ಯೋಗಶಾಸ್ತ್ರ – ವಿಶ್ವಕ್ಕೆ ಋಷಿ-ಮುನಿಗಳು ನೀಡಿರುವ ವರದಾನ

ಯೋಗಶಾಸ್ತ್ರವು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆಯನ್ನು ಹೊಂದಿದೆ. ಯೋಗ ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಇಡೀ ವಿಶ್ವಕ್ಕೆ ಪ್ರಾಚೀನ ಋಷಿ-ಮುನಿಗಳು ನೀಡಿರುವ ಒಂದು ವರದಾನವಾಗಿದೆ.

ಯೋಗ ಎಂದರೇನು ?
ಯೋಗಶಾಸ್ತ್ರ - ವಿಶ್ವಕ್ಕೆ ಋಷಿ-ಮುನಿಗಳು ನೀಡಿರುವ ವರದಾನಯೋಗ ಶಬ್ದವು ಸಂಸ್ಕೃತದಲ್ಲಿ ‘ಯುಜ್’ ಎಂಬ ಧಾತುವಿನಿಂದ ಬಂದಿದ್ದು, ಯೋಗ ಎಂದರೆ ಕೂಡಿಸು, ಸೇರಿಸು, ಜೋಡಿಸು, ಸಂಬಂಧ, ಸಂಯೋಗ, ಬಂಧನ, ಮುಂತಾದವುಗಳಿಂದ ಕೂಡಿರುವುದೇ ಯೋಗ. ಯೋ = ಯೋಗ್ಯವಾದದ್ದನ್ನು ; = ಗಮನದಲ್ಲಿಟ್ಟು ಮಾಡುವುದೇ ಯೋಗ. “ಯುಜ್ಯತೇ ಅನೇನ ಇತಿ ಯೋಗಃ”- “ಅನೇಕ ಪ್ರಕಾರವಾಗಿ ಜೋಡಿಸುವಂಥದ್ದೇ ಯೋಗ”.

ಯುಜ್ ಪದದ ವಿವಿಧ ಅರ್ಥಗಳು ಇಂತಿವೆ: “ಯುಜ್ ಸಮಾಧೌ” ; ಯುಜ್ ಎಂದರೆ ಸಮಾಧಿ. i.e. ಮನಸ್ಸಿನ ಸಮಾಧಾನಕರ ಸ್ಥಿತಿ.; “ಯುಜಿರ್ ಯೋಗೇ”-ಯುಜ್ ಎಂದರೆ ಯೋಗ ; “ಯುಜ್ ಸಂಯಮನೇ”- ಯುಜ್ ಎಂದರೆ ಸಂಯಮ.

ಆಸನವೆಂದರೇನು ?

ಎಲ್ಲ ವಸ್ತುಗಳ ಸ್ಥಿತಿ ಮತ್ತು ಸ್ಥಿರತೆಯೇ ಆಸನ. ಕಣ್ಣಿಗೆ ಕಾಣಿಸುವ ಹಾಗೂ ಕಾಣಿಸಲಾರದ ವಸ್ತುಗಳೂ ಇರಬಹುದು. ಪ್ರತಿಯೊಂದು ವಸ್ತುವಿಗೂ ಒಂದು ಗೌರವ ಸ್ಥಾನವಿದೆ, ಆ ಗೌರವ ಸ್ಥಾನವನ್ನು ಕಾಪಾಡಿಕೊಂಡು ಸುಖಪಡುವುದೇ ಆಸನದ ಮೂಲ ಉದ್ದೇಶ.
ಆಸನ ಎಂದರೆ
1. ಆ = ಆಯಾಸವಿಲ್ಲದ : ಮನಸ್ಸು, ದೇಹ, ಪ್ರಾಣ
2. ಸ = ಸಮತಳ ಸ್ಥಿತಿ : ಮನಸ್ಸಿನಲ್ಲಿ, ದೇಹದಲ್ಲಿ, ಪ್ರಾಣದಲ್ಲಿ
3. ನ = ನಡೆಯುವ ಕ್ರಿಯೆ : ಮನಸ್ಸಿನಲ್ಲಿ, ದೇಹದಲ್ಲಿ, ಪ್ರಾಣದಲ್ಲಿ

ಮನಸ್ಸು + ದೇಹ + ಪ್ರಾಣದ ಸಂಗಮ = ಯೋಗಾಸನ

ಸ್ಥಿರವಾಗಿ ಸುಖವಾಗಿರುವುದೇ ಆಸನ – “ಅಸ್ಯತೇ ಇತಿ ಆಸನಂ”. ಕುಳಿತುಕೊಳ್ಳಲು ಯೋಗ್ಯವಾಗಿರುದೇ ಆಸನ.

ಯೋಗಾಸನವೆಂದರೇನು ?

ಯೋಗದ ಹಾಗೂ ಆಸನದಲ್ಲಿ ಅಡಕವಾದ ವಿಷಯಗಳನ್ನು ವಿಸ್ತಾರವಾಗಿ ಅರಿಯುವ ಮತ್ತು ಜ್ಞಾನ ಸಂಪಾದನೆ ಮಾಡುವ ಸಾಧನೆಯ ಮಾರ್ಗವೇ ಯೋಗಾಭ್ಯಾಸದ ಗುರಿಯಾಗಿರುತ್ತದೆ. ವೇದೋಪನಿಷತ್ತುಗಳಲ್ಲಿ, ಶೃತಿಶಾಸ್ತ್ರದಲ್ಲಿ, ಪುರಾಣಗಳಲ್ಲಿ, ಭಗವದ್ಗೀತೆ ಮತ್ತು ಇತಿಹಾಸಗಳಲ್ಲಿ ಕೂಡ ಯೋಗಕ್ಕೆ ಸಂಬಂಧಪಟ್ಟ ಉಲ್ಲೇಖಗಳಿರುವುದರಿಂದ ಯೋಗಶಾಸ್ತ್ರವು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆಯನ್ನು ಹೊಂದಿದೆ. ಯೋಗ ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಇಡೀ ವಿಶ್ವಕ್ಕೆ ಪ್ರಾಚೀನ ಋಷಿ-ಮುನಿಗಳು ನೀಡಿರುವ ಒಂದು ವರದಾನವಾಗಿದೆ.

ಯೋಗ ಮತ್ತು ಆಯುರ್ವೇದ ಮೊಟ್ಟಮೊದಲು ಪ್ರಾರಂಭವಾಗಿದ್ದು ಭಾರತ ದೇಶದಲ್ಲೇ; ಇವುಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದು ಮಾತ್ರ ಬೇರೆ ಬೇರೆ ದೇಶದ ಜನರು. ಆಯುರ್ವೇದದ ವಿಜ್ಞಾನವು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ಪೂರ್ವಮೀಮಾಂಸ ಮತ್ತು ಉತ್ತರ ಮೀಮಾಂಸ ಅಥವಾ ವೇದಾಂತಗಳೆಂಬ ದರ್ಶನಗಳನ್ನೊಳಗೊಂಡ ವಿಜ್ಞಾನ. ಯೋಗಶಾಸ್ತ್ರವು ಆಯುರ್ವೇದದ ಒಂದು ವಿಭಾಗ ಎಂದರ್ಥ. ಅಂತೆಯೇ ಯೋಗಶಾಸ್ತ್ರ ಸೂತ್ರಧಾರಿ ಪತಂಜಲಿ ಮಹರ್ಷಿಯನ್ನು “ಮಲಂ ಶರೀರಸ್ಯಚ ವೈದ್ಯಕೇನ” ಎಂಬ ವಾಕ್ಯದಿಂದ ಸ್ಮರಿಸುತ್ತೇವೆ.

ಯೋಗಶಾಸ್ತ್ರದಲ್ಲೇ ಚಿಕಿತ್ಸಾ ಶಾಸ್ತ್ರವೂ ಅಡಗಿದೆ. ಆದುದರಿಂದ ವೈದ್ಯನಾದವನಿಗೆ ಯೋಗಶಾಸ್ತ್ರದ ಪರಿಜ್ಞಾನವಿರುವುದೂ, ಯೋಗಿಯಾದವನಿಗೆ ವೈದ್ಯಶಾಸ್ತ್ರದ ಅನುಭವವಿರುವುದೂ ಅಗತ್ಯ. ಆದುದರಿಂದ ನಮ್ಮ ಭಾರತದಲ್ಲಿ ಈ ಎರಡು ವಿಜ್ಞಾನಗಳನ್ನು ಕ್ರಮವಾಗಿ ತಿಳಿದುಕೊಳ್ಳುವುದು ಯೋಗ ಶಿಕ್ಷಕನ ಕರ್ತವ್ಯ. ಆಯುರ್ವೇದ ಶಾಸ್ತ್ರದ ಪ್ರಕಾರ ಒಬ್ಬ ರೋಗಿಗೆ ಚಿಕಿತ್ಸೆ ಕೊಡುವುದೆಂದರೆ, ರೋಗಿಯನ್ನು ಅಷ್ಟ ವಿಧಗಳಲ್ಲಿ ಪರೀಕ್ಷಿಸಬೇಕು. ಹವಾಮಾನ, ವಯೋಮಾನ ಇವುಗಳನ್ನು ಅನುಸರಿಸಿ, ಅಗತ್ಯವಿದ್ದಲ್ಲಿ ಕೆಲವು ಔಷಧಿಗಳನ್ನು ರೋಗಕ್ಕನುಸಾರವಾಗಿ ನೀಡಬೇಕು. ಆತನ ಪ್ರಕೃತಿ, ಮಾನಸಿಕ ಸ್ಥಿತಿ, ವಯಸ್ಸನ್ನು ಹಾಗೂ ಚಿಕಿತ್ಸಿಸುವ ಕಾಲವನ್ನು ಮುಂದಿಟ್ಟುಕೊಂಡು, ಪ್ರಥಮವಾಗಿ ಯಮ, ನಿಯಮಗಳ ಪರಿಜ್ಞಾನವನ್ನು ಆತನಿಗೆ ತಿಳಿಸಿ, ಯೋಗಚಿಕಿತ್ಸೆಯನ್ನು ಪ್ರಾರಂಭಿಸುವುದು ಒಳ್ಳೆಯದು.

ಯೋಗದ ವಿವಿಧ ವ್ಯಾಖ್ಯಾನಗಳು:

ಯೋಗಶಾಸ್ತ್ರ - ವಿಶ್ವಕ್ಕೆ ಋಷಿ-ಮುನಿಗಳು ನೀಡಿರುವ ವರದಾನಯೋಗವನ್ನು ಕುರಿತಂತೆ ಹಲವಾರು ವ್ಯಾಖ್ಯೆಗಳು ಬಹು ಹಿಂದಿನಿಂದಲೂ ಲಭ್ಯವಿದೆ. ನಾವಿಲ್ಲಿ ಮುಖ್ಯವಾಗಿ ನಾಲ್ಕು ವ್ಯಾಖ್ಯೆಗಳನ್ನು ಗಮನಿಸಬಹುದು. ‘ಯೋಗ ಕರ್ಮಸು ಕೌಶಲಂ’: ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳಿರುವಂತೆ ಕೆಲಸದಲ್ಲಿ ಕುಶಲತೆ ಪಡೆಯುವುದೇ ಯೋಗ ಎನ್ನಿಸಿಕೊಳುತ್ತದೆ. ಸಮತ್ವಂ ಯೋಗಮುಚ್ಯತೇ: ಇದೂ ಭಗವದ್ಗೀತೆಯ ಸಾಲೇ. ಜೀವನದಲ್ಲಿ ನೋವು-ನಲಿವು, ಸಿಹಿ-ಕಹಿ, ಉಷ್ಣ-ಶೀತ, ಕತ್ತಲೆ-ಬೆಳಕು ಇತ್ಯಾದಿ ದ್ವಂದ್ವಗಳು ವ್ಯಾಪಕ, ನಿರಂತರ. ಈ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದು. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಮೈಮರೆಯದೆ ಅವರೆಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದೇ ಯೋಗ.

ಯೋಗಶಾಸ್ತ್ರದ ಪಿತಾಮಹ ಎನಿಸಿರುವ ಮಹರ್ಷಿ ಪತಂಜಲಿಯು ತನ್ನ ‘ಪಾತಂಜಲ ಯೋಗಸೂತ್ರ’ದಲ್ಲಿ ಯೋಗವನ್ನು ಹೀಗೆ ವಿವರಿಸಿದ್ದಾನೆ; ‘ಯೋಗ: ಚಿತ್ತ ವೃತ್ತಿ ನಿರೋಧ:’ ಮನಸ್ಸಿನಲ್ಲಿ ಏಳುವ ಅಲೆಗಳ ನಿರೋಧವೇ ಯೋಗ. ಯೋಗ ಎಂದರೆ ಚಿತ್ತವೃತ್ತಿಗಳ ನಿರೋಧ. ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರಾ, ಸ್ಮೃತಿ ಈ ಚಿತ್ತವೃತ್ತಿಗಳು ಮತ್ತು ದುಃಖಕ್ಕೆ ಕಾರಣವಾದ ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ, ಅಭಿನಿವೇಶ ಮುಂತಾದ ಕ್ಲೇಶಗಳ, ವ್ಯಾದಿ(ವೈಷಮ್ಯ)ü, ಸ್ತ್ಯಾನ(ಸೋಮಾರಿತನ), ಸಂಶಯ(ಅನುಮಾನ), ಪ್ರಮಾದ(ಆತುರತೆ), ಆಲಸ್ಯ(ಜಡತ್ವ), ಅವಿರತಿ(ನಿರಾಸಕ್ತಿ), ಭ್ರಾಂತಿದರ್ಶನ(ಭ್ರಾಂತಿ), ಅಲಬ್ಧಭೂಮಿಕತ್ವ(ಮನಸ್ಸು ಏಕಾಗ್ರತೆಯಿಲ್ಲದಿರುವುದು), ಅನವಸ್ಥಿತತ್ವ(ಏಕಾಗ್ರತೆ ಬಹುಕಾಲ ಉಳಿಯದಿರುವುದು) ಮುಂತಾದ ಚಿತ್ತ ವಿಕ್ಷೇಪಗಳನ್ನು ನಿಯಂತ್ರಣಗೊಳಿಸುವುದೇ ಯೋಗ.  “ಅಥ ಯೋಗಾನುಶಾಸನಮ್” ಯೋಗವೆಂದರೆ ಸುಂದರವಾದ ಶಾಸನ. ‘ಯೋಗ ವಾಸಿಷ್ಠ’ ಗ್ರಂಥಕರ್ತರಾದ ವಸಿಷ್ಠ ಮಹರ್ಷಿಗಳು ಹೀಗೆನ್ನುತ್ತಾರೆ; ‘ಮನ: ಪ್ರಶಮನೋಪಾಯ: ಯೋಗ ಇತ್ಯಭಿಧೀಯತೆ- ‘ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧ ಉಪಾಯವೇ ಯೋಗ.

ಯೋಗದ ವಿವಿಧ ಮಾರ್ಗಗಳು:

ಕರ್ಮಯೋಗ – ಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವೆ ಕರ್ಮಯೋಗ.
ಭಕ್ತಿ ಯೋಗ – ಶ್ರದ್ಧೆ, ಭಕ್ತಿ ಮತ್ತು ಏಕಾಗ್ರತೆಗಳಲ್ಲಿ ಐಕ್ಯರಾಗುವುದೆ ಭಕ್ತಿಯೋಗ.
ಜ್ಞಾನಯೋಗ – ಜ್ಞಾನ, ಶಕ್ತಿ, ಪರಮಸುಖ, ಸ್ವತಂತ್ರವನ್ನು ಹೊಂದಿ ಮೋಕ್ಷಪ್ರಾಪ್ತಿಯ ಕಡೆಗೆ ಸಾಗುವ ಮಾರ್ಗವೆ ಜ್ಞಾನಯೋಗ.
ರಾಜಯೋಗ – ಮೇಲ್ಕಂಡ ಯೋಗಗಳ ಅರಿವಿನ, ಪರಮ ಗುರಿಯನ್ನು ಹೊಂದುವ ಉತ್ಕಷ್ಠ ಮಾರ್ಗವೆ ರಾಜಯೋಗ.

ಅಷ್ಟಾಂಗಯೋಗಗಳು:

1. ಯಮ: ನಾವು ಉತ್ತಮ ಸಾಮಾಜಿಕ ವ್ಯಕ್ತಿಯಾಗಿ ಕೆಲವು ಉತ್ತಮ ನಡೆಗಳನ್ನು ಅನುಸರಿಸಬೇಕು. ಅವುಗಳನ್ನು ಯಮಪಂಚಕಗಳೆನ್ನುವರು. ಅವುಗಳೆಂದರೆ;
ಅಹಿಂಸೆ: ಯಾರಿಗೂ ಯಾವ ರೀತಿಯಲ್ಲೂ ನೋವು ಉಂಟುಮಾಡದಿರುವುದು.
ಸತ್ಯ: ಇದ್ದದ್ದನ್ನು ಇದ್ದ ಹಾಗೆಯೇ ಗ್ರಹಿಸುವುದು ಸತ್ಯ, ವ್ಯಕ್ತಪಡಿಸುವಾಗ ಹಾಗೆಯೇ ವ್ಯಕ್ತಪಡಿಸುವುದು, ಇನ್ನೊಂದು ರೀತಿಯಲ್ಲಿ ಹೇಳುವುದೆಂದರೆ ಸುಳ್ಳು ಹೇಳದಿರುವುದು.
ಅಸ್ತೇಯ: ಕಳ್ಳತನ ಮಾಡದಿರುವುದೇ ಅಸ್ತೇಯ. ನಮಗೆ ಸೇರಿದ್ದಲ್ಲದ ವಸ್ತು ಹಾಗೂ ವಿಷಯಗಳನ್ನು ಬಯಸುವುದು ಹಾಗೂ ಪಡೆಯುವುದು ಸ್ತೇಯ (ಕಳ್ಳತನ) ಎಂದೆನಿಸುತ್ತದೆ.
ಬ್ರಹ್ಮಚರ್ಯ: ಜ್ಞಾನಾರ್ಜನೆಯ ಅವಧಿಯಲ್ಲಿ ವಸ್ತು ವಿಷಯಗಳಿಂದ ವಿಚಲಿತರಾಗದೆ ಗಮನವನ್ನು ಅಧ್ಯಯನದ ಕಡೆಗೆ ಕೇಂದ್ರೀಕರಿ ಸುವುದು.
ಅಪರಿಗ್ರಹ: ಅಗತ್ಯವಾದುದಕ್ಕಿಂತ ಹೆಚ್ಚು ಸ್ವೀಕರಿಸದಿರುವುದು ಅಥವಾ ಸಂಗ್ರಹಿಸದಿರುವುದು.

2. ನಿಯಮ: ನಾವು ಜೀವನದಲ್ಲಿ ಅನುಸರಿಸಬೇಕಾದ ಐದು ನಿಯಮಗಳಿವೆ. ಇವು ವೈಯುಕ್ತಿಕ ಮೌಲ್ಯಗಳನ್ನು ಹೊಂದಿವೆ. ಇವುಗಳನ್ನು ನಿಯಮ ಪಂಚಕ ಗಳೆನ್ನುವರು.
ಶೌಚ: ದೇಹ ಮತ್ತು ಮನಸ್ಸುಗಳ ಶುಚಿತ್ವವೇ ಶೌಚ.
ಸಂತೋಷ: ಸದಾ ಸಂತೋಷವಾಗಿರುವುದು ಒಂದು ದೊಡ್ಡ ಗುಣ. ಸದಾ ತೃಪ್ತಿಯಿಂದ ಇರುವುದು ಸಂತೋಷವಾಗಿರಲು ಬೇಕಾದ ಮುಖ್ಯ ಅಂಶ.
ತಪಸ್ಸು: ತಪಸ್ಸು ಎಂದರೆ ಶ್ರದ್ಧೆಯಿಂದ ಕೂಡಿದ ಸತತವಾದ ಪ್ರಯತ್ನ. ಇಲ್ಲಿ ಮನಸ್ಸು ವಿಚಲಿತವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ.
ಸ್ವಾಧ್ಯಾಯ: ತನ್ನನ್ನು ತಾನು ಅರಿತುಕೊಳ್ಳುವುದೇ ಸ್ವಾಧ್ಯಾಯ. ಇದನ್ನು ಅಂತರಾವಲೋಕನ ಎಂದು ಕರೆಯಬಹುದು. ನಮ್ಮನ್ನು ನಾವೇ ಆಗಾಗ ಸ್ವವಿಮರ್ಶೆ ಮಾಡಿಕೊಳ್ಳಬೇಕು.
ಈಶ್ವರ ಪ್ರಣಿಧಾನ: ತನ್ನನ್ನು ತಾನು ಈಶ್ವರನಲ್ಲಿ ಸಮರ್ಪಿಸಿಕೊಳ್ಳುವುದು ಈಶ್ವರ ಪ್ರಣಿಧಾನ.

3. ಆಸನ: ಇದು ರಾಜಯೋಗದ ಮೂರನೇ ಮೆಟ್ಟಿಲಾದ ಆಸನ ಅಂದರೆ ಶರೀರ ನಿಶ್ಚಲವಾಗಿ, ಸುಖಕರವಾಗಿ ದೀರ್ಘಕಾಲ ಒಂದೇ ಭಂಗಿಯಲ್ಲಿ ಇರುವಂತೆ ಸಿದ್ದತೆ ಮಾಡಲು ಆಸನಗಳ ಅಭ್ಯಾಸ ಅತ್ಯಗತ್ಯ. ‘ಸ್ಥಿರಂ ಸುಖಂ ಆಸನಂ’ ಎಂಬುದು ಒಂದು ಸೂತ್ರವಾಗಿದ್ದು ಕ್ರಮಬದ್ಧವಾದ ಶಾರೀರಿಕ ಚಲನೆಯ ನಂತರದ ಅಂತಿಮ ಸ್ಥಿತಿಯಲ್ಲಿ ಸ್ಥಿರವಾಗಿ ಮತ್ತು ಸುಖವಾಗಿ ಇರಬಲ್ಲ ಭಂಗಿಯೇ ಆಸನ ಎಂದು ಸರಳವಾಗಿ ಹೇಳಬಹುದು. ಶಾರೀರಿಕ ದೃಢತೆಯ ಜೊತೆಗೆ ಮಾನಸಿಕ ಸ್ಥಿರತೆ ಇವುಗಳನ್ನು ಯೋಗಾಸನಗಳು ನೀಡುವುದರಿಂದ, ಯೋಗಾಸನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಯೋಗಶಾಸ್ತ್ರ - ವಿಶ್ವಕ್ಕೆ ಋಷಿ-ಮುನಿಗಳು ನೀಡಿರುವ ವರದಾನ4. ಪ್ರಾಣಾಯಾಮ: ಇದು ದೇಹ ಹಾಗೂ ಮನಸ್ಸಿನ ನಡುವಿನ ಕೊಂಡಿಯಂತಿರುವ ಉಸಿರಾಟವನ್ನು ಕ್ರಮಬದ್ಧಗೊಳಿಸುವ ಹಂತ. ಈ ಹಂತ ಉಸಿರಾಟದ ಅನೇಕ ಅಭ್ಯಾಸಗಳನ್ನೊಳಗೊಂಡಿದೆ.

5. ಪ್ರತ್ಯಾಹಾರ: ಮನಸ್ಸು ನಮ್ಮ ಪಂಚಜ್ಞಾನೇಂದ್ರಿಯಗಳ ಸಹಾಯದಿಂದ ಸದಾ ಹೊರಗಿನ ವಸ್ತು ವಿಷಯಗಳನ್ನು ಗಮನಿಸುತ್ತಿರುತ್ತದೆ. ಇದರಿಂದ ಮನಸ್ಸನ್ನು ಗಮನಿಸುವುದು ಕಷ್ಟಸಾಧ್ಯ. ಪ್ರತ್ಯಾಹಾರ ಹಂತದಲ್ಲಿ ಪಂಚೇಂದ್ರಿಯಗಳನ್ನು ಒಳಮುಖವಾಗಿರಿಸಿ ಮನಸ್ಸನ್ನು ಗಮನಿಸುವ ಕ್ರಿಯೆ ನಡೆಸಬೇಕು. ಮನಸ್ಸಿಗೆ ಮಾಡುವ ಹಲವಾರು ವಿಷಯಗಳನ್ನು ಸಾಕ್ಷಿ ಭಾವದಿಂದ ಗಮನಿಸುವ ಕ್ರಿಯೆ.

6. ಧಾರಣ: ಮನಸ್ಸು ಅನೇಕ ವಿಷಯಗಳ ಕಡೆ ಓಡುತ್ತಿರುತ್ತದೆ. ಅದನ್ನು ಪ್ರಯತ್ನಪೂರ್ವಕವಾಗಿ ಒಂದು ವಿಷಯ ಅಥವಾ ವಸ್ತುವಿನ ಮೇಲೆ ಕೇಂದ್ರೀಕರಿಸುವುದೇ ಧಾರಣ. ‘ಧಾರಣ’ ಎಂದರೆ ಧರಿಸುವುದು ಎಂದರ್ಥ. ಮನಸ್ಸಿಗೆ ಬರುವ ವಸ್ತು ಅಥವಾ ವಿಷಯಗಳಲ್ಲಿ ಒಂದನ್ನು ಆಯ್ದು ಅದರ ಮೇಲೆಯೇ ಮನಸ್ಸನ್ನು ಏಕಾಗ್ರತಗೊಳಿಸುವುದು ಧಾರಣ.

7. ಧ್ಯಾನ: ಧಾರಣದ ಮೂಲಕ ಒಂದು ವಸ್ತುವಿನ ಅಥವಾ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತಾ ಹೋದಂತೆ ನಿರಾಯಾಸವಾಗಿ ಮನಸ್ಸು ಆ ವಸ್ತುವಿನಲ್ಲೇ ನಿಲ್ಲುತ್ತದೆ ಅಥವಾ ಆ ವಸ್ತುವಿನಲ್ಲೇ ಅಂತರ್ಗತವಾಗುತ್ತದೆ. ಇದೇ ಧ್ಯಾನದ ಸ್ಥಿತಿ.

8. ಸಮಾಧಿ: ಇದು ಅಷ್ಟಾಂಗ ಯೋಗದ ಎಂಟನೆಯ ಮೆಟ್ಟಿಲು. ಇದು ಧ್ಯಾನದ ಮುಂದುವರಿದ ಸ್ಥಿತಿ. ಈ ಹಂತದಲ್ಲಿ ವಸ್ತುವಿನಲ್ಲೇ ವ್ಯಕ್ತಿ ತಲ್ಲೀನನಾಗುತ್ತಾನೆ. ಅಥವಾ ವಸ್ತುವೇ ತಾನಾಗುತ್ತಾನೆ. ಆ ವಸ್ತುವಿನಲ್ಲೇ ಪರವಶನಾಗಿ ಅಮಿತ ಆನಂದವನ್ನು ಅನುಭವಿಸುತ್ತಾನೆ. ಮನಸ್ಸಿನಲ್ಲಿ ಯಾವುದೇ ಯೋಚನೆ, ವಿಚಾರಗಳಿಲ್ಲದ ಸ್ಥಿತಿಯನ್ನು ಅನುಭವಿಸುತ್ತಾನೆ.

ಧ್ಯಾನವೆಂದರೇನು ?

ಧ್ಯಾನ = ಮನನ. ಮ = ಮನಸ್ಸಿನಲ್ಲಿ;  ನ = ನಡೆಯುವ ;  ನ = ನಡತೆಯನ್ನು ಕಾರ್ಯರೂಪದಲ್ಲಿ ತರುವುದೇ ಧ್ಯಾನ.
ಅರ್ಥ:-ಧ್ಯಾನವೆಂದರೆ ಒಂದು ನಿರ್ದಿಷ್ಟ ದೇಶದ ಮೇಲೆ ಪ್ರಜ್ಞೆಯು ನಿರಂತರವಾಗಿ ಹರಿಯುವಿಕೆ.

ಮುದ್ರೆಗಳು ಮತ್ತು ಬಂಧಗಳು:

ಮುದ್ರೆಗಳು- ದೇಹ ಅಂಗಾಂಗಗಳನ್ನು ವಿವಿಧ ರೀತಿಯ ಭಂಗಿಯಲ್ಲಿ ಕಾಣಿಸಿ ತರುವ ಮತ್ತು ಮನಸ್ಸನ್ನು ಬಂಧಿಸುವ ಪವಿತ್ರ ಭಾಷೆಯೆನ್ನಬಹುದು.
ಬಂಧಗಳು- ದೇಹದ ವಿವಿಧ ಅಂಗಾಂಗಗಳನ್ನು ರಕ್ಷಣೆ ಮಾಡುವ ಸಲುವಾಗಿ ಆಗಮನ ಮತ್ತು ನಿರ್ಗಮನದ ಕ್ರಿಯೆ ಮತ್ತು ಕಾರ್ಯದಲ್ಲಿ ನಿರತವಾದ ದ್ವಾರಗಳಿಗೆ ಬಂಧಗಳು ಎಂದು ಕರೆಯುವರು. ಮುಖ್ಯವಾಗಿ ದೇಹದಲ್ಲೂ ಮೂರು ಬಂಧಗಳು.
ಜಾಲಂಧರಬಂಧ- ಗಂಟಲು
ಉಡ್ಡಿಯಾನಬಂಧ – ಹೊಟ್ಟೆಯ ಮೇಲುಭಾಗ
ಮೂಲಬಂಧ- ಮಲದ್ವಾರ ಹಾಗೂ ಅದರ ಸುತ್ತಲಿನ ಸ್ಥಳ

ಚಕ್ರಗಳು:

Sapta-Chakra.ಸಪ್ತ – ಏಳು, ಚಕ್ರ ಅಂದರೆ = ಗಾಲಿ, ತಿರುಗುವ ಅಥವಾ ತಿರುಗಲಾರದ ಚಕ್ರವಿರಬಹುದು. ಈ ಸಪ್ತ ಚಕ್ರಗಳು – ಜೀವನಚಕ್ರಕ್ಕೆ ಸಂಬಂಧವನ್ನು ಕಲ್ಪಿಸುವ ದಿವ್ಯ ಶಕ್ತಿಯಾಗಿರುತ್ತವೆ. ದೇಹದಲ್ಲಿರುವ ಚಕ್ರಗಳ ಸ್ಥಾನಗಳು
ಮೂಲಾಧಾರ ಚಕ್ರ-ತಳಹದಿ – ಗಿಡದ ಬೇರು, ಸರೋವರದ ತಳ, ಮಲದ್ವಾರದ ಭಾಗ.
ಸ್ವಾಧಿಷ್ಟಾನ ಚಕ್ರ – ಜನನೇಂದ್ರಿಗಳ ಭಾಗ.
ಮಣಿಪೂರ ಚಕ್ರ – ಹೊಕ್ಕಳು ಭಾಗ (ಹೊಟ್ಟೆಯ ಭಾಗ)
ಅನಾಹತ ಚಕ್ರ – ಹೃದಯದ ಭಾಗ
ವಿಶುದ್ಧ ಚಕ್ರ – ಗಂಟಲಿನ ಭಾಗ
ಆಜ್ಞಾ ಚಕ್ರ – ಹುಬ್ಬಿನ ಮಧ್ಯಭಾಗ.
ಸಹಸ್ರಾರ ಚಕ್ರ – ತಲೆಯ ಮೇಲಿನ ಭಾಗ

ಷಟ್ ಕ್ರಿಯೆಗಳು:

ಷಟ್ = ಆರು, ಕ್ರಿಯೆ ಅಂದರೆ = ವೇಗದ ಮಿತಿಯ ವಿವಿಧ ಅಂಗದ ಕಾರ್ಯವನ್ನು ಶುದ್ಧಿಗೊಳಿಸುವ ವಿಧಾನ. ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ, ಕಪಾಲಭಾತಿ ಈ ಆರನ್ನು ಷಟ್ಕರ್ಮಗಳು ಎಂದು ಕರೆಯಲಾಗಿದೆ. ಷಟ್ ಕ್ರಿಯೆಗಳು ಶರೀರ, ಮನಸ್ಸು ಶುದ್ಧೀಕರಣ ವಿಧಾನಗಳಲ್ಲದೆ ಋತುಗಳೊಡನೆ ನಮ್ಮ ಶರೀರ ಒಗ್ಗಿಕೊಳ್ಳುವಂತೆ ಮಾಡುವ ಪದ್ಧತಿಗಳಾಗಿವೆ.
1. ಕಪಾಲಭಾತಿ-ನರಮಂಡಲಕ್ಕೆ ಪ್ರಚೋದನೆ. ಕಪಾಲಭಾತಿ – ಉದರ ಭಾಗವು ಕುಗ್ಗುವಂತೆ ಶ್ವಾಸವನ್ನು ಒಮ್ಮೆಲೇ ಹೊರದೂಡಿ ತ್ವರಿತ ಶ್ವಾಸೋಶ್ವಾಸ ಕ್ರಿಯೆಗಳು ನಡೆಯುವಂತೆ ಮಾಡುವ ಕ್ರಿಯೆ. ಇದರಲ್ಲಿ ರಕ್ತಕ್ಕೆ ಆಮ್ಲಜನಕದ ಪೂರೈಕೆ ಹೆಚ್ಚುತ್ತದೆ. ಉದರ ಭಾಗದಿಂದ ದೂಡಿದ ಉಸಿರಾಟ ನರಮಂಡಲವನ್ನು ಶಮನಗೊಳಿಸುತ್ತದೆ ಎಂಬ ಅಂಶವು ಸಹ ಇಲ್ಲಿ ಗಮನೀಯ.

2. ತ್ರಾಟಕ-ನೇತ್ರಗಳಿಗೆ ಹೆಚ್ಚಿನ ಶಕ್ತಿ ಮತ್ತು ಶುದ್ಧೀಕರಣ. ತ್ರಾಟಕ – ಬಾಹ್ಯ ಚಕ್ಷು ಮತ್ತು ಅಂತರಚಕ್ಷು (ಮನಸ್ಸು) ಗಳ ಶುದ್ಧಿಕರಣಕ್ಕಾಗಿ ಉಪಯೋಗಿಸುವ ಪದ್ಧತಿ ತ್ರಾಟಕ. ಮಾನಸಿಕ ಧಾರಣೆಗೆ ಮತ್ತು ಸಾಧನೆಗೆ ಅಡ್ಡ ಬರುವ ಅರಿಷಡ್ವರ್ಗಗಳನ್ನು ಕ್ಷೀಣಗೊಳಿಸಲು ಈ ಪದ್ಧತಿ ಸಹಕಾರಿ.

3. ನೇತಿ-ಮೂಗಿನ ದ್ವಾರವನ್ನು ಶುದ್ದಿಗೊಳಿಸಿ, ಸಹನ ಶಕ್ತಿ ಪಡೆಯುವ ಶಕ್ತಿ. ನೇತಿಯು ಮೂಗಿನಿಂದ ಕಫ, ಲೋಳೆ ರೂಪದ ಕಲ್ಮಶಗಳನ್ನು ಲವಣ ನೀರು ಅಥವಾ ರಬ್ಬರ್ ನಳಿಕೆ ಅಥವಾ ಸೂತ್ರವನ್ನು ಉಪಯೋಗಿಸಿ ಹೊರದೂಡುವ ವಿಧಾನ.

4. ದೌತಿ-ತುಟಿಯಿಂದ ಹಿಡಿದು ಜಠರದವರೆಗೆ ಶುದ್ಧಿಗೊಳಿಸುವ ವಿಧಾನ. ಧೌತಿಯು ಲವಣ ನೀರಿನಿಂದ ಅಥವಾ ರಬ್ಬರ್ ನಳಿಕೆಯಿಂದ ಅಥವಾ ಸೂಕ್ತ ವಸ್ತ್ರವನ್ನು ಉಪಯೋಗಿಸಿ ಜಠರ, ಅನ್ನನಾಳವನ್ನು ಶುದ್ಧಿ ಮಾಡುವ ವಿಧಾನ.

5. ನೌಲಿ-ಹೊಟ್ಟೆಯ ಭಾಗಕ್ಕೆ ಚಲನೆ ಮತ್ತು ಶಕ್ತಿಯನ್ನು ನೀಡುವ ಕ್ರಿಯೆ. ನೌಲಿಯು ಉದರ ಸ್ನಾಯುಗಳನ್ನು ಬಲಕ್ಕೆ (ದಕ್ಷಿಣ ನೌಲಿ) ಎಡಕ್ಕೆ (ವಾಮ ನೌಲಿ) ಅಥವಾ ಮಧ್ಯದಲ್ಲಿ (ಮಧ್ಯ ನೌಲಿ) ಎದ್ದು ಕಾಣುವಂತೆ ಪ್ರತ್ಯೇಕಿಸಿ ತಿರುಗಿಸುವ ಕ್ರಿಯೆ (ನೌಲಿ ಚಾಲನೆ).

6. ಭಸ್ತಿ-ಜಠರದಲ್ಲಿ ಅಡಗಿರುವ ಮಲವನ್ನು ಶುದ್ಧಿಕರಣ ಮಾಡುವ ವಿಧಾನ. ಭಸ್ತಿಯು ಬೆಚ್ಚನೆಯ ನೀರಿನಿಂದ ಅಥವಾ ಬೇವಿನ ಸೊಪ್ಪು ಅಥವಾ ತುಳಸಿ ಕುದಿಸಿದ ನೀರನ್ನು ದೊಡ್ಡ ಕರುಳಿಗೆ ಹಾಯಿಸಿ ಅಲ್ಲಿಯ ಕಲ್ಮಶಗಳನ್ನು ತೊಳೆಯುವ ವಿಧಾನ.

ಭೌತಿಕ ವ್ಯಾಯಾಮದ ವೈಶಿಷ್ಟ್ಯತೆ :

dr hegde add1. ವ್ಯಾಯಾಮದಿಂದ ಹಗುರದ ಅನುಭವ ಆಗುವುದು, ಕರ್ಮಶಕ್ತಿ ಹೆಚ್ಚುವುದು, ಜಠರಾಗ್ನಿ ಹೆಚ್ಚುವುದು, ಕೊಬ್ಬು ಕರಗುವುದು, ಪ್ರಮಾಣಬದ್ಧವಾದ ಶರೀರವನ್ನ ಪಡೆಯುವರು.
2. ಶರೀರಕ್ಕೆ ವ್ಯಾಯಾಮ ನೀಡಿ ಮಾಂಸಖಂಡಗಳನ್ನು ಬಲಪಡಿಸಿ ರೂಪವನ್ನು ನೀಡುತ್ತದೆ.
3. ಶರೀರದ ವ್ಯಾಯಾಮದಿಂದ ರಕ್ತಪರಿಚಲನೆ ಮಾಂಸಖಂqಗಳಿಗೆ ಹೆಚ್ಚಾಗುತ್ತದೆ. ಇದರಿಂದ ಹೃದಯ ಮತ್ತು ನಾಡಿಯ ಬಡಿತ ಹೆಚ್ಚಾಗುತ್ತದೆ.
4. ಭೌತಿಕ ವ್ಯಾಯಾಮದಿಂದ ಒಳ ಅಂಗಾಂಗಗಳಾದ ಜೀರ್ಣಾಂಗ ಹೆಚ್ಚು ಕೆಲಸ ನಿರ್ವಹಿಸಬೇಕಾಗುತ್ತದೆ. ಇದರಿಂದ ಹೆಚ್ಚು ಆಹಾರದ ಅವಶ್ಯಕತೆಯಿರುತ್ತದೆ.
5. ಭೌತಿಕ ವ್ಯಾಯಾಮದಲ್ಲಿ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.
6. ರೋಗನಿರೋಧಕ ಶಕ್ತಿಯೂ ಸಹ ಕಡಿಮೆಯಿರುತ್ತದೆ.
7. ಭೌತಿಕ ವ್ಯಾಯಾಮದಿಂದ ಎಲ್ಲಾ ಅಂಗಾಂಗಗಳಿಗೆ ಸಮಾನಾಗಿ ವ್ಯಾಯಾಮ ಸಿಗುವುದಿಲ್ಲ. ಇದರಿಂದ ಕೆಲವು ಭಾಗಗಳಲ್ಲಿ ಮಾತ್ರ ಮಾಂಸಖಂಡಗಳು ವೃದ್ಧಿಸಿ ಅಂಗ ಪ್ರದರ್ಶನಕ್ಕೆ ಸಹಕಾರಿಯಾಗಿರುತ್ತದೆ.

ಡಾ||ವೆಂಕಟ್ರಮಣ ಹೆಗಡೆ ನಿಸರ್ಗಮನೆ,  ಶಿರಸಿ, ಉ.ಕ. ದೂ:9448729434/9731460353 Email: drvhegde@yahoo.com; nisargamane6@gmail.com http://nisargamane.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!