕೆಲಸಗಳ ನಡುವೆಯು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ವೈದ್ಯಕೀಯವಾಗಿ ಹಾಗೂ ಸಾಹಿತ್ಯಿಕವಾಗಿ ಹಲವು ಪುಸ್ತಕಗಳನ್ನು ಬರೆದು ರಾಜ್ಯದ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ರಚನೆಯಾದ ‘ಆರೋಗ್ಯ ರಶ್ಮಿ’ ಪುಸ್ತಕವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಆರೋಗ್ಯ ಸಂಬಂಧಿತ ಲೇಖನಗಳು ಹಾಗೂ ಅಂಕಣಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಪಂಚ ಭಾಷೆಗಳ ಪಾಂಡಿತ್ಯ ಪಡೆದಿರುವ ಇವರು ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು, ತೆಲಗು ಭಾಷೆಗಳನ್ನು ನಿರ್ಗಳವಾಗಿ ಮಾತನಾಡುವ ಹಾಗೂ ಬರೆಯುವ ಕೌಶಲ್ಯವನ್ನು ಹೊಂದಿದ್ದಾರೆ. ಸ್ವಭಾವತಃ ಸರಳ ಜೀವಿಯಾದ ಡಾ: ಶಾಂತಗಿರಿ ಮಲ್ಲಪ್ಪನವರಿಗೆ ಧರ್ಮಪತ್ನಿ ದಾಕ್ಷಾಯಿಣಿ ಸದಾ ಸ್ಪೂರ್ತಿಯಾಗಿದ್ದಾರೆ. ಮಕ್ಕಳಾದ ಪ್ರಭು ಹಾಗೂ ಅಭಿಷೇಕ್ ಬದುಕಿನ ಇಚ್ಛಾಶಕ್ತಿಗಳಾಗಿದ್ದಾರೆ. ಸರ್ವರ ಹಿತವನ್ನು ತನ್ನ ಹಿತ ಎಂದು ಬಯಸುವ ಡಾ: ಶಾಂತಗಿರಿ ಮಲ್ಲಪ್ಪನವರು ಇನ್ನೂ ಎತ್ತರಕ್ಕೆ ಏರಲಿ ಎಂಬುವುದೇ ನಮ್ಮೆಲ್ಲರ ಆಶಯ.

-ವೀರಣ್ಣ ಬಳಿಗೇರ್, ಬೆಂಗಳೂರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!